ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

ಅಂಕಣ

ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

(ಕೃಪೆ : ವಾರ್ತಾಭಾರತಿ, ಶನಿವಾರ – ಜೂನ್ -21-2014)

 ಸಮಾನ ನಾಗರಿಕ ಸಂಹಿತೆ ಎಷ್ಟು ಮತ್ತು ಹೇಗೆ ಸಮಾನ?

ಹಸನ್ ಕಮಲ್

2004 ರಲ್ಲಿ ಲೋಕಸಭಾ ಚುನಾವಣಾ ದಿನಾಂಕಗಳನ್ನು ಪ್ರಕಟಿಸಲಾಗಿತ್ತು. ತನ್ನ ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ಲಾಲ್‌ಕೃಷ್ಣ ಅಡ್ವಾಣಿ ಘೋಷಿಸಿದ್ದರು. ಹಾಗೆ ನೋಡಿದರೆ ಈ ಘೋಷಣೆ 1999ರಲ್ಲೂ ಕೇಳಿ ಬಂದಿತ್ತು. ಆದರೆ, ಎನ್‌ಡಿಎಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಅದನ್ನು ಯಾಕೆ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು ಎಂಬುದು ಯಾರಿಗೂ ಗೊತ್ತಿಲ್ಲ.
ಅದೇನೇ ಇರಲಿ. ಅಡ್ವಾಣಿಯ ಘೋಷಣೆಯನ್ನು ಕೇಳಿದ ನಾವು ಕೆಲವರು ಅವರಿಗೆ ಟೆಲಿಗ್ರಾಂ ಮೂಲಕ ಸಂದೇಶವೊಂದನ್ನು ಕಳುಹಿಸಿದ್ದೆವು. ಸಮಾನ ನಾಗರಿಕ ಸಂಹಿತೆಯ ಬಗ್ಗೆ ಕರಡು ಅಥವಾ ನೀಲನಕ್ಷೆ ಸಿದ್ಧಪಡಿಸಲಾಗಿದ್ದರೆ ನಮಗೆ ಅದರ ಬಗ್ಗೆ ತಿಳಿಸಬೇಕು ಹಾಗೂ ಅದರ ಬಗ್ಗೆ ಮಾತನಾಡಲು ನಾವು ಸಿದ್ಧರಿದ್ದೇವೆ ಎಂಬ ಸಂದೇಶ ಅದಾಗಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಹಿತಾಸಕ್ತಿಯ ಯಾವುದೇ ವಿಷಯದಲ್ಲಿ ಚರ್ಚೆ ಮತ್ತು ಅಭಿಪ್ರಾಯ ವಿನಿಮಯದ ಬಳಿಕವಷ್ಟೆ ಯಾವುದೇ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆದರೆ ನಮಗೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅಷ್ಟೇ ಅಲ್ಲ, ಆ ಬಳಿಕ ಇಡೀ ಚುನಾವಣಾ ಪ್ರಚಾರದ ವೇಳೆ ಸಮಾನ ನಾಗರಿಕ ಸಂಹಿತೆಯ ಸೊಲ್ಲು ಮತ್ತೊಮ್ಮೆ ಕೇಳಲಿಲ್ಲ.
ಈ ಬಾರಿ ಬಿಜೆಪಿಯ ಭರ್ಜರಿ ವಿಜಯದ ಬಳಿಕ ಈ ಘೋಷಣೆ ಮತ್ತೊಮ್ಮೆ ಪ್ರತಿಧ್ವನಿಸುತ್ತಿದೆ. ಈ ವಿಷಯದಲ್ಲಿ ಮಗುವಿನಂತೆ ಪ್ರತಿಕ್ರಿಯಿಸುವುದು ಅಪ್ರಬುದ್ಧತೆಯಾಗುತ್ತದೆ ಮತ್ತು ಅತಾರ್ಕಿಕವಾಗುತ್ತದೆ. ನಿನ್ನ ಮೂಗನ್ನು ಕಾಗೆ ಕಚ್ಚಿಕೊಂಡು ಹೋಗಿದೆ ಎಂದು ಮಗುವಿಗೆ ಹೇಳಿದರೆ ಅದು ತನ್ನ ಮೂಗನ್ನು ಸವರಿ ನೋಡದೆ ಕಾಗೆಯ ಹಿಂದೆ ಓಡುತ್ತದೆ. ಹಾಗಾಗಿ, ಸಮಾನ ನಾಗರಿಕ ಸಂಹಿತೆಯ ಘೋಷಣೆಯನ್ನು ಕೂಗುವವರಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುವುದು ಬುದ್ಧಿವಂತಿಕೆಯಾಗುತ್ತದೆ- ನಿಮ್ಮ ಸಮಾನ ನಾಗರಿಕ ಸಂಹಿತೆಯ ಕಲ್ಪನೆಯೇನು? ನೀವು ಸಮಾನ ನಾಗರಿಕ ಸಂಹಿತೆಯ ನೀಲ ನಕಾಶೆಯನ್ನು ಸಿದ್ಧಪಡಿಸಿರುವಿರಾ?
ಸಿದ್ಧಪಡಿಸಿದ್ದಾರೆ ಎಂದಾದರೆ, ಅಧ್ಯಯನ ಮತ್ತು ಪರಿಶೀಲನೆಗಾಗಿ ಅದನ್ನು ಬಹಿರಂಗಪಡಿಸಬೇಕು ಹಾಗೂ ಆ ಮೂಲಕ ಅದರ ಯಾವ ವಿಧಿ ಅಥವಾ ವಿಧಿಗಳು ಪ್ರತಿಯೊಬ್ಬರಿಗೂ ಸ್ವೀಕಾರಾರ್ಹ ಮತ್ತು ಯಾವುದು ಸ್ವೀಕಾರಾರ್ಹವಲ್ಲ ಹಾಗೂ ಅವುಗಳು ಯಾರಿಗೆ ಅಸ್ವೀಕಾರಾರ್ಹವಾಗಿವೆ ಮತ್ತು ಯಾಕೆ ಎಂಬುದನ್ನು ನಿರ್ಧರಿಸಬೇಕಾಗಿದೆ.
ಇಂತಹ ವಿಧಾನಗಳನ್ನು ಅನುಸರಿಸದೆ ಒಮ್ಮೆಲೆ ಆಕ್ರೋಶಗೊಳ್ಳುವುದು ಹಾಗೂ ಕೋಪದ ಕೈಗೆ ಬುದ್ಧಿಯನ್ನು ಒಪ್ಪಿಸುವುದೆಂದರೆ ಈ ಘೋಷಣೆಗಳನ್ನು ಹೊರಡಿಸಿದವರು ನಮಗಾಗಿ ತೋಡಿದ ಹೊಂಡದಲ್ಲಿ ನಾವೇ ಕಣ್ಣು ಮುಚ್ಚಿಕೊಂಡು ಹೋಗಿ ಬಿದ್ದಂತೆ. ಅವರಿಗೆ ಬೇಕಾಗಿರುವುದೂ ಅದೇ!
ಸಮಾನ ನಾಗರಿಕ ಸಂಹಿತೆ ಕೌಟುಂಬಿಕ ಕಾನೂನುಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಮೊದಲು ನಾವು ತಿಳಿದುಕೊಳ್ಳಬೇಕಾಗಿದೆ. ಅದು ಮದುವೆ, ವಿಚ್ಛೇದನೆ ಮತ್ತು ಪಿತ್ರಾರ್ಜಿತ ಆಸ್ತಿ ವಿಭಜನೆಗೆ ಮಾತ್ರ ಸಂಬಂಧಿಸಿಲ್ಲ. ಇದು ಹಲವು ಲೌಕಿಕ ವ್ಯವಹಾರಗಳನ್ನೂ ಒಳಗೊಂಡ ವಿಶಾಲ ವ್ಯಾಪ್ತಿಯ ಕಾನೂನು ವಿಷಯವಾಗಿದೆ. ಸಮಾನ ನಾಗರಿಕ ಸಂಹಿತೆ ಗುರಿಯಿರಿಸಿರುವುದು ಕೇವಲ ಮುಸ್ಲಿಮರು ಮತ್ತು ಅವರ ಧಾರ್ಮಿಕ ಆಚರಣೆಗಳನ್ನು ಮಾತ್ರ ಹಾಗೂ ಇತರರ ಮೇಲೆ ಇದು ಪರಿಣಾಮ ಬೀರುವುದಿಲ್ಲ ಎಂದು ಭಾವಿಸುವುದೂ ತಪ್ಪು. ಸಮಾನ ನಾಗರಿಕ ಸಂಹಿತೆಯ ವಿರುದ್ಧ ಬೇರೆ ಯಾವುದೇ ಸಮುದಾಯ ಧ್ವನಿಯೆತ್ತದಿರುವುದರಿಂದ ತಮ್ಮ ಭಾವನೆಗಳಿಗೆ ಘಾಸಿ ಮಾಡಲು ಮಾತ್ರ ಈ ಕುರಿತ ಮಾತುಗಳನ್ನು ಆಡಲಾಗುತ್ತಿದೆ ಎಂಬುದಾಗಿ ಮುಸ್ಲಿಮರು ಭಾವಿಸುತ್ತಾರೆ. ಇಂತಹ ಭೀತಿ ಸಂಪೂರ್ಣ ತಪ್ಪೂ ಅಲ್ಲ, ಸಂಪೂರ್ಣ ಸರಿಯೂ ಅಲ್ಲ.
ವಾಸ್ತವವೆಂದರೆ, ಹಿಂದೂ ಸಮುದಾಯದ ಹಲವು ವರ್ಗಗಳು ಸೇರಿದಂತೆ ಪ್ರತೀ ಸಮುದಾಯದ ಮೇಲೆ ಅದು ಪರಿಣಾಮ ಬೀರುತ್ತದೆ. ಇತರರು ಇದರ ವಿರುದ್ಧ ಏನೂ ಮಾತನಾಡುತ್ತಿಲ್ಲ ಯಾಕೆಂದರೆ ಮುಸ್ಲಿಮರು ಇದನ್ನು ಈಗಾಗಲೇ ವಿರೋಧಿಸಿದ್ದಾರೆ, ಹಾಗಾಗಿ ಇತರರು ವಿರೋಧಿಸಬೇಕಾದ ಅಗತ್ಯವಿಲ್ಲವೆಂದೇ? ಪ್ರಚೋದನೆಗೆ ಮುಸ್ಲಿಮರು ಸುಲಭವಾಗಿ ಒಳಗಾಗುತ್ತಾರೆ ಎನ್ನುವುದು ಈ ಘೋಷಣೆ ಪ್ರಿಯರಿಗೆ ಗೊತ್ತು. ಮುಸ್ಲಿಮರು ಆಕ್ರೋಶಗೊಳ್ಳಬೇಕು ಹಾಗೂ ಆ ಮೂಲಕ ‘ನೋಡಿ, ಮುಸ್ಲಿಮರು ನೆಲದ ಕಾನೂನಿಗೆ ಅನುಗುಣವಾಗಿ ಬದುಕಲು ಬಯಸುವುದಿಲ್ಲ’ ಎಂಬುದನ್ನು ಜಗತ್ತಿಗೆ ಹೇಳಲು ತಮಗೆ ಅವಕಾಶ ಸಿಗಬೇಕು ಎನ್ನುವುದೇ ಅವರ ಉದ್ದೇಶ. ಯಾವ ಕಾನೂನಿನ ಬಗ್ಗೆ ಮಾತನಾಡಲಾಗುತ್ತದೆ ಎಂಬ ಬಗ್ಗೆ ಅವರ ಬೆಂಬಲಿಗರಿಗೆ ಅರಿವಿಲ್ಲ. ಆದಾಗ್ಯೂ, ತಾವು ಈ ಕಾನೂನಿಗೆ ಬದ್ಧರಾಗಿ ನಡೆಯುವುದಿಲ್ಲ ಎಂಬುದಾಗಿ ಮುಸ್ಲಿಮರು ಹೇಳುವುದನ್ನು ಅವರು ಕೇಳಿದ್ದಾರೆ. ಸಹಜವಾಗಿಯೇ ಇದು ಅವರ ಮನಸ್ಸಿನಲ್ಲಿ ಮುಸ್ಲಿಮರ ಬಗ್ಗೆ ನಕಾರಾತ್ಮಕ ಅಭಿಪ್ರಾಯವನ್ನು ಸೃಷ್ಟಿಸುತ್ತದೆ. ಇದು ಘೋಷಣೆದಾರರ ಉದ್ದೇಶಕ್ಕೆ ಪೂರಕವಾಗಿರುತ್ತದೆ ಹಾಗೂ ಮುಸ್ಲಿಮರು ಇದರ ಫಲವನ್ನು ಅನುಭವಿಸಬೇಕಾಗುತ್ತದೆ.
ಭಾರತ ಬಹು ಧರ್ಮಗಳ ದೇಶ. ಇಲ್ಲಿ ಒಂದೇ ಧರ್ಮದ ಅನುಯಾಯಿಗಳು ಎಷ್ಟೊಂದು ಭಿನ್ನ ರೀತಿ ರಿವಾಜುಗಳನ್ನು ಹೊಂದಿದ್ದಾರೆಂದರೆ ಒಂದು ಪಂಥದ ಆಚರಣೆ ಇನ್ನೊಂದಕ್ಕಿಂತ ಸಂಪೂರ್ಣ ಭಿನ್ನವಾಗಿರುತ್ತದೆ. ಧರ್ಮ, ಸಮುದಾಯ ಮತ್ತು ವರ್ಗದ ಭಾಗವಾಗಿ ಶತಮಾನಗಳಿಂದ ಆಚರಿಸಿಕೊಂಡು ಬಂದಿರುವ ಸಂಪ್ರದಾಯಗಳು ಮತ್ತು ಕಟ್ಟಳೆಗಳನ್ನು ಮಾನ್ಯ ಮಾಡಬೇಕು ಹಾಗೂ ಅವುಗಳನ್ನು ಹಾಗೇ ಮುಂದುವರಿಯಲು ಬಿಡಬೇಕು ಎನ್ನುವುದು ಇದುವರೆಗಿನ ಒಪ್ಪಿತ ನಿಯಮವಾಗಿದೆ. ಸಮಾನ ನಾಗರಿಕ ಸಂಹಿತೆ ಜಾರಿಯಾದ ಬಳಿಕ ಇದು ಹೀಗೇ ಇರುವುದೆ?
ಉದಾಹರಣೆಗೆ; ಕೇರಳದ ಕೆಲವು ಭಾಗಗಳು ಮತ್ತು ದಕ್ಷಿಣ ಭಾರತದಲ್ಲಿ ಸೋದರ ಮಾವ ಮತ್ತು ಸೊಸೆಯ ನಡುವಿನ ಮದುವೆ ಅತ್ಯಂತ ಒಳ್ಳೆಯದು ಎಂಬುದಾಗಿ ಪರಿಗಣಿಸಲಾಗಿದೆ. ಆದರೆ, ದೇಶದ ಉತ್ತರ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಇದನ್ನು ಅಸಹ್ಯ, ಹೀನ ಹಾಗೂ ಪಾಪವೆಂಬುದಾಗಿ ಪರಿಗಣಿಸಲಾಗಿದೆ. ದೇಶದ ಕೆಲವು ಭಾಗಗಳಲ್ಲಿ ಒಂದೇ ಗೋತ್ರದ ಹುಡುಗ ಮತ್ತು ಹುಡುಗಿಯರ ನಡುವಿನ ವಿವಾಹ ಸಾಮಾಜಿಕ ನಿಷೇಧ ಮತ್ತು ವೈರತ್ವಕ್ಕೆ ಕಾರಣವಾಗುತ್ತದೆ. ಪ್ರಶ್ನೆಯೆಂದರೆ, ಸಮಾನ ನಾಗರಿಕ ಸಂಹಿತೆ ಇಂಥ ಇಂತಹ ಪದ್ಧತಿಯನ್ನು ನಿಷೇಧಿಸುವುದೇ ಅಥವಾ ಇಂತಹ ಮದುವೆಗಳನ್ನು ಎಲ್ಲರಿಗೂ ಮಾನ್ಯ ಮಾಡುವುದೇ? ಸಿಖ್ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಂತೆ ಅಣ್ಣ ಮೃತಪಟ್ಟರೆ ಆತನ ತಮ್ಮ ತನ್ನ ಅಣ್ಣನ ಹೆಂಡತಿಯ ತಲೆಗೆ ಚಾದರ ಹೊದಿಸುತ್ತಾನೆ ಹಾಗೂ ಆ ಮೂಲಕ ಅಣ್ಣನ ಹೆಂಡತಿ ಈಗ ತಮ್ಮನ ಹೆಂಡತಿ ಯಾಗುತ್ತಾಳೆ. ರಾಜೇಂದ್ರ ಸಿಂಗ್ ಬೇಡಿಯ ಕಿರುಕಾದಂಬರಿ ‘ಚಾದರ್ ಏಕ್ ಮೆಲಿ ಸಿ’ ಈ ವಿಷಯಕ್ಕೆ ಸಂಬಂಧಿಸಿದ ಅತ್ಯುತ್ತಮ ಕೃತಿ.
ನಾಗಾಲ್ಯಾಂಡ್‌ನ ಕೆಲವು ಭಾಗಗಳಲ್ಲಿ (ಗರೋ ಬುಡಕಟ್ಟು ಜನಾಂಗೀಯರಲ್ಲಿ) ಪ್ರಚಲಿತದಲ್ಲಿರುವ ಪದ್ಧತಿಯಂತೆ ಮಹಿಳೆಯೊಬ್ಬರ ಗಂಡ ಸತ್ತರೆ ಆಕೆ ತನ್ನ ಹಿರಿಯ ಅಳಿಯನ ಹೆಂಡತಿಯಾಗುತ್ತಾಳೆ. ಕೃಷಿ ಭೂಮಿ ಪಾಲಾಗುವುದನ್ನು ತಡೆಯುವುದಕ್ಕಾಗಿ ಇಂತಹ ಪದ್ಧತಿಗಳು ಚಾಲ್ತಿಗೆ ಬಂದಿವೆ. ಇಂತಹ ವಿಷಯಗಳನ್ನು ಸಮಾನ ನಾಗರಿಕ ಸಂಹಿತೆ ಹೇಗೆ ನಿಭಾಯಿಸುವುದು? ಇಂತಹ ಪದ್ಧತಿಗಳಲ್ಲಿ ಬದಲಾವಣೆ ತರಲು ಹೋದರೆ ಅದರ ಪರಿಣಾಮವೇನಾಗಬಹುದು? ಅಥವಾ ಅವುಗಳನ್ನು ಹಾಗೆಯೇ ಇರಲು ಬಿಟ್ಟರೆ ಅದು ಸಮಾನ ನಾಗರಿಕ ಸಂಹಿತೆಯ ಪ್ರಾಥಮಿಕ ಉದ್ದೇಶದ ಸೋಲಲ್ಲವೇ?
ಕನ್ಯಾದಾನ ಎನ್ನುವುದೂ ಕೂಡ ಶತಮಾನಗಳ ಹಳೆಯ ಪದ್ಧತಿ. ಈ ಪದ್ಧತಿಯಂತೆ ಹುಡುಗಿಯೊಬ್ಬಳ ಮದುವೆ ಸಮಯದಲ್ಲಿ ಗಂಡನಿಗೆ ನೀಡಲಾಗುವ ವರದಕ್ಷಿಣೆ ಆಕೆಯ ಕುಟುಂಬ ಆಕೆಗೆ ನೀಡುವ ಆನುವಂಶಿಕ ಆಸ್ತಿಯ ಅಂತಿಮ ಹಾಗೂ ಪೂರ್ಣ ಪಾಲು ಎಂಬುದಾಗಿ ಪರಿಗಣಿಸಲ್ಪಡುತ್ತದೆ. ಇದರ ಬಳಿಕ ಆಕೆಗೆ ತನ್ನ ಕುಟುಂಬದ ಆಸ್ತಿಯಲ್ಲಿ ಯಾವುದೇ ಪಾಲಿರುವುದಿಲ್ಲ.
ಕೃಷಿ ಭೂಮಿ ಮತ್ತು ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಇತ್ತೀಚಿನವರೆಗೂ ಇಂತಹ ಪದ್ಧತಿ ಮುಸ್ಲಿಮರಲ್ಲಿ ಚಾಲ್ತಿಯಲ್ಲಿತ್ತು. ಇದನ್ನು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ 2004ರಲ್ಲಿ ಶರಿಯಾ ನಿಯಮದಂತೆ ಬದಲಾಯಿಸಿತು. ಜಮೀನುದಾರಿಕೆ ಪದ್ಧತಿ ರದ್ದುಗೊಳ್ಳುವ ಮೊದಲು ಕನ್ಯಾದಾನ ಮತ್ತು ಹುಡುಗಿಯ ಮದುವೆ ಸಮಯದಲ್ಲಿ ವರದಕ್ಷಿಣೆ ಕೊಡುವ ಪದ್ಧತಿಯನ್ನು ಹೋಲುವ ಪದ್ಧತಿ ಮುಸ್ಲಿಮರಲ್ಲೂ ಚಾಲ್ತಿಯಲ್ಲಿತ್ತು. ಸ್ಥಿರಾಸ್ತಿಯ ಶರಿಯತ್ ವಿರೋಧಿ ವಿಭಜನೆಯ ವಿರುದ್ಧ ಕೆಲವು ಮುಸ್ಲಿಮ್ ಸಂಘಟನೆಗಳು ಪ್ರಬಲವಾಗಿ ಪ್ರತಿಭಟಿಸಿದ ಬಳಿಕ ಇದಕ್ಕೆ ತಿದ್ದುಪಡಿ ತರಲಾಯಿತು. ಈಗ ಹಿಂದೂ ಹುಡುಗಿ ಕೂಡ ತನಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಬೇಕೆಂದು ಬಯಸಿದರೆ ಅದನ್ನು ಪಡೆಯಬಹುದು. ಆದರೆ, ಇದನ್ನು ನ್ಯಾಯಾಲಯದ ಮೂಲಕ ಮಾತ್ರ ಪಡೆಯಬಹುದಾಗಿದೆ. ಆದರೆ, ತನ್ನ ಮದುವೆಯ ಬಳಿಕ ತನ್ನ ತಂದೆ-ತಾಯಿಯ ಆಸ್ತಿ ವೌಲ್ಯ ಹೆಚ್ಚಾದರೆ ಅದರ ಪಾಲನ್ನೂ ಹುಡುಗಿ ಪಡೆಯಬಹುದೇ ಎನ್ನುವುದು ಸ್ಪಷ್ಟವಿಲ್ಲ. ಈ ವಿಷಯದಲ್ಲಿ ಸಮಾನ ನಾಗರಿಕ ಸಂಹಿತೆಯ ನಿಲುವು ಏನು?

ಹಣ ಮತ್ತು ನಗದು ರೂಪದಲ್ಲಿರುವ ಹಣವನ್ನು ಸರಿಯಾಗಿ ಪಾಲು ಮಾಡಿಕೊಳ್ಳಲು ಯಾವುದೇ ಸಮಸ್ಯೆಯಿಲ್ಲ. ಆದರೆ, ಕೃಷಿ ಭೂಮಿ ಮತ್ತು ಹಣ್ಣಿನ ತೋಟವನ್ನು ಪಾಲು ವಿಭಜಿಸುವುದೆಂದರೆ ರೈತನ ಸಾವು ಬದುಕಿನ ಪ್ರಶ್ನೆಯಾಗಿರುತ್ತದೆ. ತನ್ನ ಅಳಿಯಂದಿರು ತನ್ನ ಕೃಷಿ ಭೂಮಿಯಲ್ಲಿ ಪಾಲು ಕೇಳುವುದು ಹಾಗೂ ಅವುಗಳನ್ನು ಮಾರಾಟ ಮಾಡುವುದನ್ನು ಓರ್ವ ರೈತ ಸಹಿಸಿಕೊಳ್ಳಲಾರ. ಹಿಂದೆ ಜಾರಿಯಲ್ಲಿದ್ದ ಪದ್ಧತಿಗಳು ಕೃಷಿ ಭೂಮಿಯ ವಿಭಜನೆಯನ್ನು ತಡೆಯುವುದಕ್ಕಾಗಿಯೇ ರೂಪುಗೊಂಡವು. ಇಂತಹ ವಿಷಯಗಳಲ್ಲಿ ಸಮಾನ ನಾಗರಿಕ ಸಂಹಿತೆ ಹಸ್ತಕ್ಷೇಪ ನಡೆಸಿದರೆ ಗಂಭೀರ ಪ್ರತಿಕೂಲ ಪರಿಣಾಮಗಳು ತಲೆದೋರುವುದು ನಿಶ್ಚಿತ.
ಹಾಗಾಗಿ, ಸಮಾನ ನಾಗರಿಕ ಸಂಹಿತೆ ಎನ್ನುವುದು ಕೆಲವರಿಗೆ ಆಕರ್ಷಕವಾಗಿ ಹಾಗೂ ಇತರರಿಗೆ ಮಾರಕವಾಗಿ ಕಾಣಬಹುದು. ಆದರೆ, ವಾಸ್ತವಿಕ ನೆಲೆಗಟ್ಟಿನಲ್ಲಿ ಇಂತಹ ಸಂಹಿತೆಯ ನೆಲೆ ಅಸ್ಥಿರವಾಗಿದೆ ಹಾಗೂ ಅಸ್ಪಷ್ಟವಾಗಿದೆ. ಕೆಲವು ವಿಷಯಗಳನ್ನು ಮಾತ್ರ ಗುರಿಯಿರಿಸಿ ಸಮಾನ ನಾಗರಿಕ ಸಂಹಿತೆಯ ಬಗ್ಗೆ ಮಾತನಾಡಲಾಗುತ್ತಿದೆಯೇ ಅಥವಾ ಎಲ್ಲ ಭಾರತೀಯರನ್ನೂ ಸಮಾನವಾಗಿ ಕಾಣುವ ಇರಾದೆಯಿದೆಯೇ? ಹಾಗಾಗಿ, ಸಮಾನ ನಾಗರಿಕ ನೀತಿ ಸಂಹಿತೆಯ ನೀಲ ನಕಾಶೆಯನ್ನು ಬಹಿರಂಗಪಡಿಸುವಂತೆ ನಾವು ಒತ್ತಾಯಿಸಬೇಕಾಗಿದೆ. ಆ ಬಗ್ಗೆ ಚರ್ಚೆ ನಡೆಯಬೇಕು. ಇದು ಭಾರತದ ಪ್ರತಿ ನಾಗರಿಕನ ಹಕ್ಕು ಹಾಗೂ ಇದನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s