ದಲಿತರಿಗೇಕೆ ನ್ಯಾಯ ನಿರಾಕರಣೆಯಾಗುತ್ತಿದೆ?

ಅಂಕಣ

 

ದಲಿತರಿಗೇಕೆ ನ್ಯಾಯ ನಿರಾಕರಣೆಯಾಗುತ್ತಿದೆ?

(ಕೃಪೆ: ವಾರ್ತಾಭಾರತಿ,ಮಂಗಳವಾರ – ಜುಲೈ -15-2014)

 ದಲಿತರಿಗೇಕೆ ನ್ಯಾಯ ನಿರಾಕರಣೆಯಾಗುತ್ತಿದೆ?

ಬಸವರಾಜ ಕೌತಾಳ್

ಎಪ್ರಿಲ್ 21, 2014ರಂದು ಚೂಂಡೂರಿನ 8 ಜನ ದಲಿತರನ್ನು ಕಗ್ಗೊಲೆ ಮಾಡಿದ ನರಹಂತಕರಿಗೆ ಆಂಧ್ರಪ್ರದೇಶದ ಉಚ್ಚನ್ಯಾಯಾಲಯವು ಮಾನವ ವಿರೋಧಿ ತೀರ್ಪು ನೀಡಿದೆ. ಅದೇ ರೀತಿ ಕಾರಂಬೇಡು, ಲಕ್ಷ್ಮೆಪೇಟೆ ಮತ್ತು ಕರ್ನಾಟಕದ ಕಂಬಾಲಪಲ್ಲಿಯ ದಲಿತರ ಕೊಲೆಗಡುಕರನ್ನು ನಿರಪರಾಧಿಗಳೆಂದು ತೀರ್ಪು ನೀಡಿದ್ದು, ಭಾರತದ ನ್ಯಾಯಾಲಯಗಳು ಜಾತಿವಾದಿಗಳಿಂದ ತುಂಬಿಕೊಂಡಿವೆಯೆ ಎಂಬ ಪ್ರಶ್ನೆ ಉದ್ಭವವಾಗಿದೆ.
ದಲಿತರ ಕಗ್ಗೊಲೆಗೆೆ ನ್ಯಾಯಲಯದಲ್ಲಿ ನ್ಯಾಯ ನಿರಾಕರಣೆಯಾದದ್ದೇಕೆ? ಇಂತಹ ಜಾತೀವಾದಿ ಕೊಲೆಗೆಡುಕರ ಪರ ತೀರ್ಪು ನೀಡಿದ ನ್ಯಾಯಾಲಯಗಳ ಮತ್ತು ಪ್ರಜಾಪ್ರಭುತ್ವದ ಬಗೆಗಿನ ದಲಿತರಿಗಿರುವ ನಂಬಿಕೆ ದೂರವಾಗುತ್ತಿದೆಯೇ? ಎಂಬ ಇತ್ಯಾದಿ ವಾದಗಳು ಮುಗ್ಧ ದಲಿತರನ್ನು ಸದಾ ಕಾಲವೂ ಕಾಡುವಂತೆ ಈ ನ್ಯಾಯಾಲಯಗಳ ತೀರ್ಪಗಳು ನಡೆದುಕೊಂಡಿವೆ.
  ಆಂಧ್ರದ ಚೂಂಡೂರಿನಲ್ಲಿ 1991ರಲ್ಲಿ ಜಾತಿವಾದಿ ಭೂ ಮಾಲಿಕರು 8 ಜನ ಮುಗ್ಧ ದಲಿತರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ಅದೇ ರಾಜ್ಯದ ಕಾರಂಜಿಬೇಡದಲ್ಲಿ 1985ರ ಜುಲಾ 17 ರಂದು 6 ಜನ ದಲಿತರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಹಾಗೂ 2012 ಜೂನ್ 12ರಂದು ಅದೇ ರಾಜ್ಯದ ಲಕ್ಷ್ಮೆಪೇಟೆಯಲ್ಲಿ 7ಜನ ದಲಿತರನ್ನು ಅತ್ಯಂತ ಅಮಾನುಷವಾಗಿ ಜೀವಂತ ದಹನ ಮಾಡಿ ಕಗ್ಗೊಲೆಗೈದರು. ಈ ಎಲ್ಲಾ ಕ್ರೂರ ಘಟನೆಗಳನ್ನು ಜಗತ್ತೆಲ್ಲಾ ಕಣ್ಣು ತುಂಬಿ ನೋಡಿದೆ. ಮಾಧ್ಯಮಗಳು ಭಿತ್ತರಿಸಿವೆ. ರಾಜ್ಯದ, ರಾಷ್ಟ್ರದ ಹಾಗೂ ಅಂತಾರಾಷ್ಟ್ರೀಯ ನಾಯಕರುಗಳೆಲ್ಲರೂ ಘಟನೆ ನಡೆದ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಮಾನವ ಸಮಾಜವನ್ನು ನಡುಗಿಸಿದ ಘಟನೆಗಳನ್ನು ಖಂಡಿಸಿ ಕೊಲೆಗಡುಕರಿಗೆ ಉಗ್ರ ಶಿಕ್ಷೆಯಾಗಬೇಕೆಂದು ಹೇಳಿದ ಮಾತನ್ನು, ದಲಿತರ ಕಗ್ಗೊಲೆಗಳನ್ನು ನ್ಯಾಯಾಲಯದ ತೀರ್ಪು ಸುಳ್ಳು ಮಾಡಿದೆ. ಮುಗ್ಧ ದಲಿತರನ್ನು ಅತ್ಯಂತ ಬರ್ಬರವಾಗಿ ಕೊಲೆಗೈದು, ಕ್ರೂರವಾಗಿ ದಹನ ಮಾಡಿದ ಜಾತಿವಾದಿ ಭೂಮಾಲಕರು ದಲಿತರ ಆಕ್ರಂದನವನ್ನು ಕಣ್ಣಾರೆ ಕಂಡು ಕಿವಿಯಾರೆ ಕೇಳಿ ಕೇಕೆ ಹಾಕಿ ಮೆರೆದ ಕೊಲೆಗಡುಕರಿಗೆ ಜಾತಿವಾದಿ ನ್ಯಾಯಾಲಯಗಳು ಕೊಟ್ಟ ತೀರ್ಪಿನಿಂದಾಗಿ ದೊರೆತ ಜಯವೆಂದಾದರೆ ಅದು ಜಾತಿವಾದಿ ಕ್ರೂರ ಸಮಾಜಕ್ಕೆ ಸಿಕ್ಕ ಜಯವೆಂಬುದರಲ್ಲಿ ಅನುಮಾನವೇ ಇಲ್ಲ. ಭಾರತದ ಉದ್ದಗಲಕ್ಕೂ ಬೇರು ಬಿಟ್ಟು ಬೆಳೆದ ಜಾತಿವಾದಿ ಕ್ರೌರ್ಯ ಇಡೀ ಪ್ರಜಾಪ್ರಭುತ್ವದ ಎಲ್ಲ ಆಡಳಿತಾತ್ಮಕ ನೆಲೆಗಳಲ್ಲಿ ಆವರಿಸಿಕೊಂಡಿದೆ ಎಂಬುದಕ್ಕೆ ನ್ಯಾಯಾಲಯಗಳ ತೀರ್ಪುಗಳೇ ಸಾಕ್ಷಿ. ಈ ತೀರ್ಪಿನಿಂದ ಜಾತಿವಾದಿ ಭೂಮಾಲಕ ಕೊಲೆಗಡುಕರಿಗೆ ಇನ್ನಷ್ಟು ಶಕ್ತಿ ಸಿಕ್ಕಂತಾದರೆ ದಲಿತರು ಆತಂಕದಲ್ಲಿ ಇನ್ನೆಷ್ಟು ದಿನ ಜೀವನ ಸಾಗಿಸಬೇಕಾಗಿದೆಯೋ ಗೊತ್ತಿಲ್ಲ.
 ಪ್ರತಿಶತ 95ರಷ್ಟು ಪ್ರಕರಣಗಳು ಪೊಲೀಸ್ ಮತ್ತು ನ್ಯಾಯಾಲಯಗಳಲ್ಲಿ ನ್ಯಾಯ ನಿರಾಕರಣೆಯಾಗಿ ಇನ್ನೂ 5% ಪ್ರಕರಣಗಳು ಮಾತ್ರ ತಾತ್ಕಾಲಿಕ ಶಿಕ್ಷೆಯಾಗುತ್ತಿವೆ ಎಂದು ಸರಕಾರದ ಅಂಕಿ ಅಂಶ ಹೇಳುತ್ತಿವೆ. ಇನ್ನು ಪೊಲೀಸ್ ಠಾಣೆಯನ್ನು ಕಾಣದ ಅದೆಷ್ಟೊ ಘಟನೆಗಳು ಜಾತಿವಾದಿ ಭೂಮಾಲಕರ ಪಾಳೆಗಾರಿಕೆಯ ಆಡಳಿತದಲ್ಲಿಯೇ ರಾಜಿಯಾಗುತ್ತಿವೆ ಎಂದಾದರೆ ಬದಲಾಗುತ್ತಿರುವ ಆಧುನಿಕ ಜಾಗತೀಕರಣದ ಸಮಾಜ ಯಾವ ದಿಕ್ಕಿನತ್ತ ಸಾಗುತ್ತಿದೆ? ಸಂವಿಧಾನದ ಆಶಯಗಳಾದ ಸ್ವಾತಂತ್ರ, ಸಮಾನತೆ, ಸಹೋದರತ್ವ, ಸಹಬಾಳ್ವೆ ಎಂಬುದಕ್ಕೆ ಅರ್ಥವೇನಾದರೂ ಇದೆಯಾ? ಎಂಬುದನ್ನು ಪ್ರಜ್ಞಾವಂತ ಸಮಾಜ ಆಲೋಚನೆ ಮಾಡಬೇಕಾಗಿದೆ.
     ಕರ್ನಾಟಕದಲ್ಲಿ 70ರ ದಶಕದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯು ದೇಶದುದ್ದಕ್ಕೂ ನಡೆಯುತ್ತಿರುವ ದಲಿತರ ಸಾಮೂಹಿಕ ನರಮೇಧ, ಕಗ್ಗೋಲೆ, ಹಲ್ಲೆ, ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರ, ಜಾತಿ ಆಧಾರಿತ ಅವಮಾನ-ಅನ್ಯಾಯಗಳ ವಿರುದ್ಧ ದಲಿತರನ್ನು ಜಾಗೃತಗೊಳಿಸುವತ್ತ, ದಲಿತರು ಘನತೆ ಗೌರವ ಸಾಭಿಮಾನದಿಂದ ಬದುಕಿ ಬಾಳಲು ಸೂಕ್ತ ನ್ಯಾಯರಕ್ಷಣೆಗಾಗಿ ನಡೆದ ಹೋರಾಟ ಅನ್ಯಾಯಕ್ಕೊಳಗಾದ ಎಲ್ಲ ಶೋಷಿತ ದುರ್ಬಲರಿಗೆ ಶಕ್ತಿಯಾಗಿತ್ತು. ಮಾತ್ರವಲ್ಲ ಎಲ್ಲ ಬಡಜನರಿಗೆ ನ್ಯಾಯ ರಕ್ಷಣೆಯ ನೆರಳಾಗಿತ್ತು. ಆದರೆ ಕಂಬಾಲಪಲ್ಲಿ ಹಾಗೂ ಇನ್ನಿತರ ಹಳ್ಳಿಗಳ ದಲಿತರಿಗೆ ನ್ಯಾಯಾಲಯಗಳಲ್ಲಿ ನ್ಯಾಯ ಒದಗಿಸಿಕೊಡುವಲ್ಲಿ ವಿಫಲರಾಗಿರುವುದು ಪ್ರಸ್ತುತ ದಲಿತ ಚಳವಳಿಯ ದುರಂತವೇ ಸರಿ. ದಲಿತರ ರಕ್ಷಣೆ ಮತ್ತು ನ್ಯಾಯ ನಿರಾಕರಣೆಯು ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದ ಎಲ್ಲಾ ಕಡೆ ನಡೆಯುತ್ತಿವೆ ಎಂಬುದಕ್ಕೆ ಆಂಧ್ರದ ಈ ಘಟನೆಗಳು ಸಾಕ್ಷಿಯಾಗಿವೆ. ಹಿಂದೆಂದಿಗಿಂತಲೂ ಜಾತಿ ಆಧಾರಿತ ಅಸಮಾನತೆ ಅವಮಾನ, ಹಲ್ಲೆ, ದೌರ್ಜನ್ಯ, ಅತ್ಯಾಚಾರಗಳು, ಎಲ್ಲಾ ಕ್ಷೇತ್ರಗಳಿಗೆ ವಿಸ್ತರಿಸಿರುವುದು ಮಾತ್ರವಲ್ಲದೆ, ಅವುಗಳು ಸಂಘಟಿತ ರೂಪ ಪಡೆದುಕೊಳ್ಳುತ್ತಿವೆ. ಜಾತಿವಾದಿ ಸಮಾಜ ಮತ್ತು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ದಲಿತರಿಗೆ ಸಿಗಬೇಕಾದ ನ್ಯಾಯ ರಕ್ಷಣೆ ಹಾಗೂ ಅಭಿವೃದ್ಧಿಯ ಹಕ್ಕುಗಳು ಪ್ರಜ್ಞಾಪೂರ್ವಕವಾಗಿ ನಿರಾಕರಣೆಯಾಗುತ್ತಿವೆಯೇನೋ ಎಂಬ ಆತಂಕ ದಲಿತರನ್ನು ಕಾಡುತ್ತಿವೆ. ಇಂತಹ ಜಾತಿವಾದಿ ಕ್ರೂರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ದಲಿತರಿಗೆ ನ್ಯಾಯ ಹಾಗೂ ರಕ್ಷಣೆಯ ಪರವಾಗಿರುವ ದಲಿತ ಸಂಘಟನೆಗಳು ಸಾಮೂಹಿಕ ಶಕ್ತಿಯಾಗುವುದರ ಮೂಲಕ ದೇಶವ್ಯಾಪಿ ಹೋರಾಟಕ್ಕಿಳಿಯಬೇಕಾದ ತುರ್ತು ಅನಿವಾರ್ಯತೆ ನಿರ್ಮಾಣವಾಗಬೇಕಾಗಿದೆ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s