ನಾನ್ ಜೈನ್; ನಂಗ್ ಬೇಡ ಮೀನ್!?

ನಾನ್ ಜೈನ್ ;ನಂಗ್ ಬೇಡ ಮೀನ್!
ಮೂಲ್ಕಿ- ಮೂಡಬಿದ್ರೆ ಶಾಸಕ ಅಭಯ ಚಂದ್ರರಿಗೆ ಮೀನುಗಾರಿಕಾ ಖಾತೆ ಸಿಕ್ಕ ಬಳಿಕ ಅವರ ಜಾತಿಯವರಿಗೆ ಅವರೊಬ್ಬ ಜೈನ್ ಎನ್ನುವುದು ನೆನಪಾಯಿತಂತೆ. ಆದ್ದರಿಂದ ಸಸ್ಯಹಾರಿಯಾಗಿರುವ ಜೈನ ಸಮುದಾಯದವರಾದ ಅವರು ಮೀನುಗಾರಿಕಾ ಖಾತೆಯನ್ನು ಬಿಟ್ಟುಕೊಡಲು ಒತ್ತಾಯಿಸಿದ್ದರಿಂದ, ಅಭಯರು ಮುಖ್ಯಮಂತ್ರಿಗಳಲ್ಲಿ ಈ ವಿಚಾರ ತಿಳಿಸಿ, ಮೀನುಗಾರಿಕಾ ಖಾತೆ ಬಿಟ್ಟು ಬೇರೆ ಖಾತೆ ಕೊಡಲು ಕೇಳಿಕೊಂಡರೂ, ಅವರು ಒಪ್ಪದ್ದರಿಂದ ಈಗ ಮೀನುಗಾರಿಕಾ ಖಾತೆಯನ್ನು ನಿಭಾಯಿಸುತ್ತಾರಂತೆ. ಇವರಿಗೆ ಬರೇ ಮೀನುಗಾರಿಕಾ ಖಾತೆ ಮಾತ್ರ ಬೇಡವೋ? ಮೀನು – ಮಾಂಸ ತಿನ್ನುವ ಬಹುಸಂಖ್ಯಾತ ‘ಅಹಿಂದ’ವರ್ಗದ ಮತವೂ ಬೇಡವೋ? ಮತ ಮಾತ್ರ ಬೇಕಿರುವುದಾದದರೇ, ಈ ಖಾತೆ ಯಾಕೆ ಬೇಡ. ಅಷ್ಟಕ್ಕೂ ಜೈನ ಸಮುದಾಯ ಅಲ್ಪಸಂಖ್ಯಾಕವಾಗಿರುವ ಕ್ಷೇತ್ರದಲ್ಲಿ ಸತತ ಗೆಲುವನ್ನು ಅಭಯರಿಗೆ ನೀಡುತ್ತಿರುವ ಮತದಾರರಿಗೆ ಮಾಡಿದ ದ್ರೋಹ ಇದು ಅನ್ನಬಹುದು. ಈ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಅಭಯರು ಸ್ಪಷ್ಟೀಕರಣ ನೀಡಬೇಕಿದೆ.

Advertisements

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ತೆಂಗು ಸಂ ಸ್ಕರಣಾ ಘಟಕವಾಗಿಸಿ.

ಬ್ರಹ್ಮಾವರದ ಸಹಕಾರಿ ಸಕ್ಕರೆ ಕಾರ್ಕಾನೆ : ಕಥೆ- ವ್ಯಥೆ!
ಉಡುಪಿ ಜಿಲ್ಲೆಯಾಗುವ ಮೊದಲು 1983 ರ ಕಾಲಘಟ್ಟದಲ್ಲಿ ಆರಂಭಗೊಂಡ ಈ ಕಾರ್ಖಾನೆ ಸದ್ಯ ಮುಚ್ಚಿ ದಶಕ ದಾಟಿದೆ. ಇಲ್ಲಿನ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಖಾಯಂ ಕೆಲಸದಲ್ಲಿದ್ದ 168 ಕಾರ್ಮಿಕರಿಗೆ ಕಾರ್ಖಾನೆಯ ಕೆಲಸದ ಬಾಬ್ತು ಸಂಬಳ ಒಟ್ಟು 12 ಕೋಟಿ ಕೊಡಲು ಬಾಕಿ ಇದೆ. ಹೈಕೋರ್ಟಿನ ತೀರ್ಪು ಬಂದಿದ್ದರೂ ಇನ್ನೂ ಸರಕಾರ ಈ ಬಗ್ಗೆ ಮನಸ್ಸು ಮಾಡಿಲ್ಲ. ಈಗಲೂ ಒಂದು ಆಡಳಿತ ಮಂಡಳಿ ಇದೆ. ಅದರ ಮಹಾಸಭೆ ನಡೆಯದೇ ಮೂರು ವರ್ಷಗಳಾಗಿವೆ. ಕಾರ್ಖಾನೆಯ ಬಾಬ್ತು ಕೊಡಲಿರುವ ಹೊರಬಾಕಿಯೇ ಸುಮಾರು 50 ಕೋಟಿಗೂ ಮಿಕ್ಕಿದೆ. ಈ ಕಾರ್ಖಾನೆಗಾಗಿ ಕಬ್ಬು ಬೆಳೆಯಲು ನೀರಾವರಿ ಸೌಲಭ್ಯ ಕಲ್ಪಿಸಲು ಹೊರಟು ಆರಂಭಗೊಂಡ ವಾರಾಹಿ ನೀರಾವರಿ ಯೋಜನೆ ಅನೇಕರನ್ನು ಉದ್ಧಾರ ಮಾಡಿದ್ದರೂ ಇಲ್ಲಿ ನೀರು ಮಾತ್ರ ಹರಿದಿಲ್ಲ. ಸಕ್ಕರೆ ಕಾರ್ಖಾನೆಯ ಸಂಬಳ ನೆಚ್ಚಿಕೊಂಡು ಬದುಕಿದ್ದ ಕಾರ್ಮಿಕ ದಿನೇಶ್ ಶೆಟ್ಟಿ 2011 ನೇ ಇಸವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಇಲ್ಲಿನ ಕಥೆಯನ್ನು ವ್ಯಥೆಯಾಗಿಸಿ ತೋರಿಸಿದರು. ಅವರ ಕುಟುಂಬ ಈಗಲೂ ಕಣ್ಣೀರಲ್ಲಿ ಕಾಲ ಕಳೆಯುತ್ತಿದೆ. ಇದು ಸಹಕಾರಿ ಸಕ್ಕರೆ ಕಾರ್ಖಾನೆ. ಇದಕ್ಕೆ 110 ಎಕ್ರೆ ಸರಕಾರಿ ಭೂಮಿ ಇದೆ. ಎಲ್ಲರ ಕಣ್ಣು ಈಗ ಈ ಭೂಮಿಯ ಮೇಲೆ ಬಿದ್ದಿದೆ. ಹಿಂದೆ ಯಡ್ಯೂರಪ್ಪ ಮುಖ್ಯಮಂತ್ರಿಯಾದಾಗ ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ ಎಂದು ಹೇಳಿ ಸರಕಾರದಿಂದ ನೆರವು ಒದಗಿಸುವುದಾಗಿ ಘೋಷಿಸಿದ್ದರು. ಅವರ ಬಳಿಕ ಎರಡು ಮುಖ್ಯಮಂತ್ರಿಗಳನ್ನು ಸರಕಾರ ಕಂಡಿದೆ. ಆದರೂ ಚಿಕ್ಕಾಸಿನ ಪ್ರಯೋಜನವಾಗಿಲ್ಲ. ಸದ್ಯ ುಡುಪಿಯ ನೂತನ ಶಾಸಕ ಪ್ರಮೋದ್ ಮಧ್ವರಾಜ್ ಇದನ್ನು ಪುನಶ್ಚೇತನಗೊಳಿಸುವುದಾಗಿ ಹೇಳಿದ್ದಾರೆ. ಇದನ್ನು ನಂಬಿರುವ ಕಾರ್ಮಿಕರು ಒಂದಷ್ಟು ಆಶಾ ಭಾವನೆ ತುಂಬಿಕೊಂಡಿದ್ದಾರೆ. ಸಿದ್ಧರಾಮಯ್ಯನವರು ಈ ಬಡ ಕಾರ್ಮಿಕರ ಪರ ನಿಲ್ಲುವ ಅಗತ್ಯವಿದೆ. ಆದರೇ, ಒಂದು ಸೂಚನೆಯಮ್ಮು ವೇದಿಕೆ ತನ್ನ ಸಹಭಾಗಿ ಸಂಘಟನೆಯಾದ ‘ಕರ್ನಾಟಕ ಜನಶಕ್ತಿ ಸಂಘಟನೆಯ’ ಚಿಂತನೆಯಂತೆ ನೀಡಲು ಬಯಸುತ್ತಿದೆ. ಅದೇನಂದರೇ, ಈ ಭಾಗದಲ್ಲಿ ಕಬ್ಬು ಬೆಳೆದ ರೈತರು ತಮಗೆ ಸಲ್ಲಬೇಕಿದ್ದ ಕೋಟ್ಯಾಂತರ ಮೊತ್ತ ಬಾಕಿ ಇರುವುದರಿಂದ ಕಬ್ಬು ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಕಾರ್ಖಾನೆಯ ಯಂತ್ರೋಪಕರಣಗಳು ತುಕ್ಕು ಹಿಡಿದಿರುವುದರಿಂದ ುಪಯೋಗವಾಗುತ್ತಿಲ್ಲ. ಕಟ್ಟಡದ ಮೇಲ್ಛಾವಣಿಯೂ ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿಯಲ್ಲಿದೆ. ಆದ್ದರಿಂದ ಇಲ್ಲಿ ಮತ್ತೆ ಸಕ್ಕರ ಕಾರ್ಖಾನೆಯ ಬದಲು ತೆಂಗಿನ ಬೆಳೆಯ ಸಂಸ್ಕರಣಾ ಘಟಕವನ್ನು ಇಲ್ಲಿ ರೂಪಿಸಿ, ಕಾರ್ಮಿಕರಿಗೆ ಮತ್ತು ಈ ಕಟ್ಟಡಕ್ಕೆ ಕಾಯಕಲ್ಪ ಒದಗಿಸುವ ನಿಟ್ಟಿನಲ್ಲಿ ಮುಂದುವರೆದರೇ, ಅದು ಇಲ್ಲಿನ ತೆಂಗು ಬೆಳೆಗಾರರಿಗೆ ಮತ್ತು ಕಾರ್ಮಿಕ ವರ್ಗಕ್ಕೂ ನೆರವು ನೀಡಿದಂತಾಗುತ್ತದೆ. ಈ ಬಗ್ಗೆ ಯೋಚನೆ ಬರಲಿ. ಅಲ್ಲವೇ?

ಮಾಂಸಹಾರಿಗಳನ್ನು ಮಂಗ ಮಾಡುತ್ತಿರುವ ವರ್ಗಗಳು!

ಗೋಹತ್ಯೆಯ ನೆಪದಲ್ಲಿ ಮಾಂಸಹಾರಿಗಳನ್ನು ಮಂಗ ಮಾಡುತ್ತಿರುವ ಮೇಲ್ವರ್ಗ!
ಹಿಂದೆ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರವಾಗಿ ಮೊಟ್ಟೆ ಕೊಡುತ್ತೇವೆಂದಾಗ, ಅದು ತಾಮಸ ಆಹಾರ ಎಂದು ಬೊಬ್ಬಿಟ್ಟಿದ್ದ ಕೆಲವು ಮೇಲ್ವರ್ಗದ ಮಂದಿ ಈಗ ರಾಜ್ಯದಲ್ಲಿ 1964 ರ ಕರ್ನಾಟಕ ಗೋ ಹತ್ಯಾ ಪ್ರತಿಬಂಧಕ ಕಾಯ್ದೆಯನ್ನೇ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿರುವುದನ್ನೇ ದೊಡ್ಡ ಸುದ್ದಿ ಮಾಡುತ್ತಾ , ಅವರ ಮೇಲೆ ಎರಗಲು ಜನರನ್ನು ಕೆರಳಿಸುತ್ತಿದ್ದಾರೆ. ಐದು ವರ್ಷಗಳ ಹಿಂದೆ ಆ ಕಾನೂನಿಗೆ ತಿದ್ದುಪಡಿ ತಂದ ಬಿಜೆಪಿಯ ಸರಕಾರ, ಅದು ರೈತ ವಿರೋಧಿ ಎಂದು ಗೊತ್ತಿದ್ದರೂ ಕೋಮು ಭಾವನೆಯನ್ನು ಕೆರಳಿಸಿ, ಇದು ಮುಸ್ಲಿಮರು ತಿನ್ನುವ ಆಹಾರ ಎಂದು ಬೊಬ್ಬಿಡುತ್ತಾ ಹಿಂದೂ ಮತ ಬ್ಯಾಂಕ್ ಭದ್ರಗೊಳಿಸಲು ಹೊರಟಿತ್ತು. ಈಗ ಹೇಳಿರುವ ಮಾತನ್ನು ಸಿದ್ಧರಾಮಯ್ಯ ತನ್ನ ಚುನಾವಣಾ ಪ್ರಚಾರ ಕಾಲದಲ್ಲೂ ಹೇಳಿದ್ದರು. ಕಾಂಗ್ರೆಸ್ ನೆಲೆ ಕಳಕೊಂಡಿದ್ದ ಉತ್ತರ ಕರ್ನಾಟಕ ಭಾಗದಲ್ಲಿ ಇರುವಷ್ಟು ಜಾನುವಾರು ಸಾಕಾಣೆ ಮತ್ತು ಬಳಕೆ ಇತರ ಕಡೆ ಇಲ್ಲ. ಆದರೂ ಅಲ್ಲಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪ್ರತಿನಿಧಿಗಳನ್ನು ಆರಿಸಿದ್ದಾರೆ. ಇದರ ಅರ್ಥ ಜನ ಬಿಜೆಪಿಗರ ಮಾತಿಗೆ ಬೆಲೆ ಕೊಟ್ಟಿಲ್ಲ ಎಂದಲ್ಲವೇ? ಗೋವನ್ನು ತಮ್ಮ ಜೀವನೋಪಾಯಕ್ಕೆ ಸಾಕುವ ಮಂದಿ, ಅದರಿಂದ ಜೀವನೋಪಾಯ ಸಾಕಾಗದಾಗ ಅದನ್ನು ಮಾರಲೂ ಬಿಜೆಪಿ ತರ ಹೊರಟಿದ್ದ ಕಾನೂನಿನಲ್ಲಿ ಅವಕಾಶವೇ ಇರಲಿಲ್ಲ. ಇದು ರೈತರ ಪಾಲಿಗೆ ಎಷ್ಟು ಹೊರೆ ಎನ್ನುವುದು ಈಗ ಬೊಬ್ಬಿಡುತ್ತಿರುವ ಮಂದಿಗೆ ಗೊತ್ತಿದೆಯೇ? ಗೋ ಸಾಕಾಣಿಕೆಯನ್ನು ಉದ್ಯಮ ಮಾಡಿಕೊಂಡ ಮಂದಿಗಷ್ಟೇ ಇದರ ನೋವು ಗೊತ್ತಿರಲು ಸಾಧ್ಯ. ಎಂದಿಗೂ ಸೆಗಣಿ ಬಾಚದ, ಗಂಜಲ ತೆಗೆಯದ ಶೇ.5 ರಷ್ಟೂ ಇಲ್ಲದ ಮಂದಿ ಉಳಿದ ಶೇ.95 ಜನರ ಬಳಿ ಇದನ್ನೊಂದು ಭಾವನಾತ್ಮಕ ವಿಷಯವಾಗಿಸ ಹೊರಟದ್ದು ಕೇವಲ ಮತ ಗಳಿಕೆಗಾಗಿ ಮಾತ್ರ ಎನ್ನುವುದನ್ನು ಅಹಿಂದ ವರ್ಗ ಅರಿತುಕೊಳ್ಳಬೇಕು. ಇಲ್ಲವಾದಲ್ಲಿ ನಾಳೆ ನಾವು ಹಿಡಿದು ತಿನ್ನುವ ಮೀನು ಕೂಡಾ ಮತ್ಸ್ಯವತಾರ ಎಂದು ಅದನ್ನೂ ಈ ಮಂದಿ ಕಿತ್ತುಕೊಳ್ಳಬಲ್ಲರು. ಹಾಗಾಗಿಯೇ ವೇದಿಕೆ ಕಳೆದ ಐದಾರು ವರ್ಷಗಳಿಂದ ಬಿಜೆಪಿ ಪ್ರಸ್ತಾಪಿಸುತ್ತಿದ್ದ ಹೊಸ ಕಾನೂನನ್ನು ವಿರೋಧಿಸಿ, ಜಾನುವಾರು ಹತ್ಯಾ ನಿಷೇಧ ವಿರೋಧಿ ಒಕ್ಕೂಟ ರಚಿಸಿಕೊಂಡು ಹೋರಾಟಕ್ಕೆ ಇಳಿದಿತ್ತು. ಆ ಒಕ್ಕೂಟದಲ್ಲಿ ರಾಜ್ಯದ ಎಡಪಕ್ಷಗಳ ಸಹಿತ, ರೈತ ಸಂಘ – ದಲಿತ ಸಂಘ, ಅಹಿಂದ ಸಂಘಟನೆ ಮತ್ತು ಇತರ ಜನಪರ – ಪ್ರಗತಿಪರ ಸಂಘಟನೆಗಳೂ ಒಂದಾಗಿ ಬಂದು ಇದನ್ನು ವಿರೋಧಿಸಿದ್ದವು. ನಾವು ಮುಖ್ಯಮಂತ್ರಿಗಳ ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ ಮತ್ತು ಮುಖ್ಯಮಂತ್ರಿಗಳ ಪರ ಎಲ್ಲಾ ಕಾಂಗ್ರೆಸ್ ಶಾಸಕರು ಹಾಗೂ ಜಾತ್ಯಾತೀತ ಪಕ್ಷಗಳ ನಾಯಕರು ನಿಲ್ಲಬೇಕೆಂದು ಆಗ್ರಹಿಸುತ್ತೇವೆ. ಇದು ಗೋ ಹತ್ಯೆಯನ್ನು ಬೆಂಬಲಿಸಿ ಎಂಬುದಕ್ಕೆ ಮಾತ್ರವಲ್ಲ. ನಿರುಪಯುಕ್ತ ಜಾನುವಾರುಗಳ ಮಾರಾಟ, ತಿನ್ನುವವರ ಆಹಾರದ ಹಕ್ಕನ್ನು ರಕ್ಷಿಸುವ ಕ್ರಮವೂ ಹೌದಾಗಿದೆ. ಹಾಗಂತ ಎಲ್ಲೆಂದರಲ್ಲಿ ಗೋ ಹತ್ಯೆ ಮಾಡುವುದೂ ತಪ್ಪು. 1964 ರ ಕಾನೂನನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕು, ಜಾನುವಾರು ಕಳ್ಳರನ್ನೂ ಶಿಕ್ಷಿಸಬೇಕು ಎನ್ನುವುದೂ ನಮ್ಮ ಒತ್ತಾಯವಾಗಿದೆ.

ಕರಾವಳಿಯಲ್ಲಿ ಮತ್ತೆ ಕಿತಾಪತಿಗಳಿಗೆ ಶುರುವಿಟ ್ಟ ಕೋಮುವಾದಿಗಳು!

ಕರಾವಳಿಯಲ್ಲಿ ಮತ್ತೆ ಕಿತಾಪತಿಗಳಿಗೆ ಶುರುವಿಟ್ಟ ಕೋಮುವಾದಿಗಳು!

ಕರಾವಳಿಯ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಮತದಾರರು ಇಲ್ಲಿ ಕಳೆದ ಐದು ವರ್ಷಗಳಿಂದ ನಡೆದ ಕೋಮು ಸಂಘರ್ಷ ಮತ್ತು ಅಧಿಕಾರ ಪಡೆದ ವಿಭಿನ್ನ ಆಳ್ವಿಕೆಯನ್ನು ತಿರಸ್ಕರಿಸಿ, ಕಾಂಗ್ರೆಸ್ಸನ್ನು ಅಭೂತಪೂರ್ವವಾಗಿ ಬೆಂಬಲಿಸಿದ್ದನ್ನು ಸಹಿಸಲಾಗದ ಕೋಮುವಾದಿಗಳು ತಮ್ಮ ಹಳೆ ಚಾಳಿಯನ್ನು ಮತ್ತೆ ಆರಂಭಿಸಿದಂತಿದೆ. ಚುನಾವಣೆಯ ಮೊದಲೇ ಕಾಂಗ್ರೆಸ್ ಬಂದರೇ, ಅಲ್ಪಸಂಖ್ಯಾತರ ಪರ ನಿಲ್ಲುತ್ತದೆ ಎನ್ನುವುದಾಗಿ ಭೋಂಗು ಬಿಡುತ್ತಿದ್ದವರು, ಇನ್ನೊಂದೆಡೆ ತಮ್ಮ ಬಿಜೆಪಿ ಸರ್ಕಾರ ಅಲ್ಪ ಸಂಖ್ಯಾತರ ಏಳಿಗೆಗೆ ಅತೀ ಹೆಚ್ಚು ಅನುದಾನ ನೀಡಿತ್ತು ಅಂತ ಭಾಷಣ ಬಿಗಿಯುತ್ತಿದ್ದರು. ಆದರೂ ಇವೆಲ್ಲವನ್ನೂ ಅಳೆದು ತೂಗಿದ ಮತದಾರ ಪ್ರಭು ಈ ಭೋಂಗಿಗೆ ಕಿವಿ ಕೊಟ್ಟಿಲ್ಲ! ಆದ್ದರಿಂದ ವ್ಯಗ್ರರಾಗಿರುವ ಈ ಕಿತಾಪತಿ ಮಂದಿ ಮತ್ತೆ ಕೋಮು ಸಂಘರ್ಷಕ್ಕೆ ಮುನ್ನುಡಿ ಬರೆದಿದ್ದಾರೆ. ಮೊನ್ನೆ ಕಾಪು ಕ್ಷೇತ್ರದಲ್ಲಿ ಮಸೀದಿಗೆ ಬೀರು ಬಾಟಲು ಎಸೆದವರು, ಇನ್ನೊಂದೆಡೆ ಪೊಲಿಪು ಮಸೀದಿಗೆ ಕಲ್ಲೆಸಿದಿದ್ದಾರೆ. ಉಳ್ಳಾಲ (ಮಂಗಳೂರು) ಕ್ಷೇತ್ರದಲ್ಲಿನ ಸೋಮೇಶ್ವರ-ಉಚ್ಚಿಲದಲ್ಲಿ ಬ್ರಾಹ್ಮಣರ ಮನೆಯೊಂದರಲ್ಲಿ ದನ-ಕರು ಕಳುವು ಮಾಡಲಾಗಿತ್ತಲ್ಲದೇ, ತುಳಸೀಕಟ್ಟೆಯ ಬಳಿ ದನವೊಂದರ ಕಾಲು ಕತ್ತರಿಸಿ, ಇಡಲಾಗಿತ್ತು. ಇವು ಆರಂಭದ ಸಂಕೇತ. ಇದೇ ರೀತಿಯ ಹಲವು ಘಟನೆಗಳು ನಡೆಯಬಹುದೆಂಬ ಸಂಶಯ ಬಲವಾಗಿ ಕಾಡುತ್ತಿದೆ. ಇಂತಹ ಕೃತ್ಯಗಳನ್ನು ಮಾಡುವುದರ ಮೂಲಕ ಮತ್ತೆ ಕರಾವಳಿಯ ಜನರ ಮನಸ್ಸಲ್ಲಿ ಕಿಚ್ಚು ಹೊತ್ತಿಸುವ ಈ ಕೃತ್ಯದ ರೂವಾರಿಗಳನ್ನು ಮುಲಾಜಿಲ್ಲದೇ ಮಟ್ಟ ಹಾಕಬೇಕು. ಹೊಸದಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಇದನ್ನು ಅರಿತುಕೊಳ್ಳಬೇಕು. ಪೊಲೀಸ್ ಇಲಾಖೆ, ಗುಪ್ತಚರ ಇಲಾಖೆಗಳಲ್ಲೂ ಇಂತಹುದೇ ಮನಸ್ಥಿತಿಯ ಕೆಲವು ಜನರು ಇರುವುದು ಈಗಾಗಲೇ ಮನವರಿಕೆ ಆಗಿದೆ. ಆದುದರಿಂದ ಹೊಸ ಸರ್ಕಾರ ಮತ್ತು ಈ ಭಾಗದ ನೂತನ ಜನಪ್ರತಿನಿಧಿಗಳು ಪೊಲೀಸ್ ಇಲಾಖೆಯನ್ನು ಇದನ್ನು ಆಗದ ರೀತಿ ತಡೆಗಟ್ಟುವಲ್ಲಿ ಮತ್ತು ಇಂತಕ ಕೃತ್ಯ ನಡೆಸುವ ಕಿಡಿಗೇಡಿಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕುವಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದರ ಜೊತೆ, ಕರಾವಳಿಯಲ್ಲಿ ಕೋಮು ಸಂಘರ್ಷ ನಡೆಯದಂತೆ ಎಚ್ಚರ ವಹಿಸಬೇಕೆಂಬುದು ನಮ್ಮ ವೇದಿಕೆಯ ಆಗ್ರಹವಾಗಿದೆ.

Like · · Share