ನೆಹರೂಗೆ ಸರಿಸಾಟಿ ನೆಹರೂ ಮಾತ್ರ!

ಅಂಕಣ

ನೆಹರೂಗೆ ಸರಿಸಾಟಿ ನೆಹರೂ ಮಾತ್ರ!

(ಕೃಪೆ:ವಾರ್ತಾಭಾರತಿ,  ಬುಧವಾರ – ಮೇ -28-2014)

ನೆಹರೂಗೆ ಸರಿಸಾಟಿ ನೆಹರೂ ಮಾತ್ರ!

 -ಡಾ.ಮಹೇಂದ್ರ ಎಸ್.ಕಂಠಿ

 (ಈ ಲೇಖನದ ಬರಹಗಾರರಾದ ಡಾ.ಮಹೇಂದ್ರ ಎಸ್.ಕಂಠಿ, ಅಂತಾರಾಷ್ಟ್ರೀಯ ಖ್ಯಾತಿಯ ಅರ್ಥಶಾಸ್ತ್ರಜ್ಞರು. ಕಳೆದ ನಾಲ್ಕು ದಶಕಗಳಿಂದ ಅವರು ವಿವಿಧ ಅಮೆರಿಕನ್ ವಿಶ್ವವಿದ್ಯಾನಿಲಯಗಳಲ್ಲಿ ಅಂತಾರಾಷ್ಟ್ರೀಯ ಅರ್ಥಶಾಸ್ತ್ರವನ್ನು ಭೋದಿಸಿದ್ದಾರೆ. ವಿಶ್ವಸಂಸ್ಥೆಯ ಕಾರ್ಯಗಳಲ್ಲೂ ಅವರು ಕೈಜೋಡಿಸಿದ್ದರು. ಅವರ ತಂದೆ ಎಸ್.ಆರ್.ಕಂಠಿ ಖ್ಯಾತ ಸ್ವಾತಂತ್ರ ಹೋರಾಟಗಾರರು ಹಾಗೂ 1962ರಲ್ಲಿ ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು).
ಪಂಡಿತ್ ಜವಾಹರಲಾಲ್ ನೆಹರೂ ತನ್ನ ತಲೆಮಾರಿನವರಿಗೆ ಓರ್ವ ‘ಹೀರೋ’ ಆಗಿದ್ದ ರೆಂಬುದನ್ನು ಆಧುನಿಕ ಇತಿಹಾಸಕಾರ ರಾಮಚಂದ್ರ ಗುಹಾ ತನ್ನ ಲೇಖನವೊಂದರಲ್ಲಿ ಸರಿಯಾದುದನ್ನೇ ಹೇಳಿದ್ದಾರೆ. ಅವರ ಈ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ.ಜವಾಹರಲಾಲ್ ನೆಹರೂ ಪ್ರಧಾನಿಯಾಗಿದ್ದ ಸಮಯದಲ್ಲಿ ನಾನು ಬೆಳೆದುದು ನನ್ನ ಅದೃಷ್ಟವೇ ಸರಿ. ಎರಡು ದಶಕಗಳ ಅವಧಿಯಲ್ಲಿ ನಾನು ಅವರನ್ನು ಹಲವು ಸಂದರ್ಭಗಳಲ್ಲಿ ಭೇಟಿಯಾಗಿದ್ದೆ.
ನನ್ನ ತಂದೆ ದಿವಂಗತ ಎಸ್.ಆರ್.ಕಂಠಿ, ಹಿಂದಿನ ಮೈಸೂರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದರು. ಹಾಗೂ ಗಣ್ಯ ರಾಜಕೀಯ ನಾಯಕರಾಗಿದ್ದರು ಮತ್ತು ನೆಹರೂ ಮತ್ತು ಅವರ ಸಮಕಾಲೀನ ನಾಯಕರ ನಿಕಟವರ್ತಿಯೂ ಆಗಿದ್ದರು.
1956ರ ನವೆಂಬರ್ 1ರಂದು ಕರ್ನಾಟಕ ರಾಜ್ಯವು ಏಕೀಕರಣಗೊಳ್ಳುವ ಮೊದಲು, ನಾವು ಈಗ ಮುಂಬೈ-ಕರ್ನಾಟಕ ಪ್ರಾಂತವೆಂದು ಕರೆಯುವ ಪ್ರದೇಶವು ಬಾಂಬೆ ಸರಕಾರದ ಭಾಗವಾಗಿತ್ತು. ನೆಹರೂ ಅವರು ತನ್ನ ತಲೆಮಾರಿನವರಿಗೆ ಮಹಾತ್ಮ ಗಾಂಧಿಯ ಬಳಿಕ ಭಾರತದ ಎರಡನೆ ಪ್ರಮುಖ ವ್ಯಕ್ತಿಯಾಗಿದ್ದರು.
ನನ್ನ ತಂದೆ ಸ್ವಾತಂತ್ರ ಹೋರಾಟಗಾರರಾಗಿ ಹೆಸರುಗಳಿಸಿದ್ದರು. ಸ್ವಾತಂತ್ರಾನಂತರದಲ್ಲಿ ಬಾಂಬೆ ಪ್ರಾಂತದ ಮುಖ್ಯಮಂತ್ರಿಯಾಗಿದ್ದ ಬಿ.ಜಿ.ಖೇರ್ ಅವರ ಸಂಪುಟದಲ್ಲಿ ಸಂಸದೀಯ ಕಾರ್ಯದರ್ಶಿ ಯಾಗಿದ್ದರು. ತದನಂತರ ಅವರು ಬಾಂಬೆ ವಿಧಾನಸಭೆಯ ಉಪಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು.
ಆಗ ನಾವು ಬಾಂಬೆ (ಈಗ ಮುಂಬೈ ಎಂದು ಮರುನಾಮಕರಣಗೊಂಡಿದೆ) ಹಾಗೂ ಬಾಗಲಕೋಟೆ ಯಲ್ಲಿದ್ದೆವು. ಆನಂತರ 1956ರ ಕರ್ನಾಟಕ ರಾಜ್ಯವು ಏಕೀಕರಣಗೊಂಡಾಗ ನಾವು ಅದರ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರಗೊಂಡೆವು. ಬಾಂಬೆಯಲ್ಲಿರು ವಾಗ ನನ್ನನ್ನು ಹೆತ್ತವರು, ನೆಹರೂ ಭಾಗವಹಿಸುವ ಕಾರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದರು. ಆದರೆ ನಾನು ಆಗ ತುಂಬಾ ಸಣ್ಣವನಾಗಿದ್ದರಿಂದ ಈ ಕುರಿತ ಎಲ್ಲಾ ವಿವರಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಆದರೆ ಎಐಸಿಸಿಯ ಬಾಂಬೆ ಅಧಿವೇಶನದ ಸಂದರ್ಭದಲ್ಲಿ ಗಾಂಧೀಜಿ, ಪಂಡಿತ್‌ಜಿ (ನೆಹರೂ) ಹಾಗೂ ವಲ್ಲಭಭಾಯ್ ಪಟೇಲ್ ಒಂದೇ ವೇದಿಕೆ ಯಲ್ಲಿದ್ದುದನ್ನು ನೋಡಿರುವುದು ನನಗೆ ಸರಿಯಾಗಿ ನೆನಪಿದೆ.ಪಂಡಿತ್‌ಜೀ ಅವರು ತಮ್ಮ ಟಿಪಿಕಲ್ ಶೈಲಿಯ ಆರ್ಧ ತೋಳಿನ ನೆಹರೂ ಜಾಕೆಟ್ ಧರಿಸಿದ್ದರು.
ನನ್ನ ಹುಟ್ಟೂರಾದ ಬಾಗಲಕೋಟೆಯಲ್ಲಿ ಚುನಾವಣಾ ಪ್ರಚಾರವೊಂದರ ಸಂದರ್ಭದಲ್ಲಿ ನಾನು ಮೊದಲ ಬಾರಿ ನೆಹರೂರನ್ನು ಭೇಟಿಯಾಗಿದ್ದೆ. ಅವರು ತನ್ನ ಪುತ್ರಿ ಇಂದಿರಾಗಾಂಧಿ ಜೊತೆ ಆಗಮಿಸಿದ್ದರು. ಆಕೆ ಸಿನೆಮಾ ನಟಿಯಂತೆ ಅತ್ಯಂತ ಸುಂದರವಾಗಿ ಕಾಣುತ್ತಿದ್ದರು. ಆ ದಿವಸ ನನ್ನ ತಂದೆ ನೆಹರೂ ಜೊತೆ ತುಂಬಾ ಹೊತ್ತು ಮಾತುಕತೆ ನಡೆಸಿದರು. ನೆಹರೂ ಅವರನ್ನು ನೋಡಬೇಕೆಂಬ ಹಂಬಲದಿಂದ ಆಸುಪಾಸಿನ ಹಳ್ಳಿಗಳ 25 ಸಾವಿರಕ್ಕೂ ಅಧಿಕ ಮಂದಿ ಅಲ್ಲಿದ್ದರು.
ನೆಹರೂ ಅವರನ್ನು ನಿಜಕ್ಕೂ ಜನಸಾಮಾನ್ಯರು ಇಷ್ಟಪಡುತ್ತಿದ್ದರು. ಈ ಮಹಾನ್ ವ್ಯಕ್ತಿಯೊಂದಿಗಿನ ನನ್ನ ಕೆಲವು ಅನುಭವಗಳನ್ನು ಇಲ್ಲಿ ನೀಡಿದ್ದೇನೆ.
ನೆಹರೂಗೆ ಕೆಲಸದ ಅಪಾರ ಗೀಳಿತ್ತು. ಅವರು ಸರಕಾರಿ ಕೆಲಸಗಳನ್ನು ವಿಲೇವಾರಿ ಮಾಡುವುದಕ್ಕಾಗಿ ಮತ್ತು ವಿಶ್ವದ ನಾಯಕರಿಗೆ ಬರೆಯುವ ಪತ್ರಗಳನ್ನು ಓದಿ ಹೇಳಲು ಮಧ್ಯರಾತ್ರಿಯ ತನಕವೂ ಪ್ರಧಾನಿ ಕಚೇರಿಯಲ್ಲಿ ಉಳಿದುಕೊಳ್ಳುತ್ತಿದ್ದರು.
ಒಂದೊಮ್ಮೆ ನಾನು ನನ್ನ ತಂದೆಯೊಂದಿಗೆ ದಿಲ್ಲಿಗೆ ಬಂದಿದ್ದೆ. ಹೊಸದಿಲ್ಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ರೀಗಲ್ ಚಿತ್ರಮಂದಿರದಲ್ಲಿ ‘ಟೆನ್ ಕಮಾಂಡ್ ಮೆಂಟ್ಸ್’ ಸಿನೆಮಾ ನೋಡಿ ಮನೆಗೆ ವಾಪಸಾಗು ತ್ತಿದ್ದೆವು. ಆಗಿನ ಕಾಲದಲ್ಲಿ ಭದ್ರತಾ ನಿರ್ಬಂಧಗಳು ಅಧಿಕವಾಗಿರಲಿಲ್ಲ. ನಮ್ಮ ಕಾರು ಕನ್ನಾಟ್ ಪ್ಲೇಸ್ ಕಡೆಯಿಂದ ರಾಜ್‌ಪಥ್ ಪ್ರವೇಶಿಸಿತು. ಆ ಹೊತ್ತಲ್ಲೂ ಪಂಡಿತ್ ನೆಹರೂ ತನ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದುದನ್ನು ಕಂಡು ನನಗೆ ಆಘಾತ ಹಾಗೂ ಅಚ್ಚರಿಗಳೆರಡೂ ಆದವು. ಪ್ರಜ್ವಲವಾದ ವಿದ್ಯುದ್ದೀಪ ಹಾಗೂ ಸೀಲಿಂಗ್ ಫ್ಯಾನ್‌ನ ಕೆಳಗೆ ಅವರ ಬೋಳು ತಲೆ ನನಗೆ ಕಾಣುತ್ತಿತ್ತು. ಆಗ ತಂದೆ, ‘‘ನೋಡು ಮಹೇಂದ್ರ ಪಂಡಿತ್‌ಜಿ ಈಗಲೂ ಅವರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಷ್ಟೊಂದು ದೊಡ್ಡ ಮನುಷ್ಯ’’ ಎಂದು ಅವರು ಆಶ್ಚರ್ಯದೊಂದಿಗೆ ತಿಳಿಸಿದರು. ಆಗ ಮಧ್ಯರಾತಿ 1 ಗಂಟೆಯಾಗಿತ್ತು.ನಾನು ಆ ಘಟನೆಯನ್ನು ಎಂದಿಗೂ ಮರೆಯಲಾರೆ. 1962ರಲ್ಲಿ ನನ್ನ ತಂದೆ ಕರ್ನಾಟಕದ ಮುಖ್ಯಮಂತ್ರಿಯಾದರು. (ಆಗ ಮೈಸೂರು ರಾಜ್ಯವೆಂದು ಕರೆಯ ಲ್ಪಡುತ್ತಿತ್ತು). ಅವರು ಪ್ರಧಾನಿ ನೆಹರೂರನ್ನು ಕಾಣಲು ದಿಲ್ಲಿಗೆ ಆಗಮಿಸಿದ್ದರು. ನಾನು ಅವರೊಂದಿಗೆ ತೀನ್‌ಮೂರ್ತಿ ಭವನಕ್ಕೆ ತೆರಳಿದೆ.
ನೆಹರೂ ತನ್ನ ಭವ್ಯವಾದ ಬಂಗಲೆಯ ಹೊರಗೆ ಕುಳಿತುಕೊಂಡಿದ್ದರು. ನನ್ನ ತಂದೆಯನ್ನು ನೋಡಿ ಅವರಿಗೆ ಸಂತಸವಾಯಿತು. ಅವರು ತನ್ನ ಪರಿಚಾರಕ ನನ್ನು ಕರೆದು, ‘‘ಮೈಸೂರಿನಿಂದ ಕಂಠಿಜೀ ಆಗಯೇ. ಕಾಫಿ ಲೇಕೆ ಆಜಾವೊ (ಶ್ರೀಯುತ ಕಂಠಿ, ಬೆಂಗಳೂರಿ ನಿಂದ ಆಗಮಿಸಿದ್ದಾರೆ. ಕಾಫಿ ತಾ) ಎಂದರು.
ಮೈಸೂರು ಶಾಸಕಾಂಗ ಪಕ್ಷದ ನಾಯಕನಾಗಿ ಮುಂದುವರಿಯುಂತೆ ಅವರು ನನ್ನ ತಂದೆಯನ್ನು ಕೇಳಿಕೊಂಡರು. ಪಕ್ಷದೊಳಗಿನ ಗುಂಪುಗಾರಿಕೆಯ ಬಗ್ಗೆ ಅವರಿಗೆ ತುಂಬಾ ಕಳವಳವಿತ್ತು. ಅವರು ಹೀಗೆ ಹೇಳಿದರು (ಕಂಠಿಜೀ ನೀವು ಮುಖ್ಯಮಂತ್ರಿಯಾಗಿ ಮುಂದುವರಿಯಿರಿ. ನೀವು ಎಲ್ಲರಿಗೂ ಒಪ್ಪಿಗೆಯಾಗು ತ್ತೀರಿ. ಎಸ್.ನಿಜಲಿಂಗಪ್ಪ ಅವರನ್ನು ಉತ್ತರಪ್ರದೇಶದ ಗವರ್ನರ್‌ಅಥವಾ ವಿದೇಶಾಂಗ ಸಚಿವರನ್ನಾಗಿ ನೇಮಿಸಲಿದ್ದೇವೆ. ಲಾಲ್ ಬಹಾದೂರ್ ಶಾಸ್ತ್ರಿ, ಮೊರಾರ್ಜಿ ದೇಸಾಯಿ ಹಾಗೂ ಗುಲ್ಜಾರಿಲಾಲ್ ನಂದಾ ನಿಮ್ಮನ್ನು ತುಂಬಾ ಮೆಚ್ಚುತ್ತಾರೆ.
ಆಗ ನನ್ನ ತಂದೆ ‘‘ಸರ್, ಮೈಸೂರಿನ ಮುಖ್ಯಮಂತ್ರಿಯಾಗಲು ಎಸ್.ನಿಜಲಿಂಗಪ್ಪ ಅವರು ಬಯಸುತ್ತಿಲ್ಲ.ಅವರು ಮುಖ್ಯಮಂತ್ರಿಯಾಗಬೇಕೆಂದು ನಾವು ಮೈಸೂರಿನ ಜನತೆ, ಬಯಸುತ್ತಿದ್ದೇವೆ.ಏಕೆಂದರೆ ಕರ್ನಾಟಕದ ಏಕೀಕರಣ ಚಳವಳಿಯ ಮೂಲಕ ಅವರು ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸಿದ್ದಾರೆ. ನೀವು ನನ್ನ ಯಜಮಾನರಾಗಿದ್ದೀರಿ. ನಾನು ನಿಮ್ಮ ಆದೇಶವನ್ನು ಪಾಲಿಸುತ್ತೇನೆ. ಆದರೆ ರಾಜೀನಾಮೆ ನೀಡಲು ನನಗೆ ಹಕ್ಕಿದೆ ’’ ಎಂದರು.
ಆಗ ನೆಹರೂ ಮುಖದಲ್ಲಿ ವಿಶಾಲವಾದ ಮುಗುಳ್ನಗೆ ಮೂಡಿತು. ‘‘ನೀವು ಕಾಂಗ್ರೆಸ್‌ನ ಶ್ರೇಷ್ಠ ಸಂಪ್ರದಾಯ ವನ್ನು ಪಾಲಿಸುತ್ತಿದ್ದೀರಿ’’ ಎಂದು ಅವರು ನನ್ನ ತಂದೆಯನ್ನು ಶ್ಲಾಘಿಸಿದರು.
ಒಂದು ಸಲ ನೆಹರೂ ಸೆಂಟ್ರಲ್ ಕಾಲೇಜ್ ಮೈದಾನದಲ್ಲಿ ಏರ್ಪಡಿಸಲಾದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದರು. ಅವರಿ ಗಾಗಿ 20 ಸಾವಿರಕ್ಕೂ ಅಧಿಕ ರೈತರು ಕಾಯುತ್ತಿದ್ದರು. ತೆರೆದ ಕಾರಿನಲ್ಲಿ ನೆಹರೂ ಮೈದಾನವನ್ನು ಪ್ರವೇಶಿಸುತ್ತಿದ್ದಂತೆಯೇ, ಜನರು ಹುಚ್ಚೆದ್ದರು. ನೆಹರೂ ಕಾರಿನ ಸಮೀಪಕ್ಕೆ ಧಾವಿಸುತ್ತಿದ್ದ ಜನರನ್ನು ನಿಯಂತ್ರಿ ಸಲು ಪೊಲೀಸ್ ಹಿರಿಯ ಅಧಿಕಾರಿ ಯೊಬ್ಬರಿಗೆ ಸಾಧ್ಯವಾಗಲೇ ಇಲ್ಲ. ಜನರು ಆತನನ್ನು ಬದಿಗೆ ತಳ್ಳಿ, ನೆಹರೂ ಅವರ ಕೈಗಳನ್ನು ಮುಟ್ಟಲು ಯತ್ನಿಸುತ್ತಿದ್ದರು.

ಮೊದಲೇ ಮುಂಗೋಪಿಯಾಗಿದ್ದ ನೆಹರೂ ತಾಳ್ಮೆ ಕಳೆದುಕೊಂಡು, ಪೊಲೀಸ್ ಅಧಿಕಾರಿಯ ಕೈಯಲ್ಲಿದ್ದ ಬೆತ್ತವನ್ನು ಕಸಿದುಕೊಂಡರು ಮತ್ತು ಅದನ್ನು ಬೀಸುತ್ತಲೇ ಜನರನ್ನು ಹಿಮ್ಮೆಟ್ಟಿಸಿದರು.ಆನಂತರ ಅವರು ಗಟ್ಟಿಯಾಗಿ ಕಿರುಚುತ್ತಾ, ‘‘ನನ್ನನ್ನು ಯಾಕೆ ಹೀಗೆ ದೂಡುತ್ತಿದ್ದೀರಿ?. ನಿಮ್ಮ ಸ್ಥಳಗಳಿಗೆ ತೆರಳಿ. ನೀವು ವೌನವಾಗಿ ಇರುವುದನ್ನು ನಾನು ಬಯಸುತ್ತಿದ್ದೇನೆ’’ ಎಂದರು.ನೆಹರೂ ಅವರು ಧ್ವನಿ ತುಂಬಾ ಶಕ್ತಿಶಾಲಿ ಯಾಗಿತ್ತು. ಅವರ ಮಾತುಗಳು ಗೌರವಯುತ ವಾಗಿದ್ದವು. ಜನಜಂಗುಳಿ ಕೂಡಲೇ ವೌನವಾಗಿ ಹಿಂದೆ ಸರಿಯಿತು. ಆನಂತರ ನೆಹರೂ 40 ನಿಮಿಷಗಳ ಕಾಲ ವಿವಿಧ ಪಂಚವಾರ್ಷಿಕ ಯೋಜನೆಗಳು ಹಾಗೂ ನೀತಿಗಳ ಬಗ್ಗೆ ಮಾತನಾಡಿದರು. ನಾನು ನೆಹರೂ ಅವರನ್ನು ವಿಭಿನ್ನ ಸ್ಥಳಗಳಲ್ಲಿ ಭೇಟಿಯಾಗಿದ್ದೆ. ಮೈಸೂರು ಸಮೀಪದ ಇಲವಾಲ ದಲ್ಲಿದ್ದ ವಿನೋಭಾಬಾವೆ ಅವರ ತಾತ್ಕಾಲಿಕ ಆಶ್ರಮದಲ್ಲಿಯೂ ಸಹ ಅವರನ್ನು ನಾನು ಒಂದು ಬಾರಿ ಭೇಟಿಯಾಗಿದ್ದೆ. ನೆಹರೂ ಅವರು ಬೆಂಗಳೂರು ಮತ್ತು ಮೈಸೂರಿನಲ್ಲಿ ತೆರೆದ ಕಾರಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಿದ್ದರು.
ನಾನು ನೆನಪಿಸಿಕೊಳ್ಳುವ ಇನ್ನೊಂದು ರಸಮಯ ವಾದ ಪ್ರಸಂಗವು ಹೀಗಿದೆ. ಪಂಡಿತ್‌ಜಿ, ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಹಾಗೂ ಗೋವಿಂದ ವಲ್ಲಭ ಭಾಯ್ ಪಂತ್ ಐಎಎಫ್ ಡಕೋಟಾ ಏರ್‌ಕ್ರಾಫ್ ಮೂಲಕ ಮೈಸೂರಿಗೆ ಆಗಮಿಸಿದರು. ಮೈಸೂರು ವಿಮಾನನಿಲ್ದಾಣವು ಬೃಹತ್ ಆಸನ ಸಾಮರ್ಥ್ಯದ ವಿಮಾನಗಳನ್ನು ಇಳಿಸುವಷ್ಟು ದೊಡ್ಡದಾಗಿರಲಿಲ್ಲ. ವಿಮಾನವು ಏರ್‌ಸ್ಟ್ರಿಪ್ ಪ್ರವೇಶಿಸುತ್ತಿದ್ದಂತೆಯೇ ದನಗಳು,ಎಮ್ಮೆಗಳ ಗುಂಪುಗಳು ಪ್ರವೇಶಿಸಿದವು ಹಾಗೂ ಸುತ್ತಮುತ್ತ ಓಡತೊಡಗಿದವು.
ಆಗ ಗಾಬರಿಗೊಂಡ ಐಜಿ ಹಾಗೂ ಪೊಲೀಸ್ ಡಿಐಜಿ ತೆರೆದ ಜೀಪುಗಳನ್ನೇರಿ, ಜಾನುವಾರುಗಳನ್ನು ಬೆನ್ನಟ್ಟಿದರು. ಇದೊಂದು ನೋಡುವಂತಹ ದೃಶ್ಯವೇ ಆಗಿತ್ತು. ವಿಮಾನವು ರನ್‌ವೇನಲ್ಲಿ ಇಳಿಯು ತ್ತಿದ್ದಂತೆಯೇ ಅಲ್ಲಿದ್ದವರೆಲ್ಲರೂ ಭಯಗ್ರಸ್ತರಾಗಿದ್ದರು. ಅದೃಷ್ಟವಶಾತ್ ಈ ವಿಐಪಿ ವಿಮಾನವು ಯಾವುದೇ ದುರ್ಘಟನೆಯಿಲ್ಲದೆ ಸುರಕ್ಷಿತವಾಗಿ ಇಳಿಯಿತು.
ನನ್ನ ಅನಿಸಿಕೆಯ ಪ್ರಕಾರ, ನೆಹರೂ ಅವರ ಭಾರತದ ಕಲ್ಪನೆಯು, ಮಹಾತ್ಮಾ ಗಾಂಧೀಜಿಯ ಕನಸಿನ ಭಾರತಕ್ಕಿಂತ ಸಂಪೂರ್ಣ ವಿಭಿನ್ನವಾಗಿದ್ದವು. ನೆಹರೂ ಮಹಾತ್ಮ ಅವರನ್ನು ಹಾಗೂ ಮಹಾತ್ಮಾ ಗಾಂಧೀಜಿ ನೆಹರೂ ಅವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಮಹಾತ್ಮಾ ಗಾಂಧೀಜಿ ಪ್ರತಿಪಾದಿಸುವ ಗ್ರಾಮ ಸ್ವರಾಜ್ ಹಾಗೂ ಗ್ರಾಮೀಣ ಕೈಗಾರಿಕೆ ಬಗ್ಗೆ ನೆಹರೂಗೆ ಆಸಕ್ತಿಯಿರಲಿಲ್ಲ. ಅವರು ಸೋವಿಯತ್ ನಾಯಕ ಸ್ಟಾಲಿನ್‌ನ ಕೈಗಾರೀಕರಣ ನೀತಿಗೆ ಮಾರುಹೋಗಿ ದ್ದರು. ಬೃಹತ್ ಕೈಗಾರಿಕೆಗಳು, ಬೃಹತ್ ಉಕ್ಕಿನ ಸ್ಥಾವರಗಳು, ಬೃಹತ್ ರಾಸಾಯನಿಕ/ ಸಾರಿಗೆ ಕಾರ್ಖಾನೆಗಳು ಹಾಗೂ ಬೃಹತ್ ಅಣೆಕಟ್ಟುಗಳು ಭಾರತವನ್ನು ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಪರಿವರ್ತಿಸುವುದೆಂಬುದನ್ನು ಅವರು ದೃಢವಾಗಿ ನಂಬಿದ್ದರು. ದೇಶವು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾದರೆ ಇವೆಲ್ಲವೂ ಅತ್ಯವಶ್ಯವೆಂದು ಅವರು ಭಾವಿಸಿದ್ದರು. ಇದೇ ವೇಳೆ ಸರಕಾರಿ ಸಮಾಜವಾದ ಹಾಗೂ ನೈಜ ವೈಯಕ್ತಿಕ ಪ್ರಜಾಪ್ರಭುತ್ವವನ್ನು ಅವರು ದೃಢವಾಗಿ ನಂಬಿದ್ದರು. ಇವೆರಡೂ ಹೊಂದಾಣಿಕೆ ಯಾಗದ ಸಿದ್ಧಾಂತಗಳಾಗಿವೆ.
ನೆಹರೂ ಅವರದು ಅದ್ಭುತ ವ್ಯಕ್ತಿತ್ವ. ನೈಜ ಅರ್ಥದಲ್ಲಿ ಅವರೊಬ್ಬ ವಿಶ್ವನಾಯಕ. ಅವರ ಅಡಳಿತದ ಸಮಯದಲ್ಲಿ ಭಾರತವು ಅತ್ಯಂತ ಬಡರಾಷ್ಟ್ರವಾಗಿತ್ತು. ಆದರೆ, ನೆಹರೂ ತನ್ನ ವ್ಯಕ್ತಿತ್ವದ ಮೂಲಕ ಭಾರತಕ್ಕೆ ಗೌರವ ತಂದುಕೊಟ್ಟರು. ಅವರದು ಭೀಮಗಾತ್ರದ ವ್ಯಕ್ತಿತ್ವ. ನೆಹರೂ ಅಂತಹವರು ಮತ್ತೊಬ್ಬರಿರಲಾರರು.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s