ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

ಅಂಕಣ

ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

(ಕೃಪೆ : ವಾರ್ತಾಭಾರತಿ, ಶನಿವಾರ – ಜೂನ್ -21-2014)

 ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

ಹಸನ್ ಕಮಲ್

2004 ರಲ್ಲಿ ಲೋಕಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿತ್ತು. ತನ್ನ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ಲಾಲ್‌ಕೃಷ್ಣ ಅಡ್ವಾಣಿ ಘೋಷಿಸಿದ್ದರು. ಹಾಗೆ ನೋಡಿದರೆ ಈ ಘೋಷಣೆ 1999ರಲ್ಲೂ ಕೇಳಿ ಬಂದಿತ್ತು. ಆದರೆ, ಎನ್‌ಡಿಎಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಅದನ್ನು ಯಾಕೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು ಎಂಬುದು ಯಾರಿಗೂ ಗೊತ್ತಿಲ್ಲ.
ಅದೇನೇ ಇರಲಿ. ಅಡ್ವಾಣಿಯ ಘೋಷಣೆಯನ್ನು ಕೇಳಿದ ನಾವು ಕೆಲವರು ಅವರಿಗೆ ಟೆಲಿಗ್ರಾಂ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದೆವು. ಸಮಾನ ನಾಗರಿಕ ಸಂಹಿತೆಯ ಬಗ್ಗೆ ಕರಡು ಅಥವಾ ನೀಲನಕ್ಷೆ ಸಿದ್ಧಪಡಿಸಲಾಗಿದ್ದರೆ ನಮಗೆ ಅದರ ಬಗ್ಗೆ ತಿಳಿಸಬೇಕು ಹಾಗೂ ಅದರ ಬಗ್ಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂಬ ಸಂದೇಶ ಅದಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ಯಾವುದೇ ವಿಷಯದಲ್ಲಿ ಚರ್ಚೆ ಮತ್ತು ಅಭಿಪ್ರಾಯ ವಿನಿಮಯದ ಬಳಿಕವಷ್ಟೆ ಯಾವುದೇ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಷ್ಟೇ ಅಲ್ಲ, ಆ ಬಳಿಕ ಇಡೀ ಚುನಾವಣಾ ಪ್ರಚಾರದ ವೇಳೆ ಸಮಾನ ನಾಗರಿಕ ಸಂಹಿತೆಯ ಸೊಲ್ಲು ಮತ್ತೊಮ್ಮೆ ಕೇಳಲಿಲ್ಲ.
ಈ ಬಾರಿ ಬಿಜೆಪಿಯ ಭರ್ಜರಿ ವಿಜಯದ ಬಳಿಕ ಈ ಘೋಷಣೆ ಮತ್ತೊಮ್ಮೆ ಪ್ರತಿಧ್ವನಿಸುತ್ತಿದೆ. ಈ ವಿಷಯದಲ್ಲಿ ಮಗುವಿನಂತೆ ಪ್ರತಿಕ್ರಿಯಿಸುವುದು ಅಪ್ರಬುದ್ಧತೆಯಾಗುತ್ತದೆ ಮತ್ತು ಅತಾರ್ಕಿಕವಾಗುತ್ತದೆ. ನಿನ್ನ ಮೂಗನ್ನು ಕಾಗೆ ಕಚ್ಚಿಕೊಂಡು ಹೋಗಿದೆ ಎಂದು ಮಗುವಿಗೆ ಹೇಳಿದರೆ ಅದು ತನ್ನ ಮೂಗನ್ನು ಸವರಿ ನೋಡದೆ ಕಾಗೆಯ ಹಿಂದೆ ಓಡುತ್ತದೆ. ಹಾಗಾಗಿ, ಸಮಾನ ನಾಗರಿಕ ಸಂಹಿತೆಯ ಘೋಷಣೆಯನ್ನು ಕೂಗುವವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದು ಬುದ್ಧಿವಂತಿಕೆಯಾಗುತ್ತದೆ- ನಿಮ್ಮ ಸಮಾನ ನಾಗರಿಕ ಸಂಹಿತೆಯ ಕಲ್ಪನೆಯೇನು? ನೀವು ಸಮಾನ ನಾಗರಿಕ ಸಂಹಿತೆಯ ನೀಲ ನಕಾಶೆಯನ್ನು ಸಿದ್ಧಪಡಿಸಿರುವಿರಾ?
ಸಿದ್ಧಪಡಿಸಿದ್ದಾರೆ ಎಂದಾದರೆ, ಅಧ್ಯಯನ ಮತ್ತು ಪರಿಶೀಲನೆಗಾಗಿ ಅದನ್ನು ಬಹಿರಂಗಪಡಿಸಬೇಕು ಹಾಗೂ ಆ ಮೂಲಕ ಅದರ ಯಾವ ವಿಧಿ ಅಥವಾ ವಿಧಿಗಳು ಪ್ರತಿಯೊಬ್ಬರಿಗೂ ಸ್ವೀಕಾರಾರ್ಹ ಮತ್ತು ಯಾವುದು ಸ್ವೀಕಾರಾರ್ಹವಲ್ಲ ಹಾಗೂ ಅವುಗಳು ಯಾರಿಗೆ ಅಸ್ವೀಕಾರಾರ್ಹವಾಗಿವೆ ಮತ್ತು ಯಾಕೆ ಎಂಬುದನ್ನು ನಿರ್ಧರಿಸಬೇಕಾಗಿದೆ.
ಇಂತಹ ವಿಧಾನಗಳನ್ನು ಅನುಸರಿಸದೆ ಒಮ್ಮೆಲೆ ಆಕ್ರೋಶಗೊಳ್ಳುವುದು ಹಾಗೂ ಕೋಪದ ಕೈಗೆ ಬುದ್ಧಿಯನ್ನು ಒಪ್ಪಿಸುವುದೆಂದರೆ ಈ ಘೋಷಣೆಗಳನ್ನು ಹೊರಡಿಸಿದವರು ನಮಗಾಗಿ ತೋಡಿದ ಹೊಂಡದಲ್ಲಿ ನಾವೇ ಕಣ್ಣು ಮುಚ್ಚಿಕೊಂಡು ಹೋಗಿ ಬಿದ್ದಂತೆ. ಅವರಿಗೆ ಬೇಕಾಗಿರುವುದೂ ಅದೇ!
ಸಮಾನ ನಾಗರಿಕ ಸಂಹಿತೆ ಕೌಟುಂಬಿಕ ಕಾನೂನುಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗಿದೆ. ಅದು ಮದುವೆ, ವಿಚ್ಛೇದನೆ ಮತ್ತು ಪಿತ್ರಾರ್ಜಿತ ಆಸ್ತಿ ವಿಭಜನೆಗೆ ಮಾತ್ರ ಸಂಬಂಧಿಸಿಲ್ಲ. ಇದು ಹಲವು ಲೌಕಿಕ ವ್ಯವಹಾರಗಳನ್ನೂ ಒಳಗೊಂಡ ವಿಶಾಲ ವ್ಯಾಪ್ತಿಯ ಕಾನೂನು ವಿಷಯವಾಗಿದೆ. ಸಮಾನ ನಾಗರಿಕ ಸಂಹಿತೆ ಗುರಿಯಿರಿಸಿರುವುದು ಕೇವಲ ಮುಸ್ಲಿಮರು ಮತ್ತು ಅವರ ಧಾರ್ಮಿಕ ಆಚರಣೆಗಳನ್ನು ಮಾತ್ರ ಹಾಗೂ ಇತರರ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಭಾವಿಸುವುದೂ ತಪ್ಪು. ಸಮಾನ ನಾಗರಿಕ ಸಂಹಿತೆಯ ವಿರುದ್ಧ ಬೇರೆ ಯಾವುದೇ ಸಮುದಾಯ ಧ್ವನಿಯೆತ್ತದಿರುವುದರಿಂದ ತಮ್ಮ ಭಾವನೆಗಳಿಗೆ ಘಾಸಿ ಮಾಡಲು ಮಾತ್ರ ಈ ಕುರಿತ ಮಾತುಗಳನ್ನು ಆಡಲಾಗುತ್ತಿದೆ ಎಂಬುದಾಗಿ ಮುಸ್ಲಿಮರು ಭಾವಿಸುತ್ತಾರೆ. ಇಂತಹ ಭೀತಿ ಸಂಪೂರ್ಣ ತಪ್ಪೂ ಅಲ್ಲ, ಸಂಪೂರ್ಣ ಸರಿಯೂ ಅಲ್ಲ.
ವಾಸ್ತವವೆಂದರೆ, ಹಿಂದೂ ಸಮುದಾಯದ ಹಲವು ವರ್ಗಗಳು ಸೇರಿದಂತೆ ಪ್ರತೀ ಸಮುದಾಯದ ಮೇಲೆ ಅದು ಪರಿಣಾಮ ಬೀರುತ್ತದೆ. ಇತರರು ಇದರ ವಿರುದ್ಧ ಏನೂ ಮಾತನಾಡುತ್ತಿಲ್ಲ ಯಾಕೆಂದರೆ ಮುಸ್ಲಿಮರು ಇದನ್ನು ಈಗಾಗಲೇ ವಿರೋಧಿಸಿದ್ದಾರೆ, ಹಾಗಾಗಿ ಇತರರು ವಿರೋಧಿಸಬೇಕಾದ ಅಗತ್ಯವಿಲ್ಲವೆಂದೇ? ಪ್ರಚೋದನೆಗೆ ಮುಸ್ಲಿಮರು ಸುಲಭವಾಗಿ ಒಳಗಾಗುತ್ತಾರೆ ಎನ್ನುವುದು ಈ ಘೋಷಣೆ ಪ್ರಿಯರಿಗೆ ಗೊತ್ತು. ಮುಸ್ಲಿಮರು ಆಕ್ರೋಶಗೊಳ್ಳಬೇಕು ಹಾಗೂ ಆ ಮೂಲಕ ‘ನೋಡಿ, ಮುಸ್ಲಿಮರು ನೆಲದ ಕಾನೂನಿಗೆ ಅನುಗುಣವಾಗಿ ಬದುಕಲು ಬಯಸುವುದಿಲ್ಲ’ ಎಂಬುದನ್ನು ಜಗತ್ತಿಗೆ ಹೇಳಲು ತಮಗೆ ಅವಕಾಶ ಸಿಗಬೇಕು ಎನ್ನುವುದೇ ಅವರ ಉದ್ದೇಶ. ಯಾವ ಕಾನೂನಿನ ಬಗ್ಗೆ ಮಾತನಾಡಲಾಗುತ್ತದೆ ಎಂಬ ಬಗ್ಗೆ ಅವರ ಬೆಂಬಲಿಗರಿಗೆ ಅರಿವಿಲ್ಲ. ಆದಾಗ್ಯೂ, ತಾವು ಈ ಕಾನೂನಿಗೆ ಬದ್ಧರಾಗಿ ನಡೆಯುವುದಿಲ್ಲ ಎಂಬುದಾಗಿ ಮುಸ್ಲಿಮರು ಹೇಳುವುದನ್ನು ಅವರು ಕೇಳಿದ್ದಾರೆ. ಸಹಜವಾಗಿಯೇ ಇದು ಅವರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಸೃಷ್ಟಿಸುತ್ತದೆ. ಇದು ಘೋಷಣೆದಾರರ ಉದ್ದೇಶಕ್ಕೆ ಪೂರಕವಾಗಿರುತ್ತದೆ ಹಾಗೂ ಮುಸ್ಲಿಮರು ಇದರ ಫಲವನ್ನು ಅನುಭವಿಸಬೇಕಾಗುತ್ತದೆ.
ಭಾರತ ಬಹು ಧರ್ಮಗಳ ದೇಶ. ಇಲ್ಲಿ ಒಂದೇ ಧರ್ಮದ ಅನುಯಾಯಿಗಳು ಎಷ್ಟೊಂದು ಭಿನ್ನ ರೀತಿ ರಿವಾಜುಗಳನ್ನು ಹೊಂದಿದ್ದಾರೆಂದರೆ ಒಂದು ಪಂಥದ ಆಚರಣೆ ಇನ್ನೊಂದಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಧರ್ಮ, ಸಮುದಾಯ ಮತ್ತು ವರ್ಗದ ಭಾಗವಾಗಿ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ಕಟ್ಟಳೆಗಳನ್ನು ಮಾನ್ಯ ಮಾಡಬೇಕು ಹಾಗೂ ಅವುಗಳನ್ನು ಹಾಗೇ ಮುಂದುವರಿಯಲು ಬಿಡಬೇಕು ಎನ್ನುವುದು ಇದುವರೆಗಿನ ಒಪ್ಪಿತ ನಿಯಮವಾಗಿದೆ. ಸಮಾನ ನಾಗರಿಕ ಸಂಹಿತೆ ಜಾರಿಯಾದ ಬಳಿಕ ಇದು ಹೀಗೇ ಇರುವುದೆ?
ಉದಾಹರಣೆಗೆ; ಕೇರಳದ ಕೆಲವು ಭಾಗಗಳು ಮತ್ತು ದಕ್ಷಿಣ ಭಾರತದಲ್ಲಿ ಸೋದರ ಮಾವ ಮತ್ತು ಸೊಸೆಯ ನಡುವಿನ ಮದುವೆ ಅತ್ಯಂತ ಒಳ್ಳೆಯದು ಎಂಬುದಾಗಿ ಪರಿಗಣಿಸಲಾಗಿದೆ. ಆದರೆ, ದೇಶದ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಇದನ್ನು ಅಸಹ್ಯ, ಹೀನ ಹಾಗೂ ಪಾಪವೆಂಬುದಾಗಿ ಪರಿಗಣಿಸಲಾಗಿದೆ. ದೇಶದ ಕೆಲವು ಭಾಗಗಳಲ್ಲಿ ಒಂದೇ ಗೋತ್ರದ ಹುಡುಗ ಮತ್ತು ಹುಡುಗಿಯರ ನಡುವಿನ ವಿವಾಹ ಸಾಮಾಜಿಕ ನಿಷೇಧ ಮತ್ತು ವೈರತ್ವಕ್ಕೆ ಕಾರಣವಾಗುತ್ತದೆ. ಪ್ರಶ್ನೆಯೆಂದರೆ, ಸಮಾನ ನಾಗರಿಕ ಸಂಹಿತೆ ಇಂಥ ಇಂತಹ ಪದ್ಧತಿಯನ್ನು ನಿಷೇಧಿಸುವುದೇ ಅಥವಾ ಇಂತಹ ಮದುವೆಗಳನ್ನು ಎಲ್ಲರಿಗೂ ಮಾನ್ಯ ಮಾಡುವುದೇ? ಸಿಖ್ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಂತೆ ಅಣ್ಣ ಮೃತಪಟ್ಟರೆ ಆತನ ತಮ್ಮ ತನ್ನ ಅಣ್ಣನ ಹೆಂಡತಿಯ ತಲೆಗೆ ಚಾದರ ಹೊದಿಸುತ್ತಾನೆ ಹಾಗೂ ಆ ಮೂಲಕ ಅಣ್ಣನ ಹೆಂಡತಿ ಈಗ ತಮ್ಮನ ಹೆಂಡತಿ ಯಾಗುತ್ತಾಳೆ. ರಾಜೇಂದ್ರ ಸಿಂಗ್ ಬೇಡಿಯ ಕಿರುಕಾದಂಬರಿ ‘ಚಾದರ್ ಏಕ್ ಮೆಲಿ ಸಿ’ ಈ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ಕೃತಿ.
ನಾಗಾಲ್ಯಾಂಡ್‌ನ ಕೆಲವು ಭಾಗಗಳಲ್ಲಿ (ಗರೋ ಬುಡಕಟ್ಟು ಜನಾಂಗೀಯರಲ್ಲಿ) ಪ್ರಚಲಿತದಲ್ಲಿರುವ ಪದ್ಧತಿಯಂತೆ ಮಹಿಳೆಯೊಬ್ಬರ ಗಂಡ ಸತ್ತರೆ ಆಕೆ ತನ್ನ ಹಿರಿಯ ಅಳಿಯನ ಹೆಂಡತಿಯಾಗುತ್ತಾಳೆ. ಕೃಷಿ ಭೂಮಿ ಪಾಲಾಗುವುದನ್ನು ತಡೆಯುವುದಕ್ಕಾಗಿ ಇಂತಹ ಪದ್ಧತಿಗಳು ಚಾಲ್ತಿಗೆ ಬಂದಿವೆ. ಇಂತಹ ವಿಷಯಗಳನ್ನು ಸಮಾನ ನಾಗರಿಕ ಸಂಹಿತೆ ಹೇಗೆ ನಿಭಾಯಿಸುವುದು? ಇಂತಹ ಪದ್ಧತಿಗಳಲ್ಲಿ ಬದಲಾವಣೆ ತರಲು ಹೋದರೆ ಅದರ ಪರಿಣಾಮವೇನಾಗಬಹುದು? ಅಥವಾ ಅವುಗಳನ್ನು ಹಾಗೆಯೇ ಇರಲು ಬಿಟ್ಟರೆ ಅದು ಸಮಾನ ನಾಗರಿಕ ಸಂಹಿತೆಯ ಪ್ರಾಥಮಿಕ ಉದ್ದೇಶದ ಸೋಲಲ್ಲವೇ?
ಕನ್ಯಾದಾನ ಎನ್ನುವುದೂ ಕೂಡ ಶತಮಾನಗಳ ಹಳೆಯ ಪದ್ಧತಿ. ಈ ಪದ್ಧತಿಯಂತೆ ಹುಡುಗಿಯೊಬ್ಬಳ ಮದುವೆ ಸಮಯದಲ್ಲಿ ಗಂಡನಿಗೆ ನೀಡಲಾಗುವ ವರದಕ್ಷಿಣೆ ಆಕೆಯ ಕುಟುಂಬ ಆಕೆಗೆ ನೀಡುವ ಆನುವಂಶಿಕ ಆಸ್ತಿಯ ಅಂತಿಮ ಹಾಗೂ ಪೂರ್ಣ ಪಾಲು ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇದರ ಬಳಿಕ ಆಕೆಗೆ ತನ್ನ ಕುಟುಂಬದ ಆಸ್ತಿಯಲ್ಲಿ ಯಾವುದೇ ಪಾಲಿರುವುದಿಲ್ಲ.
ಕೃಷಿ ಭೂಮಿ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಇತ್ತೀಚಿನವರೆಗೂ ಇಂತಹ ಪದ್ಧತಿ ಮುಸ್ಲಿಮರಲ್ಲಿ ಚಾಲ್ತಿಯಲ್ಲಿತ್ತು. ಇದನ್ನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ 2004ರಲ್ಲಿ ಶರಿಯಾ ನಿಯಮದಂತೆ ಬದಲಾಯಿಸಿತು. ಜಮೀನುದಾರಿಕೆ ಪದ್ಧತಿ ರದ್ದುಗೊಳ್ಳುವ ಮೊದಲು ಕನ್ಯಾದಾನ ಮತ್ತು ಹುಡುಗಿಯ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಡುವ ಪದ್ಧತಿಯನ್ನು ಹೋಲುವ ಪದ್ಧತಿ ಮುಸ್ಲಿಮರಲ್ಲೂ ಚಾಲ್ತಿಯಲ್ಲಿತ್ತು. ಸ್ಥಿರಾಸ್ತಿಯ ಶರಿಯತ್ ವಿರೋಧಿ ವಿಭಜನೆಯ ವಿರುದ್ಧ ಕೆಲವು ಮುಸ್ಲಿಮ್ ಸಂಘಟನೆಗಳು ಪ್ರಬಲವಾಗಿ ಪ್ರತಿಭಟಿಸಿದ ಬಳಿಕ ಇದಕ್ಕೆ ತಿದ್ದುಪಡಿ ತರಲಾಯಿತು. ಈಗ ಹಿಂದೂ ಹುಡುಗಿ ಕೂಡ ತನಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಬೇಕೆಂದು ಬಯಸಿದರೆ ಅದನ್ನು ಪಡೆಯಬಹುದು. ಆದರೆ, ಇದನ್ನು ನ್ಯಾಯಾಲಯದ ಮೂಲಕ ಮಾತ್ರ ಪಡೆಯಬಹುದಾಗಿದೆ. ಆದರೆ, ತನ್ನ ಮದುವೆಯ ಬಳಿಕ ತನ್ನ ತಂದೆ-ತಾಯಿಯ ಆಸ್ತಿ ವೌಲ್ಯ ಹೆಚ್ಚಾದರೆ ಅದರ ಪಾಲನ್ನೂ ಹುಡುಗಿ ಪಡೆಯಬಹುದೇ ಎನ್ನುವುದು ಸ್ಪಷ್ಟವಿಲ್ಲ. ಈ ವಿಷಯದಲ್ಲಿ ಸಮಾನ ನಾಗರಿಕ ಸಂಹಿತೆಯ ನಿಲುವು ಏನು?

ಹಣ ಮತ್ತು ನಗದು ರೂಪದಲ್ಲಿರುವ ಹಣವನ್ನು ಸರಿಯಾಗಿ ಪಾಲು ಮಾಡಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಕೃಷಿ ಭೂಮಿ ಮತ್ತು ಹಣ್ಣಿನ ತೋಟವನ್ನು ಪಾಲು ವಿಭಜಿಸುವುದೆಂದರೆ ರೈತನ ಸಾವು ಬದುಕಿನ ಪ್ರಶ್ನೆಯಾಗಿರುತ್ತದೆ. ತನ್ನ ಅಳಿಯಂದಿರು ತನ್ನ ಕೃಷಿ ಭೂಮಿಯಲ್ಲಿ ಪಾಲು ಕೇಳುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದನ್ನು ಓರ್ವ ರೈತ ಸಹಿಸಿಕೊಳ್ಳಲಾರ. ಹಿಂದೆ ಜಾರಿಯಲ್ಲಿದ್ದ ಪದ್ಧತಿಗಳು ಕೃಷಿ ಭೂಮಿಯ ವಿಭಜನೆಯನ್ನು ತಡೆಯುವುದಕ್ಕಾಗಿಯೇ ರೂಪುಗೊಂಡವು. ಇಂತಹ ವಿಷಯಗಳಲ್ಲಿ ಸಮಾನ ನಾಗರಿಕ ಸಂಹಿತೆ ಹಸ್ತಕ್ಷೇಪ ನಡೆಸಿದರೆ ಗಂಭೀರ ಪ್ರತಿಕೂಲ ಪರಿಣಾಮಗಳು ತಲೆದೋರುವುದು ನಿಶ್ಚಿತ.
ಹಾಗಾಗಿ, ಸಮಾನ ನಾಗರಿಕ ಸಂಹಿತೆ ಎನ್ನುವುದು ಕೆಲವರಿಗೆ ಆಕರ್ಷಕವಾಗಿ ಹಾಗೂ ಇತರರಿಗೆ ಮಾರಕವಾಗಿ ಕಾಣಬಹುದು. ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಇಂತಹ ಸಂಹಿತೆಯ ನೆಲೆ ಅಸ್ಥಿರವಾಗಿದೆ ಹಾಗೂ ಅಸ್ಪಷ್ಟವಾಗಿದೆ. ಕೆಲವು ವಿಷಯಗಳನ್ನು ಮಾತ್ರ ಗುರಿಯಿರಿಸಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಲಾಗುತ್ತಿದೆಯೇ ಅಥವಾ ಎಲ್ಲ ಭಾರತೀಯರನ್ನೂ ಸಮಾನವಾಗಿ ಕಾಣುವ ಇರಾದೆಯಿದೆಯೇ? ಹಾಗಾಗಿ, ಸಮಾನ ನಾಗರಿಕ ನೀತಿ ಸಂಹಿತೆಯ ನೀಲ ನಕಾಶೆಯನ್ನು ಬಹಿರಂಗಪಡಿಸುವಂತೆ ನಾವು ಒತ್ತಾಯಿಸಬೇಕಾಗಿದೆ. ಆ ಬಗ್ಗೆ ಚರ್ಚೆ ನಡೆಯಬೇಕು. ಇದು ಭಾರತದ ಪ್ರತಿ ನಾಗರಿಕನ ಹಕ್ಕು ಹಾಗೂ ಇದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

Advertisements

ಅಂಕಣ

ಮೋದಿ ಪ್ರಚಾರದ ಮೋಡಿಗೆ ಸಿಲುಕಿದ ಭಾರತ ಗೆದ್ದೀತೆ?!

(ಕೃಪೆ: ವಾರ್ತಾಭಾರತಿ, ಶುಕ್ರವಾರ – ಜೂನ್ -20-2014)

 ಮೋದಿ ಪ್ರಚಾರದ ಮೋಡಿಗೆ ಸಿಲುಕಿದ ಭಾರತ ಗೆದ್ದೀತೆ?

* ಎಸ್.ವಿ.ಅಮೀನ್

ದೇಶದ ರಾಜಕೀಯ ಕ್ಷೇತ್ರದಲ್ಲಿ ಇದೊಂದು ಹೊಸ ಪ್ರಯೋಗ. ಯಾವ ರೀತಿಯಲ್ಲಿ ಕೋಲಾ (ವಿವಿಧ ರಾಸಾಯನಿಕಗಳಿಂದ ಆರೋಗ್ಯಕ್ಕೆ ಹಾನಿಕಾರಕವೆನಿಸಿದ್ದರೂ) ದಂತಹ ಪಾನೀಯ ಅಥವಾ ನೂಡಲ್(ಬಹುತೇಕ ದೇಶಗಳು ಅದು ಜಂಕ್‌ಫುಡ್ ಎಂದು ಪರಿಗಣಿಸಿದ್ದರೂ)ನಂತಹ ಉತ್ಪನ್ನಗಳು ಮಾಧ್ಯಮಗಳ ಮೂಲಕ ನಡೆಯುವ ಅದ್ದೂರಿಯ ವ್ಯಾಪಕ ಪ್ರಚಾರಬಲದಿಂದ ತನ್ನ ಮಾರುಕಟ್ಟೆ ಜಾಲವನ್ನು ವ್ಯವಸ್ಥಿತವಾಗಿ ಭದ್ರಪಡಿಸುತ್ತಾ ಬಂದಿದೆ. ಅದೇ ಮಾದರಿಯಲ್ಲಿ ನರೇಂದ್ರ ಮೋದಿಯವರ ‘ಗುಜರಾತ್ ವಿಕಾಸ’ (ಆ ವಿಕಾಸದಲ್ಲಿ ಎಷ್ಟೇ ಹುಳುಕುಗಳಿದ್ದರೂ)ದ ಮಾದರಿ ಆಸಕ್ತ ಕಾರ್ಪೊರೇಟ್ ಸಂಸ್ಥೆಗಳ ವಿಪುಲ ಸಂಪನ್ಮೂಲ ಬಲ ಮತ್ತು ಅವರ ಒಡೆತನಕ್ಕೆ ಸೇರಿರುವ ಬಹುತೇಕ ಮಾಧ್ಯಮಗಳ ಸಹಕಾರದ ಮೂಲಕ ಕಳೆದ ಹತ್ತಾರು ತಿಂಗಳುಗಳ ಕಾಲ ವ್ಯಾಪಕ ಮತ್ತು ವ್ಯವಸ್ಥಿತವಾಗಿ ದೇಶವ್ಯಾಪಿ ನಡೆದ ಈ ಚುನಾವಣಾ ಪ್ರಚಾರದ ಅಭಿಯಾನ ಮೇ 16, 2014ರಂದು ಮೋದಿ ಹಾಗೂ ಬಿಜೆಪಿಯ ಅಭೂತಪೂರ್ವ ವಿಜಯದೊಂದಿಗೆ ಕೊನೆಗೊಂಡಿತು. ಈ ನೂತನ ಪ್ರಯೋಗದಲ್ಲಿ ಯಶಸ್ಸನ್ನು ಕಂಡ ಮೋದಿ ಮತ್ತು ಅವರ ತಂಡ ಮತ್ತು ಸಂಘ ಪರಿವಾರದ ಸಂಘಟನಾ ಚಾತುರ್ಯಕ್ಕೆ ಭಲೇ ಎನ್ನಲೇಬೇಕು! ಈ ತಥಾಕಥಿತ ವಿಕಾಸದ ಮೂಲಕ ಜನಮಾನಸದಲ್ಲಿ ಮೋದಿ ಅಲೆಯನ್ನು ಹುಟ್ಟು ಹಾಕಿದ ಈ ವೈಭವೋಪೇತ ಸುದೀರ್ಘ ಪ್ರಚಾರ ಅಭಿಯಾನಕ್ಕೆ ತಗಲಿದ ಒಟ್ಟು ಖರ್ಚು ವೆಚ್ಚದ ವಿವರ ಯಾರಿಗೂ ಲಭ್ಯವಾಗಿಲ್ಲ. ಅದು ಲಭ್ಯವಾಗುವುದೂ ಇಲ್ಲ. ಒಂದು ಅಂದಾಜಿನಂತೆ ಅದು ರೂ. 1000 ಸಾವಿರ ಕೋಟಿ (ಅಭ್ಯರ್ಥಿಗಳ ಖರ್ಚು ಹೊರತಾಗಿ)ಗೂ ಮೀರಿದೆ. ಪ್ರತಿ ಅಭ್ಯರ್ಥಿಯ ಚುನಾವಣಾ ವೆಚ್ಚದ ಬಗ್ಗೆ ಒಂದು ಗರಿಷ್ಠ ಮಿತಿ ನಿಗದಿಪಡಿಸಿ ಆ ಬಗ್ಗೆ ಅಧಿಕಾರಿಗಳು ಸದಾ ಹದ್ದುಗಣ್ಣಿನ ಮೇಲುಸ್ತುವಾರಿ ನಡೆಸುತ್ತಿದ್ದರೆ, ಒಂದು ಪಕ್ಷ ಮಾಡಬಹುದಾದ ಒಟ್ಟು ಖರ್ಚಿನ ಬಗ್ಗೆ ಯಾವುದೇ ಇತಿಮಿತಿ ನಿಗದಿಯಾಗದೇ ಇರುವುದು ದೇಶದ ಚುನಾವಣಾ ವ್ಯವಸ್ಥೆ ಯಲ್ಲಿರುವ ಒಂದು ಅಭಾಸ. ವ್ಯವಸ್ಥೆಯ ಈ ಅಭಾಸವನ್ನು ಬಿಜೆಪಿ ತನ್ನ ಅನುಕೂಲಕ್ಕೆ ತಕ್ಕಂತೆ ಭರಪೂರ ಬಳಸಿಕೊಂಡಿದೆ.
ಏಕ ಪಕ್ಷಕ್ಕೆ ಬಹುಮತ ಸುಭದ್ರ ಸರಕಾರದ ಆಶಯ; ಸುಮಾರು 30 ವರ್ಷಗಳ ಬಳಿಕ ಒಂದು ಪಕ್ಷಕ್ಕೆ ಸರಕಾರ ರಚಿಸಲು ಬೇಕಾದ ಬಹುಮತ ಲಭಿಸಿರುವುದರಿಂದ ಈ ಬಾರಿ ಕೇಂದ್ರದಲ್ಲಿ ಒಂದು ಸುಭದ್ರ ಸರಕಾರ ಸಾಧ್ಯ ಎಂದು ಎಲ್ಲರ ಆಶಯ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಸರಕಾರವನ್ನು ಸದಾ ತನ್ನ ತಹಬಂಧಿಯಲ್ಲಿಡಲು ಹಾತೊರೆಯುವ ಸಂಘ ಪರಿವಾರ ತಮ್ಮ ಗುಪ್ತ ಕಾರ್ಯಸೂಚಿ (ಕರ್ನಾಟಕದಲ್ಲಿ ಅವರು ಆಡಳಿತದಲ್ಲಿದ್ದಾಗ ಬಜರಂಗದಳ, ಶ್ರೀರಾಮಸೇನೆಗಳು ಮಾಡಿರುವ ಘನ ಕಾರ್ಯಗಳನ್ನು ನೆನಪಿಸಿ)ಯನ್ನು ಜಾರಿಗೊಳಿಸಲು ಹವಣಿಸುವುದರಿಂದ ದೇಶದ ಏಕತೆ ಮತ್ತು ಉನ್ನತ ಪ್ರಜಾತಂತ್ರಿಕ ಮೌಲ್ಯಗಳನ್ನು ಕಾಪಾಡಲು ಸಾಧ್ಯವೇ ಎಂಬ ಅನುಮಾನ ಬುದ್ಧಿಜೀವಿಗಳನ್ನು ಕಾಡುತ್ತಿದೆ. ಮೋದಿಯವರ ಬೆಂಬಲಿಗರು ಅನ್ನಬಹುದು, ಗುಜರಾತ್ ರಾಜ್ಯದಲ್ಲಿ ಕಳೆದ 12 ವರ್ಷಗಳ ಕಾಲ ನಿರಂತರ ಮೋದಿ ಸರಕಾರ ಶಾಂತಿ ನೆಮ್ಮದಿಯ ಆಡಳಿತ ಒದಗಿಸಿಲ್ಲವೆ ಎಂದು? ಅದು ನಿಜವಿರಬಹುದು, ಆದರೆ ಈ ಶಾಂತಿ ಮತ್ತು ನೆಮ್ಮದಿಗೆ ಅಲ್ಲಿಯ ಅಲ್ಪಸಂಖ್ಯಾತರು ತೆತ್ತ ಬೆಲೆಯೇನು? 2002ರಲ್ಲಿ ನಡೆದ ಆ ಭಯಾನಕ ಕೋಮು ಗಲಭೆಯಲ್ಲಿ ಸುಮಾರು 2000 ಜನರ ಮಾರಣ ಹೋಮ ನಡೆದ ನಂತರ ತಾನೆ ಈ ಶಾಂತಿ ನೆಲೆಸಿದ್ದು? ಅಂದರೆ ಅವರು ಶಾಂತಿ ನೆಮ್ಮದಿಗಿಂತಲೂ ಹೆಚ್ಚಾಗಿ ಒಂದು ಭಯದ ನೆರಳಲ್ಲಿ ಬದುಕುತ್ತಿದ್ದರು ಎಂದು ಹೇಳುವುದು ಸೂಕ್ತವಲ್ಲವೆ?
ಜಾತಿ ಮತದ ಆಧಾರದ ನೆಲೆಯಲ್ಲಿ ಮತಗಳಿಸುವ ಕಾರ್ಯತಂತ್ರ: ಸಂಘ ಪರಿವಾರದ ಸಲಹೆಯಂತೆ (ಆಣತಿಯಂತೆ?) ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿದ ನಂತರ ಮೋದಿ ಮಾಡಿರುವ ಪ್ರಥಮ ಕಾರ್ಯ, ತನ್ನ ನೆಚ್ಚಿನ ಬಂಟ ಅಮಿತ್‌ಶಾರನ್ನು ದೊಡ್ಡ ರಾಜ್ಯ ಉತ್ತರ ಪ್ರದೇಶಕ್ಕೆ ಪಕ್ಷದ ಉಸ್ತುವಾರಿಯಾಗಿ ನೇಮಿಸಿ ಅಲ್ಲಿ ಗರಿಷ್ಠ ಸೀಟು ಗಳಿಸಲು ಕಾರ್ಯತಂತ್ರ ರೂಪಿಸುವಂತೆ ನಿರ್ದೇಶನ ನೀಡಿದ್ದು. ಅಂತೆಯೇ ಅಮಿತ್‌ಶಾ ಆ ರಾಜ್ಯದ ಉಸ್ತುವಾರಿ ವಹಿಸಿ 4/5 ವಾರ ಕಳೆದಿಲ್ಲ ಆ ರಾಜ್ಯದ ಮುಝಫ್ಫರ್ ನಗರದಲ್ಲಿ ದೊಡ್ಡ ಕೋಮುಗಲಭೆ ನಡೆದು ನೂರಾರು ಜನ ಪ್ರಾಣ ಕಳಕೊಂಡು, ಸಾವಿರಾರು ಜನ ನಿರಾಶ್ರಿತರಾಗುತ್ತಾರೆ! ಇದೆಲ್ಲ ಕಾಕತಾಳೀಯವೆ? ಈ ಘಟನೆಯ ನಂತರ ಆ ರಾಜ್ಯದಲ್ಲಿ ಮತ್ತೆ ಜಾತಿ/ಕೋಮು ಆಧಾರಿತ ಧ್ರುವೀಕರಣ ಆರಂಭ ಆಗುತ್ತದೆ. ಅದರ ಮುಂದುವರಿದ ಕಾರ್ಯತಂತ್ರವಾಗಿ ಅಮಿತ್‌ಶಾ ‘‘ಹಿಂದುಗಳು ಪ್ರತೀಕಾರ ರೂಪದಲ್ಲಿ ಮತ ಚಲಾಯಿಸಬೇಕು’’ ಎಂದು ಕರೆ ನೀಡುತ್ತಾರೆ. ಅತ್ತ ವಾರಣಾಸಿಯಲ್ಲಿ ಪಕ್ಷದ ನಾಯಕ ಗಿರಿರಾಜಸಿಂಗ್ ‘‘ಇಲ್ಲಿ ಭಾರತದಲ್ಲಿ ಮೋದಿ ವಿರೋಧಿಗಳಿಗೆ ಜಾಗ ಇಲ್ಲ, ಅಂತಹವರು ಪಾಕಿಸ್ತಾನಕ್ಕೆ ಹೋಗಬಹುದು’’ ಎಂದು ಘರ್ಜಿಸುತ್ತಾರೆ. ಇಷ್ಟೂ ಸಾಲದ್ದಕ್ಕೆ ಸ್ವಯಂ ಮೋದಿ ಸಾಹೇಬರೇ ಪಶ್ಚಿಮ ಬಂಗಾಳದಲ್ಲಿ ಘೋಷಿಸುತ್ತಾರೆ-‘‘ಗಡಿಯಾಚೆ ಬಾಂಗ್ಲಾ ದೇಶದಿಂದ ಬರುವ ಹಿಂದೂ ಗಳಿಗೆ ಮಾತ್ರ ಇಲ್ಲಿ ಸ್ವಾಗತ, ಇತರರನ್ನು (ಅಲ್ಪಸಂಖ್ಯಾತರನ್ನು) ನಿರ್ದಾಕ್ಷಿಣ್ಯವಾಗಿ ವಾಪಸ್ಸು ಕಳುಹಿಸಲಾಗುವುದು’’ ಎಂದು. ಇವೆಲ್ಲವುಗಳು ಕಾಕತಾಳೀಯ ಹೇಳಿಕೆಗಳೆ? ಈ ಎಲ್ಲಾ ಹೇಳಿಕೆಗಳ ಹಿಂದೆ ಜಾತಿ/ಕೋಮು ಆಧಾರದಲ್ಲಿ ಮತ ಧ್ರುವೀಕರಣಗೊಳಿಸುವ ಹುನ್ನಾರಗಳಿಲ್ಲವೆ? ಈ ಕಾರ್ಯತಂತ್ರದ ಫಲರೂಪ ತಾನೇ ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ನಿರೀಕ್ಷೆಯ 40/45 ಸೀಟು ಗಳನ್ನು ಮೀರಿ 71 ಸೀಟುಗಳ ಬಂಪರ್ ಬೆಂಬಲ ಗಳಿಸುವಂತಾಯಿತು ಎಂಬ ವಾಸ್ತವ ವಿಚಾರವನ್ನು ಮತ್ತೆ ವಿವರಿಸಿ ಹೇಳಬೇಕೇ? ಇಂತಹ ಕೋಮು ಧ್ರುವೀಕರಣದ ತಂತ್ರಗಳಿಂದ ಆ ರಾಜ್ಯದ ಜನ ಎಷ್ಟು ಪ್ರಭಾವಿತರಾಗಿದ್ದರು ಎಂದರೆ ಕಳೆದ ಎರಡು ದಶಕಗಳಿಂದ ಪರಿಶಿಷ್ಟ ಜಾತಿ, ಹಿಂದುಳಿದ ವರ್ಗಗಳನ್ನು ತಳಮಟ್ಟದಿಂದ ಒಟ್ಟುಗೂಡಿಸಿ ಪ್ರಭಾವಿ ರಾಜಕಾರಣದ ಮೂಲಕ ತನ್ನ ಬಹುಜನ ಸಮಾಜ ಪಾರ್ಟಿಯನ್ನು ಕಟ್ಟಿ ಬೆಳೆಸಿ ಉತ್ತರ ಪ್ರದೇಶ ರಾಜ್ಯದ ಅಧಿಕಾರವನ್ನು ಎರೆಡೆರಡು ಬಾರಿ ಗಳಿಸಿ ಮುಖ್ಯಮಂತ್ರಿಯೂ ಆಗಿದ್ದ ಕುಮಾರಿ ಮಾಯವತಿಯವರ ಈ ಪಕ್ಷ ಮೋದಿ ಅಲೆಯ ಸುನಾಮಿಗೆ ಸಿಲುಕಿ ಶೂನ್ಯಗಳಿಕೆಗೆ ಇಳಿಯಬೇಕೆ? ಇದೇ ರೀತಿಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳೂ ಅಷ್ಟೇ ದೈನೇಸಿ ಸ್ಥಿತಿಯಲ್ಲಿ ನೆಲ ಕಚ್ಚಿವೆ ಎಂದು ಬೇರೆ ಹೇಳಬೇಕಿಲ್ಲ. ಅಷ್ಟರ ಮಟ್ಟಿಗೆ ಮತ ಧ್ರುವೀಕರಣದ ಪ್ರಭಾವ ಜನರನ್ನು ಗಾಢವಾಗಿ ತಟ್ಟಿದೆ.
ಬಹಳ ನಿರೀಕ್ಷೆಯಲ್ಲಿದ್ದ ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಹಿನ್ನಡೆ:
ಕರ್ನಾಟಕದಲ್ಲಿ 2008ರಿಂದ 2013ರ ಮಧ್ಯೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ ಎಸಗಿದ ಹತ್ತು ಹಲವು ಭ್ರಷ್ಟ ಪ್ರಕರಣಗಳಿಂದ ದಿನಂಪ್ರತಿ ಮುಖ್ಯಮಂತ್ರಿಗಳು ಸಚಿವರುಗಳೇ ಕೋರ್ಟ್, ಜೈಲುಗಳಿಗೆ ಪೆರೇಡ್ ಮಾಡುತ್ತಾ ನಿತ್ಯ ಕಚ್ಚಾಟ, ಗುಂಪುಗಾರಿಕೆಗಳಲ್ಲೂ ತೊಡಗುತ್ತಾ 5 ವರ್ಷಗಳಲ್ಲಿ 3 ಮುಖ್ಯಮಂತ್ರಿಗಳು ಸರಕಾರದ ನೇತೃತ್ವ ವಹಿಸಿದ ಫಲವಾಗಿಯೇ 2013ರ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡು, ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಕಳೆದ ಒಂದು ವರ್ಷದಲ್ಲಿ ಹತ್ತಾರು ಜನಪರ, ಪ್ರಗತಿಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇ ಅಲ್ಲದೆ ಯಾವುದೇ ಆಪಾದನೆಗಳಿಲ್ಲದ ಶುದ್ಧ ಪ್ರಾಮಾಣಿಕ ಆಡಳಿತ ನೀಡಿರುವ ಕಾರಣ ಸಹಜವಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 16ರಿಂದ 18 ಸೀಟುಗಳಿಸುವ ನಿರೀಕ್ಷೆಯಲ್ಲಿದ್ದರು. ಆದರೆ ರಾಜ್ಯದ ಮತದಾರರು ತಮಗೆ ಸಿದ್ದರಾಮಯ್ಯನವರಿತ್ತ ಹಲವಾರು ಕಾರ್ಯಕ್ರಮಗಳನ್ನು ಮತ್ತು ಅವರ ಪ್ರಾಮಾಣಿಕ ಆಡಳಿತ ಯಾವುದನ್ನೂ ಗಮನಿಸದೆ ಒಂದೇ ವರ್ಷದ ಹಿಂದೆ ತಿರಸ್ಕರಿಸಿದ ಅದೇ ಬಹುತೇಕ ಭ್ರಷ್ಟಾಚಾರ ಆರೋಪಿತ ನಾಯಕರೇ ಇರುವ ಅದೇ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಅಂದರೆ ಮೋದಿಯ ಮೋಡಿಗೆ ರಾಜ್ಯದ ಮತದಾರರು ಸಮ್ಮೋಹಿತರಾಗಿದ್ದಾರೆ ಎಂದಾಯಿತು! ದೇಶದ ಸಂವಿಧಾನಕ್ಕೆ ನಿಷ್ಠನೆಂದು ಮೋದಿ ಘೋಷಣೆ:
ಬಿಜೆಪಿ ಮತ್ತು ಮಿತ್ರ ಪಕ್ಷಗಳ ನೂತನ ಲೋಕಸಭಾ ಸದಸ್ಯರುಗಳ ಜಂಟಿ ಸಭೆಯಲ್ಲಿ ಸಂಸದೀಯ ಪಕ್ಷ ನಾಯಕನಾಗಿ ಆಯ್ಕೆಯಾದ ನಂತರ ಸಭೆಯನ್ನು ಉದ್ದೇಶಿಸಿ ಮಾತಾಡಿದ ಮೋದಿ, ತನ್ನ ಪಕ್ಷ ಮತ್ತು ದೇಶಕ್ಕೆ ಮಾತೃ ಸಮಾನ ಗೌರವ ಮತ್ತು ದೇಶದ ಸಂವಿಧಾನ ಮತ್ತು ಪ್ರಜಾತಾಂತ್ರಿಕ ಮೌಲ್ಯಗಳಿಗೆ ನಿಷ್ಠೆ ವ್ಯಕ್ತಪಡಿಸುತ್ತಾರೆ. ದೇಶದ ಸಂವಿಧಾನಕ್ಕೆ ನಿಷ್ಠೆ ವ್ಯಕ್ತಪಡಿಸುವಾಗ ಮಾನ್ಯ ಮೋದಿಯವರು ಸಂವಿಧಾನದ ಪೀಠಿಕೆಯಲ್ಲೇ ಉಲ್ಲೇಖವಾಗಿರುವ ‘‘. . . . . India will be a socialist, secular, democratic republic”
(ಸ್ವತಂತ್ರ ಭಾರತವು ಒಂದು ಸಮಾಜವಾದಿ, ಜಾತ್ಯತೀತ, ಪ್ರಜಾತಾಂತ್ರಿಕ ಗಣರಾಜ್ಯ) ಎಂಬ ಈ ಸಾಲುಗಳನ್ನು ಅರ್ಥ ಮಾಡಿಕೊಂಡಿರುವರೆ ಎಂಬ ಜಿಜ್ಞಾಸೆ ಸಹಜವಾಗಿ ಮೂಡುತ್ತದೆ. ಮೋದಿಯವರು ಸಂವಿಧಾನದ ಮೊದಲ ಆಶಯವಾದ ಸಮಾಜವಾದಿ ಸಮಾಜದ ನಿರ್ಮಾಣಕ್ಕೆ ಬದ್ಧರೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅವರ 12 ವರ್ಷಗಳ ಆಡಳಿತ ಮತ್ತು ಅವರೇ ಭರ್ಜರಿಯಾಗಿ ಪ್ರಚಾರ ಮಾಡಿರುವ ಗುಜರಾತ್ ವಿಕಾಸದ ಪ್ರಮುಖ ಫಲಾನುಭವಿಗಳು ಮತ್ತು ಸಂತ್ರಸ್ತರ ಕಥೆ ಎರಡನ್ನೂ ವಿಶ್ಲೇಷಿಸಿದರೆ ಮೇಲಿನ ಪ್ರಶ್ನೆಗೆ ಉತ್ತರ ದೊರೆಯುತ್ತದೆ. ದೇಶದ ದೊಡ್ಡ ಉದ್ಯಮಪತಿಗಳಿಗೆ ಸರಾಸರಿ ಕನಿಷ್ಠ ಚ.ಮೀ.ಗೆ ರೂ. 200 ಬೆಲೆಯ ರೈತರ ಕೃಷಿ ಭೂಮಿಯನ್ನು ಕನಿಷ್ಠ ಬೆಲೆಗೆ ಸ್ವಾಧೀನಪಡಿಸಿ ಅದೇ ಜುಜುಬಿ ಬೆಲೆಗೆ ಅಂದರೆ ಚ.ಮೀ. ಗೆ ರೂ. 1.00 ರಿಂದ ರೂ. 25ರ ಬೆಲೆಗೆ ಉದ್ಯಮಪತಿಗಳಿಗೆ ಮಂಜೂರು ಮಾಡಿಸಿ, ರೈತರ ಸಂಕಷ್ಟಗಳಿಗೆ ಸರಕಾರ ಸ್ಪಂದಿಸದೇ ಹೋದಾಗ ಈ ವಿಕಾಸ ಭರಿತ ಗುಜರಾತ್ ರಾಜ್ಯದಲ್ಲಿ ಬಾಳುವುದಕ್ಕಿಂತ ಸಾಯುವುದೇ ಲೇಸೆಂದು ಸಾವಿರಾರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದರೆ ಮೋದಿಯವರನ್ನು ಸಮಾಜವಾದಿ ಸಿದ್ಧಾಂತಗಳಿಗೆ ಬದ್ಧರು ಎಂದು ಹೇಳಲು ಸಾಧ್ಯವೆ?
ಗುಜರಾತ್ ಗಲಭೆ ಬಗ್ಗೆ ಮುನ್ಸೂಚನೆ:
ಈ ಲೇಖಕನ ಕಿರು ಅನುಭವನ್ನು ಇಲ್ಲಿ ದಾಖಲಿಸುವುದು ಉಚಿತವೆನಿಸುತ್ತದೆ. 2002ರ ಆ ಒಂದು ಸಂಜೆ ಲೇಖಕನ ಮುಂಬೈ ಮೂಲದ ಆತ್ಮೀಯ ಗೆಳೆಯರೋರ್ವರು ಬರೋಡಾ (ಅವರ ಶ್ರೀಮತಿಯವರ ಊರು) ದಿಂದ ಫೋನ್ ಕರೆ ಮಾಡುತ್ತಾರೆ. ನಾವಿಬ್ಬರು ಪರಸ್ಪರ ಮಾತಾಡಬೇಕಿದ್ದ ವಿಷಯ ಮಾತಾಡಿದ ಬಳಿಕ ಅವರು, ‘‘ದೋಸ್ತ್ ಇಲ್ಲಿ ನಾಳೆ ಏನೋ ಗಡಿಬಿಡಿ ನಡೆಯಲಿದೆ’’ ಎಂದಾಗ ಏನೂ ಅರ್ಥವಾಗದ ನಾನು ‘‘ಏನು ಸಮಸ್ಯೆ ಅಲ್ಲಿ’’ ಎಂದು ವಿಚಾರಿಸಿದೆ. ಆಗ ಅವರು, ‘‘ನಾನು ಮನೆಯಾಚೆ ರಸ್ತೆಯಲ್ಲಿ ಬರುತ್ತಿದ್ದಾಗ ಪೊಲೀಸ್ ಅಧಿಕಾರಿಯೊಬ್ಬರು, ಸ್ವಾಮಿ ಬೇಗ ಮನೆಕಡೆ ಹೋಗಿ ಇಲ್ಲಿ ರಾತ್ರಿ ಏನೋ ಘಟನೆ ಸಂಭವಿಸಬಹುದು, ಎರಡು ದಿನ ಮನೆಯೊಳಗೆ ಇರುವುದು ಕ್ಷೇಮ’’ ಎಂದು ಹೇಳಿದ್ದನ್ನು ನನಗೆ ಹೇಳುತ್ತಾರೆ. ಸಮಸ್ಯೆಯ ಮೂಲ ಎಲ್ಲಿ, ಏನು ಎಂಬುದನ್ನು ಅರಿಯದ ಅವರು, ಅವರು ಹೇಳಿದ್ದನ್ನು ಅರ್ಥ ಮಾಡಲಾಗದ ನಾನು ಸುಮ್ಮನಾದೆ. ಮರುದಿನ ಟಿವಿ ಪರದೆ ಮೇಲೆ ಗುಜರಾತ್ ಕೋಮು ಗಲಭೆಯ ಭೀಕರ ಚಿತ್ರಣವನ್ನು ಕಂಡ ನಾನು ದಂಗಾದೆ. ಮತ್ತು ಆ ಸ್ನೇಹಿತರಿಗೆ ಕರೆ ಮಾಡಿ ಮಾತಾಡುತ್ತಾ ಬರೋಡಾದ ಪೊಲೀಸ್ ಅಧಿಕಾರಿ ಹೇಳಿದ್ದನ್ನು ಇಬ್ಬರೂ ಸರಿಯಾಗಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸದಿರುವುದಕ್ಕೆ ಪರಿಸ್ಪರ ದೂಷಣೆ ಮಾಡಿದೆವು. ಮೇಲಿನ ಅನುಭವದ ಸಾರಾಂಶ ಇಷ್ಟೇ, ಗುಜರಾತ್ ಪೊಲೀಸರಿಗೆ ಸದರಿ ಕೋಮು ಗಲಭೆ ಬಗ್ಗೆ ಸ್ಪಷ್ಟ ಮಾಹಿತಿ ಇತ್ತು ಎಂಬುದು. ಮೇಲೆ ಪ್ರಸ್ತಾಪಿಸಲಾದ ವೈಯಕ್ತಿಕ ಅನುಭವದ ಆಧಾರದಲ್ಲಿ ಮಾನ್ಯ ಮೋದಿಯವರು ಸಂವಿಧಾನ ನಿರೂಪಿಸಿದಂತೆ ಓರ್ವ ಜಾತ್ಯಾತೀತ ವ್ಯಕ್ತಿಯಾಗಲು ಸಾಧ್ಯವೆ ಎಂದು?
ಬಿಜೆಪಿಗೆ ದೊರೆತ ನಿಚ್ಚಳ ಬಹುಮತದಿಂದ ಸುಭದ್ರ ಸರಕಾರ ಸಾಧ್ಯವೇ?
ಕಳೆದ 30 ವರ್ಷಗಳಲ್ಲಿ ಯಾವುದೇ ಪಕ್ಷಕ್ಕೆ ನಿಚ್ಚಳ ಬಹುಮತ ದೊರಕದೆ ದೇಶಕ್ಕೆ ಒಂದು ಸುಭದ್ರ ಸರಕಾರ ಒದಗಿಸಲು ಸಾಧ್ಯವಾಗಿಲ್ಲ, ಇದೀಗ ಬಿಜೆಪಿ ಪರ ಒದಗಿದ ನಿಚ್ಚಳ ಬಹುಮತದಿಂದ ಮಾನ್ಯ ಮೋದಿಯವರು ದೇಶಕ್ಕೆ ಒಂದು ಭದ್ರ ಸರಕಾರ ಒದಗಿಸಿ ನೆಮ್ಮದಿಯ ಸುಖೀರಾಜ್ಯ ನಿರ್ಮಿಸಲು ಸಾಧ್ಯ ಎಂದು ಎಲ್ಲರ ಅಂಬೋಣ. ಆದರೆ ಈ ಲೇಖಕ ಇಲ್ಲೊಂದು ಹೊಸ ಸಮೀಕರಣವುಳ್ಳ ಅನಧಿಕೃತ ಒಕ್ಕೂಟವನ್ನು ಕಾಣುತ್ತಿದ್ದಾನೆ. ಅದಾವುದೆಂದರೆ ಮೋದಿಯವರು ಗುಜರಾತ್ ವಿಕಾಸ ಮಾದರಿಯ ಆಡಳಿತ ಒದಗಿಸಲು ಸಾಕಷ್ಟು ಸಹಕಾರ ಇತ್ತು ಆ ಮೂಲಕ ತಾವು ಬೇಕಾದಷ್ಟು ಅನುಕೂಲಗಳನ್ನು ಕಲ್ಪಿಸಿಕೊಂಡ ಅದೇ ಕಾರ್ಪೊರೇಟ್ ವಲಯ ಇದೀಗ ಅಖಿಲ ಭಾರತ ಮಟ್ಟದಲ್ಲಿ ಮೋದಿ ಸಾಹೇಬರನ್ನು ಪ್ರತಿಷ್ಠಾಪಿಸುವ ಪ್ರಚಾರ ಅಭಿಯಾನಕ್ಕೆ ಸಾಕಷ್ಟು ಸಂಪನ್ಮೂಲ ಒದಗಿಸಿದ ಈ ಹಿತಾಸಕ್ತಿಗಳು ಮತ್ತೆ ತಮ್ಮ ಕಾರ್ಯ ಕ್ಷೇತ್ರವನ್ನು ಅಖಿಲ ಭಾರತ ಮಟ್ಟಕ್ಕೆ ಬೆಳೆಸಲು ಸಹಜವಾಗಿ ಮೋದಿ ಸರಕಾರದ ಮೇಲೆ ಒತ್ತಡ ಹೇರಬಹುದು. ಹೀಗೆ ಈ ಕಾರ್ಪೊರೇಟ್ ವಲಯ ಸರಕಾರದ ಅನಧಿಕೃತ ಪಾಲುದಾರರಂತೆ ವರ್ತಿಸಬಹುದು.
ಇಷ್ಟೆಲ್ಲಾ ಹೇಳಿದ ನಂತರ ಬಹಳ ಜನ ಓದುಗರು, ಲೇಖಕರು ಬಹಳ ಸಿನಿಕರಾಗಿದ್ದಾರೆ ಎಂದು ಆಕ್ಷೇಪ ಎತ್ತಬಹುದು. ಅದಕ್ಕೆ ಮತ್ತೆ ಹೇಳ ಬಯಸುತ್ತೇನೆ ಮೋದಿ ಮತ್ತು ಬಿಜೆಪಿ ಘೋಷಿಸಿರುವಂತೆ ಅಭಿವೃದ್ಧಿಪರ, ಸುಖ, ಶಾಂತಿ, ನೆಮ್ಮದಿಯ ಆಡಳಿತ ನೀಡುವಂತಾಗಲಿ. ಆ ಮೂಲಕ ನಮ್ಮ ಎಲ್ಲಾ ಅನುಮಾನ/ಆತಂಕಗಳು ದೂರವಾಗಲಿ. ದೇಶಕ್ಕೆ, ಜನರಿಗೆ ಸುಭೀಕ್ಷೆ ಒದಗಲಿ ಎಂದು ನಮ್ಮ ಪ್ರಾಮಾಣಿಕ ಹಾರೈಕೆ ಸದಾ ಮೋದಿ ಸರಕಾರದ ಮೇಲಿದೆ.

ಭಾಷಾ ಅಂಧಾಭಿಮಾನ ಬೇಡ: ಪ್ರೊ.ರಾಮದಾಸ್

ಭಾಷಾ ಅಂಧಾಭಿಮಾನ ಬೇಡ: ಪ್ರೊ.ರಾಮದಾಸ್

ಭಾಷಾ ಅಂಧಾಭಿಮಾನ ಬೇಡ: ಪ್ರೊ.ರಾಮದಾಸ್

(ಕೃಪೆ: ವಾರ್ತಾಭಾರತಿ, ಶನಿವಾರ – ಜೂನ್ -21-2014)

9ನೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ
ಉಡುಪಿ, ಜೂ.20: ಭಾಷೆ, ಜಾತಿ, ಧರ್ಮ, ದೇಶ ಯಾವುದೇ ಇರಲಿ ಅದರ ಬಗೆಗಿನ ಅಭಿಮಾನ ಅತ್ಯಭಿ ಮಾನಗಳನ್ನು ಮೀರಿ ದುರಭಿಮಾನ ವಾದಾಗ ಅದು ಅಂಧಾಭಿಮಾನ ವಾಗುತ್ತದೆ. ಈ ಅಂಧಾಭಿಮಾನ ಸ್ವಂತ ಕುಟುಂಬ, ಧರ್ಮ, ಭಾಷೆ ಯಾವುದನ್ನೇ ಕುರಿತಿರಲಿ ಅದು ಅಪಾಯಕಾರಿಯಾಗುತ್ತದೆ. ಅದು ಅನಿವಾರ್ಯವಾಗಿ ಹೋರಾಟದ ಸ್ವರೂಪವನ್ನು ಪಡೆಯುತ್ತದೆ. ಈ ಹೋರಾಟ ಘರ್ಷಣೆಯನ್ನು, ದ್ವೇಷವನ್ನು, ಹಿಂಸೆಯನ್ನು, ಅಶಾಂತಿ ಯನ್ನು ಹರಡುತ್ತದೆ ಎಂದು ಖ್ಯಾತ ಸಾಹಿತಿ, ರಂಗಕರ್ಮಿ ಪ್ರೊ. ರಾಮದಾಸ್ ಅಭಿಪ್ರಾಯಿಸಿದ್ದಾರೆ.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಉಡುಪಿ ಪೂರ್ಣಪ್ರಜ್ಞ ಅಡಿಟೋರಿಯಂನ ಸುಶೀಲಾ ಉಪಾಧ್ಯಾಯ ಸಭಾಂಗಣದ ವಿಬುಧೇಶತೀರ್ಥ ವೇದಿಕೆಯಲ್ಲಿ ಇಂದು ಆರಂಭಗೊಂಡ ಎರಡು ದಿನಗಳ ಒಂಭತ್ತನೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇಂದು ಎಲ್ಲಾ ಕ್ಷೇತ್ರಗಳಲ್ಲಿರು ವವರು ಅವಿದ್ಯಾವಂತ ಗ್ರಾಹಕರ ದುರಭಿಮಾನ, ಅಂಧಾಭಿಮಾನಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಅವಿದ್ಯಾವಂತರ ಅಂಧಾಭಿಮಾನ ದೇಶ, ಭಾಷೆ, ಜಾತಿ, ಧರ್ಮಗಳ ಹೆಸರಿನಲ್ಲಿ ಮ್ಲೇಚ್ಛಮರ್ದನ, ನೈತಿಕ ಪೊಲೀಸ್‌ಗಿರಿ, ಜಿಹಾದ್, ಕ್ರುಸೇಡ್‌ಗಳಿಗೆ, ವಿವಿಧ ಕ್ಷೇತ್ರಗಳಲ್ಲಿ ಆಳವಾಗಿ ಬೇರು ಬಿಟ್ಟಿರುವ ವ್ಯಕ್ತಿಪೂಜೆಗಳಿಗೆ ಕಾರಣವಾದರೆ, ಸಂಸ್ಕಾರವಿಲ್ಲದ ವಿದ್ಯಾವಂತರ ಅಂಧಾಭಿಮಾನ ನಕ್ಸಲೈಟ್‌ರಂತಹ ಉಗ್ರವಾದಿಗಳ ಹುಟ್ಟಿಗೆ ಕಾರಣ ವಾಗುತ್ತದೆ ಎಂದವರು ಎಚ್ಚರಿಸಿದರು. ಇಂದು ಕನ್ನಡದಲ್ಲಿ ಎಲ್ಲೆಂದರಲ್ಲಿ ಕಂಡುಬರುವ ಕಾಗುಣಿತದ ತಪ್ಪುಗಳನ್ನು ನೋಡುವಾಗ ತುಂಬಾ ಸಂಕಟವಾ ಗುತ್ತದೆ. ಇದು ಅರ್ಬುದ ರೋಗಿಯ ಆತ್ಮೀಯ ಬಂಧುವಿನ ಅಸಹಾಯಕತೆ ಯನ್ನು ನಮ್ಮಲ್ಲಿ ಹುಟ್ಟಿಸುತ್ತದೆ ಎಂದರು.
ಅಲ್ಪಪ್ರಾಣ, ಮಹಾಪ್ರಾಣಗಳನ್ನು ಸರಿಯಾಗಿ ಬಳಸಿ ತಪ್ಪಿಲ್ಲದೆ ಕನ್ನಡ ಬರೆಯುವ ಮಂದಿ ಇಂದು ವಿರಳವಾಗಿದ್ದಾರೆ. ಕಲ್ಲು, ಮರಳು, ಸುಣ್ಣ ಮತ್ತದರ ಉತ್ಪನ್ನಗಳಿಂದ ಭವ್ಯ ಸೌಧಗಳು ನಿರ್ಮಾಣಗೊಳ್ಳುವಂತೆ ಸ್ವರ, ವ್ಯಂಜನ, ಯೋಗವಾಹಗಳಿಂದ ಕನ್ನಡ ವಾಕ್ಯಗಳ ರಚನೆಯಾಗಿದೆ. ಅರ್ಥವಿಲ್ಲದ ಮೂಲಾಕ್ಷರಗಳನ್ನು ಕಲಿಯದೇ ನೇರವಾಗಿ ಬಸವ, ಕಮಲರ ಬಳಿ ಹೋಗಿರುವುದರಿಂದ ಈ ಅನರ್ಥಗಳು ಸಂಭವಿಸಿವೆ. ಆದುದರಿಂದ ಕನ್ನಡ ಭಾಷೆ, ಬರಹ, ಕಾಗುಣಿತ, ಉಚ್ಚಾರಣೆ ಗಳನ್ನು ಕುರಿತು ನಿಜವಾದ ಕಳಕಳಿ ಇರುವವರು ನಮ್ಮ ಮಕ್ಕಳಿಗೆ ಏನನ್ನು ಕಲಿಸಬೇಕು, ಹೇಗೆ ಕಲಿಸಬೇಕು ಎಂದು ವಿಚಾರ ಮಾಡುವಂತಾದರೆ ಸುಲಭೀಕರಣದ ಚಿಂತೆ ಮಾಡದೆ ವಿದ್ಯಾರ್ಥಿಗಳಿಗೆ ಇತ್ಯಾತ್ಮಕವಾದ ವೌಲ್ಯಗಳನ್ನು ಮನದಟ್ಟು ಮಾಡುವ ಪ್ರಯತ್ನ ನಡೆಸಿದರೆ ಅದು ಕನ್ನಡದ ಭಾಗ್ಯದ ಬಾಗಿಲು ತೆರೆದಂತೆ ಎಂದವರು ನುಡಿದರು.
ಉದ್ಘಾಟನೆ: ಸಮ್ಮೇಳನವನ್ನು ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕನ್ನಡ ಭಾಷೆಯ ಮೇಲೆ ನಮಗೆ ಖಂಡಿತ ಅಭಿಮಾನ ಬೇಕು. ಆದರೆ ದುರಾಭಿ ಮಾನ, ಇನ್ನೊಂದು ಭಾಷೆಯ ಬಗ್ಗೆ ಸಂಕುಚಿತ ಮನೋಭಾವ ಸಲ್ಲದು. ನಮ್ಮ ಭಾಷೆಯ ಅಸ್ತಿತ್ವವನ್ನು ಕಾಪಾಡಿ ಕೊಂಡು ಉಳಿದ ಭಾಷೆಗಳನ್ನು ಉಳಿಸಿ- ಬೆಳೆಸುವ ಹೃದಯ ವೈಶಾಲ್ಯತೆ ಎಲ್ಲರಲ್ಲಿರಲಿ ಎಂದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಸಾಪ ಪ್ರಕಟಿಸಿದ ಎಂಟು ಪುಸ್ತಕ, ಅಲ್ತಾರು ರಾಮ ಮೊಗೇರರ ಕಾದಂಬರಿ ‘ಆತ್ಮದ ಆಹುತಿ’, ಸಾವಿತ್ರಿ ಮನೋಹರ ವಿರಚಿತ ಮಕ್ಕಳ ಕಥಾ ಸಂಕಲನ ‘ವಾರ ವಾರ ಸೋಮನವಾರ’, ಪ್ರೊ.ರಾಮದಾಸರ ನಾಟಕ ‘ಇದು ಭಾರತ’, ನೀಲಾವರ ಸುರೇಂದ್ರ ಅಡಿಗರ ಸಂಪಾದಕತ್ವದ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭಾಷಣ, ವಿಠ್ಠಲ ಪೂಜಾರಿ ಅವರ ‘ಬ್ರಹ್ಮನಾದ ಸ್ಪಂದನ’ ಕೃತಿಗಳನ್ನು ರಾಜ್ಯ ಕಸಾಪದ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅನಾವರಣಗೊಳಿಸಿದರು.
ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಉದ್ಘಾಟಿಸಿದ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿದ ಮಲ್ಪೆಯ ಗೋಪಾಲ ಸಿ.ಬಂಗೇರ, ನಿಕಟಪೂರ್ವ ಸಮ್ಮೇಳನಾ ಧ್ಯಕ್ಷ ಅಂಬಾತನಯ ಮುದ್ರಾಡಿ ಮಾತನಾಡಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್, ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ್, ಉಡುಪಿ ಡಿಡಿಪಿಐ ನಾಗೇಂದ್ರ ಮಧ್ಯಸ್ಥ, ನಗರಸಭಾ ಸದಸ್ಯರಾದ ಶ್ಯಾಮ್‌ಪ್ರಸಾದ್ ಕುಡ್ವ, ಗೀತಾ ಶೇಟ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರವಿಶಂಕರ್ ರಾವ್, ಕಸಾಪ ಗೌರವ ಕಾರ್ಯದರ್ಶಿ ಸೂರಾಲು ನಾರಾಯಣ ಮಡಿ, ತಾಲೂಕು ಅಧ್ಯಕ್ಷ ಉಡುಪಿಯ ಪ್ರೊ.ಉಪೇಂದ್ರ ಸೋಮಯಾಜಿ, ಕುಂದಾಪುರದ ಕೆ.ನಾರಾಯಣ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೌರವ ಕಾರ್ಯದರ್ಶಿ ವಿ.ರಂಗಪ್ಪಯ್ಯ ಹೊಳ್ಳ ವಂದಿಸಿದರು. ಮುರಳಿ ಕಡೆಕಾರು ಹಾಗೂ ಸುಬ್ರಹ್ಮಣ್ಯ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಕುಲಗೆಡಲು ಕಾರಣ…
5 ವರ್ಷ ಹತ್ತು ತಿಂಗಳಾಗದೆ ಮಗುವನ್ನು 1ನೆ ತರಗತಿಗೆ ಸೇರಿಸಿ ಕೊಳ್ಳಬಾರದು ಎಂಬ ನಿಯಮವಿದೆ. ಯಾವ ಮಕ್ಕಳ ಮನೋವಿಜ್ಞಾನಿ ಈ ಲಕ್ಷ್ಮಣರೇಖೆ ಎಳೆದನೋ ಗೊತ್ತಿಲ್ಲ. ಒಂದು ವರ್ಷ ಕಳೆಯುವಷ್ಟರಲ್ಲಿ ಮಕ್ಕಳು ಹೇಳಿಕೊಟ್ಟ ಧ್ವನಿಯನ್ನು ಅನುಕರಣೆ ಮಾಡಿ ಮತ್ತೆ ಮತ್ತೆ ಅದೇ ಧ್ವನಿಯನ್ನು ಪುನರುಚ್ಛರಿಸುವ ಪ್ರಯತ್ನ ಮಾಡುತ್ತವೆ. ಅನುಕರಣ ವಾಚಕಗಳನ್ನು, ಪುನರುಕ್ತಿಗಳನ್ನು ಹೇಳಿಕೊಡುವ ಕಾಲವಿದು. ಅಲ್ಲಿ ಅರ್ಥಕ್ಕೆ ಮಹತ್ವವಿಲ್ಲ. ಧ್ವನಿಯ ಮೂಲವಾದ, ಯಾವ ಅಥರ್ವೂ ಇಲ್ಲದ ಸ್ವರ, ವ್ಯಂಜನಗಳನ್ನು ಮಕ್ಕಳು ಆಟವಾಡುತ್ತಾ ಕಲಿಯುತ್ತವೆ. ದಶಕಗಳ ಹಿಂದೆ ಅರ್ಥವಿಲ್ಲದ ಸ್ವರ, ವ್ಯಂಜನಗಳನ್ನು ದೂರಮಾಡಿ ಬಸವ, ಕಮಲರನ್ನು ಪಠ್ಯಗಳಲ್ಲಿ ಸೇರಿಸಿಕೊಂಡಿದ್ದೇ ಇಂದು ಕನ್ನಡ ಕುಲಗೆಡಲು ಕಾರಣ.
-ಪ್ರೊ.ರಾಮದಾಸ್, ಸಮ್ಮೇಳನಾಧ್ಯಕ್ಷ

ದಲಿತ ಸಂಘಟನೆಗಳು ಒಂದಾಗಬೇಕು: ಡಾ.ಸಿದ್ದಲಿಂಗಯ್ಯ ಮೈಸೂರು: ದಸಂಸ ರಾಜ್ಯ ಮಟ್ಟದ ಅಧ್ಯಯನ ಶಿಬಿರ

ದಲಿತ ಸಂಘಟನೆಗಳು ಒಂದಾಗಬೇಕು: ಡಾ.ಸಿದ್ದಲಿಂಗಯ್ಯ ಮೈಸೂರು: ದಸಂಸ ರಾಜ್ಯ ಮಟ್ಟದ ಅಧ್ಯಯನ ಶಿಬಿರ

ಶನಿವಾರ – ಜೂನ್ -21-2014

ಮೈಸೂರು, ಜೂ.20: ದಲಿತ ಸಂಘಟನೆಗಳ ಶಕ್ತಿ ಹೆಚ್ಚಾಗಬೇಕಾದರೆ, ವಿಂಗಡಣೆಯಾಗಿರುವ ದಲಿತ ಸಂಘಟನೆಗಳು ಮತ್ತೆ ಒಂದಾಗಬೇಕು. ಈ ದಿಸೆಯಲ್ಲಿ ಸಾಹಿತಿ ದೇವನೂರು ಮಹದೇವ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ ಎಂದು ಸಾಹಿತಿ ಡಾ.ಸಿದ್ದಲಿಂಗಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಂಜರಾಜ ಬಹದ್ದೂರ್ ಛತ್ರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಅಧ್ಯ ಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ದಲಿತ ಸಮುದಾಯ ಶೋಷಣೆಯಿಂದ ಹೊರ ಬರಬೇಕಾದರೆ, ವಿಂಗಡಣೆಯಾಗಿರುವ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಡಬೇಕು. ಒಂದು ಸಂಘಟನೆ ವಿಂಗಡಣೆಯಾಗುವುದರಿಂದ ಅವರ ಬಲ ಕ್ರಮೇಣವಾಗಿ ಕುಗ್ಗುತ್ತದೆ. ಹಾಗಾಗಿ ದಲಿತ ಸಂಘಟನೆಗಳು ಒಂದಾಗಿ ಬಲಗೊಂಡಾಗ, ಹೋರಾಟದಲ್ಲಿ ಜಯ ಸಿಗಲಿದೆ ಎಂದರು.
ಸಮಾಜದಲ್ಲಿ ಅಸ್ಪಶ್ಯತೆ ಎಂಬುದು ಮನೋ ರೋಗವಾಗಿದೆ. ಇದು ಬದಲಾಗಿ ಸಮಾಜದಲ್ಲಿ ಆರೋಗ್ಯಕರ ವಾತಾವರಣ ನಿರ್ಮಾಣವಾಗ ಬೇಕಾಗಿದೆ. ಪ್ರತಿಯೊಬ್ಬರೂ, ಆರೋಗ್ಯಕರ ಮನೋಧರ್ಮ ಬೆಳೆಸಿಕೊಂಡಾಗ ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ಸಾಧ್ಯ. ಅಸ್ಪಶ್ಯತೆ ಹೋಗಲಾಡಿ ಸುವುದರ ಜೊತೆಗೆ, ದಲಿತ ಸಮುದಾಯದಲ್ಲಿ ದೊಡ್ಡ ಪ್ರಮಾಣದ ವೈಚಾರಿಕ ಕ್ರಾಂತಿಯಾಗಬೇಕು ಎಂದರು.
ಸಮಾಜದಲ್ಲಿ ವೌಢ್ಯತೆಯನ್ನು ಬಿತ್ತುವ ವಾಸ್ತು, ಜೋತಿಷ್ಯ ನಿಲ್ಲಬೇಕು. ಆದ್ದರಿಂದ ಸರಕಾರ ವೌಢ್ಯ ನಿವಾರಣೆ ಕಾಯ್ದೆಯನ್ನು ಜಾರಿಗೆ ತಂದರೆ, ಕೆಳವರ್ಗದವ ರನ್ನು ಶೋಷಿಸುವವರಿಗೆ ಎಚ್ಚರಿಕೆ ನೀಡಿದಂತಾಗು ತ್ತದೆ. ಇದರಿಂದ ದಲಿತ ಸಮುದಾಯಕ್ಕೆ ಮಾತ್ರವಲ್ಲ, ಎಲ್ಲಾ ವರ್ಗದವರಿಗೂ ಅನುಕೂಲವಾಗಲಿದೆ. ಹಾಗಾಗಿ ಸರಕಾರ ವೌಢ್ಯ ನಿವಾರಣೆ ಕಾಯ್ದೆ ಜಾರಿಗೆ ತರಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಬೌದ್ಧ ವಿಹಾರ ನಿರ್ಮಿಸಿ:ಉತ್ತರ ಕರ್ನಾಟಕದ ಕಲ್ಬುರ್ಗಿಯಲ್ಲಿ ಬೌದ್ಧ ವಿಹಾರ ನಿರ್ಮಿಸಿರುವಂತೆ ದಕ್ಷಿಣ ಕರ್ನಾಟದಲ್ಲೂ ಬೌದ್ಧ ವಿಹಾರ ನಿರ್ಮಿಸ ಬೇಕು ಎಂದು ದಸಂಸ ಕಾರ್ಯಕರ್ತರು ಸಂಸದ ಧ್ರುವನಾರಾಯಣ ಅವರಲ್ಲಿ ಮನವಿ ಮಾಡಿಕೊಂಡರು.

ಸಂಸದ ಧ್ರುವನಾರಾಯಣ ಅವರು ಮಾತನಾಡಿ, ಸಂಘಟನೆಗಳು ವಿಭಜನೆಯಾಗುವುದರಿಂದ ತನ್ನ ಮೂಲ ಶಕ್ತಿಯನ್ನೇ ಕಳೆದುಕೊಳ್ಳುತ್ತದೆ. ಇದರಿಂದ ಯಾವುದೇ ಹೋರಾಟದಲ್ಲೂ ಜಯ ಸಿಗಲು ಸಾಧ್ಯವಿಲ್ಲ. ಆದ್ದರಿಂದ ಶೋಷಿತ ಸಮುದಾಯದ ಹಿತಕ್ಕಾಗಿ ದಲಿತ ಸಂಘರ್ಷ ಸಮಿತಿಗಳು ಒಂದಾಗಬೇಕು. ಸಂಘಟನೆಗಳು ಬಲವಾಗಿದ್ದರೆ, ಎಲ್ಲರೂ ಗೌರವಿಸುತ್ತಾರೆ ಎಂದರು. ಕಾರ್ಯಕ್ರಮದಲ್ಲಿ ನಬಿ.ಕೃಷ್ಣಪ್ಪಟ್ರಸ್ಟ್ ಅಧ್ಯಕ್ಷೆ ಇಂದಿರಾ ಕೃಷ್ಣಪ್ಪ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ಶೋಭಾ ಕಟ್ಟೀಮನಿ, ರುದ್ರಪ್ಪ ಹನಗೋಡ, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

ದೇವರು ಮನುಷ್ಯರನ್ನು ಸೃಷ್ಟಿಸಬೇಕೇ ಹೊರತು ಮನುಷ್ಯ ದೇವರನ್ನು ಸೃಷ್ಟಿಸುವುದು ಸಲ್ಲ್ಲ: ಕರ್ನಾಟಕ ಹೈಕೋರ್ಟ್

ದೇವರು ಮನುಷ್ಯರನ್ನು ಸೃಷ್ಟಿಸಬೇಕೇ ಹೊರತು ಮನುಷ್ಯ ದೇವರನ್ನು ಸೃಷ್ಟಿಸುವುದು ಸಲ್ಲ್ಲ: ಹೈಕೋರ್ಟ್

(ಕೃಪೆ: ವಾರ್ತಾಭಾರತಿ, ಶನಿವಾರ – ಜೂನ್ -21-2014)

ಬೆಂಗಳೂರು, ಜೂ.20: ನೂತನವಾಗಿ ನಿರ್ಮಾಣ ವಾಗುತ್ತಿರುವ ಬಡಾವಣೆಯಲ್ಲಿ ಅನುಮತಿಯಿಲ್ಲದೆ ಸ್ಥಾಪಿಸಿದ್ದ ದೇವರ ಮೂರ್ತಿ ತೆರವುಗೊಳಿಸುವಂತೆ ಲೋಕಾಯುಕ್ತ ರಿಜಿಸ್ಟ್ರಾರ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ಹೈಕೋರ್ಟ್ ದೇವರು ಮನುಷ್ಯರನ್ನು ನಿರ್ಮಿಸಬೇಕೇ ವಿನಾ ಮನುಷ್ಯರು ದೇವರನ್ನು ನಿರ್ಮಿಸುವುದಲ್ಲ ಎಂದು ಅಭಿಪ್ರಾಯಿಸಿದೆ.
ಮಹದೇವಯ್ಯ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಡಿ.ಎಚ್.ವೇಲಾ ಹಾಗೂ ನ್ಯಾ. ಎಚ್.ಜಿ.ರಮೇಶ್ ಅವರಿದ್ದ ನ್ಯಾಯಪೀಠ, ದೇವಾಲಯ ನಿರ್ಮಾಣಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು ಎಂದು ಸುಪ್ರೀಂ ಕೋರ್ಟ್‌ನ ಆದೇಶವಿದೆ. ಅನುಮತಿಯನ್ನು ಪಡೆಯದೆ ದೇವಾಲಯ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿ ಅರ್ಜಿದಾರರಿಗೆ ಒಂದು ಸಾವಿರ ರೂ. ದಂಡ ವಿಧಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರವಾದ ವಕೀಲರು, ತುಮಕೂರು ಜಿಲ್ಲೆಯ ಶೆಟ್ಟಿಹಳ್ಳಿ ಬಳಿ ನೂತನವಾಗಿ 56 ನಿವೇಶನಗಳುಳ್ಳ ಬಡಾವಣೆ ನಿರ್ಮಾಣವಾಗುತ್ತಿದ್ದು, ಈ ಬಡಾವಣೆಯಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯುವುದಕ್ಕಾಗಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ದೇವರ ಪ್ರತಿಮೆ ಸ್ಥಾಪನೆ ಮಾಡುವುದಕ್ಕೆ ಸ್ಥಳೀಯ ಸಂಸದರು, ಶಾಸಕರು, ಮೇಯರ್ ಸೇರಿದಂತೆ ಎಲ್ಲರು ಭಾಗವಹಿಸಿದ್ದರು. ಅಲ್ಲದೆ, ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ಇಲ್ಲಿಯ ಅಕ್ರಮಗಳು ಕಡಿಮೆಯಾಗಿವೆ. ಆದರೆ, ಲೋಕಾಯುಕ್ತ ರಿಜಿಸ್ಟ್ರಾರ್ ದೇವರ ಮೂರ್ತಿ ತೆರವು ಮಾಡುವಂತೆ ಆದೇಶಿಸಿದ್ದು, ಈ ಆದೇಶ ನೀಡುವುದಕ್ಕೆ ಲೋಕಾಯುಕ್ತಕ್ಕೆ ಅಧಿಕಾರವಿಲ್ಲ. ಆದುದರಿಂದ ದೇವರ ಮೂರ್ತಿ ತೆರವು ಮಾಡದಂತೆ ಸೂಚಿಸಬೇಕು ಎಂದು ಮನವಿ ಮಾಡಿದ್ದರು.
ಪ್ರಕರಣದ ಹಿನ್ನಲೆ: ತುಮಕೂರಿನ ಶೆಟ್ಟಿಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಬಡಾವಣೆಯಲ್ಲಿ ಶಾಲೆಗಾಗಿ ನಿರ್ಮಿಸಿರುವ ಜಾಗದಲ್ಲಿ ದೇವಸ್ಥಾನ ನಿರ್ಮಾಣವಾಗುತ್ತದೆ ಎಂದು ಆರೋಪಿಸಿ ಸತ್ಯನಾರಾಯಣ ಎಂಬುವರು ಲೋಕಾಯುಕ್ತಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.
ತನಿಖೆ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ದೇವಾಲಯ ತೆರವುಗೊಳಿಸುವಂತೆ ಆದೇಶಿಸಿರುತ್ತಾರೆ. ಈ ಆದೇಶವನ್ನು ಪ್ರಶ್ನಿಸಿ ಹೈಕೊರ್ಟ್‌ಗೆ ಅರ್ಜಿ ಸಲ್ಲಿಸಲಾಗಿರುತ್ತದೆ.

ರೈಲುಯಾನ ಬಲು ದುಬಾರಿ: ಮೋದಿ ಸರಕಾರದ ಮೊದಲ ‘ಕಹಿ ಗುಳಿಗೆ’

ರೈಲುಯಾನ ಬಲು ದುಬಾರಿ: ಮೋದಿ ಸರಕಾರದ ಮೊದಲ ‘ಕಹಿ ಗುಳಿಗೆ’

(ಕೃಪೆ: ವಾರ್ತಾಭಾರತಿ,ಶನಿವಾರ – ಜೂನ್ -21-2014)

ರೈಲು ಪ್ರಯಾಣದರ ಶೇ.14.2ರಷ್ಟು ಏರಿಕೆ
ಸರಕು ಸಾಗಣೆ ದರ ಶೇ.6.5ರಷ್ಟು ಏರಿಕೆ
ಜೂನ್ 25ರಿಂದ ಹೊಸ ದರಗಳು ಜಾರಿಗೆ
ಹೊಸದಿಲ್ಲಿ, ಜೂ.20: ಭವಿಷ್ಯದ ಕಠಿಣ ದಿನಗಳಿಗೆ ಇಂದೇ ಸಿದ್ಧರಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ನೀಡಿದ ಮುನ್ಸೂಚನೆಯ ‘ಕಹಿ ಫಲ’ ಈಗ ಹೊರಬಿದ್ದಿದೆ. ಕೇಂದ್ರ ಸರಕಾರ ಶುಕ್ರವಾರ ರೈಲು ಪ್ರಯಾಣ ಮತ್ತು ಸರಕು ಸಾಗಣೆಯ ದರಗಳಲ್ಲಿ ತೀವ್ರ ಏರಿಕೆ ಮಾಡಿದೆ.
ರೈಲು ಪ್ರಯಾಣ ದರಗಳನ್ನು ಶೇಕಡ 14.2ರಷ್ಟು ಏರಿಕೆ ಮಾಡಲಾಗಿದ್ದರೆ, ಸರಕುಸಾಗಣೆ ದರಗಳು ಶೇಕಡ 6.5ರಷ್ಟು ಹೆಚ್ಚಿವೆ. ಹೊಸ ದರಗಳು ಇದೇ ಜೂನ್ 25ರಿಂದ ಜಾರಿಗೆ ಬರಲಿವೆ.
ಬಹಳ ವರ್ಷಗಳ ನಂತರ ರೈಲ್ವೆ ಪ್ರಯಾಣ ದರಗಳಲ್ಲಿ ಏರಿಕೆಯನ್ನು ಮಾಡಲಾಗಿದೆ. ಈ ಹಿಂದಿನ ಸರಕಾರಗಳು ಮೈತ್ರಿಕೂಟ ಪಕ್ಷಗಳ ಒತ್ತಡ ಇಲ್ಲವೇ ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ದರ ಏರಿಕೆಯ ಗೋಜಿಗೆ ಹೋಗಿರಲಿಲ್ಲ.
ರೈಲು ಪ್ರಯಾಣದರದ ಏರಿಕೆಯಲ್ಲಿ ‘ಇಂಧನದ ಭಾಗದ ಹೊಂದಾಣಿಕೆ’ಯನ್ನು (ಎಫ್‌ಸಿಎ) ಸೇರ್ಪಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಒಂದು ವಾರದಿಂದ ರೈಲ್ವೆ ಖಾತೆ ಸಚಿವ ಡಿ.ವಿ.ಸದಾನಂದಗೌಡ ಮತ್ತು ರೈಲ್ವೆ ಮಂಡಳಿ ಅಧ್ಯಕ್ಷ ಅರುಣೇಂದ್ರ ಕುಮಾರ್ ಅವರೊಂದಿಗೆ ಸತತ ಸಭೆಗಳನ್ನು ನಡೆಸಿ ದರ ಏರಿಕೆಯ ಕುರಿತು ಚರ್ಚೆ ನಡೆಸಿದ್ದರು. ಕೇಂದ್ರ ರೈಲ್ವೆ ಸಚಿವರು ಪ್ರಯಾಣದರಗಳಲ್ಲಿ ಏರಿಕೆಯ ಮುನ್ಸೂಚನೆಯನ್ನು ನೀಡಿದ್ದರು.
ಭಾರೀ ಪ್ರಮಾಣದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ರೈಲ್ವೆಯು ಪ್ರಯಾಣದರ ಏರಿಕೆಯಿಂದ ಒಗ್ಗೂಡಲಿರುವ ಸಂಪನ್ಮೂಲವನ್ನು ಪ್ರಮುಖ ರೈಲ್ವೆ ಕಾಮಗಾರಿಗಳು ಮತ್ತು ಪ್ರಯಾಣಿಕರಿಗೆ ಅತ್ಯುತ್ತಮ ಸೇವಾಸೌಕರ್ಯಗಳನ್ನು ಒದಗಿಸುವ ದಿಸೆಯಲ್ಲಿ ಬಳಸಿಕೊಳ್ಳುವ ಸಂಭವವಿದೆ. ಹಣಕಾಸು ಕೊರತೆಯಿಂದಾಗಿ ರೈಲ್ವೆಯ ಪ್ರಮುಖ ಕಾಮಗಾರಿಗಳು ವಿವಿಧ ಹಂತಗಳಲ್ಲಿ ಸ್ಥಗಿತಗೊಂಡಿವೆ. ಕೇಂದ್ರ ರೈಲ್ವೆ ಬಜೆಟ್ ಮಂಡನೆಗೆ ಎರಡು ವಾರ ಇರುವಾಗಲೇ ಮೋದಿ ಸರಕಾರ ಪ್ರಯಾಣದರ ಏರಿಕೆಯ ನಿರ್ಧಾರ ಕೈಗೊಂಡಿದೆ. ಪ್ರಯಾಣದರ ಏರಿಕೆಯನ್ನು ಬಜೆಟ್‌ನಿಂದ ಹೊರಗಿಟ್ಟು ಇದರ ಪರಿಣಾಮವನ್ನು ತಗ್ಗಿಸಲು ಸರಕಾರ ಯೋಚಿಸಿದಂತಿದೆ.
ಆದರೆ ಪ್ರಯಾಣದರ ಏರಿಕೆಯ ಕ್ರಮದಿಂದಾಗಿ ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳಿಗೆ ಹೊಸ ಅಸ್ತ್ರ ಲಭಿಸಿದಂತಾಗಿದೆ. ‘ಒಳ್ಳೆಯ ದಿನಗಳ’ ಆಶ್ವಾಸನೆ ನೀಡಿ ಚುನಾವಣೆಯಲ್ಲಿ ಜಯಭೇರಿ ಸಾಧಿಸಿರುವ ಬಿಜೆಪಿಗೆ ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವುದು ಬಹಳ ಕಷ್ಟವಾಗಬಹುದು.ಪಕ್ಷದೊಳಗಿನ ಸಂಪ್ರದಾಯವಾದಿಗಳು ಈ ನಿರ್ಧಾರದ ಬಗ್ಗೆ ಅಷ್ಟೇನೂ ಉತ್ಸಾಹ ತೋರಿಸಿಲ್ಲ. ದೇಶದ ಅರ್ಥವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಸುಧಾರಣೆಗೆ ಇಂತಹ ಕಠಿಣ ನಿರ್ಧಾರಗಳ ಅಗತ್ಯವಿದೆ ಎಂಬುದು ಮೋದಿ ಸರಕಾರದ ಯೋಚನೆಯಾಗಿದೆ.

ರೈಲ್ವೆ ಪ್ರಯಾಣದರ ಏರಿಕೆಯ ಮೂಲಕ ತಾವು ಸರಕಾರದ ಜನಪ್ರಿಯ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿಲ್ಲ ಎಂಬ ಸ್ಪಷ್ಟ ಸಂಕೇತವನ್ನು ಮೋದಿ ರವಾನಿಸಿದ್ದಾರೆ. ‘ಈ ಹಿಂದಿನ ಯುಪಿಎ ಸರಕಾರ ರೈಲ್ವೆ ಪ್ರಯಾಣದರ ಏರಿಕೆಗೆ ನಿರ್ಧಾರ ಕೈಗೊಂಡಿತ್ತು. ಮಲ್ಲಿಕಾರ್ಜುನ ಖರ್ಗೆ ಅವರ ನಿರ್ಧಾರವನ್ನಷ್ಟೇ ನಾವು ಜಾರಿಗೊಳಿಸುತ್ತಿದ್ದೇವೆ’ ಎಂದು ರೈಲ್ವೆ ಸಚಿವ ಸದಾನಂದ ಗೌಡ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಕೇಂದ್ರ ಸರಕಾರ ಸಂಸತ್ತಿನಲ್ಲೂ ಇದೇ ವಾದವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮೇಲೆ ದೂಷಣೆ ಮಾಡುವ ಸಾಧ್ಯತೆಗಳಿವೆ.
ದರ ಏರಿಕೆ ವಾಪಸ್: ಕಾಂಗ್ರೆಸ್, ಲಾಲು ಆಗ್ರಹ
ಹೊಸದಿಲ್ಲಿ: ರೈಲ್ವೆ ಪ್ರಯಾಣದರ ಏರಿಕೆಯ ಕ್ರಮವನ್ನು ಈ ಕೂಡಲೇ ವಾಪಸ್ ತೆಗೆದುಕೊಳ್ಳಬೇಕೆಂದು ಲೋಕಸಭೆಯಲ್ಲಿ ಕಾಂಗ್ರೆಸ್ ಸಭಾನಾಯಕರಾಗಿರುವ ಎಂ.ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಆಗ್ರಹಿಸಿದ್ದಾರೆ.
‘ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚುನಾವಣೆಗೂ ಮೊದಲು ಸರಕಾರ ಒಳ್ಳೆಯ ದಿನಗಳ ಆಶ್ವಾಸನೆಯನ್ನು ನೀಡಿತ್ತು. ಈದೀಗ ಕೆಟ್ಟ ದಿನಗಳನ್ನು ನೀಡಿದೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಟೀಕಿಸಿದ್ದಾರೆ.
ಸಿಪಿಎಂ ನಾಯಕಿ ಬೃಂದಾ ಕಾರಟ್ ಕೂಡ ಪ್ರಯಾಣದರ ಏರಿಕೆಯನ್ನು ಟೀಕಿಸಿದ್ದಾರೆ. ‘ಸಂಸತ್ತನ್ನು ದಿಕ್ಕರಿಸಿ ಪ್ರಯಾಣದರ ಏರಿಸುವುದು ಅಕ್ರಮ. ಈ ಕ್ರಮದಿಂದ ರೈಲು ಪ್ರಯಾಣಿಕರ ಮೇಲೆ ಇನ್ನಷ್ಟು ಹೊರೆ ಬೀಳಳಿದೆ’ ಎಂದು ಅವರು ಹೇಳಿದ್ದಾರೆ.* ದಿಲ್ಲಿ-ಮುಂಬೈ ರಾಜಧಾನಿ ಎಕ್ಸ್‌ಪ್ರೆಸ್ (ಈಗಿನ ದರ-ಹೊಸ ದರ)
1ಎ: 4,135-4,722 ರೂಪಾಯಿ.
2ಎ: 2,495-2,849 ರೂಪಾಯಿ
3ಎ: 1,815-2,072 ರೂಪಾಯಿ
* ದಿಲ್ಲಿ-ಬೆಂಗಳೂರು ರಾಜಧಾನಿ ಎಕ್ಸ್‌ಪ್ರೆಸ್

1ಎ: 5,915-6,754 ರೂಪಾಯಿ 2ಎ: 3,585-4,094 ರೂಪಾಯಿ
3ಎ: 2,600-2,969 ರೂಪಾಯಿ
* ದಿಲ್ಲಿ-ಕೋಲ್ಕತ್ತಾ ರಾಜಧಾನಿ ಎಕ್ಸ್‌ಪ್ರೆಸ್
1ಎ: 4,390-5,013 ರೂಪಾಯಿ
2ಎ: 2,635-3,009 ರೂಪಾಯಿ
3ಎ: 1,915-2,186 ರೂಪಾಯಿ
* ದಿಲ್ಲಿ-ಚೆನ್ನೈ ರಾಜಧಾನಿ ಎಕ್ಸ್‌ಪ್ರೆಸ್
1ಎ: 5,635-6,435 ರೂಪಾಯಿ
2ಎ: 3,440-3,928 ರೂಪಾಯಿ
3ಎ: 2,515-2,872 ರೂಪಾಯಿ
***
ಈ ಹಿಂದಿನ ದರ ಏರಿಕೆಗಳು:
* ಮಾರ್ಚ್, 2012: ರೈಲು ಪ್ರಯಾಣದರದಲ್ಲಿ ಪ್ರತಿ ಕಿ.ಮೀ.ಗೆ 2ರಿಂದ 30 ಪೈಸೆ ಹೆಚ್ಚಳ. ಅಂದಿನ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರಿಂದ ಬಜೆಟ್ ಪ್ರಸ್ತಾಪ.
 * ಜನವರಿ, 2013: ರೈಲು ಪ್ರಯಾಣದರದಲ್ಲಿ ಶೇ.21ರಷ್ಟು ಏರಿಕೆಗೆ ಅಂದಿನ ರೈಲ್ವೆ ಸಚಿವ ಪವನ್‌ಕುಮಾರ್ ಬನ್ಸಲ್ ನಿರ್ಧಾರ. ವಾರ್ಷಿಕ 6600 ಕೋಟಿ ರೂಪಾಯಿ ಸಂಪನ್ಮೂಲ ಸಂಗ್ರಹಣೆಯ ಗುರಿ.

ತಪ್ಪು ಹೇಳಿಕೆಗಳು ಮತ್ತು ಅಸಹ್ಯಕರ ಪ್ರತಿಕ್ರಿಯೆಗಳು

ಅಂಕಣ

ತಪ್ಪು ಹೇಳಿಕೆಗಳು ಮತ್ತು ಅಸಹ್ಯಕರ ಪ್ರತಿಕ್ರಿಯೆಗಳು

(ವಾರ್ತಾಭಾರತಿ, ಗುರುವಾರ – ಜೂನ್ -19-2014)

ತಪ್ಪು ಹೇಳಿಕೆಗಳು ಮತ್ತು ಅಸಹ್ಯಕರ ಪ್ರತಿಕ್ರಿಯೆಗಳು

* ಡಾ. ನಟರಾಜ್ ಹುಳಿಯಾರ್

ಅನಂತಮೂರ್ತಿಯವರು ನಿಜಕ್ಕೂ ಖಿನ್ನರಾಗಿ ದ್ದರು. ಅದು ಖಾಸಗಿ ಖಿನ್ನತೆ ಮಾತ್ರ ಆಗಿರಲಿಲ್ಲ. ಎಲ್ಲ ಬಗೆಯ ಸೂಕ್ಷ್ಮ ಚರ್ಚೆಗಳನ್ನೂ ಕೈಬಿಟ್ಟು, ಎಲ್ಲವನ್ನೂ ವಿವಾದಕ್ಕೀಡು ಮಾಡಿ ಕೆಟ್ಟ ಆನಂದ ಪಡೆಯುವ ಚಪಲಕ್ಕೆ ನಮ್ಮ ಮಾಧ್ಯಮ ಜಗತ್ತು ಬಲಿಯಾಗತೊಡಗಿರುವುದರ ಬಗ್ಗೆ ಎಲ್ಲ ಸೂಕ್ಷ್ಮಜ್ಞರಲ್ಲಿರುವ ಆತಂಕ ಹಾಗೂ ದಿಗ್ಭ್ರಮೆ ಅವರಲ್ಲಿ ಈಗ ಇನ್ನಷ್ಟು ಹೆಚ್ಚತೊಡಗಿತ್ತು. ಆ ಬಗ್ಗೆ ಅಲ್ಲಲ್ಲಿ ಪ್ರತಿಕ್ರಿಯೆ ನೀಡಿದ್ದ ನಾನು ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆ ಈ ಬಗ್ಗೆ ಬರೆಯುವಂತೆ ಕೇಳಿದಾಗ ಇನ್ನಷ್ಟು ವಿವರವಾಗಿ ಯೋಚಿಸತೊಡಗಿದೆ. ಅಲ್ಲಿ ಬರೆದಿದ್ದರ ಸಾರಾಂಶ ಇಲ್ಲಿದೆ:
ವಿದ್ವಾಂಸರೊಬ್ಬರು ಒಂದು ಪ್ರಶಸ್ತಿಯ ಬಗ್ಗೆ ಆರಂಭಿಸಿದ ಒಂದು ಗೊಣಗಾಟ ಎಲ್ಲೆಲ್ಲಿಗೋ ಹೋಗಿ ತಲುಪಿದ ವಿಚಿತ್ರ ಹಾಗೂ ಅಪಾಯ ಕರ ಪ್ರಸಂಗವಿದು. ಕರ್ನಾಟಕ ಸರಕಾರ ಅನಂತಮೂರ್ತಿಯವರಿಗೆ ‘ಬಸವಶ್ರೀ’ ಪ್ರಶಸ್ತಿ ಕೊಟ್ಟದ್ದು ಕಲಬುರ್ಗಿಯವರಿಗೆ ಒಪ್ಪಿಗೆಯಾಗಲಿಲ್ಲ; ಪ್ರಶಸ್ತಿಗೆ ಅನಂತಮೂರ್ತಿ ಅರ್ಹರಲ್ಲ ಎಂದು ಅವರು ಬರೆದರು. ಜೊತೆಗೆ ತಮ್ಮ ಈ ಪ್ರತಿಭಟನೆಯ ಬಗ್ಗೆ ಸರಕಾರದ ಗಮನ ಸೆಳೆಯಲು ಹನ್ನೆರಡನೆಯ ಶತಮಾನದ ಚರಿತ್ರೆಯ ಜೊತೆಗಿನ ಒಂದು ಹೋಲಿಕೆಯನ್ನೂ ಬಳಸಿದರು. ಕಲಬುರ್ಗಿಯವರ ಈ ಹೋಲಿಕೆಯ ಪ್ರಕಾರ, ಬಿಜ್ಜಳನ ಕಾಲದಲ್ಲೂ ಬಸವಣ್ಣನಿಗೆ ನ್ಯಾಯ ಸಿಗಲಿಲ್ಲ; ಇದೀಗ ಈ ಪ್ರಶಸ್ತಿ ಅನಂತಮೂರ್ತಿಯವರಿಗೆ ಹೋಗಿದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾಲದಲ್ಲೂ ಬಸವಣ್ಣನವರಿಗೆ ನ್ಯಾಯ ಸಿಗಲಿಲ್ಲ! ತಕ್ಷಣ ಆಯ್ಕೆ ಸಮಿತಿಯ ಸದಸ್ಯರೊಬ್ಬರು, ‘‘ಆಯ್ಕೆ ಸಮಿತಿಯು ಹಿಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರ ಸರಕಾರದ ಕಾಲದಲ್ಲಿ ನೇಮಕವಾಗಿತ್ತು; ಸಿದ್ದ್ಧರಾಮಯ್ಯನವರ ಸರಕಾರದ ಕಾಲದಲ್ಲಲ್ಲ’’ ಎಂದು ಈ ಪ್ರಶ್ನೆಗೆ ಉತ್ತರ ಕೊಟ್ಟರು; ‘‘ಈಗಾಗಲೇ ಇದ್ದ ಮಾನದಂಡಗಳ ಪ್ರಕಾರ ಹಾಗೂ ಆಯ್ಕೆ ಸಮಿತಿಯ ತೀರ್ಮಾನದಂತೆ ಪ್ರಶಸ್ತಿ ತೀರ್ಮಾನವಾಗಿದೆ; ಅದರಲ್ಲಿ ಸರಕಾರ ಹಸ್ತಕ್ಷೇಪ ಮಾಡಿಲ್ಲ; ಹಾಗೆ ಮಾಡಲು ಬರು ವುದಿಲ್ಲ’’ ಎಂದು ಕನ್ನಡ ಸಂಸ್ಕೃತಿ ಸಚಿವೆಯವರು ಹೇಳಿದರು. ಪ್ರಶಸ್ತಿ ನೀಡುವ ಮೊದಲು ಹಗ ರಣ ಮಾಡುವ ಸಣ್ಣತನವನ್ನು ಪ್ರೊ.ಕಲಬುರ್ಗಿಯವರು ತೋರಿರಲಿಲ್ಲ; ಅದು ಅವರ ಘನತೆಯನ್ನೂ ಸೂಚಿಸುತ್ತದೆ ಎಂಬುದನ್ನು ಎಲ್ಲರೂ ಒಪ್ಪಬೇಕು. ಈ ಚರ್ಚೆ ಅಲ್ಲಿಗೆ ಮುಗಿಯಬಹುದಿತ್ತು; ಅಥವಾ ಪ್ರಶಸ್ತಿಯ ಮಾನದಂಡಗಳನ್ನು ಕುರಿತು ಆ ನಂತರವೂ ಚರ್ಚೆ ಗಂಭೀರವಾಗಿ ಮುಂದುವರಿಯಬಹುದಿತ್ತು. ಆದರೆ ಚರ್ಚೆಯ ಸಂದರ್ಭದಲ್ಲಿ ಕಲಬುರ್ಗಿ ಯಾಕೋ ತಮ್ಮ ಸೈರಣೆ ಕಳೆದುಕೊಂಡರು. ಸಾಮಾನ್ಯವಾಗಿ ಪಠ್ಯಗಳ ಸತ್ಯಾಸತ್ಯತೆಗಳನ್ನು ಗುರುತಿಸಲು ತಮ್ಮದೇ ಆದ ಖಚಿತ ವಿಧಾನ ಗಳನ್ನು ಬಳಸುವ ಅವರು ಯಾರೋ ತೋರಿಸಿ ಕೊಟ್ಟ ಸಾಲೊಂದನ್ನು ಉಲ್ಲೇಖಿಸಿ ಅನಂತಮೂರ್ತಿಯವರು ಬಸವಣ್ಣನನ್ನು ‘‘ನಾನ್ಸೆನ್ಸ್ ಫಿಲಾಸಫರ್’’ ಎಂದಿದ್ದಾರೆ; ಆದ್ದರಿಂದ ಅವರಿಗೆ ಬಸವಶ್ರೀ ಪ್ರಶಸ್ತಿ ಕೊಟ್ಟಿದ್ದು ಸರಿಯಲ್ಲ ಎಂದು ವಾದಿಸಿದರು. ಆದರೆ ಅನಂತಮೂರ್ತಿಯವರು ಹೇಳಿದ್ದು ಬಸವಣ್ಣ ‘ನೋ ನಾನ್ಸೆನ್ಸ್ ಫಿಲಾಸಫರ್’ ಎಂಬುದು ಮೂಲ ಪಠ್ಯದಲ್ಲಿ ಸ್ಪಷ್ಟವಾಗಿತ್ತು. ಅಷ್ಟು ದೊಡ್ಡ ವಿದ್ವಾಂಸರಾದ ಕಲಬುರ್ಗಿಯವರು ಕೊನೆಯ ಪಕ್ಷ ಅನಂತಮೂರ್ತಿಯವರಿಂದಲೇ ಈ ಪಠ್ಯದ ಬಗ್ಗೆ ವಿವರಣೆ ಕೇಳಿ ನಂತರ ಬರೆಯ ಬಹುದಿತ್ತು. ಅದನ್ನೂ ಅವರು ಮಾಡಲಿಲ್ಲ.
ಹೀಗೆ ಚರ್ಚೆಯೊಂದು ವಿವಾದವಾಗಲು ತಮ್ಮ ಕಾಣಿಕೆ ನೀಡಿದ ಕಲಬುರ್ಗಿಯವರು ಇದೇ ಸರಿ ಸುಮಾರಿನಲ್ಲೇ ಮತ್ತೊಂದು ಸಂದರ್ಭದಲ್ಲಿಯೂ ದುಡುಕಿದರು. ಕಲಬುರ್ಗಿಯವರು ಸಾಮಾನ್ಯವಾಗಿ ಆಧುನಿಕ ಸಾಹಿತ್ಯದ ತಂಟೆಗೆ ಹೋಗು ವುದು ಕಡಿಮೆ. ಆದರೆ ವಿಚಾರ ಸಂಕಿರಣ ವೊಂದರಲ್ಲಿ ಮೂಢನಂಬಿಕೆಯ ವಿರುದ್ಧ ಮಾತಾಡುತ್ತಾ, ‘‘ಅನಂತಮೂರ್ತಿ ಬಾಲಕ ನಾಗಿದ್ದಾಗ ದೇವರ ಕಲ್ಲಿನ ಮೇಲೆ ಮೂತ್ರ ಮಾಡಿದ್ದರೂ ಅವರಿಗೆ ಏನೂ ಆಗಲಿಲ್ಲ; ಆ ಬಗ್ಗೆ ಅನಂತಮೂರ್ತಿಯವರೇ ಬರೆದುಕೊಂಡಿದ್ದಾರೆ; ಆದ್ದರಿಂದ ಈ ಮೂಢನಂಬಿಕೆಗಳನ್ನು ನಾವು ನಂಬಬಾರದು’’ ಎಂದರು. ನಿರಂತರ ಅಸಿಡಿಟಿಯಿಂದ ಉರಿಯುತ್ತಾ ಸುದ್ದಿಗಾಗಿ ಬಾಯ್ತೆರೆದಿರುವ ಎಲೆಕ್ಟ್ರಾನಿಕ್ ಮಾಧ್ಯಮಗಳು ಈ ಮಾತನ್ನೇ ಹಿಂಜಿ ಇದು ಕಲಬುರ್ಗಿಯವರ ಮಾತು ಎಂಬಂತೆ ಅಮಾನವೀಯವಾಗಿ ಕಲಬುರ್ಗಿಯವರ ಮೇಲೆ ಮುಗಿ ಬಿದ್ದವು. ಅದರಿಂದ ತಪ್ಪಿಸಿಕೊಳ್ಳಲು ಕಲಬುರ್ಗಿಯವರು, ‘‘ಅದು ನನ್ನ ಮಾತಲ್ಲ ಅನಂತಮೂರ್ತಿಯವರದು; ಆ ಮಾತನ್ನು ನಾನು ಒಪ್ಪುವುದಿಲ್ಲ; ಹಾಗೆಲ್ಲ ದೇವರಿಗೆ ಅವಮಾನ ಮಾಡುವುದು ಸರಿಯಲ್ಲ’’ ಎಂದುಬಿಟ್ಟರು. ಜೊತೆಗೆ, ‘‘ನಮ್ಮ ಮೋದಿ ಸರಕಾರ ಬಂದಿರುವಾಗ ನಾನು ಆ ರೀತಿ ಮಾತಾಡುವುದಿಲ್ಲ’’ ಎಂದು ಕೂಡ ಹೇಳಿ ಬಿಟ್ಟರು!
ಆದರೆ ಅನಂತಮೂರ್ತಿಯವರನ್ನು ಉಲ್ಲೇಖಿಸುವಾಗ ಎರಡನೆಯ ಸಲವೂ ಕಲಬುರ್ಗಿ ತಪ್ಪುಮಾಡಿದ್ದರು. ಅನಂತ ಮೂರ್ತಿಯವರ ‘ಬೆತ್ತಲೆ ಪೂಜೆ ಏಕೆ ಕೂಡದು?’ ಲೇಖನದಲ್ಲಿ ಅನಂತಮೂರ್ತಿ ಬಾಲಕನಾಗಿದ್ದಾಗ ‘‘ನನ್ನನ್ನೂ ಮೀರಿದ ಅಜ್ಞಾತ ಶಕ್ತಿಗಳು ಇಲ್ಲ ಎಂದು ನನಗೆ ನಾನು ದೃಢಪಡಿಸಿಕೊಳ್ಳುವುದಕ್ಕಾಗಿ ನಮ್ಮ ಹಳ್ಳಿಯ ಮರಗಳ ಕೆಳಗಿದ್ದ ದೆವ್ವದ ಕಲ್ಲುಗಳ ಮೇಲೆ ನಾನು ಮೂತ್ರ ವಿಸರ್ಜನೆ ಮಾಡಿದ್ದಿದೆ’’ ಎಂಬ ನಿವೇದನೆಯಿದೆ. ಈ ಮಾತನ್ನು ಅನಂತಮೂರ್ತಿಯವರು ಲೇಖನದ ನಿರ್ದಿಷ್ಟ ಸಾಂಸ್ಕೃತಿಕ ಸಂದರ್ಭವೊಂದರಲ್ಲಿ ಚರ್ಚಿಸಿದ್ದಾರೆ. ಆದರೆ ಯಾವ ಕಲ್ಪನಾ ವಿಲಾಸದಿಂದ ಕಲಬುರ್ಗಿಯವರು ‘ದೆವ್ವದ ಕಲ್ಲ’ನ್ನು ‘ದೇವರ ಕಲ್ಲು’ ಎಂದು ಭಾಷಾಂತರ ಮಾಡಿಕೊಂಡರೋ ತಿಳಿಯದು! ಆದರೆ ಕಲ್ಲು ದೈವ, ಮರ ದೈವಗಳನ್ನು ತೀವ್ರ ಪರೀಕ್ಷೆಗೊಳಪಡಿಸಿರುವ ವಚನಕಾರರ ವಚನಗಳನ್ನು ಸಂಪಾದಿಸಿರುವ ಕಲಬುರ್ಗಿಯವರಿಗೆ, ಬಾಲಕನೊಬ್ಬನಲ್ಲಿ ವೈಚಾರಿಕತೆ ಮೂಡುವಾಗ ಆತ ದೇವರ ಕಲ್ಲಿನ ಮೇಲೆ ಮೂತ್ರ ವಿಸರ್ಜಿಸಿದ್ದರೂ ಅದರ ಹಿಂದಿರುವ ಪರೀಕ್ಷಾ ಮನೋಭಾವವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ ಇರಬೇಕಾಗಿತ್ತು ಎಂದು ನಮ್ಮಂಥವರು ನಿರೀಕ್ಷಿಸುವುದು ಸಹಜ. ಆದರೆ ಹಾಗಾಗಲಿಲ್ಲ. ಬದಲಿಗೆ ಇವೆಲ್ಲ ಬೀದಿ ಚರ್ಚೆಯ ಅಶ್ಲೀಲ ಮಟ್ಟಕ್ಕಿಳಿದು ಅಸಹ್ಯವನ್ನು ಸೃಷ್ಟಿಸುವಲ್ಲಿ ಮಾತ್ರ ನೆರವಾದವು. ಅನಗತ್ಯವಾಗಿ ಹಿರಿಯ ಲೇಖಕರಾದ ಅನಂತಮೂರ್ತಿಯವರನ್ನೂ ವಿದ್ವಾಂಸರಾದ ಕಲಬುರ್ಗಿಯವರನ್ನೂ ಅವಮಾನಿಸುವ ಕೆಲಸ ಶುರುವಾಯಿತು. ಇಡೀ ಚರ್ಚೆಯಲ್ಲಿ ಅಂತಃಸ್ಸಾಕ್ಷಿಯ ಕೊರತೆ ಎದ್ದು ಕಾಣುತ್ತಿತ್ತು.
ಇವೆಲ್ಲವನ್ನೂ ವಿದ್ವಾಂಸರಾದ ಕಲಬುರ್ಗಿ ಯವರು ಸೃಷ್ಟಿಸಿದರೆಂದು ನಾನು ಹೇಳುತ್ತಿಲ್ಲ. ಸ್ವತಃ ಕಲಬುರ್ಗಿಯವರು ಹಿಂದೊಮ್ಮೆ ತಮ್ಮ ಸಂಶೋಧನೆಗಳನ್ನು ಆಧರಿಸಿದ ಸತ್ಯಗಳನ್ನು ಮುಂದಿಟ್ಟಾಗ ಮೂಲಭೂತವಾದಿಗಳು ಅವರ ವಿರುದ್ಧವೇ ಅಸಹ್ಯಕರ ಅಪಪ್ರಚಾರ ಮಾಡಿದ್ದನ್ನು ಅವರು ಮರೆಯಬಾರದಿತ್ತು. ಅಕಸ್ಮಾತ್ ಅದು ನೆನಪಾಗದಿದ್ದರೂ ಈ ಸಂದರ್ಭದಲ್ಲಿ ಸತ್ಯ ಗೊತ್ತಾದಾಗ ಆ ಬಗ್ಗೆ ಒಂದು ಸರಳ ಸ್ಪಷ್ಟನೆಯನ್ನಾದರೂ ನೀಡಿ ಅವರು ದೊಡ್ಡವರಾಗಬಹುದಿತ್ತು. ಆ ಕೆಲಸ ಆಗಲಿಲ್ಲ.
ಇಡೀ ಪ್ರಕರಣ ಆಸಕ್ತ ಹಿತಗಳು ಏನನ್ನಾದರೂ ಯಾರ ಮೇಲಾದರೂ ತಿರುಗಿಸಲು ಸಿದ್ಧರಾಗಿರುವ ಈ ಸಟ್ಯೆಾಟಿಜಿಗಳ ಕಾಲದಲ್ಲಿ ನಮ್ಮೆಲ್ಲ ಚರ್ಚೆಗಳೂ ಹೇಗೆ ದಿಕ್ಕೆಟ್ಟು ಹೋಗಬಲ್ಲವು ಎಂಬ ಬಗ್ಗೆ ನಾವೆಲ್ಲ ಆತ್ಮಪರೀಕ್ಷೆ ಮಾಡಿಕೊಳ್ಳುವಂತೆ ನಮ್ಮನ್ನು ಒತ್ತಾಯಿಸುತ್ತದೆ. ಅದರ ಜೊತೆಗೆ, ಮಾಧ್ಯಮಗಳಲ್ಲಿ ಇರುವ ಎಲ್ಲ ಸೂಕ್ಷ್ಮಜ್ಞರೂ ಈ ಬಗೆಯ ವಿವಾದಗಳ ಅಡ್ಡ ಪರಿಣಾಮಗಳನ್ನು ಕುರಿತು ತಂತಮ್ಮ ಅಂತಃಸ್ಸಾಕ್ಷಿಯ ಜೊತೆ ಮಾತಾಡಿಕೊಳ್ಳಬೇಕಾಗಿದೆ. ಒಮ್ಮೆ ನಾವು ಸುಳ್ಳು ಹೇಳಲಾರಂಭಿಸಿರುವುದು ಓದುಗರಿಗೆ, ಪ್ರೇಕ್ಷಕರಿಗೆ ಮನವರಿಕೆಯಾದ ತಕ್ಷಣ ಅವರು ಜೀವಮಾನಪೂರ್ತಿ ನಮ್ಮನ್ನು ಅಸಹ್ಯದಿಂದ ಕಾಣುತ್ತಾರೆ ಹಾಗೂ ನಮ್ಮನ್ನು ತಿರಸ್ಕರಿಸುತ್ತಾರೆ ಎಂಬ ಸರಳ ಸತ್ಯವನ್ನು ಕುರಿತು ಎಲ್ಲರೂ ಮತ್ತೊಮ್ಮೆ ಯೋಚಿಸಬೇಕಾಗಿದೆ. ಜೊತೆಗೆ, ಜನರ ಪೂರ್ವಗ್ರಹಗಳನ್ನು ತೊಡೆಯುವ ಕೆಲಸ ಮಾಡುವುದು ಪತ್ರಕರ್ತರ ಹಾಗೂ ಎಲ್ಲ ಬರಹಗಾರರ ಮೂಲ ಕರ್ತವ್ಯವೇ ಹೊರತು ಪೂರ್ವಗ್ರಹವನ್ನು ಬಿತ್ತುವುದು ಹಾಗೂ ಬೆಳೆಸುವುದು ಅಲ್ಲ ಎಂಬುದನ್ನು ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲರೂ ಸ್ಪಷ್ಟವಾಗಿ ತಿಳಿಯಬೇಕಾಗಿದೆ. ಹಾಗೆಯೇ ಇಂತಹ ಕ್ಷುಲ್ಲಕ ವಿಚಾರಗಳ ಕೇಸುಗಳನ್ನು ಪ್ರೋತ್ಸಾ ಹಿಸುವುದರಿಂದ ಹುಟ್ಟುವ ಅಪಾಯಗಳ ಬಗ್ಗೆ ನಮ್ಮ ಪೊಲೀಸರು ಹಾಗೂ ಕೋರ್ಟುಗಳು ಕೂಡ ಆಳವಾಗಿ ಯೋಚಿಸಬೇಕು.