ಒಂದು ಹಾಲಿವುಡ್ ಸಿನೆಮಾ ಮತ್ತು ಭಾರತದ ವರ್ತಮಾನ

ಅಂಕಣ

 

ಒಂದು ಹಾಲಿವುಡ್ ಸಿನೆಮಾ ಮತ್ತು ಭಾರತದ ವರ್ತಮಾನ

(ಕೃಪೆ: ವಾರ್ತಾಭಾರತಿ, ರವಿವಾರ – ಜುಲೈ -13-2014)

   ಒಂದು ಹಾಲಿವುಡ್ ಸಿನೆಮಾ ಮತ್ತು ಭಾರತದ ವರ್ತಮಾನ

-ಬಿ.ಶ್ರೀಪಾದ್ ಭಟ್

ಬೆಳೆವ, ಬದಲಾಗುವ, ನಾಶವಾಗುವ ಮತ್ತು ಮರುಹುಟ್ಟು ಪಡೆವ ಈ ಪ್ರಪಂಚದಲ್ಲಿ ಮನುಷ್ಯನ ನೆನಪು ಮತ್ತು ಮರೆವು ದುರಂತಮಯ.
-ಪಿ.ಲಂಕೇಶ್
 ಆರ್ಸನ್ ವೆಲ್ಸ್ ನಟಿಸಿ, ನಿರ್ದೇಶಿಸಿದ, 1941ರಲ್ಲಿ ತೆರೆಕಂಡ ‘ಸಿಟಿಜನ್ ಕೇನ್’ ಚಿತ್ರದ ಆರಂಭದ ದೃಶ್ಯದಲ್ಲಿ ಸಾವಿನ ಹೊಸ್ತಿನಲ್ಲಿರುವ ‘ಚಾರ್ಲ್ಸ್ ಫಾಸ್ಟರ್ ಕೇನ್’ ‘ರೋಸ್ಬಡ್’ ಎಂದು ಉದ್ಗರಿಸಿ ಸಾವನ್ನಪ್ಪುತ್ತಾನೆ. ಕೂಡಲೇ ಆತನ ಕೈಯಿಂದ ಹಿಮದ ಗ್ಲೋಬ್ ಕೆಳಗುರುಳಿ ಬೀಳುತ್ತದೆ. ಈ ಪದದ ನಿಗೂಢ ಹಿನ್ನೆಲೆಯನ್ನು ಭೇದಿಸಲು ಚಿತ್ರದುದ್ದಕ್ಕೂ ಪ್ರಯತ್ನಿಸಿದ ವರದಿಗಾರ ಥಾಮ್ಸನ್ ಕ್ಲೈಮಾಕ್ಸ್‌ನಲ್ಲಿ ಹತಾಶನಾಗಿ ‘‘ಬಹುಶಃ ‘ರೋಸ್ಬಡ್’ ಎನ್ನುವುದು ಕೇನ್ ಪಡೆಯದೆ ಇರವಂತಹದ್ದು ಅಥವಾ ಕಳೆದುಕೊಂಡಿರುವಂತಹದ್ದು’’ ಎಂದು ಹೇಳುತ್ತಾನೆ. ಮುಂದುವರಿದು ‘‘ಒಂದು ವೇಳೆ ದೊರಕಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನ ವೇನೂ ಆಗುತ್ತಿರಲಿಲ್ಲ’’ ಎಂದು ಉದ್ಗರಿಸಿ ಕೇನ್‌ನ ಬಂಗಲೆ ‘ಜನಾಡು’ವಿನಿಂದ ನಿರ್ಗಮಿಸುತ್ತಾನೆ. ಈತನ ಈ ಮಾತುಗಳು ಕೇನ್‌ನ ಇಡೀ ಬದುಕನ್ನು ಸೂಚ್ಯವಾಗಿ ಧ್ವನಿಸುತ್ತವೆ. ನಂತರದ ದೃಶ್ಯದಲ್ಲಿ ‘ಜನಾಡು’ ಬಂಗಲೆಯಲ್ಲಿ ಕೇನ್‌ನ ಹಳೆಯ ವಸ್ತುಗಳನ್ನು ಬೆಂಕಿಗೆಸೆಯುತ್ತಿರುವಂತಹ ಸಂದರ್ಭದಲ್ಲಿ ಹಿಮಗಡ್ಡೆಗಳಲ್ಲಿ ಆಡಲು ಬಳಸುವ ಮರದ ಆಟಿಕೆಯೊಂದನ್ನು ನಿರುಪಯುಕ್ತ ಆಟಿಕೆ ಎಂದು ಬೆಂಕಿಗೆಸೆಯುತ್ತಾರೆ. ಬೆಂಕಿಯಲ್ಲಿ ಉರಿಯುತ್ತಾ ನಿಧಾನವಾಗಿ ಆಟಿಕೆಯ ಮೇಲಿನ ಹೆಸರು ‘ರೋಸ್ಬಡ್’ ಪರದೆಯ ಮೇಲೆ ಗೋಚರಿಸುತ್ತದೆ. ಚಿತ್ರದ ಆರಂಭದಲ್ಲಿ ಕೇನ್ ಬಾಲಕನಾಗಿದ್ದಾಗ ಆತನನ್ನು ಅವನ ತಾಯಿಯಿಂದ ಬೇರ್ಪಡಿಸಿ ಬೋರ್ಡಿಂಗ್ ಶಾಲೆಗೆ ಸೇರ್ಪಡಿಸುವ ಸಂದರ್ಭದಲ್ಲಿ ಬಾಲಕ ಕೇನ್ ಪ್ರತಿಭಟಿಸುತ್ತಿದ್ದಾಗ, ಆಗ ಹಿಮದಲ್ಲಿ ಈ ಮರದ ಆಟಿಕೆಯು ಅನಾಥವಾಗಿ ಬಿದ್ದಿರುತ್ತದೆ. ಕ್ಲೈಮಾಕ್ಸ್‌ನಲ್ಲಿ ಇದು ನಿರುಪಯುಕ್ತ ವಸ್ತುವಾಗಿ ಬೆಂಕಿಯಲ್ಲಿ ಉರಿಯುತ್ತಿದ್ದಾಗ ನಮಗೆ ಆ ದೃಶ್ಯ ನೆನಪಾಗುತ್ತದೆ. ಹೌದು, ‘‘ರೋಸ್ಬಡ್’ ಎನ್ನುವುದು ನಮ್ಮ ಬಾಲ್ಯ ಕಾಲದ ಸಂತಸ, ಮುಗ್ಧತೆ, ಭದ್ರತೆ, ಭರವಸೆ, ಆಶಯಗಳ ಸಂಕೇತವಾಗಿ ಕಾಡಲಾರಂಬಿಸುತ್ತದೆ.’’ ಕಳೆದುಕೊಂಡ ಈ ರೋಸ್ಬಡ್ ಅನ್ನು ಮರಳಿ ಪಡೆಯಲು ಮನುಷ್ಯ ಜೀವನವಿಡೀ ವ್ಯರ್ಥ ಪ್ರಯತ್ನ ನಡೆಸುತ್ತಿರುತ್ತಾನೆ. ಆದರೆ ಅದನ್ನು ಮರಳಿ ಪಡೆಯಲು ಬೇಕಾದಂತಹ ನಿರ್ಮಲ, ಪ್ರಾಮಾಣಿಕ ವ್ಯಕ್ತಿತ್ವವನ್ನೇ ಕಳೆದು ಕೊಂಡಿರುತ್ತಾನೆ. ಈ ಕಳೆದುಕೊಳ್ಳುವ ಪ್ರಕ್ರಿಯೆಯೂ ಸಹ ಮನುಷ್ಯನ ಕೈ ಮೀರಿದ್ದು ಎಂದು ‘ಸಿಟಿಜನ್ ಕೇನ್’ ಸಿನೆಮಾ ನಿರಂತರವಾಗಿ ಧ್ಯಾನಿಸುತ್ತದೆ. ತನ್ನ ನೈತಿಕತೆ, ಮೌಲ್ಯಗಳನ್ನು ಕಳೆದುಕೊಳ್ಳುತ್ತಾ, ಇಡೀ ಜಗತ್ತನ್ನು ಗೆಲ್ಲಲು ತವಕಿಸುವ ಮನುಷ್ಯ ಕಡೆಗೆ ಇದರಿಂದ ಪಡೆದುಕೊಳ್ಳುವುದೇನನ್ನು? ಮನುಷ್ಯನ ಬದುಕಿನ ವೈರುಧ್ಯಗಳು, ವಿರೋಧಾಭಾಸಗಳು, ಅಹಂ, ಆತ ಮೇಲಕ್ಕೇರುತ್ತಿದ್ದಾನೆ ಎಂದು ಬಾಹ್ಯವಾಗಿ ಗೋಚರಿಸುತ್ತಿದ್ದರೂ ನೈತಿಕವಾಗಿ ಪತನಗೊಳ್ಳುತ್ತಿರುವುದರ ಮೆಟಫರ್ ಅನ್ನು ಸಿಟಿಜನ್ ಕೇನ್ ಸಿನೆಮಾ ಅದ್ಭುತವಾಗಿ ರೂಪಿಸು ತ್ತದೆ.
ಜಗತ್ತಿನ ಸಿನೆಮಾದ ಒಂದು ಮಾಂತ್ರಿಕ ಪವಾಡ ಈ ಸಿಟಿಜನ್ ಕೇನ್ ಚಿತ್ರ. ಈ ಚಿತ್ರ ತೆರೆಕಂಡು 73 ವರ್ಷಗಳಾದರೂ ಇಂದಿಗೂ ಇದು ಸರ್ವಕಾಲಿಕ ಶ್ರೇಷ್ಠ ಸಿನೆಮಾಗಳಲ್ಲೊಂದು. ಇಡೀ ಸಿನೆಮಾದ ಕತೆ, ಚಿತ್ರಕತೆ ವರ್ತುಲಾಕಾರದ ಚೌಕಟ್ಟಿನಲ್ಲಿ ಉರುಳುತ್ತದೆ. ದೃಶ್ಯದಿಂದ ದೃಶ್ಯಕ್ಕೆ ಮೈತುಂಬಿಕೊಳ್ಳುತ್ತಾ, ಕಡೆಗೆ ಅದು ಶುರುವಾದಲ್ಲಿ ಬಂದು ತಲಪುತ್ತದೆ. ಮೇಲ್ನೋಟಕ್ಕೆ ಈ ಚಿತ್ರಕತೆಯು ‘‘ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ’’ ಎನ್ನುವ ವಿವರಗಳನ್ನು ಪರದೆಯ ಮೇಲೆ ಸಶಕ್ತವಾಗಿ ಮೂಡಿಸುತ್ತಿದೆ ಎಂದು ಕಂಡರೂ ಅದರಾಚೆಗೂ ಮೀರಿದ ತಲ್ಲಣಗಳ, ಬಿಕ್ಕಟ್ಟುಗಳ, ನಮ್ಮೆಲ್ಲರ ಕೈಮೀರಿದ ಬದುಕೊಂದು ಅಲ್ಲಿ ಅಡಕಗೊಂಡಿರುವುದು ನಮಗೆ ಪ್ರತಿ ಫ್ರೇಮಿನಲ್ಲಿ ಅನುಭವವಾಗತೊಡಗುತ್ತದೆ.
ಆರಂಭದ ದೃಶ್ಯದಲ್ಲಿ ಕೇನ್‌ನ ಐಶಾರಾಮಿ ಬಂಗಲೆ ‘ಜುನಾಡು’ವಿನ ಕಬ್ಬಿಣದ ಗೇಟುಗಳ ಮೇಲೆ ‘‘ಘೆಟ ಖ್ಟಛಿಜ್ಞಿಜ’  ಎನ್ನುವ ಫಲಕ ಸದಾ ನೇತಾಡುತ್ತಿರುತ್ತದೆ. ್ಞಟ ಠ್ಟಿಛಿಜ್ಞಿಜ ಇದರಲ್ಲಿ ತನ್ನ ಕಡೆಯ ವರ್ಷಗಳನ್ನು ಏಕಾಂಗಿಯಾಗಿ ಬದುಕಿದ ಕೇನ್ ಸಾಯುವಾಗ ಉದ್ಗರಿಸಿದ ಪದ ‘ರೋಸ್ಬಡ್’ ಕುರಿತಾಗಿ ತನಿಖೆ ನಡೆಸಲು ತನ್ನ ಸಂಪಾದಕರಿಂದ ನಿಯೋಜಿತಗೊಂಡ ವರದಿಗಾರ ‘ಥಾಮ್ಸನ್’ ಕೇನ್‌ನ್ ಗಾರ್ಡಿಯನ್ ಥ್ಯಾಚರ್‌ನ ಡೈರಿಯನ್ನು ಓದುತ್ತಾ ಹೋದ ಹಾಗೆ ಆತನ ಆರಂಭದ ಬದುಕು ಫ್ಲಾಶ್ ಬ್ಲಾಕಲ್ಲಿ ಅನಾವರಣಗೊಳ್ಳುತ್ತಾ ಹೋಗುತ್ತದೆ. ನಂತರ ವರದಿಗಾರ ಆತನ ಖಾಸಗಿ ಮ್ಯಾನೇಜರ್ ಬರ್ನಸ್ಟನ್, ಈಗ ದೂರವಾಗಿರುವ ಕೇನ್‌ನ ಒಂದು ಕಾಲದ ಜೀವದ ಗೆಳೆಯ ಲೇಲಾಂಡ್, ಕೇನ್‌ನ ಎರಡನೆ ಪತ್ನಿ ಸೂಸನ್ ಅಲೆಕ್ಸಾಂಡರ್, ಬಟ್ಲರ್ ರೇಮಂಡ್ ಮೊದಲಾದವರನ್ನು ಸಂದರ್ಶಿಸುತ್ತಾ ಹೋಗುತ್ತಾನೆ. ಅವರ ನೆನಪುಗಳ ಮೂಲಕ ಚಿತ್ರ ತೆರೆದುಕೊಳ್ಳುತ್ತಾ, ಮೈದಾಳುತ್ತಾ ಹೋಗುತ್ತದೆ. ಆದರೆ ಪ್ರತಿ ಫ್ಲಾಶ್‌ಬ್ಲ್ಯಾಕ್ ಅನ್ನು ಒಡೆದು ವರ್ತಮಾನದ ಬೆಳಕಿಗೆ ಒಡ್ಡುವ ವರದಿಗಾರ ಥಾಮ್ಸನ್‌ನ ಮುಖದ ಒಂದು ಭಾಗ ಮಾತ್ರ ಸದಾ ಒಂದು ಕೋನದಲ್ಲಿ ಕಾಣಿಸುತ್ತಿದ್ದರೆ ಮುಖದ ಮತ್ತೊಂದು ಭಾಗ ಕತ್ತಲಿನಲ್ಲಿಯೇ ಹುದುಗಿ ರುತ್ತದೆ. ವರದಿಗಾರನ ಶೋಧನೆಯ ಆಶಯಗಳು ಕತ್ತಲಲ್ಲೇ ಉಳಿಯುತ್ತಾ ಹೋಗುವುದನ್ನು ಈ ತಂತ್ರದ ಮೂಲಕ ಸಾಂಕೇತಿಸುವಲ್ಲಿ ನಿರ್ದೇಶಕ ವೆಲ್ಸ್ ಯಶಸ್ವಿಯಾಗಿದ್ದಾನೆ. ಇಲ್ಲಿ ಕೊನೆಗೆ ಕೇನ್‌ನ ಜೀವನ ವನ್ನು ಶೋಧಿಸ ಹೊರಡುವ ವರದಿಗಾರ ಥಾಮ್ಸನ್‌ಗೆ ಕಡೆಗೆ ಆತನ ಸ್ವಂತ ಐಡೆಂಟಿಟಿಯೇ ಕಳೆದು ಹೋಗುತ್ತದೆ.

    
 
ತನ್ನ 25ನೆ ವರ್ಷದಲ್ಲಿ ಗಾರ್ಡಿಯನ್ ಥ್ಯಾಚರ್‌ನ ಮಾತನ್ನು ಧಿಕ್ಕರಿಸಿ ಪತ್ರಿಕೆಯೊಂದನ್ನು ಖರೀದಿಸುವ ಕೇನ್ ನಂತರ ಹಿಂದಿರುಗಿ ನೋಡು ವುದೇ ಇಲ್ಲ. ಆತ ಏರುವ ಪ್ರತಿ ಮೆಟ್ಟಿಲೂ ಯಶಸ್ಸಿನ ಸೋಪಾನವಾಗುತ್ತದೆ. ಅಮೆರಿಕಾದ ಜನಪ್ರಿಯ ‘ನ್ಯೂಯಾರ್ಕ್ ಇನಕ್ವೈರ್’ ಪತ್ರಿಕೆಯ ಮಾಲಕ, ಪ್ರಕಾಶಕ ಕೇನ್, ಅತ್ಯಂತ ಪ್ರಭಾವಶಾಲಿ, ಆಗರ್ಭ ಶ್ರೀಮಂತ. ಐಶಾರಾಮಿ ಬಂಗಲೆ ‘ಜನಾಡು’ವಿನ ಒಡೆಯ ಸಿಟಿಜನ್ ಕೇನ್ ಬಂದರು, ಬಂಗಾರದ ಗಣಿಗಳು, ಉದ್ದಿಮೆಗಳ ಮಾಲಕನಾಗಿ ವಾಮನನಂತೆ ತ್ರಿವಿಕ್ರಮನಾಗಿ ಬೆಳೆಯುತ್ತಾ ಹೋಗುತ್ತಾನೆ. ಕಡೆಗೆ ಅಮೆರಿಕ ಅಧ್ಯಕ್ಷ ಪದವಿಗೂ ಸ್ಪರ್ಧೆ ನಡೆಸುತ್ತಾನೆ. ಆದರೆ ನಿರಂತರವಾಗಿ ಆಕ್ರಮಿಸುತ್ತಾ ಹೋಗುವ ಕೇನ್ ಅದನ್ನು ನಿಭಾಯಿಸುವ ಛಾತಿ ಇಲ್ಲದೆ ನೈತಿಕವಾಗಿ ಪತನಗೊಳ್ಳುತ್ತಾ ಹೋಗುತ್ತಾನೆ. ಪ್ರೇಯಸಿಗಾಗಿ ಅಧ್ಯಕ್ಷ ಪದವಿಯನ್ನು ಬಿಟ್ಟುಕೊಡುವ ಕೇನ್, ಅತ್ಯಂತ ಸಾಧಾರಣ ಗಾಯಕಿ ಮತ್ತು ನಟಿಯಾದ ಸೂಸನ್ ಅನ್ನು ಅಪ್ರತಿಮ ನಟಿ ಎಂದು ಭ್ರಮಿಸುತ್ತಾ ಸಾಗಿ ಆಕೆಗಾಗಿ ಥಿಯೇಟರ್ ಅನ್ನು ಕಟ್ಟಿಸುತ್ತಾನೆ. ತನ್ನ ಪತ್ರಿಕೆಯ ಪ್ರತಿಯೊಂದು ಪುಟವನ್ನು ಸೂಸನ್ ಳ ವೈಭವೀ ಕರಣಕ್ಕೆ ಮೀಸಲಿಡುತ್ತಾನೆ. ಆದರೆ ಕಡೆಗೆ ಆಕೆ ಯನ್ನು ಪಂಜರದ ಗಿಣಿಯಾಗಿ ಸುತ್ತಾನೆ. ಜಗತ್ತಿನ ಎಲ್ಲ ಶ್ರೇಷ್ಠ ವಸ್ತುಗಳನ್ನು, ಆಭರಣಗಳನ್ನು ಖರೀದಿಸಿ ಅದಕ್ಕಾಗಿಯೇ ಒಂದು ಬಂಗಲೆಯನ್ನು ಕಟ್ಟಿಸುತ್ತಾನೆ. ಇದೆಲ್ಲದ ರಿಂದ ದಿಗ್ಭ್ರಮೆ ಮತ್ತು ಶೋಷಣೆಗೊಂಡ ಸೂಸನ್ ಆತನನ್ನು ತೊರೆಯುತ್ತಾಳೆ. ತನ್ನ ಐಶಾರಾಮಿ ಬಂಗಲೆ ‘ಜನಾಡು’ ವಿನಲ್ಲಿ ಕಳೆದು ಹೋಗುವ ಕೇನ್‌ಗೆ ‘ತಾನು ಯಾರು? ತನ್ನ ಬದುಕಿನ ಹಿನ್ನೆಲೆ ಏನು? ಏತಕ್ಕಾಗಿ ಬದುಕುತ್ತಿದ್ದೇನೆ? ಎನ್ನುವ ಪ್ರಶ್ನೆಗಳು ಕಾಡಲಾರಂಬಿಸುತ್ತವೆ. ಅತ್ಯಂತ ವೈಭವದಲ್ಲಿ, ಜಗದೇಕವೀರನ ಆಕ್ರಮಣದ ಶೈಲಿಯಲ್ಲಿ ಆಳಿದ ಸಿಟಿಜನ್ ಕೇನ್ ಕಡೆಗೆ ಏಕಾಂಗಿಯಾಗಿ ಅಸಹಾಯಕನಾಗಿ ಸಾಯುತ್ತಾನೆ. ತನ್ನೊಳಗಿನ ಸತ್ಯದ ಅರಿವಾಗಲಿ, ತನ್ನ ಹೊರಗಿನ ಬದುಕಿನ ವಾಸ್ತವದ ಅರಿವಾಗಲಿ ಕೇನ್‌ಗೆ ದಕ್ಕುವುದೇ ಇಲ್ಲ. ಈ ಕೇನ್ ಗೆ ‘ರೋಸ್ಬಡ್’ ಎಲ್ಲಿದೆ ಎಂದು ಹುಡುಕುವ ತವಕವಿದೆಯಷ್ಟೇ ಹೊರತಾಗಿ ‘ರೋಸ್ಬಡ್’ನ ಮೆಟಫರ್ ಆತನಿಗೆ ಅರಿವಾಗುವಷ್ಟರಲ್ಲಿ ಕೇನ್‌ನ ಬದುಕೇ ಮುಗಿದು ಹೋಗಿ ರುತ್ತದೆ. ಆತನ ಬದುಕು ಭವಿಷ್ಯದ ತಲೆಮಾರುಗಳಿಗೆ ಕೇವಲ ಮತ್ತೊಬ್ಬರ ನೆನಪುಗಳ ಅಸ್ಥಿಪಂಜರವಾಗಿ ಮಾತ್ರ ಉಳಿದುಬಿಡುತ್ತವೆ ಮತ್ತು ಅದು ಅಷ್ಟು ಮಾತ್ರ ಎಂದು ಮನಮುಟ್ಟುವಂತೆ ಕಟ್ಟುವುದು ಎಂತಹ ಮಾಂತ್ರಿಕತೆ ಅಲ್ಲವೇ?
36 ಮಹಲುಗಳ 40 ಕೋಟಿ ಬಂಗಲೆಯ ಮಾಲಕ, ಸಾವಿರಾರು ಕೋಟಿ ವ್ಯವಹಾರದ ಉದ್ಯಮಿ, ಟಿವಿ 18 ಸಮೂಹದ ಮಾಧ್ಯಮವನ್ನು ಖರೀದಿಸಿದ ಈ antalia
ಆಧುನಿಕ ಕೇನ್ ‘ಮುಖೇಶ್ ಅಂಬಾನಿ’ ಇಂದಿನ ವರ್ತಮಾನದ ಸಂದರ್ಭದಲ್ಲಿ ಇಲ್ಲಿ ನೆನಪಾಗುತ್ತಾನೆ. ಸಿಟಿಜನ್ ಕೇನ್‌ನಂತೆಯೇ ಜಗದೇಕ ವೀರನಂತೆ ಆಕ್ರಮಿಸುತ್ತಾ ಹೊರಟಿರುವ ಮುಖೇಶ್ ಅಂಬಾನಿ, ಅದಾನಿಗಳಿಗೆ ‘ರೋಸ್ಬಡ್’ನ ಅರಿವೇ ಇಲ್ಲ. ನೈತಿಕತೆ ಮತ್ತು ಮೌಲ್ಯಗಳು ಅವರ ಪ್ರಜ್ಞೆಯೊಳಗೆ ಇಳಿದೇ ಇಲ್ಲ. ಕೇನ್‌ನಂತೆಯೇ ಈ ಅಂಬಾನಿಗಳಿಗೆ, ಅದಾನಿಗಳಿಗೆ ಮತ್ತು ಇವರ ಅಪ್ತ ಗೆಣೆಕಾರ ಭಾರತದ ಸಿಇಓ ನರೇಂದ್ರ ಮೋದಿಯವರಿಗೆ ಸತ್ಯದ ಸೆಳೆತಗಳು ಇಷ್ಟವಿಲ್ಲ. ಅಧ್ಯಕ್ಷ ಪದವಿಗೆ ಸ್ಪರ್ಧಿಸಿದ ಸಿಟಿಜನ್ ಕೇನ್ ತನ್ನ ಚುನಾವಣಾ ಭಾಷಣಗಳಲ್ಲಿ ತನ್ನ ಎದುರಾಳಿಯನ್ನು ಗೇಲಿ ಮಾಡುತ್ತಾ, ಕೆಳಮಟ್ಟದಲ್ಲಿ ಮಾತನಾಡುತ್ತಾನೆ. ಈ ನರೇಂದ್ರ ಮೋದಿಯ ಚುನಾವಣಾ ಭಾಷಣಗಳು ಸಹ ಈ ಸಿಟಿಜನ್ ಕೇನ್‌ನ ಮಾದರಿಯಲ್ಲೇ ಇದ್ದದ್ದು ಇಂದು ಇತಿಹಾಸ. ಈ ಅಂಬಾನಿ, ಅದಾನಿಗಳ ಬದುಕು ಕೇನ್‌ನ ಬದುಕಂತೆ ನಮ್ಮ ಕಣ್ಣೆದುರಿಗೆ ಇರುವುದು ಸದ್ಯಕ್ಕೆ ವರ್ತಮಾನ. ನ್ಯೂಯಾರ್ಕ್ ಅನ್ನು ಆಕ್ರಮಿಸಿಕೊಳ್ಳುವ ಕೇನ್ ಹುಂಬನಂತೆ ಅಮೆರಿಕವನ್ನು ಆಕ್ರಮಿಸಿಕೊಳ್ಳಲು ಹೊರಡುತ್ತಾನೆ. ಇಂದಿನ ಮೋದಿ ಸರಕಾರದಲ್ಲಿ ಕೇನ್‌ನಂತೆಯೇ ಅಂಬಾನಿಗಳು, ಅದಾನಿಗಳು ಇಂಡಿಯಾದ ನೆಲ, ಜಲ, ಗಾಳಿಯನ್ನು ಆಕ್ರಮಿಸಲು ಜೈತ್ರಯಾತ್ರೆ ಆರಂಭಿಸಿದ್ದಾರೆ.
  ತನ್ನ 25ನೆ ವಯಸ್ಸಿನಲ್ಲಿ ತನ್ನ ಗಾರ್ಡಿಯನ್ ಥ್ಯಾಚರ್‌ನನ್ನು ವಿರೋಧಿಸಿ ‘ನ್ಯೂಯಾರ್ಕ ಇನಕ್ವೈರ್’ ಪತ್ರಿಕೆಯನ್ನು ಕೊಂಡುಕೊಳ್ಳುವ ಕೇನ್ ಪತ್ರಿಕೆಯ ಕಚೇರಿಗೆ ಗೂಳಿಯಂತೆ ನುಗ್ಗಿ ಅದರ ಮೂಲ ಸಂಪಾದಕನನ್ನು ಹಿಗ್ಗಾಮುಗ್ಗ ಅವಮಾನಿಸಿ ಹೊರ ತಳ್ಳುತ್ತಾನೆ. ತನ್ನ ಮೂಗಿನ ನೇರಕ್ಕೆ ವರದಿಗಳನ್ನು ಸಿದ್ಧಪಡಿಸುತ್ತಾನೆ. ಇದರ ಪರಿಣಾಮ ಒಳ್ಳೆಯದಾಗುವುದೇ ಎಂದು ಆತನ ಸ್ನೇಹಿತ ಅನುಮಾನ ವ್ಯಕ್ತ ಪಡಿಸಿದಾಗ “People will think what i tell them to think”
ಎಂದು ಅಹಂಕಾರದಿಂದ ನುಡಿಯುವ ಕೇನ್ ಅಪ್ರಾಣಿಕತೆಯೆಡೆಗೆ ಮುನ್ನುಗ್ಗುತ್ತಾನೆ. ವಿರೋಧಿಗಳನ್ನು ಹತ್ತಿಕ್ಕುತ್ತಾ ಸಾಗುತ್ತಾನೆ. ಆದರೆ ಇದನ್ನು ನಿಭಾಯಿಸುವಲ್ಲಿ ದಯನೀಯವಾಗಿ ಸೋಲುತ್ತಾನೆ. ಇಂದು ಮುಖೇಶ್ ಅಂಬಾನಿ ನೇತೃತ್ವದಲ್ಲಿ ಗಣಿಗಾರಿಕೆ, ಹಣಕಾಸು, ತೈಲ ಉದ್ಯಮ, ಕ್ರಿಕೆಟ್, ರೀಟೇಲ್ ವಲಯಗಳಲ್ಲಿ ಸಾವಿರಾರು ಕೋಟಿ ವ್ಯವಹಾರ ಮಾಡುತ್ತಿರುವ ‘ರಿಲೆಯನ್ಸ್ ಸಂಸ್ಥೆ’ ಕಳೆದ ವರ್ಷಗಳಲ್ಲಿ ಮಾಧ್ಯಮ ರಂಗಕ್ಕೆ ಗೂಳಿಯಂತೆ ಪ್ರವೇಶಿಸಿದೆ. ನೆಟ್‌ವರ್ಕ್ 18 ಗುಂಪಿನ ಎಲ್ಲಾ ಛಾನಲ್‌ಗಳನ್ನು ( ಸುಮಾರು 17 ಛಾನಲ್ಸ್) ಖರೀದಿಸಿರುವ ರಿಲೆಯನ್ಸ್ ಸಮೂಹ ದಕ್ಷಿಣ ಭಾರತದ ರಾಮೋಜಿರಾವ್ ಒಡೆತನದ ಈ ಟಿವಿ ಛಾನಲ್‌ಗಳಲ್ಲೂ ತನ್ನ ಬಹುಪಾಲು ಶೇರುಗಳನ್ನು ತೊಡಗಿಸಿದೆ. ಇತ್ತೀಚೆಗೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ‘ಈ ಟಿವಿ’ ನ್ಯೂಸ್ ಛಾನಲ್‌ಗಳನ್ನು ಪ್ರಾರಂಭಿಸಿದೆ. ತನ್ನ ವಿರೋಧಿಗಳನ್ನು ಕೇನ್‌ನಂತೆಯೇ ಹತ್ತಿಕ್ಕುವಲ್ಲಿ ಪಳಗಿರುವ ಮುಖೇಶ್ ಅಂಬಾನಿಯ ಇತ್ತೀಚಿನ ಬಲಿಗಳು ಆಮ್ ಆದ್ಮಿ ಪಕ್ಷ ಮತ್ತು ಅರವಿಂದ್ ಕೇಜ್ರಿವಾಲ್, ಸಿಎನ್‌ಎನ್-ಐಬಿಎನ್ ಗುಂಪಿನ ಹಿರಿಯ, ಪ್ರಾಮಾಣಿಕ ಪತ್ರಕರ್ತರು. ಮುಕ್ತ ಅಭಿವ್ಯಕ್ತಿ ಸ್ವಾತಂತ್ರದ ವಿರೋಧಿಗಳಾದ ರಿಲೆಯನ್ಸ್ ಸಮೂಹದ ಮಾಲಕರ ಕೈಯಲ್ಲಿ ಮಾಧ್ಯಮದ ಒಡೆತನ ದಕ್ಕಿರುವುದು ಪ್ರಜಾಪ್ರಭುತ್ವದ ಅಡಿಪಾಯಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ. ‘‘ಈ ರಿಲಯನ್ಸ್ ಸಮೂಹ ಈ ರೀತಿಯಾಗಿ ಮಾಧ್ಯಮರಂಗದಲ್ಲಿ ಪ್ರವೇಶಿಸಿ ನೆಟ್‌ವರ್ಕ್ 18 ಗುಂಪಿನ ಎಲ್ಲಾ ಛಾನಲ್‌ಗಳನ್ನು ಖರೀದಿಸಿರುವ ಪ್ರಕ್ರಿಯೆಯ ಕುರಿತಾಗಿ ಬೇರಾವ ಮಾಧ್ಯಮಗಳು ವರದಿ ಮಾಡದಿರುವುದು ನನಗೇನೂ ಆಶ್ಚರ್ಯವೆನಿಸಿಲ್ಲ’’ ಎಂದು ಕುಲದೀಪ್ ನಯ್ಯರ್ ಬರೆಯುತ್ತಾರೆ. ಇದು ಬಲು ದೊಡ್ಡ ವಿಪರ್ಯಾಸ ಮತ್ತು ಆತಂಕಕಾರಿ. ನಮ್ಮಲ್ಲಿ ಆಳವಾಗಿ ಹುದುಗಿರುವ ಪರಂಪರಾನುಗತ ಗುಲಾಮಗಿರಿ ಮತ್ತು ಸೋಮಾರಿತನ ಇಂದಿನ ಈ ಆಧುನಿಕ ಸಿಟಿಜನ್ ಕೇನ್‌ನ ಸಾಮ್ರಾಜ್ಯಕ್ಕೆ ನೀರೆರೆದು ಪೋಷಿಸುತ್ತಿವೆ. ಇಂತಹ ಒಂದು ದುರಂತಕ್ಕೆ ಕಾಯುತ್ತಿದೆಯೇನೋ ಎಂಬಂತೆ ನಮ್ಮ ವ್ಯವಸ್ಥೆ ವರ್ತಿಸುತ್ತಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s