ದಲಿತರಿಗೆ ಸ್ಥಾನಮಾನ ನಿರಾಕರಿಸಬೇಡಿ

ಅಂಕಣ

ದಲಿತರಿಗೆ ಸ್ಥಾನಮಾನ ನಿರಾಕರಿಸಬೇಡಿ

(ಕೃಪೆ: ವಾರ್ತಾಭಾರತಿ,ಬುಧವಾರ – ಜೂನ್ -04-2014)

ದಲಿತರಿಗೆ ಸ್ಥಾನಮಾನ ನಿರಾಕರಿಸಬೇಡಿ

ಪಿ. ಸಿದ್ದರಾಜು

ಪ್ರಸ್ತುತ ರಾಜಕೀಯ ಏಳು ಬೀಳುಗಳನ್ನು ಅವಲೋಕನ ಮಾಡಿದರೆ ಶೋಷಣೆಗೆ ಬಲಿಯಾಗಿರುವ ಶೇ.85ರಷ್ಟು ಜನ ಸಮುದಾಯಗಳನ್ನು ಎಲ್ಲಾ ರಾಜ ಕೀಯ ಪಕ್ಷಗಳು ಮತದಾರರನ್ನಾಗಿ ಬಳಸಿಕೊಂಡಿದೆಯೇ ವಿನಃ ಅವರ ರಾಜಕೀಯ ಅಭಿವೃದ್ಧಿಗೆ ಯಾವುದೇ ಮಾನ್ಯತೆಯನ್ನು ನೀಡದೆ ರಾಜಕೀಯವಾಗಿ ದೌರ್ಜನ್ಯ ಮುಂದುವರಿಯುತ್ತಲೇ ಬಂದಿದೆ. ಈ ಲೆಕ್ಕಾಚಾರವು ಸ್ವಾತಂತ್ರದ ನಂತರದಲ್ಲೂ ನಿರಂತರವಾಗಿ ನಡೆಯುತ್ತಲೇ ಬರುತ್ತಿರುವುದು ವಾಸ್ತವ ಸಂಗತಿಯಾಗಿದೆ. ಜಾತ್ಯತೀತ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಶೋಷಣೆಗೊಳಗಾದವರನ್ನು ಸಾಮಾಜಿಕವಾಗಿ ಒಂದುಗೂಡಿ ಸುವ ಪ್ರಯತ್ನವು ಮತ್ತು ಅದರ ಪರಿಕಲ್ಪನೆಯನ್ನು ಕೂಡ ಅಳವಡಿಸಿಕೊಂಡು ಎಲ್ಲಾ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿಕೊಂಡವರು ರಾಜ್ಯಾಧಿಕಾರವನ್ನು ಸುಸೂತ್ರ ವಾಗಿ ನಡೆಸಲು ಸಾಧ್ಯವಾಗುತ್ತದೆ. ಪ್ರತಿಯೊಂದು ರಾಜ್ಯಗಳಲ್ಲಿಯೂ ದಲಿತರ ಹಿತಾಸಕ್ತಿಯನ್ನು ಕೇಂದ್ರವಾಗಿರಿಸಿಕೊಂಡು ದಲಿತ ಶಕ್ತಿಯನ್ನುಪಯೋಗಿಸಿಕೊಂಡು ಅಧಿಕಾರವನ್ನು ಅನುಭವಿಸುತ್ತಿದ್ದಾರೆ. ಇದರಲ್ಲಿ ಕರ್ನಾಟಕ ರಾಜ್ಯವೂ ಕೂಡ ಹೊರತಾಗಿಲ್ಲ. ಇತಿಹಾಸವನ್ನು ಅವಲೋಕನ ಮಾಡಿದರೆ ದಲಿತ ಪರವಲ್ಲದ ಸರಕಾರಗಳು ಬೇಗನೆ ಉರುಳಿ ಬಿದ್ದಿವೆ. ಡಿ. ದೇವರಾಜ್ ಅರಸುರವರು ದಲಿತರ ಹಿತಾಸಕ್ತಿಯನ್ನು ಪರಿಗಣಿಸಿದ್ದುದರಿಂದಲೇ ತಮ್ಮ ಅಧಿಕಾರದ ಅವಧಿಯನ್ನುವೃದ್ಧಿಸಿಕೊಂಡರು. ರಾಮಕೃಷ್ಣ ಹೆಗಡೆಯವರು ಎರಡು ಬಾರಿ ಮುಖ್ಯಮಂತ್ರಿ ಯಾಗಿ ಆಯ್ಕೆಯಾಗಲು ದಲಿತ ಶಕ್ತಿಯೇ ಕಾರಣವಾಯಿತು ಎಂದರೆ ಅತಿಶಯೋಕ್ತಿಯೇ.
2013ರಲ್ಲಿ ಈ ಕಾಲಾವಧಿಯ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ ಬಿಜೆಪಿ ಸರಕಾರವು ಪತನಗೊಂಡ ನಂತರದ ದಿನಗಳಲ್ಲಿ ಸ್ಥಿರ ಸರಕಾರವನ್ನು ನೀಡುವ ಭರವಸೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಅಲೆಗಳು ಮೂಡಿ ಬಂದು ಕಾಂಗ್ರೆಸ್ ಸರಕಾರವು ಅಧಿಕಾರದ ಚುಕ್ಕಾಣಿಯನ್ನೂ ಹಿಡಿಯಿತು. ಹತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಅಧಿಕಾರವನ್ನು ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೀವ ಜಲವನ್ನೂ ತುಂಬಿದವರು ದಲಿತ ಜನಾಂಗದವರು, ದಲಿತ ಶಕ್ತಿಯೇ. ರಾಜಕೀಯ ಶಕ್ತಿಯಾಗಿ ಪರಿವರ್ತನೆಯಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದ ಮತ್ತು ನಿರಾಸೆ ಆವರಿಸಿದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ. ಜಿ. ಪರಮೇಶ್ವರ್‌ರನ್ನು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವ ಉದ್ದೇಶದಿಂದಲೇ ಹೊಸ ಶಕ್ತಿ ಮತ್ತು ಚೈತನ್ಯವನ್ನ್ನು ಕಾಂಗ್ರೆಸ್ ಪಕ್ಷಕ್ಕೆ ತುಂಬಿದ್ದು ದಲಿತ ಸಮುದಾಯ. ಇಂತಹ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕಾಣಿಸಿದ್ದ ರಾಜ್ಯದ ಸ್ಥಿತಿಗತಿಗಳ ಸನ್ನಿವೇಶಕ್ಕೆ ಹೊಸ ಆಯಾಮವನ್ನೇ ಕೊಟ್ಟಿತು ಎನ್ನಲು ಅಡ್ಡಿಯಿಲ್ಲ. ಅಧಿಕಾರ ನಿರಾಕರಿಸಿದ ಈ ವಿದ್ಯಮಾನವು ದಲಿತ ಚಳವಳಿಯು ಸಾಗಬಹುದಾದ ಮುಂದಿನ ದಿಕ್ಕನ್ನು ಕುರಿತಂತೆ ಹಲವಾರು ಸಂದೇಹಗಳಿಗೆ ಪ್ರಶ್ನೆಗಳಿಗೆ ಮತ್ತು ಇಂದಿನ ಸರಕಾರದ ಆತಂಕಗಳಿಗೆ ಎಡೆಮಾಡಿಕೊಟ್ಟಿದೆ. ಚುನಾವಣಾ ರಾಜಕೀಯ ಕೆಸರಿನಲ್ಲಿ ಹೂತು ಹೋಗಿದ್ದ ಪಕ್ಷವು ಇಂದು ಜೀವತಳೆದು ದಲಿತರಿಗೆ ರಾಜ್ಯಾಧಿಕಾರವನ್ನು ಹಿಡಿಯಲು ಅವಕಾಶವನ್ನು ನಿರಾಕರಿಸುತ್ತಿರುವುದರಿಂದ ನಂತರದ ಲೋಕಸಭಾ ಚುನಾವಣೆಯಲ್ಲಿ ದಲಿತರು ವಿಮುಖರಾದುದ್ದರಿಂದ ಕಾಂಗ್ರೆಸ್ ಪಕ್ಷವು 28 ಸ್ಥಾನದಲ್ಲಿ 9ಕ್ಕೆ ಇಳಿಯಿತು. ದಲಿತರು ಪ್ರವರ್ಧಮಾನಕ್ಕೆ ಬರುತ್ತಿರುವ ಇಂತಹ ಸಂದರ್ಭದಲ್ಲಿ ಇವರ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಯಾವುದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಂದಿಸದೆ ದೂರ ಸರಿಯಿತು. ಈ ವಿದ್ಯಮಾನವನ್ನು ಪೂರ್ವಾಗ್ರಹ ಪೀಡಿತರಾಗದೆ ಅರ್ಥ ಮಾಡಿಕೊಂಡು ರಾಜ್ಯವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಲು ದಲಿತ ಶಕ್ತಿಯನ್ನು ಬಳಸಿಕೊಂಡರೆ ಮಾತ್ರ ಸಾಧ್ಯ ಎನ್ನುವುದು ಪ್ರತಿಯೊಂದು ಸರಕಾರವೂ ಅರ್ಥಮಾಡಿಕೊಳ್ಳಬೇಕು. ಅಧಿಕಾರ ಎಂದಿಗೂ ಶಾಶ್ವತವಲ್ಲ. ಅಲ್ಪಾವಧಿಯ ಅಧಿಕಾರದಲ್ಲಿ ದಲಿತರೂ ಕೂಡ ಪಾಲುದಾರರಾಗಿರುವುದರಿಂದ ದೊರಕುವ ಅನುಕೂಲಗಳ ಬಗ್ಗೆ ಅವರಿಗೂ ಆಸೆ ಆಕಾಂಕ್ಷೆಗಳಿವೆ. ಮುಂಬರುವ ಚುನಾವಣೆಗಳಲ್ಲಿ ಪಡೆಯುವ ಲಾಭದ ಸಾಧ್ಯತೆಗಳನ್ನು ಮನಗಂಡು ದಲಿತರಿಗೆ ಒಂದು ಅವಧಿಗೆ ಮುಖ್ಯಮಂತ್ರಿ ಸ್ಥಾನ ವನ್ನೂ ನೀಡಿದ್ದರೆ ಇಂತಹ ಅವಘಡಗಳು ಸಂಭವಿಸುತ್ತಿರಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಾಧಿಕಾರವು ಪ್ರತಿಯೊಬ್ಬರ ಹಕ್ಕು ಅದನ್ನು ಕೆಲವೊಂದು ಸಮುದಾಯಗಳಿಗೆ ಸೀಮಿತ ಮಾಡಿಕೊಳ್ಳುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವಂತಹ ವಿಚಾರ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾದ ನೀತಿಯಾಗಿದೆ. ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಸುದೀರ್ಘವಾದ 64 ವರ್ಷಗಳ ಇತಿಹಾಸದಲ್ಲಿ ದಲಿತರು ಕೇವಲ ನಾಲ್ಕು ರಾಜ್ಯಗಳಲ್ಲಿ ಮುಖ್ಯಮಂತ್ರಿ ಪೀಠವನ್ನು ಏರಿದ್ದರು. ಆಂಧ್ರಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ ಮತ್ತು ಬಿಹಾರ. ಆದರೆ ಕರ್ನಾಟಕ ರಾಜ್ಯದಲ್ಲಿ ಇದು ಸಾಧ್ಯವಾಗಿಲ್ಲ ಏಕೆ? ಈ ಬಗ್ಗೆ ಬೆಳೆಯುತ್ತಿರುವ ದಲಿತರ ಸಮರ್ಥನೆಯು ಹಲವಾರು ಕಡೆ ಚಳವಳಿಯ ರೂಪವನ್ನೇ ಪಡೆದು ಗಲಭೆಗಳಿಗೆ ಕಾರಣವೂ ಆಯ್ತು. ದಲಿತರ ಮನಸ್ಸಿನೊಳಗೆ ಪುಟಿದೇಳುತ್ತಿರುವ ಆಸೆಗಳನ್ನು ಭಗ್ನಗೊಳಿಸುತ್ತಿರುವುದು ಸರಿಯಲ್ಲ. ದಲಿತರ ಪುನಶ್ಚೇತನಕ್ಕಿದ್ದ ಒಂದಲ್ಲ ಎರಡು ಬಾರಿ ಸದಾವಕಾಶವು ಕೈತಪ್ಪಿ ಹೋಯಿತು. ನಿಜಕ್ಕೂ ಇದು ಆಂತರಿಕ ಭಿನ್ನಮತಕ್ಕೆ ಮೂಲ ಕಾರಣವಾಯ್ತು. ಇಂತಹ ಭಿನ್ನಮತ ಕೊರಟಗೆರೆ ವಿಧಾನಸಭೆ ಚುನಾವಣೆಯಲ್ಲೇ ಸಾಬೀತಾಯಿತು. ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಮುಂದೆ ಕೊಂಡೊಯ್ಯಬೇಕಾದ ಸಮಾಜವಾದವನ್ನು ಅರ್ಥೈಸು ವವರು ಭಾಗಶಃ ತಾವೇ ಸೃಷ್ಟಿಸಿಕೊಂಡ ರಾಜಕೀಯ ಬಿರುಗಾಳಿಯ ಸನ್ನಿವೇಶಕ್ಕೆ ಸಿಲುಕಿಕೊಂಡು ಬೇರೆಯವರ ಮೇಲೆ ತಪ್ಪನ್ನು ಹೊರಿಸುತ್ತಿದ್ದಾರೆ. ಇದು ದಲಿತರನ್ನು ಮತ್ತು ಅವರ ಮಾರ್ಗವನ್ನು ವಿಕೃತಗೊಳಿಸುವ ಪ್ರವೃತ್ತಿಯ ಮತ್ತೊಂದು ಮುಖವಾಡವೆಂದೇ ಹೇಳಬಹುದು.
ಮತ್ತೊಂದು ವಿಚಾರವನ್ನು ಈ ಸಂದರ್ಭದಲ್ಲಿ ಹೇಳಲೇಬೇಕಾಗಿದೆ. ದಲಿತ ರಾಜಕಾರಣವು ರಾಜಕೀಯದ ಹಿಂಬಾಗಿಲಿನಿಂದ ಒಳನುಸುಳುವ ಅಪಾಯದ ಸ್ಥಿತಿಯನ್ನು ತಂದೊಡ್ಡಿ ದಲಿತ ಸಮುದಾಯವನ್ನು ಕಡೆಗಣಿಸಿ ಅರ್ಥಹೀನವಾದ ತೀರ್ಮಾನವನ್ನು ತೆಗೆದುಕೊಂಡಿದ್ದರಿಂದ ಅವರಿಗೆ ಮುಳುವಾಯಿತು. ಈ ಬಗ್ಗೆ ದಲಿತ ಸಂಘಟನೆಗಳಾಗಲೀ, ದಲಿತ ಸಾಹಿತಿ ಅಥವಾ ಬುದ್ಧಿಜೀವಿಗಳಾಗಲೀ ಪ್ರತಿರೋಧವನ್ನು ಒಡ್ಡುವ ತೊಂದರೆಯನ್ನೇ ತೆಗೆದುಕೊಳ್ಳಲಿಲ್ಲ ಎಂಬುದು ಗಮನಾರ್ಹ. ಇದು ನಿಜಕ್ಕೂ ಆತಂಕದ ಸಂಗತಿ. ದಲಿತ ರಾಜಕೀಯ ಅಸ್ಥಿರತೆ ಮತ್ತು ದಲಿತರ ರಾಜಕೀಯ ಛಿದ್ರೀಕರಣವೇ ಇದಕ್ಕೆ ಮತ್ತೊಂದು ಕಾರಣವಾಗಿದೆ. ಕೆಲವು ರಾಜಕಾರಣಿಗಳು ‘ಅಹಿಂದ ಸಂಘಟನೆ’ ಎಂಬ ಭ್ರಮಾತ್ಮಕವಾದ ಸಂಘಟನೆಯ ರಾಜ್ಯಾಧ್ಯಕ್ಷರಾಗಿದ್ದವರು ದಲಿತ ಸಮುದಾಯದ ವಿರುದ್ಧ ಸದಾ ಮಾಡುವ ಆರೋಪಗಳು ದೋಷಾರೋಪಣೆ ಮತ್ತು ಅಪಪ್ರಚಾರಕ್ಕೆ ಇಳಿದಿರುವುದು ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ದುರದೃಷ್ಟಕರವಾಗಿದೆ. ಇವೆಲ್ಲವೂ ಅವಗುಣಗಳಾಗಿದ್ದರೂ ಅದರ ಪ್ರಾಮುಖ್ಯತೆಯನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇಂದಿನ ಹಾಗೂ ಮುಂದಿನ ರಾಜಕೀಯ ದಿಕ್ಕು ದೆಸೆಗಳಿಗೆ ಅದು ಸೂಚನೆ ನೀಡುವಂತಿದೆ. ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ದಲಿತರ ನಿಲುವು ಬದಲಾಗಿದೆ. ಇದನ್ನು ವಿರೋಧಿಸುವವರು ಅರ್ಥಮಾಡಿಕೊಂಡು ಮೊದಲು ಸರಿಪಡಿಸಿಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವವಿದೆ ಎನ್ನುವವರು ದಲಿತರಿಗೆ ರಾಜ್ಯಾಧಿಕಾರ ಸ್ಥಾನ ನೀಡಿ. ಅದೇ ಸಾಮಾಜಿಕ ನ್ಯಾಯದ ಪರಿಕಲ್ಪನೆ. ಅಧಿಕಾರಕ್ಕೋಸ್ಕರ, ಅದನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಹಂಬಲಿಸುವವರು ರಾಜಕೀಯ ಜೀವನದಲ್ಲಿ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಈ ಅಧಿಕಾರದ ಆಟ ರಾಜ್ಯವನ್ನು ಇನ್ನಷ್ಟು ವಿಷಮಗೊಳಿಸುತ್ತದೆ ಎನ್ನುವುದಂತೂ ಖಚಿತ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s