ಈ ಸಂಭ್ರಮದ ಸುತ್ತಲೂ ಕವಿದ ಘೋರ ವೌನ

ಸನತ್ ಕುಮಾರ್ ಬೆಳಗಲಿ

ಈ ಸಂಭ್ರಮದ ಸುತ್ತಲೂ ಕವಿದ ಘೋರ ವೌನ

(ಕೃಪೆ: ವಾರ್ತಾಭಾರತಿ,ಸೋಮವಾರ – ಜೂನ್ -02-2014)

‘ಭಾರತ ಮತ್ತೆ ಹಿಂದೂ ಸಾಮ್ರಾಜ್ಯವಾಗ ಬೇಕು, ಪ್ರಥ್ವಿರಾಜ್ ಚವ್ಹಾಣನ ಆ ವೈಭವದ ದಿನಗಳು ಮೋದಿ ಕಾಲದಲ್ಲಿ ಮರಳಿ ಬರಬೇಕು’’ ಎಂದು ವಿಶ್ವಹಿಂದೂ ಪರಿಷತ್ತಿನ ನಾಯಕ ಅಶೋಕ ಸಿಂಘಾಲ ಅಲ್ಲಿ ದಿಲ್ಲಿಯಲ್ಲಿ ಕರೆ ನೀಡಿದರು. ಅದೇ ದಿನ ಈ ಕರೆಗೆ ಓಗೊಟ್ಟ ಬಿಜಾಪುರದ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಬಸವನ ಬಾಗೇವಾಡಿಯ ಬಸವೇಶ್ವರ ದೇವಾಲಯ ಪ್ರವೇಶ ಮಾಡುವುದಿಲ್ಲ ಎಂದು ನಿರಾಕರಿಸಿ ಬಾಗಿಲ ಹೊರಗೆ ನಿಂತು ಪೂಜೆ ಸಲ್ಲಿಸಿ ಪುನೀತರಾದರು. ಸಿಂಘಾಲರ ಹಿಂದೂ ಸಾಮ್ರಾಜ್ಯದಲ್ಲಿ ದಲಿತರು ತನ್ನಂತಿರಬೇಕು ಎಂದು ತೋರಿಸಿಕೊಟ್ಟರು. ಸಂಘಪರಿವಾರ ಬಯಸುವುದು ಈ ‘‘ಸಾಮರಸ್ಯ’ವನ್ನೇ ಆಗಿದೆ. ದೇವಾಲಯಕ್ಕೆ ಹೋದರೂ ಒಳಗೆ ಪ್ರವೇಶಿಸದಿರುವ, ಹಳ್ಳಿಗಳಲ್ಲಿ ಸವರ್ಣಿಯರ, ಗೌಡರ ಮನೆಗೆ ಹೋದರೂ, ಅವರು ಪರಿಪರಿಯಾಗಿ ಕರೆದರೂ ಒಳಗೆ ಕಾಲಿಡದಿ ರುವ ಈ ರಮೇಶ ಜಿಗಜಿಣಿಗಿ ಇದೇ ಸಜ್ಜನಿಕೆ ಸೋಗಿನ ಮೇಲ್ಜಾತಿ ಓಲೈಕೆ ಯಿಂದಲೇ ಐದು ಬಾರಿ ಸಂಸದರಾಗಿದ್ದಾರೆ. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ದ್ದಾಗ ವಿಧಾನಸಭೆಗೆ ಗೆದ್ದು ಬಂದು ಗೃಹ ಸಚಿವರಾಗಿದ್ದರು. ಮೊದಲು ಜನತಾದಳದಲ್ಲಿದ್ದ ಜಿಗಜಿಣಗಿ ಈಗ ಬಿಜೆಪಿಯ ಅನಂತಕುಮಾರ ಬಣದಲ್ಲಿ ಐಕ್ಯರಾಗಿ ದ್ದಾರೆ.
ರಮೇಶ ಜಿಗಜಿಣಗಿ ನಮ್ಮ ಬಿಜಾಪುರ ಜಿಲ್ಲೆಗೆ ಸೇರಿದವರು. ಇವರನ್ನು ಕಂಡರೆ ಹಳ್ಳಿಗಾಡಿನ ಲಿಂಗಾಯತ ಗೌಡರಿಗೆ ಎಲ್ಲಿಲ್ಲದ ಪ್ರೀತಿ. ‘‘ಮೀಸಲಾತಿ ಸೌಕರ್ಯದಿಂದ ಗೆದ್ದವರು ಆಗ ಜಿಗಜಿಣಗಿಯಂತಿರ ಬೇಕು. ಈತ ಎಷ್ಟು ಸಂಭಾವಿತ. ಚುನಾವಣೆಯಲ್ಲಿ ಓಟು ಕೇಳಲು ಬಂದರೂ ಕೂಡ ಮನೆ ಒಳಗೆ ಕಾಲಿಡುವುದಿಲ್ಲ. ಬಾಗಿಲ ಹೊರಗಿನ ಕಟ್ಟೆಯ ಮೇಲೆ ಕುಳಿತು, ‘ಕಾಕಾ’- ಮಾಮಾ, ಅವ್ವಾ, ಅಪ್ಪಾ, ಧಣಿ ಎಂದೆಲ್ಲ ಮಾತಾಡಿಸಿ ಹಾಗೇ ಎದ್ದು ಹೋಗ್ತಾನಲ್ಲ ಎಂದು ಜಿಗಜಿಣಗಿಯನ್ನು ಸವರ್ಣಿಯರು ಹಾಡಿ ಹೊಗಳುತ್ತಾರೆ. ಹಾಗೆ ನೋಡಿದರೆ ಬಿಜಾಪುರ ಜಿಲ್ಲೆಗೆ ಜಿಗಜಿಣಗಿ ಯಾವ ಅಭಿವೃದ್ಧಿ ಯೋಜನೆ ಯನ್ನು ತಂದಿಲ್ಲ. ಅಲ್ಲಿಂದ ಜನ ಗುಳೆ ಹೋಗುವುದು ತಪ್ಪಿಲ್ಲ. ಬಿಜಾಪುರದ ಫ್ಯೂಡಲ್ ಗೌಡರಿಗೆ ಈ ಅಭಿವೃದ್ಧಿ ಬೇಕಾಗಿಯೂ ಇಲ್ಲ. ‘ಯಪ್ಪಾ’-ಧಣಿ ಎಂದು ಜಿಗಜಿಣಗಿಯಂತೆ ಕೈ ಮುಗಿದು ನಿಂತರೆ ಸಾಕು ಲೋಕಸಭೆಗೆ ಕಳಿಸುತ್ತಾರೆ. ಆದರೆ ಉಳಿದ ದಲಿತ ನಾಯಕರಿಗೆ ಈ ವಿದ್ಯೆ ಗೊತ್ತಿಲ್ಲ. ಗೊತ್ತಿದ್ದರೂ ಸ್ವಾಭಿಮಾನ ಕಳೆದುಕೊಳ್ಳಲು ಅವರು ತಯಾರಿಲ್ಲ. ಅಂತಲೇ ಹೈದರಾಬಾದ್ ಕರ್ನಾಟಕಕ್ಕೆ ಅಷ್ಟೆಲ್ಲ ಕೆಲಸ ಮಾಡಿದರೂ ಖರ್ಗೆ ಗೆದ್ದು ಬರಲು ಈಗಲೂ ಪ್ರಯಾಸ ಪಡುತ್ತಾರೆ.
ಇತ್ತೀಚೆಗೆ ಮೋಟಮ್ಮನವರು ಒತ್ತಾಯಿಸಿ ಅವರ ಊರಿಗೆ ಕರೆದುಕೊಂಡು ಹೋಗಿದ್ದರು. ಅಂಬೇಡ್ಕರ ಜಯಂತಿ ಅಂಗವಾಗಿ ಅವರು ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಅಲ್ಲಿನ ಹಳ್ಳಿಗಳಿಗೆ ಹಿಂದೆ ರಸ್ತೆಗಳೇ ಇರಲಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಮೋಟಮ್ಮ ಶಾಸಕರಾಗಿದ್ದಾಗ, ಮಂತ್ರಿ ಯಾಗಿದ್ದಾಗ ಸರಕಾರದ ಮೇಲೆ ಒತ್ತಡ ತಂದು ಅವುಗಳನ್ನೆಲ್ಲ ಮಾಡಿಸಿದರು. ಆದರೆ ಮಾರನೆ ವರ್ಷ ನಡೆದ ವಿಧಾನಸಭಾ ಚುನಾವಣೆ ಯಲ್ಲಿ ಮೂಡಿಗೆರೆ ಮೀಸಲು ಕ್ಷೇತ್ರದಿಂದ ಅವರು ಗೆದ್ದು ಬರಲಿಲ್ಲ. ತಮ್ಮ ಕಣ್ಣ ಮುಂದೆ ಬೆಳೆದ ಕಾಫಿ ತೋಟದ ಕೂಲಿಯಾಳಿನ ಮಗಳು ವಿದ್ಯಾವಂತಳಾಗಿ ಹೀಗೆ ಗೆದ್ದು, ಶಾಸಕಿ ಯಾದಳು, ಮಂತ್ರಿಯಾದಳು, ಮುಂದೆ ಮುಖ್ಯಮಂತ್ರಿಯಾದರೆ ಆಕೇನ ಮಾತಾಡಿಸುವಂತಿಲ್ಲ ಎಂದು ಮೇಲ್ವರ್ಗಗಳ ಉಳ್ಳವರು ಒಂದಾಗಿ ಸೋಲಿಸಿದರು. ಮೀಸಲು ಕ್ಷೇತ್ರದಲ್ಲಿ ಗೆದ್ದು ಬರಬೇಕೆಂದರೆ ರಮೇಶ ಜಿಗಜಿಗಿಣಿ ಅವರಂತೆ ‘‘ನಯ, ವಿನಯ’’ ಇರಬೇಕೆಂಬುದು ಮೇಲ್ವರ್ಗಗಳ ಅಂತರಂಗದ ಬಯಕೆಯಾಗಿದೆ. ಅಂತಲೆ ಮೋಟಮ್ಮ ಅವರಂಥವರು ಸೋಲುತ್ತಾರೆ. ಹೀಗಾಗುತ್ತದೆ ಅಂತಲೇ ಡಾ. ಅಂಬೇಡ್ಕರರು ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಗಳಿಗಾಗಿ ಪಟ್ಟು ಹಿಡಿದಿದ್ದರು. ಆದರೆ ಮಹಾತ್ಮಾ ಗಾಂಧಿ ಉಪವಾಸ ಸತ್ಯಾಗ್ರಹ ನಡೆಸಿ ಅದಕ್ಕೆ ಅಡ್ಡಗಾಲು ಹಾಕಿದರು. ಅದಕ್ಕೂ ಅಂಬೇಡ್ಕರ ಮಣಿದಿರಲಿಲ್ಲ. ಅದೊಂದು ದಿನ ಮುಂಜಾನೆ ಕಸ್ತೂರ ಬಾ ಗಾಂಧಿ ಅವರು ಮುಂಬೈನ ಡಾ.ಅಂಬೇಡ್ಕರ ಮನೆಗೆ ಧಾವಿಸಿ ಬಂದು ‘‘ಅಣ್ಣನ ಬಳಿಗೆ ಪತಿಯ ಪ್ರಾಣ ಭಿಕ್ಷೆ ಕೇಳಲು ಬಂದಿದ್ದೇನೆ’’ ಎಂದು ಕಣ್ಣೀರು ಹಾಕಿದರು. ಆ ಕಣ್ಣಿರಿಗೆ ಕರಗಿದ ಬಾಬಾ ಸಾಹೇಬರು ಪಟ್ಟು ಸಡಿಲಿಸಿದರು. ಗಾಂಧಿ ಬದುಕಿದರು. ಈ ಮೀಸಲು ಕ್ಷೇತ್ರಗಳಲ್ಲಿ ಮೇಲ್ವರ್ಗಗಳ ಮತಗಳು ಅನೇಕ ಬಾರಿ ನಿರ್ಣಾಯಕವಾಗು ತ್ತವೆ. ಬರೀ ದಲಿತರ ಮತಗಳಿಂದ ಗೆದ್ದು ಬರಲು ಸಾಧ್ಯವಿಲ್ಲ. ಅಂತಲೇ ಮೀಸಲು ಕ್ಷೇತ್ರಗಳಲ್ಲಿ ಧಣಿಗಳನ್ನು ಒಲೈಸುವ ಜಿಗಜಿಣಗಿ ಅಂಥವರು ಗೆದ್ದು ಬರುತ್ತಾರೆ. ಇತ್ತೀಚಿಗಂತೂ ಪರಿಶಿಷ್ಟರ ಮೀಸಲು ಪಟ್ಟಿಗೆ ಕೆಲ ಸ್ಪಶ್ಯ ಸಮುದಾಯಗಳನ್ನು ರಾಜಕೀಯ ಕಾರಣಗಳಿಗಾಗಿ ಸೇರ್ಪಡೆ ಮಾಡಿದ ಪರಿಣಾಮವಾಗಿ ನೈಜ ಅಸ್ಪಶ್ಯ ಸಮು ದಾಯದ ಪ್ರತಿನಿಧಿಗಳು ಶಾಸನಸಭೆಗಳನ್ನು ಪ್ರವೇಶಿಸುವುದು ಪ್ರಯಾಸದಾಯಕವಾಗಿದೆ.
ಮೀಸಲು ಕ್ಷೇತ್ರಗಳಲ್ಲಿ ಅಸ್ಪಶ್ಯ ಸಮುದಾಯ ಪ್ರತಿನಿಧಿಗಿಂತ ಪರಿಶಿಷ್ಟ ವರ್ಗಕ್ಕೆ ಸೇರಿದ ಆದರೆ ‘ಸ್ಪಶ್ಯ’ ಸಮುದಾಯದ ತಮ್ಮ ಗುಲಾಮರು ಶಾಸನಸಭೆಗಳಿಗೆ ಗೆದ್ದು ಬರಬೇಕೆಂದು ಉಳ್ಳವರು, ಪಾಳೆಗಾರಿ ವರ್ಗಕ್ಕೆ ಸೇರಿದವರು ಬಯಸುತ್ತಾರೆ. ‘ಹಿಂದೂ ರಾಷ್ಟ್ರ’ ನಿರ್ಮಾಣದ ಗುರಿಯನ್ನು ಸಾಧಿಸಲು ಹೊರಟ ಸಂಘ ಪರಿವಾರ ಇಂಥವರನ್ನು ಹುಡುಕಿ ಬೆಂಬಲ ನೀಡುತ್ತದೆ. ಮನುವಾದಿ ಕಟ್ಟುಪಾಡುಗಳನ್ನು ಎಂದೂ ಪ್ರಶ್ನಿಸದ ಜಿಗಜಿಣಗಿ ಅಂಥವರು ಅವರಿಗೆ ಬೇಕು. ಈಗ ಕೇಂದ್ರದಲ್ಲಿ ಆರೆಸ್ಸೆಸ್ ಕೋಮುವಾದಿ ಕಾರ್ಪೊರೇಟ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಚುನಾವಣೆಯ ಮೂಲಕ ಫ್ಯಾಸಿಸಂ ಈ ದೇಶದ ಆಡಳಿತಾಂಗವನ್ನು ಪ್ರವೇಶಿಸಿದೆ. ಅಂಬೇಡ್ಕರ್, ಜ್ಯೋತಿಭಾ ಫುಲೆ, ಪೆರಿಯಾರ್ ರಾಮಸ್ವಾಮಿ ನಾಯ್ಕರ್ ಚಾಲನೆ ನೀಡಿದ ಸಾಮಾಜಿಕ ಪರಿವರ್ತನೆಯ ಚಕ್ರಕ್ಕೆ ಹಿಂದುತ್ವದ ಸಂಕೋಲೆ ಬಿಗಿದುಕೊಂಡಿದೆ. ಅಸಹಾಯಕರಾದ ನಮ್ಮ ಅನೇಕ ಪ್ರಗತಿಪರ ಲೇಖಕರು, ಮೋದಿಯ ವರಲ್ಲಿ ವಿವೇಕ ಮೂಡಲಿ ಎಂದು ಹಾರೈಸಿ ನಿಟ್ಟುಸಿರು ಬಿಡುತ್ತಿದ್ದಾರೆ. ಕಾರ್ಪೊರೇಟ್ ವಲಯದಲ್ಲಿ ಕೋಮುವಾದಿ ಕೂಟದಲ್ಲಿ ಸಂಭ್ರಮ ತುಂಬಿದೆ. ಅಂತಲೇ ಮೋದಿ ಪ್ರಮಾಣ ವಚನ ಸಮಾರಂಭಕ್ಕೆ ಅಂಬಾನಿ, ಅದಾನಿ, ಮಿತ್ತಲ್, ಹಿಂದುಜಾ, ಶಶಿ ರುಯಿಯಾರಂಥ ಕಾರ್ಪೊರೇಟ್ ಧಣಿಗಳು ಅಶೋಕ ಸಿಂಘಾಲ, ರಾಮಮಾಧವ್, ರವಿಶಂಕರ್, ಸಾಧ್ವಿ ರಿತಾಂಬರಾ, ದತ್ತಾತ್ರೇಯ ಹೊಸಬಾಳೆಯಂಥ ಸಂಘ ಪರಿವಾರದ ಆಸ್ಥಾನ ಪುರೋಹಿತರು ಬಂದಿದ್ದರು. ಶತಮಾನಗಳ ಹಿಂದೂ ಸಾಮ್ರಾಜ್ಯದ ಕನಸು ನನಸಾದ ಖುಷಿ ಇವರೆಲ್ಲರ ಮುಖದಲ್ಲಿ ಕಾಣುತ್ತಿತ್ತು. ಕಾರ್ಪೊರೇಟ್ ಧಣಿಗಳಿಗೆ ತಮ್ಮ ತಿಜೋರಿ ತುಂಬುವ ಹುಮ್ಮಸ್ಸು ಹೊರಹೊಮ್ಮುತ್ತಿತ್ತು.
ಆದರೆ ಈ ಭಾರತಕ್ಕೆ ಇನ್ನೇನು ಕಾದಿ ದೆಯೋ ಎಂಬ ಆತಂಕ ಮೂಡದಿರಲು ಕಾರಣವಿಲ್ಲದಿಲ್ಲ. ದೇಶದ ಪ್ರಧಾನಿ ಯಾಗಿರುವ ಮೋದಿಗೊಂದು ಇತಿಹಾಸ ವಿದೆ. 2002ರ ಗುಜರಾತ ಹತ್ಯಾಕಾಂಡದ ನಂತರ ಅಲ್ಲಿ ಶಾಂತಿಯೇನೊ ನೆಲೆಸಿದೆ. ಆದರೆ ಅದು ಸ್ಮಶಾನ ಶಾಂತಿ. ಮೋದಿ ಬದಲಾಗಿದ್ದಾರೆ ಎಂದು ನಂಬಲು ಯಾವ ಪುರಾವೆಗಳು ಇಲ್ಲ. ಈ ಸುಂದರ ಸೌಹಾರ್ದ ಭಾರತದ ಚಟ್ಟ ಕಟ್ಟಲು ಆರೆಸ್ಸೆಸ್ ಈಗಾಗಲೇ ತಂತ್ರ ರೂಪಿಸುತ್ತಿದೆ. ಮುಂಚೆ ಜಾಗತೀಕರಣವನ್ನು ಸ್ವದೇಶ ಜಾಗರಣ ಮಂಚದ ಮೂಲಕ ತೋರಿಕೆಗೆ ವಿರೋಧಿಸುತ್ತಿದ್ದ ಅದು ಈಗ ತಾನು ಆರ್ಥಿಕ ಮೂಲಭೂತವಾದಿಯಲ್ಲ ಎಂದು ಹೇಳಿಕೆ ನೀಡಿದೆ. ಭಾರತದ ಸಾರ್ವಜನಿಕ ಸಂಪತ್ತನ್ನು ಕಾರ್ಪೊರೇಟ್ ಕಂಪೆನಿಗಳಿಗೆ ತಟ್ಟೆಯಲ್ಲಿಟ್ಟುಕೊಡಲು ಸಮ್ಮತಿ ನೀಡಿದೆ. ಅದರ ಗುರಿ ಮನುವಾದಿ ಹಿಂದೂ ರಾಷ್ಟ್ರ ಸ್ಥಾಪನೆ ಮಾತ್ರ. ಅಂತಲೆ ಒಂದೆಡೆ ಸಂಭ್ರಮ, ಉತ್ಸಾಹ ವಿಜೃಂಭಿಸುತ್ತಿದ್ದರೆ ಇನ್ನೊಂದೆಡೆ ದಲಿತ, ಅಲ್ಪಸಂಖ್ಯಾತ, ಹಿಂದುಳಿದ, ಪ್ರಗತಿಪರ ಎಡಪಂಥೀಯ ವಲಯದಲ್ಲಿ ಘೋರ ವೌನ ಕವಿದಿದೆ. ಗುಜರಾತಿನ ಜೊತೆ ಮಝಫ್ಫರನಗರ ಗಲಭೆ ಸಂತ್ರಸ್ತರು ನಿರಾಶ್ರಿತರ ಶಿಬಿರಗಳಲ್ಲಿ ವಿಲಿವಿಲಿ ಒದ್ದಾಡುತ್ತಿದ್ದಾರೆ. ಜಾತ್ಯತೀತ ಭಾರತ ಬಿಕ್ಕಳಿಸುತ್ತಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s