ಕೇಸರೀಕರಣ: ಮೋದಿ ಸರಕಾರದ ರಹಸ್ಯ ಕಾರ್ಯಸೂಚಿ

ಅಂಕಣ

ಕೇಸರೀಕರಣ: ಮೋದಿ ಸರಕಾರದ ರಹಸ್ಯ ಕಾರ್ಯಸೂಚಿ

(ಕೃಪೆ: ವಾರ್ತಾಭಾರತಿ, ಸೋಮವಾರ – ಜೂನ್ -16-2014)

ಕೇಸರೀಕರಣ: ಮೋದಿ ಸರಕಾರದ ರಹಸ್ಯ ಕಾರ್ಯಸೂಚಿ

* ಪ್ರಫುಲ್ ಬಿದ್ವಾಯಿ

ಇಂದು ಎರಡು ವಿಭಿನ್ನ ವಿದ್ಯಮಾನಗಳು ಏಕಕಾಲದಲ್ಲಿ ಅನಾವರಣಗೊಳ್ಳುತ್ತಿವೆ. ‘‘ನನಗೆ ಮತ ನೀಡದವರೂ ಸೇರಿದಂತೆ ಎಲ್ಲ ಭಾರತೀಯರಿಗೂ ನಾನು ಪ್ರಧಾನಿಯಾಗಿರುವೆ’’ ಎಂದು ನರೇಂದ್ರ ಮೋದಿ ಘೋಷಿಸುತ್ತಾರೆ, ಹಾಗೂ ತನ್ನ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ನೆರೆಹೊರೆಯ ದೇಶಗಳ ನಾಯಕರನ್ನು ಆಹ್ವಾನಿಸುತ್ತಾರೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಂಸತ್‌ನ ಜಂಟಿ ಅಧಿವೇಶನ ವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೂತನ ಸರಕಾರವು ಧಾರ್ಮಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಬದ್ಧವಾಗಿದೆಯೆಂದು ವಾಗ್ದಾನ ನೀಡುತ್ತಾರೆ.ಉತ್ತರಪ್ರದೇಶದ ಬದೌನ್‌ನಲ್ಲಿ ಇಬ್ಬರು ದಲಿತ ಬಾಲಕಿಯರನ್ನು ದುಷ್ಕರ್ಮಿಗಳು ಅತ್ಯಾಚಾರಗೈದು, ಆನಂತರ ಅವರನ್ನು ನೇಣುಬಿಗಿದು ಹತ್ಯೆಗೈದ ಘಟನೆಯನ್ನು ಗೃಹ ಸಚಿವ ರಾಜ್‌ನಾಥ್ ಸಿಂಗ್ ಖಂಡಿಸುತ್ತಾರೆ.
ಎರಡನೆ ವಿದ್ಯಮಾನದಲ್ಲಿ, ದೇಶಾದ್ಯಂತ 12ಕ್ಕೂ ಅಧಿಕ ಕೋಮುಗಲಭೆಗಳು ಭುಗಿ ಲೆದ್ದಿವೆ. ಪುಣೆಯಲ್ಲಿ ಹಿಂದೂ ರಾಷ್ಟ್ರ ಸೇನಾದ ಕಾರ್ಯಕರ್ತರು ಯುವ ಮುಸ್ಲಿಂ ಐಟಿ ಉದ್ಯೋಗಿ ಯೊಬ್ಬರನ್ನು ಬರ್ಬರವಾಗಿ ಥಳಿಸಿ ಕೊಂದಿದ್ದಾರೆ. ವಿವೇಕಾನಂದ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಮುಂದಾಳು, ಕಟ್ಟಾ ಹಿಂದುತ್ವವಾದಿ ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಖ್ಯಾತ ಗಾಯಕಿ ಶುಭಾ ಮುದ್ಗಲ್‌ಗೆ ಅಮೆರಿಕದಲ್ಲಿ ಮೋದಿ ಬೆಂಬಲಿಗರು ಧಮಕಿ ಹಾಕಿದ್ದಾರೆ.
ಈ ಹಿಂದೆಂದಿಗಿಂತಲೂ ಮತದಾರರನ್ನು ಜಾತಿ, ಧರ್ಮ ಹಾಗೂ ವರ್ಗದ ಆಧಾರದಲ್ಲಿ ಧ್ರುವೀಕರಣಗೊಳಿಸಿ ನಡೆಸಿದ ಚುನಾವಣೆಯಲ್ಲಿ ಮೋದಿ ಜಯಭೇರಿ ಬಾರಿಸಿದರು. ಗುಜರಾತ್ ಮಾದರಿಯ ಅಭಿವೃದ್ಧಿ ಎಂಬ ಬಿಜೆಪಿಯ ಚುನಾವಣಾ ಘೋಷಣೆಯ ಹಿಂದೆಯೂ ಬಹು ಸಂಖ್ಯಾತವಾದ ಅಡಗಿದೆ ಹಾಗೂ ಮುಸ್ಲಿಮರನ್ನು ಎರಡನೆ ದರ್ಜೆಯ ನಾಗರಿಕರನ್ನಾಗಿ ದೀರ್ಘ ಸಮಯದಿಂದ ನಡೆಸಿದ ದಮನದ ಧ್ವನಿಯಿದೆ.
ಗುಜರಾತ್‌ನ ಮಾದರಿಯ ಅಭಿವೃದ್ಧಿಯು ಸಮಾನತೆ ರಹಿತವಾದ ಅತ್ಯಂತ ಅಸಮತೋಲನ ದಿಂದ ಕೂಡಿದ್ದಾಗಿದೆ. ಆದರೆ ಗುಜರಾತ್ ಮಾದರಿ ಅಭಿವೃದ್ಧಿಯ ಬಗ್ಗೆ ಎಷ್ಟು ಅಬ್ಬರದ ಪ್ರಚಾರ ಮಾಡಲಾಗಿದೆಯೆಂದರೆ ಭಾರತದಾದ್ಯಂತ ಸಿಎಸ್‌ಡಿಎಸ್-ಲೋಕ ನೀತಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪಾಲ್ಗೊಂಡ 22 ಸಾವಿರ ಜನರಲ್ಲಿ ಶೇ.64ರಷ್ಟು ಮಂದಿ ಗುಜರಾತನ್ನು ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವೆಂದು ಗುರುತಿಸಿದ್ದಾರೆ.
ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗ ವಹಿಸಲು ಸಾರ್ಕ್ ನಾಯಕರಿಗೆ ಮೋದಿ ಆಹ್ವಾನ ನೀಡಿರುವುದು ಸಂಪೂರ್ಣವಾಗಿ ಸಾಂಕೇತಿಕ ವಾದುದಾಗಿದೆ. ಬಿಜೆಪಿಯ ಮಿಲಿಟರಿವಾದಿ ಹಾಗೂ ನೆರೆಹೊರೆ ದೇಶಗಳ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸುವ ಇರಾದೆಯ ಮುಂದೆ ಸಾರ್ಕ್ ದೇಶಗಳ ನಾಯಕರ ಮುಂದೆ ಪ್ರದರ್ಶಿಸಲಾದ ಈ ಢಂಬಾಚಾರದ ಸೌಹಾರ್ದತೆಯು ಎಂದೂ ಹೊಂದಾಣಿಕೆಯಾಗಲಾರದು.
ಸಂವಿಧಾನದ 370ನೆ ವಿಧಿಯನ್ನು ರದ್ದುಪಡಿಸ ಬೇಕೆಂಬ ಸಚಿವರೊಬ್ಬರ ಘೋಷಣೆಯು ಇದಕ್ಕೆ ಸಾಕ್ಷಿಯಾಗಿದೆ. ನೆರೆಹೊರೆಯ ದೇಶಗಳ ಬಗ್ಗೆ ಅಜಿತ್ ಧೋವಲ್‌ರ ಅಸಹನೆ ಎಲ್ಲರಿಗೂ ತಿಳಿದಿದೆ. ಭಾರತದ ಭದ್ರತೆಗೆ ಅಪಾಯವೆಂಬಂತಹ ರೀತಿಯಲ್ಲಿ ಅವರು ನೆರೆಹೊರೆಯ ದೇಶಗಳನ್ನು ನೋಡುತ್ತಿದ್ದಾರೆ.
ಸಂವಿಧಾನದ 370ನೆ ವಿಧಿ, ರಾಮಮಂದಿರ ಹಾಗೂ ಸಮಾನನಾಗರಿಕ ಸಂಹಿತೆ ಬಗ್ಗೆ ಬಿಜೆಪಿ ಪ್ರಣಾಳಿಕೆ ಸ್ಪಷ್ಟ ನಿಲುವನ್ನು ಹೊಂದಿದೆ.ಆರೆಸ್ಸೆಸ್ ನಾಯಕ ಎಂ.ಜಿ.ವೈದ್ಯ ಕೂಡಾ ಈ ಬೇಡಿಕೆಗಳನ್ನು ಈಗಾಗಲೇ ಪುನರುಚ್ಚರಿಸಿದ್ದಾರೆ. ಮೋದಿಯ ಸಂಪುಟದತ್ತ ದೃಷ್ಟಿ ಹಾಯಿಸಿದರೆ, ಅದು ಹಿಂದುತ್ವವಾದಿ ನವ ಉದಾರವಾದಕ್ಕೆ ಪೂರಕವಾಗಿರುವ ಹಾಗೆ ಕಾಣುತ್ತದೆ. ಮುಝಫ್ಫರ್‌ನಗರ ಹಿಂಸಾಚಾರಕ್ಕೆ ಉತ್ತೇಜನ ನೀಡಿದವರು, ಜಾತಿವಾದದ ಜೊತೆ ಕೋಮುವಾದವನ್ನು ಬೆರಸಿ ರಾಜಕೀಯ ಬೇಳೆ ಬೇಯಿಸಿದವರು ಇಲ್ಲಿ ಪ್ರಭಾವಶಾಲಿಗಳಾಗಿದ್ದಾರೆ.
‘ಮೋದಿ 2’ ಎಂಬ ಹೊಸ ಬ್ರಾಂಡ್‌ನಡಿ ಬಿಜೆಪಿಯು ಸೌಮ್ಯವಾದಿಯಾಗಿ ಬದಲಾಗಿದೆ ಯೆಂಬ ಚಿಂತನೆಯನ್ನು ಈ ವಿದ್ಯಮಾನಗಳು ಸಂಪೂರ್ಣವಾಗಿ ಅಲ್ಲಗಳೆಯುತ್ತವೆ.
2002ರಲ್ಲಿ ಗುಜರಾತ್‌ನಲ್ಲಿ ನಡೆದ ಮುಸ್ಲಿಮರ ನರಮೇಧಕ್ಕೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುವ ತನಕ ಹಾಗೂ ಈ ಭೀಕರ ಹಿಂಸಾಚಾರದ ಪಾತಕಿಗಳನ್ನು ರಕ್ಷಿಸುವುದನ್ನು ಹಾಗೂ ಪುರಸ್ಕರಿಸುವ ಬದಲಿಗೆ ಅವರನ್ನು ವಿಚಾರಣೆಗೊಳಪಡಿಸುವ ತನಕ‘‘ ಮೋದಿ 2:00’’ ಆಗಲು ಸಾಧ್ಯವೇ ಇಲ್ಲ.
ರಾಷ್ಟ್ರೀಯ ಮಟ್ಟದಲ್ಲಿ ಅಧಿಕಾರ ವಹಿಸಿ ಕೊಂಡಾಕ್ಷಣವೇ ಬಿಜೆಪಿಯು ಸೌಮ್ಯವಾದಿ ಯಾಗಿ ಬಿಡುತ್ತದೆ ಎಂದುಕೊಳ್ಳುವುದು ತಪ್ಪಾಗುತ್ತದೆ. ಯಾಕೆಂದರೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದ ಆರೆಸ್ಸೆಸ್, ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮೋದಿಯನ್ನು ಅಸ್ತ್ರವಾಗಿ ಬಳಸಿಕೊಳ್ಳಲಿದೆ. ನೂತನ ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೊಳಿಸಲು ಆರೆಸ್ಸೆಸ್ ತಾನು ಪ್ರತಿಪಾದಿಸುತ್ತಿರುವ ಸ್ವದೇಶಿ ಆರ್ಥಿಕತೆಯನ್ನು ಕೈಬಿಡಬಹುದು. ಆದರೆ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ಬಿಜೆಪಿಯು ಹಿಂದುತ್ವದ ಬಗೆಗಿನ ಬದ್ಧತೆಯನ್ನು ತ್ಯಜಿಸಲು ಆರೆಸ್ಸೆಸ್ ಎಂದೂ ಅವಕಾಶ ನೀಡದು.
1998-2004ರ ಅವಧಿಯಲ್ಲಿ ಬಿಜೆಪಿಗೆ ಬಹುಮತದ ಕೊರತೆ ಇದ್ದಾಗ, ಆರೆಸ್ಸೆಸ್ ದೇಶದಲ್ಲಿ ಅಧ್ಯಕ್ಷೀಯ ಆಡಳಿತ ಪದ್ಧತಿಯನ್ನು ಜಾರಿಗೊಳಿಸಬೇಕೆಂಬ ತನ್ನ ನಿಲುವನ್ನು ಪ್ರಬಲವಾಗಿ ಮಂಡಿಸಿತ್ತು. ಶಿಕ್ಷಣದ ಹಾಗೂ ಸಂಸ್ಕೃತಿಯ ಕೇಸರಿಕರಣಕ್ಕೂ ಸಾಧ್ಯವಿರುವುದೆಲ್ಲವನ್ನೂ ಮಾಡಿತ್ತು. ದೇಶದ ಅಧಿಕಾರವ್ಯವಸ್ಥೆಯ ನೇಮಕಾತಿಗಳಲ್ಲಿ ಸಂಘಪರಿವಾರದ ಬೆಂಬಲಿಗರೇ ಆಯ್ಕೆಯಾಗುವಂತೆ ಅದು ಶ್ರಮಿಸಿತು. ವಿಶ್ವ ಹಿಂದೂ ಪರಿಷತ್‌ಗೂ ಅದು ಪುನಃಶ್ಚೇತನ ನೀಡಿತು. ಬಿಜೆಪಿಯಲ್ಲಿರುವ ಎಲ್ಲಾ ಮಹತ್ವದ ಹುದ್ದೆಗಳನ್ನು ಆರೆಸ್ಸೆಸ್ ಸದಸ್ಯರೇ ಆಕ್ರಮಿಸಿಕೊಂಡರು. ಇದೀಗ ಆರೆಸ್ಸೆಸ್ 1925ರಿಂದೀಚೆಗೆ ತಾನು ಕನಸು ಕಾಣುತ್ತಿರುವ ಹಿಂದೂ ಪಾರಮ್ಯವಾದವನ್ನು ಅನು ಷ್ಠಾನಗೊಳಿಸಲು ಖಂಡಿತವಾಗಿಯೂ ಯತ್ನಿಸಲಿದೆ. ಉದಾರವಾದಿಗಳು ಏನೇ ಹೇಳಲಿ, ಬಿಜೆಪಿಯು ತನ್ನ ಹಿಂದುತ್ವ ಅಜೆಂಡಾವನ್ನು ಬಿಟ್ಟುಕೊಡುವುದು ಅಸಾಧ್ಯ.
(ಲೇಖಕ ಪ್ರಫುಲ್ ಬಿದ್ವಾಯಿ ಅವರು ಖ್ಯಾತ ಬರಹಗಾರ, ಅಂಕಣಕಾರ ಹಾಗೂ ದಿಲ್ಲಿಯ ಸಾಮಾಜಿಕ ಅಭಿವೃದ್ಧಿ ಮಂಡಳಿಯಲ್ಲಿ ಪ್ರೊಫೆಸರ್ ಆಗಿದ್ದಾರೆ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s