ಇಷ್ಟೊಂದು ಗಾಂಧಿಗಳ ಗದ್ದಲದ ಮಧ್ಯೆ ನಾವು ಮರೆತಿರುವ ಗಾಂಧಿ;ಫಿರೋಝ್!

ಇಷ್ಟೊಂದು ಗಾಂಧಿಗಳ ಗದ್ದಲದ ಮಧ್ಯೆ ನಾವು ಮರೆತಿರುವ ಗಾಂಧಿ;ಫಿರೋಝ್!

ಇಷ್ಟೊಂದು ಗಾಂಧಿಗಳ ಗದ್ದಲದ ಮಧ್ಯೆ ನಾವು ಮರೆತಿರುವ ಗಾಂಧಿ;ಫಿರೋಝ್!

(ಕೃಪೆ: ವಾರ್ತಾಭಾರತಿ, ರವಿವಾರ – ಜುಲೈ -13-2014)

-ಸವಿರಾಜ್
“A mutiny in my mind has compelled me to rise this debate. When things of such magnitude as I shall describe to you later occur, silence become a crime….”

ಪ್ರಶ್ನೋತ್ತರ ವೇಳೆಯಲ್ಲಿ ರಾಯ್‌ಬರೇಲಿ ಕ್ಷೇತ್ರದ ಸಂಸದ ಹೀಗೆ ಘರ್ಜಿಸುತ್ತಿದ್ದರೆ, ಇಡೀ ಲೋಕಸಭೆ ಆತನ ಮಾತು ಗಳನ್ನು ತದೇಕಚಿತ್ತದಿಂದ ಆಲಿಸುತ್ತಿತ್ತು. ಅಸಲಿಗೆ ಆತ ಮಾತ ನಾಡುತ್ತಿದ್ದುದೇ ಅಪರೂಪ. ಆದರೆ ಮಾತನಾಡಲು ನಿಂತಾಗ ಲೆಲ್ಲಾ ಸರಕಾರಿ ಇಲಾಖೆಯೊಂದರ ಹಗರಣವನ್ನೋ, ಅವ್ಯವಸ್ಥೆಯನ್ನೋ ದಾಖಲೆಗಳ ಸಮೇತ ಬಯಲಿಗೆಳೆದು ಸರಕಾರವನ್ನು ಮುಜುಗರಕ್ಕೀಡು ಮಾಡುತ್ತಿದ್ದರು. ಅವರದೇ ಪಕ್ಷದ ಸಂಸದರು ಅವರನ್ನು ಭಯ ಮಿಶ್ರಿತ ಮೆಚ್ಚುಗೆಯಿಂದ ‘dangerously well informed person’  ಎಂದು ಕರೆಯುತ್ತಿದ್ದರು.
ಆವತ್ತು ಅವರು ದನಿಯೆತ್ತಿದ್ದು ‘ಹರಿದಾಸ್ ಮುಂದ್ರಾ’ ಹಗರಣದ ವಿರುದ್ಧ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಸರಕಾರವೇ ಭಾಗಿಯಾಗಿದೆ ಎಂಬ ಆರೋಪ ಬಂದ ಮೊದಲ ಹಗರಣ ಅದು. ಅಷ್ಟೇ ಅಲ್ಲ, ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಭ್ರಷ್ಟಾಚಾರದ ಹೊಣೆ ಹೊತ್ತು ರಾಜೀನಾಮೆ ನೀಡಲು ಕಾರಣವಾದ ಹಗರಣ ಅದು. ಆವತ್ತು ಕೇಂದ್ರದಲ್ಲಿ ಅಧಿಕಾರದಲ್ಲಿದ್ದುದು ಕಾಂಗ್ರೆಸ್ ಪಕ್ಷದ ಸರಕಾರ. ಲೋಕಸಭೆಯಲ್ಲಿ ಹಗರಣವನ್ನು ಎಳೆಎಳೆಯಾಗಿ ತೆರೆದಿಟ್ಟು ಸರಕಾರ ತಲೆತಗ್ಗಿಸುವಂತೆ ಮಾಡಿದ ವ್ಯಕ್ತಿ ವಿರೋಧ ಪಕ್ಷಕ್ಕೆ ಸೇರಿದವರೇನೂ ಆಗಿರಲಿಲ್ಲ, ಬದಲಿಗೆ ಅದೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದ ಸದಸ್ಯ. ಅವರ ಪತ್ನಿ ಆಗ ತಾನೇ ಕಾಂಗ್ರೆಸ್ ಪಕ್ಷದ ಭವಿಷ್ಯದ ನಾಯಕಿ ಎಂದು ಗುರುತಿಸಿಕೊಳ್ಳತೊಡಗಿದ್ದರು. ಯಾವ ಸರಕಾರದ ವಿರುದ್ಧ ಅವರು ಆರೋಪಗಳನ್ನು ಮಾಡುತ್ತಿದ್ದರೋ, ಅವರ ಮಾವ ಆಗ ಅದೇ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿದ್ದರು!!!
ದೇಶ ಮಹಾತ್ಮಾ ಗಾಂಧಿಯನ್ನು ಯಾವತ್ತಿಗೂ ಮರೆಯ ಲಾರದು. ಕಡೇ ಪಕ್ಷ ಅವರು ಕರೆನ್ಸಿ ನೋಟುಗಳಲ್ಲಾದರೂ ಜೀವಂತವಿರುತ್ತಾರೆ. ಇಂದಿರಾ ಗಾಂಧಿಯ ಜನಪ್ರಿಯತೆ ಇವತ್ತಿಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್ ಪಕ್ಷದ ಅತಿ ದೊಡ್ಡ ಓಟ್ ಬ್ಯಾಂಕ್. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹಿಡಿದು, ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯವರೆಗೆ ರಾಜೀವ್ ಗಾಂಧಿಯ ಹೆಸರನ್ನು ಕಾಂಗ್ರೆಸ್ ಪಕ್ಷ ಅಜರಾಮರ ಗೊಳಿಸಿದೆ. ಸೋನಿಯಾ ಗಾಂಧಿ ಇಂದು ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿ. ಫೆೇಸ್‌ಬುಕ್‌ಗೆ ಲಾಗಿನ್ ಆದರೆ ಅಲ್ಲಿ ನಿಮಗೆ ರಾಹುಲ್ ಗಾಂಧಿ ಜೋಕುಗಳಾಗಿ, ಕಾರ್ಟೂನ್‌ಗಳಾಗಿ ಕಾಣಸಿಗುತ್ತಾರೆ. ಮೇನಕಾ ಗಾಂಧಿ ಪ್ರಾಣಿಗಳ ಸಂರಕ್ಷಣೆ ಕುರಿತು ಪತ್ರಿಕೆಗಳಿಗೆ ಬರೆಯುತ್ತಾರೆ. ಹಿಂದೂ ಮೂಲಭೂತ ವಾದಿಗಳ ಪಾಲಿನ ನೀಲಿ ಕಣ್ಣಿನ ಹುಡುಗ ವರುಣ್ ಗಾಂಧಿಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಇವರಲ್ಲಿ ಕನಿಷ್ಠ ಒಬ್ಬರನ್ನಾದರೂ ಪ್ರತೀದಿನವೂ ಒಂದಲ್ಲ ಒಂದು ಕಾರಣಕ್ಕೆ ನೆನಪಿಸಿಕೊಳ್ಳುತ್ತೇವೆ. ಆದರೆ ಯಾರನ್ನು ನಾವಿಂದು ನೆನಪಿಟ್ಟುಕೊಂಡು ಗೌರವಿಸಬೇಕಿತ್ತೋ ಆ ಗಾಂಧಿಯನ್ನು ಮಾತ್ರ ಮರೆತುಬಿಟ್ಟಿದ್ದೇವೆ!
ಅವರು ಫಿರೋಝ್ ಜಹಾಂಗೀರ್ ಗಾಂಧಿ!!
1912ರ ಸೆಪ್ಟಂಬರ್ 8ರಂದು ಮುಂಬೈನ(ಅವತ್ತಿನ ಬಾಂಬೆ) ಖೇತವಾಡಿಯ ನವ್‌ರೋಜಿ ನಾಟಕ್‌ವಾಲಾ ಭವನ್‌ನಲ್ಲಿ ಶ್ರೀಮಂತ ಗುಜರಾತಿ ಪಾರ್ಸಿ ಕುಟುಂಬ ವೊಂದರಲ್ಲಿ ಜನಿಸಿದರು ಫಿರೋಝ್. ಅವರ ತಂದೆ ಜೆಹಾಂಗೀರ್ ಗಾಂಧಿ ಮರೈನ್ ಎಂಜಿನಿಯರ್ ಆಗಿದ್ದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಫಿರೋಝ್ ತಾಯಿ ರತ್ತಿಮೈ ಗಾಂಧಿಯೊಂದಿಗೆ, ತಮ್ಮ ಚಿಕ್ಕಮ್ಮ ಶಿರಿನ್‌ರೊಂದಿಗೆ ವಾಸಿಸಲು ಅಲಾಹಾಬಾದ್‌ಗೆ ತೆರಳಿದರು. ತಾಯಿ ಮತ್ತು ಚಿಕ್ಕಮ್ಮರ ಆರೈಕೆಯಲ್ಲಿ ಬೆಳೆದ ಫಿರೋಝ್ ಆಂಗ್ಲೋ ವರ್ನ್ಯಾಕುಲರ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ, ಎವಿಂಗ್ ಕ್ರಿಶ್ಚಿಯನ್ ಕಾಲೇಜಿನಿಂದ ಪದವಿಯನ್ನು ಪಡೆದು ಮುಂದೆ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು (ಇದೇ ಸಂಸ್ಥೆಯಲ್ಲಿ ನೆಹರೂ ಕೂಡಾ ಅಭ್ಯಾಸ ಮಾಡಿದ್ದರು). ಅಲಹಾಬಾದ್ ನ ಆನಂದ ಭವನಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದ ಗಾಂಧಿ, ಪಟೇಲ್ ಮುಂತಾದ ನಾಯಕರನ್ನು ಹತ್ತಿರದಿಂದ ನೋಡಿ ಅವರ ಪ್ರಭಾವಕ್ಕೆ ಸಿಲುಕಿ ತಮ್ಮ ಹದಿನೆಂಟನೆ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು.
ಒಂದೊಮ್ಮೆ ಫಿರೋಝ್ ತಾಯಿ ರತ್ತಿಮೈ, ಗಾಂಧೀಜಿಯವರನ್ನು ಭೇಟಿ ಯಾಗಿ ತಮ್ಮ ಮಗನಿಗೆ ಹಿಡಿದಿರುವ ಸ್ವಾತಂತ್ರ್ಯ ಹೋರಾಟದ ಹುಚ್ಚು ಬಿಡಿಸಿ, ವಿದ್ಯಾಭ್ಯಾಸದ ಮೇಲೆ ಗಮನ ನೀಡುವಂತೆ ಸಲಹೆ ನೀಡಿ ಎಂದು ಕೇಳಿಕೊಂಡರು. ನಸುನಕ್ಕ ಗಾಂಧಿ, ‘‘ನಿಮ್ಮ ಮಗನ ಕುರಿತು ಯೋಚಿಸ ಬೇಡಿ. ಆತ ಒಬ್ಬ ಮಹಾನ್ ಕ್ರಾಂತಿ ಕಾರಿ. ಫಿರೋಝ್‌ನಂತಹ ಏಳು ಯುವಕರು ಒಂದುಗೂಡಿದರೆ ಸಾಕು, ಭಾರತಕ್ಕೆ ಕೇವಲ ಏಳು ದಿನಗಳಲ್ಲಿ ಸ್ವಾತಂತ್ರ್ಯ ತಂದುಕೊಡುತ್ತಾರೆ’’ ಎಂದಿದ್ದರು!
ಮುಂದೆ ನೆಹರೂ ಕುಟುಂಬಕ್ಕೆ ಹತ್ತಿರವಾದ ಫಿರೋಝ್, ಟಿಬಿ ಖಾಯಿಲೆಯಿಂದ ನರಳುತ್ತಿದ್ದ ನೆಹರೂರ ಪತ್ನಿ ಕಮಲಾ ನೆಹರೂರ ಗೆಳೆಯನಾಗಿ ಜೊತೆಗಿದ್ದರು. ಖಾಯಿಲೆಯ ಕಾರಣದಿಂದ ನೆಹರೂರ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದ ಕಮಲಾರಿಗೆ ಆತ್ಮಬಂಧುವಾಗಿ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಆಕೆ ಸಾಯುವ ದಿನದವರೆಗೆ ಜೊತೆಗಿದ್ದು ಆರೈಕೆ ಮಾಡಿ ಆಕೆಯಲ್ಲಿ ಜೀವನೋತ್ಸಾಹ ತುಂಬಿದರು. ಮುಂದೆ ನೆಹರೂ ಪುತ್ರಿ ಇಂದಿರಾ ಪ್ರಿಯದರ್ಶಿನಿಯನ್ನು ಪ್ರೀತಿಸಿ, 1942ರಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದರು.
1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಆಯ್ಕೆಗೊಂಡ ಫಿರೋಝ್ 1957ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಪುನರಾಯ್ಕೆಯಾದರು. ಇಂದಿರಾ ಗಾಂಧಿಗಿಂತ ಮುಂಚೆಯೇ ರಾಜಕೀಯ ಪ್ರವೇಶಿಸಿದ್ದ ಅವರು ನೆಹರೂಗೆ ನಿಷ್ಠೆ ತೋರಿಸಿದ್ದರೆ, ಅವರ ಉತ್ತರಾಧಿಕಾರಿಯಾಗುವ ಸುವರ್ಣ ಅವಕಾಶವನ್ನು ನಿರಾಯಾಸವಾಗಿ ಗಿಟ್ಟಿಸಿಕೊಳ್ಳಬಹುದಿತ್ತು. ಆದರೆ ಅವರೊಳ ಗಿನ ಪ್ರಾಮಾಣಿಕ ರಾಜಕಾರಣಿ, ನಿರ್ಭೀತ ಪತ್ರಕರ್ತ ಮತ್ತು ಉತ್ಕಟ ದೇಶಪ್ರೇಮ ಅವರನ್ನು ಅಂತಹ ಕೆಳಮಟ್ಟದ ರಾಜಕೀಯಕ್ಕಿಳಿಯಲು ಎಂದಿಗೂ ಬಿಡಲಿಲ್ಲ. ಅವತ್ತಿಗಾಗಲೇ ಕಾಂಗ್ರೆಸ್‌ನ ಉನ್ನತ ನಾಯಕರಿಗೆ ಕಾರ್ಪೊರೇಟ್ ವಲಯದ ಉದ್ಯಮಿಗಳ ಜೊತೆ ಗೆಳೆತನ ಇತ್ತು. ಈ ಉದ್ಯಮಿಗಳಿಂದ ಕಾಂಗ್ರೆಸ್ ತನ್ನ ಚುನಾವಣೆ ಖರ್ಚಿಗೆ ದೇಣಿಗೆಯನ್ನೂ ಪಡೆಯುತ್ತಿತ್ತು.
ಆದರೆ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ನಂಬಿದ್ದ ಫಿರೋಝ್ 1955ರಲ್ಲಿ ದಾಲ್ಮಿಯಾ-ಜೈನ್ ಕಂಪೆನಿಗಳ ಸಮೂಹ ತಾನು ಸ್ಥಾಪಿಸಿದ್ದ ಗ್ವಾಲಿಯರ್ ಬ್ಯಾಂಕ್ ಮತ್ತು ಭಾರತ್ ಇನ್‌ಶ್ಯೂರೆನ್ಸ್ ಕಂಪೆನಿಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ಲಕ್ಷಾಂತರ ರೂಪಾಯಿ ಠೇವಣಿ ಹಣವನ್ನು ತನ್ನ ಖಾಸಗಿ ಒಡೆತನದ ‘ಬೆನೆಟ್ ಮತ್ತು ಕೊಲೆಮನ್’ ಕಂಪೆನಿಯ ಅಭಿವೃದ್ಧಿಗೆ ಹೇಗೆ ಕಾನೂನುಬಾಹಿರವಾಗಿ channelise ಮಾಡುತ್ತಿದೆ ಎಂಬ ವಿವರಗಳನ್ನು ಲೋಕ ಸಭೆಗೆ ನೀಡಿದರು. ಮುಂದೆ ಬಿರ್ಲಾ ಮತ್ತು ಗೋಯೆಂಕಾ (ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಸಮೂಹದ ಗೋಯೆಂಕಾ ಅಲ್ಲ) ಸಮೂಹಗಳ ಇಂಥದೇ ಅನೈತಿಕತೆ ಗಳನ್ನೂ ಬಯಲಿಗೆಳೆದರು. ಒಬ್ಬ investigative journalist ನಂತೆ ಕೆಲಸ ಮಾಡಿದ್ದ ಫಿರೋಝ್ ಈ ಹಗರಣಗಳ ವಿರುದ್ಧ ಎಷ್ಟು ಕರಾರುವಕ್ಕಾಗಿ ಸಾಕ್ಷಿಗಳನ್ನು ಸಂಗ್ರಹಿಸಿದ್ದರೆಂದರೆ ಯಾವ ವಿಚಾರಣಾ ಸಮಿತಿಯನ್ನೂ ನೇಮಿಸದೆ ಕೇವಲ ಎರಡೇ ತಿಂಗಳಲ್ಲಿ ರಾಷ್ಟ್ರಪತಿಗಳು ಸುಗ್ರೀವಾಜ್ಞೆಯೊಂದನ್ನು (ordinance)  ಹೊರಡಿಸಿ  ‘Life Insurance Corporation of India Ltd. (LIC)’ ಹೆಸರಿನ ಅಡಿಯಲ್ಲಿ ಒಟ್ಟು 245 ಖಾಸಗಿ ಇನ್‌ಶ್ಯೂರೆನ್ಸ್ ಕಂಪೆನಿಗಳನ್ನು ರಾಷ್ಟ್ರೀಕರಣಗೊಳಿಸಿದರು.
ಆಗ ಫಿರೋಝ್ ಗಾಂಧಿಯ ವಿರುದ್ಧವೇ ಆರೋಪಗಳು ಕೇಳಿ ಬಂದವು. ಪಾರ್ಸಿ ಸಮುದಾಯಕ್ಕೆ ಸೇರಿದ ಫಿರೋಝ್ ರನ್ನು ಅದೇ ಸಮುದಾಯಕ್ಕೆ ಸೇರಿದ ‘ಟಾಟಾ’ಗಳು ತಮ್ಮ ಪ್ರತಿಸ್ಪರ್ಧಿ ಕಂಪೆನಿಗಳನ್ನು ಹಣಿಯಲು ಏಜೆಂಟ್‌ರಂತೆ ಬಳಸಿಕೊಳ್ಳುತ್ತಿದ್ದಾರೆ. ಟಾಟಾರಿಂದ ಫಿರೋಜ್ ಹಣ ಪಡೆದಿದ್ದಾರೆ ಎಂಬಂತಹ ಆರೋಪಗಳನ್ನು ಮಾಡಲಾಯಿತು. ಇಂತಹ ಮಾತುಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದ ಫಿರೋಝ್ ಕೆಲವೇ ದಿನಗಳಲ್ಲಿ ಟಾಟಾಗಳ ಒಡೆತನದ Tata Engineering and Locomotive Company(TELCO)  ಹೇಗೆ ರೈಲ್ವೇ ಎಂಜಿನ್‌ಗಳನ್ನು ದುಪ್ಪಟ್ಟು ಬೆಲೆಗೆ ಸರಕಾರಕ್ಕೆ ಮಾರುತ್ತಿದೆ ಎಂದು ಎಂಜಿನ್‌ಗಳ ತಯಾರಿಕಾ ವೆಚ್ಚ, ವಿದೇಶಿ ಮಾರುಕಟ್ಟೆಯಲ್ಲಿನ ಬೆಲೆ ಮುಂತಾದ ವಿವರಗಳೊಂದಿಗೆ ಬಿಡುಗಡೆ ಮಾಡಿದರು. ಫಿರೋಝ್‌ರ ಒತ್ತಡಕ್ಕೆ ಮಣಿದ ಸರಕಾರ ರೈಲ್ವೇ ಎಂಜಿನ್ ಗಳನ್ನು ತಯಾರಿಸುವ ಉದ್ದಿಮೆಯೊಂದನ್ನು ಸ್ವತಃ ತಾನೇ ಆರಂಭಿಸಿತು.
 ಆದರೆ ಇನ್‌ಶ್ಯೂರೆನ್ಸ್ ಕಂಪೆನಿಗಳು ರಾಷ್ಟ್ರೀಕರಣಗೊಂಡರೂ ಭ್ರಷ್ಟಾಚಾರ ಮಾತ್ರ ನಿಲ್ಲಲಿಲ್ಲ. ಮುಂದೆ 1958ರಲ್ಲಿ ಫಿರೋಜ್ ಬಯಲಿಗೆಳೆದಿದ್ದೇ ಅತ್ಯಂತ ಕುಖ್ಯಾತವಾದ ಹರಿದಾಸ್ ಮುಂದ್ರಾ ಹಗರಣ. ಎಲ್‌ಐಸಿ ಯಲ್ಲಿ ಸಾರ್ವಜನಿಕರು ತೊಡಗಿಸಿದ್ದ ರೂ. ಒಂದು ಕೋಟಿಗೂ ಮಿಕ್ಕಿದ ಹಣವನ್ನು ಸರಕಾರ ಮುಂದ್ರಾ ಒಡೆತನದ ಕಂಪೆನಿಯ ಷೇರುಗಳನ್ನು ಅವುಗಳ ಮೌಲ್ಯಕ್ಕಿಂತ ಶೇಕಡಾ 3040ರಷ್ಟು ಹೆಚ್ಚು ಮೊತ್ತ ನೀಡಿ ಖರೀದಿಸಲು ಬಳಸಿ ಕೊಂಡಿತ್ತು. ಜೂನ್ 17ರಂದು ರೂ.2.81ಕ್ಕೆ quote   ಆಗಿದ್ದ Osler Lamps Manufacturing  ಕಂಪೆನಿಯ ಷೇರಿನ ಬೆಲೆ ಜೂನ್ 24ರಂದು ಅನಿರೀಕ್ಷಿತವಾಗಿ ರೂ.4ಕ್ಕೆ ಜಿಗಿದಿತ್ತು. ರೂ.16.87ರಲ್ಲಿ ಸ್ಥಿರವಾಗಿದ್ದ ಅ್ಞಜಛ್ಝಿಟ ಆ್ಟಟಠಿಛ್ಟಿ
ಕಂಪೆನಿಯ ಷೇರಿನ ಮುಖಬೆಲೆ ಇದ್ದಕಿದ್ದಂತೆಯೇ ಜೂನ್ 24ರಂದೇ ರೂ.20.25ಕ್ಕೆ ಏರಿತ್ತು. ಅಚ್ಚರಿಯ ಸಂಗತಿಯೆಂದರೆ ಜೂನ್ 25ರಂದು ಎಲ್‌ಐಸಿ ಈ ಷೇರುಗಳನ್ನು ಖರೀದಿಸಿತ್ತು. ಆದರೆ ಡಿಸೆಂಬರ್‌ನಲ್ಲಿ ಫಿರೋಝ್ ಗಾಂಧಿ ಲೋಕ ಸಭೆಯಲ್ಲಿ ಈ ಹಗರಣದ ಬಗ್ಗೆ ಹಣಕಾಸು ಸಚಿವರನ್ನು ಪ್ರಶ್ನಿಸುವ ವೇಳೆಗಾಗಲೇ ಸರಕಾರ ಖರೀದಿಸಿದ್ದ ಮುಂದ್ರಾ ಕಂಪೆನಿಯ ಷೇರುಗಳ ಮೌಲ್ಯ ರೂ.37 ಲಕ್ಷಗಳಷ್ಟು ಕುಸಿದು ಸರಕಾರಕ್ಕೆ ಭಾರೀ ನಷ್ಟವುಂಟಾಗಿತ್ತು! ನಿರಂತರ ಒಂದೂವರೆ ಘಂಟೆಗಳ ಕಾಲ ಲೋಕಸಭೆಯಲ್ಲಿ ಈ ಹಗರಣವನ್ನು ಕುರಿತು ಮಾತನಾಡಿದ್ದ ಫಿರೋಝ್ ತಮ್ಮ ಮಾತಿನ ಬಲೆಯಲ್ಲಿ ಅಂದಿನ ಹಣಕಾಸು ಸಚಿವ ಟಿ.ಟಿ.ಕೃಷ್ಣಾಮಚಾರಿಯವರನ್ನು ಎಷ್ಟು ಜಾಣತನದಿಂದ ಟ್ರ್ಯಾಪ್ ಮಾಡಿದ್ದರೆಂದರೆ, ಕೊನೆಗೆ ಅವರು ಈ ಹಗರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದರು. ಹಣಕಾಸು ಇಲಾಖೆಯ ಕಾರ್ಯದರ್ಶಿ ವಜಾಗೊಂಡರು ಮತ್ತು ಹರಿದಾಸ್ ಮುಂದ್ರಾ ಜೈಲು ಸೇರಿದರು. ಇದಾದ 41 ವರ್ಷಗಳ ನಂತರ ಇಂತಹದ್ದೇ ಹಗರಣವೊಂದು 2001ರಲ್ಲಿ ನಡೆದಿತ್ತು (UTI SCAM). ಆಗ ಹಣಕಾಸು ಸಚಿವರಾಗಿದ್ದ ಯಶವಂತ್ ಸಿನ್ಹಾ ರಾಜೀನಾಮೆಯನ್ನೇನೂ ನೀಡಿರಲಿಲ್ಲ. ಯಾಕೆಂದರೆ ಆಗ ಅವರ ಕುತ್ತಿಗೆ ಪಟ್ಟಿ ಹಿಡಿದು ರಾಜೀನಾಮೆ ಪಡೆಯಲು ಫಿರೋಝ್ ಗಾಂಧಿ ಇರಲಿಲ್ಲ!
ಇವತ್ತು ಇಂಟರ್‌ನೆಟ್ ಮೂಲಕ, ದೂರದರ್ಶನದ ಮೂಲಕ ಷೇರು ಮಾರುಕಟ್ಟೆಯ ಅತೀ ಸಣ್ಣ ಕದಲಿಕೆ ಕೂಡಾ ಕ್ಷಣಾರ್ಧದಲ್ಲಿ ನಮಗೆ ತಿಳಿಯುತ್ತದೆ. ಆದರೆ 1958ರಲ್ಲಿ ಇಂಟರ್‌ನೆಟ್, ಟೆಲಿವಿಷನ್, ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ಇರದಿದ್ದ ಕಾಲದಲ್ಲಿ ಫಿರೋಜ್ ಕೋಲ್ಕತ್ತಾದ ಸ್ಟಾಕ್ ಎಕ್ಸ್‌ಚೇಂಜ್‌ಗೆ ನೂರಾರು ಟೆಲಿಗ್ರಾಮ್ ಗಳನ್ನು ಕಳಿಸಿ ದಾಖಲೆಗಳನೆಲ್ಲಾ ತರಿಸಿ ಕೊಂಡು, ತಿಂಗಳುಗಟ್ಟಲೆ ಶ್ರಮವಹಿಸಿ ತಮ್ಮ ವರದಿಯ ಪ್ರತೀ ಪುಟವನ್ನು ಬರೆದಿದ್ದರು! ಈವತ್ತು ಲೋಕಸಭೆಯಲ್ಲಿ ನಿದ್ದೆ ಮಾಡುವ, walk-out ಮಾಡುವ, ಸಿದ್ಧತೆಯಿಲ್ಲದೆ ತಲೆಹರಟೆಯ ಮಾತಾಡಿ ಗಲಾಟೆ ಎಬ್ಬಿಸುವ ವಿರೋಧ ಪಕ್ಷಗಳ ನೂರಾರು ಸಂಸದರ ಬದಲು ಒಬ್ಬ ಫಿರೋಝ್ ಗಾಂಧಿ ಇದ್ದಿದ್ದರೆ ಎಷ್ಟು ಪರಿಣಾಮಕಾರಿಯಾಗಿರುತ್ತಿತ್ತು ನೀವೇ ಯೋಚಿಸಿ! ಲೋಕಸಭೆ ಯಲ್ಲಿ ತನ್ನ ಸರಕಾರವಿದ್ದಾಗ ಸುಷ್ಮಾ ಸ್ವರಾಜ್‌ರಂಥವರು ಎಷ್ಟೇ ಹೂಂಕಾರ ಹಾಕಿದರೂ ಕ್ಯಾರೇ ಎನ್ನದ ಕಾಂಗ್ರೆಸ್ ಅವತ್ತು ತನ್ನದೇ ಪಕ್ಷದ ಫಿರೋಜ್ ಗಾಂಧಿಯ ಮೌನಕ್ಕೆ ಹೆದರುತ್ತಿತ್ತು. ಫಿರೋಝ್ ಲೋಕಸಭೆಯ ಅಧಿವೇಶನದಲ್ಲಿ ಮೌನವಾಗಿದ್ದಾರೆ ಎಂದರೆ ಮುಂದಿನ ಅಧಿವೇಶನದಲ್ಲಿ ಹಗರಣವೊಂದನ್ನು ಸ್ಫೋಟಿಸುತ್ತಾರೆ ಎಂಬ ಖಾತರಿ ಇತ್ತು ಸರಕಾರಕ್ಕೆ!
1960ರಲ್ಲಿ ತಮ್ಮ 48ನೆ ವಯಸ್ಸಿನಲ್ಲಿ ನಿಧನರಾದ ಫಿರೋಜ್ ಈಗ ಬದುಕಿದ್ದಿದ್ದರೆ ಅವರಿಗೆ ಬರೋಬ್ಬರಿ ನೂರಾ ಒಂದು ವರ್ಷ ವಯಸ್ಸು. ಬಾಲಿವುಡ್ ನಟಿಯರ ವಾರ್ಡ್‌ರೋಬ್ ಮಾಲ್‌ಫಂಕ್ಷನ್‌ಗಳನ್ನು ಪ್ರೈಮ್‌ಟೈಮ್‌ನಲ್ಲಿ ತೋರಿಸುವ ನ್ಯೂಸ್ ಚಾನೆಲ್‌ಗಳು 2012ರ ಸೆಪ್ಟೆಂಬರ್ 12 ಫಿರೋಜ್‌ರ ಜನ್ಮಶತಮಾನೋತ್ಸವವೆಂದು ನೆನಪಿಸಲಿಲ್ಲ. ಕಳೆದ ವರ್ಷವೊಂದರಲ್ಲೇ ರಾಜೀವ್ ಗಾಂಧಿ, ಇಂದಿರಾ ಗಾಂಧಿಯವರ ಜನ್ಮದಿನಗಳ ಜಾಹೀರಾತು ನೀಡಲು ರೂ.7.25 ಕೋಟಿ ಸರಕಾರದ ಹಣ ಖರ್ಚು ಮಾಡಿದ, ಮೋತಿಲಾಲ್ ನೆಹರೂ 150ನೇ ಜನ್ಮದಿನ ಆಚರಿಸಿದ ಕಾಂಗ್ರೆಸ್‌ಗೂ ತನ್ನ ಈ ಮೇರು ನಾಯಕನ ನೆನಪಾಗಲಿಲ್ಲ. ತಪ್ಪುಅವರದಲ್ಲ ಬಿಡಿ, ಭ್ರಷ್ಟಾಚಾರದ ಕೆಸರಲ್ಲಿ ಮುಳುಗಿರುವ ಕಾಂಗ್ರೆಸ್ ಶಾಸ್ತ್ರಿ, ಫಿರೋಝ್‌ರಂತಹ ನಾಯಕರನ್ನು ಗೌರವಿಸುವ ಯೋಗ್ಯತೆಯನ್ನೇ ಕಳೆದುಕೊಂಡಿದೆ!
ಇವತ್ತು ಮೋದಿ ಅಭಿಮಾನಿಗಳು ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ತಮ್ಮ ನಾಯಕನ ಸಾಮರ್ಥ್ಯವನ್ನು project  ಮಾಡುವ ಬದಲು ಇಂದಿರಾ ಗಾಂಧಿಯ ಚಾರಿತ್ರ್ಯ ಸರಿ ಇರಲಿಲ್ಲ. ಆಕೆಯ ಗಂಡ ಫಿರೋಝ್ ಖಾನ್ ಎಂಬ ಮುಸಲ್ಮಾನ. ಆತನ ತಂದೆ ನವಾಬ್ ಖಾನ್ ನೆಹರೂ ಕುಟುಂಬಕ್ಕೆ ಮದ್ಯ ಸರಬರಾಜು ಮಾಡುತ್ತಿದ್ದರು ಎಂಬಂತಹ ಕಥೆಗಳನ್ನು ಕಟ್ಟುವ ಕೀಳುಮಟ್ಟಕ್ಕೆ ಇಳಿದಿರುವುದನ್ನು ನೋಡಿದಾಗ ಇದನ್ನೆಲ್ಲಾ ಬರೆಯಬೇಕೆನ್ನಿಸಿತು. ಬಹುಶ್‌ಃ ಫಿರೋಝ್ ಇವತ್ತು ಬದುಕಿದ್ದಿದ್ದರೆ ಹೌದು ನಾನು ಮುಸಲ್ಮಾನನೇ, ಏನೀಗ? ಎಂದು ನಕ್ಕು ಸುಮ್ಮನಾಗುತ್ತಿದ್ದರು. ರಾಜಕಾರಣಿ, ಪತ್ರಕರ್ತ, ಸಾಮಾಜಿಕ ಹೋರಾಟಗಾರ, indian Oil Corporation Ltd. ನ ಮೊದಲ ಅಧ್ಯಕ್ಷ, ಇವತ್ತು ಅಣ್ಣಾ ಹಝಾರೆಯ ಚಳವಳಿ ಮಾಡಲಾಗದಿದ್ದನ್ನು ಅವತ್ತು ಏಕಾಂಗಿಯಾಗಿ ಮಾಡಿ ತೋರಿಸಿದ್ದ ಫಿರೋಝ್ ಗಾಂಧಿಯ ಕೊಡುಗೆಯನ್ನು ಸ್ಮರಿಸುವ ಕೃತಜ್ಞತೆಯನ್ನು ಈ ದೇಶ ತೋರಿಸದಿದ್ದರೂ ಪರವಾಗಿಲ್ಲ, ಆದರೆ ಅವರನ್ನು ಅವಮಾನಿಸುವ ದುಷ್ಟತನ ನಮಗೇಕೆ ಬೇಕು?

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s