ಜಾತೀಯತೆ ಎಂಬ ರೋಗ ಮತ್ತು ಮೀಸಲಾತಿ ಎಂಬ ಔಷಧ

ಜಾತೀಯತೆ ಎಂಬ ರೋಗ ಮತ್ತು ಮೀಸಲಾತಿ ಎಂಬ ಔಷಧ
-ರಘೋತ್ತಮ ಹೊ.ಬ

ಒಂದು ಉದಾಹರಣೆ; ನಿಮಗೆ ಜ್ವರ ಬಂದಿದೆ ಎಂದಿಟ್ಟುಕೊಳ್ಳಿ. ಆಸ್ಪತ್ರೆಗೆ ಹೋಗುತ್ತೀರಿ ತಾನೆ? ಡಾಕ್ಟರರು ಹೇಳುವ ಪರೀಕ್ಷೆಗಳನ್ನು ಮಾಡಿಸಿ ಜ್ವರ ಯಾಕೆ ಬಂತು, ಹೇಗೆ ಬಂತು ಇತ್ಯಾದಿಗಳನ್ನು ವಿವರಿಸಿ ಟ್ರೀಟ್‍ಮೆಂಟ್ ಪಡೆಯುತ್ತೀರಿ ತಾನೆ? ವಾಸಿಮಾಡಿಕೊಳ್ಳುತ್ತೀರಿ ತಾನೆ? ಅದು ಬಿಟ್ಟು ಜ್ವರ ಬಂದಿದ್ದರೆ “ಹೇ! ಜ್ವರಾನೂ ಇಲ,್ಲ ಏನು ಇಲ್ಲಾ” ಎಂದರೆ ಬಂದಿರುವ ಜ್ವರ ವಾಸಿಯಾಗುತ್ತದೆಯೇ? ಆ ಜ್ವರದ ಹಿಂದಿರುವ ರೋಗ ವಾಸಿಯಾಗುತ್ತದೆಯೇ? ಖಂಡಿತ, ನಮ್ಮಪ್ಪರಾಣೆಗೂ ಸಾಧ್ಯವಿಲ್ಲ. ಹಾಗೇನಾದರೂ ಜ್ವರ ಬಂದಿಲ್ಲ ಎಂದು ಆತ ಸುಮ್ಮನೆ ಕುಳಿತರೆ ಆತ ಮುಗಿದಹಾಗೆಯೇ. ಟಿಕೆಟ್‍ತೆಗೆದುಕೊಂಡ ಹಾಗೆಯೇ!

ಇದನ್ನು ಅತಿಶಯೋಕ್ತಿ ಎಂದು ಕೊಂಡರೆ ಕಣ್ಣಾರೆಕಂಡ ನನ್ನ ಸ್ನೇಹಿತನೊಬ್ಬನ ಕಥೆಯನ್ನೇ ಹೇಳುತ್ತೇನೆ ಕೇಳಿ. ನಾನಾಗ ಸೆಕೆಂಡ್ ಪಿಯುಸಿ ಓದುತ್ತಿದ್ದೆ. Exam ಮುಗಿದಿತ್ತು. ನನ್ನ ಸ್ನೇಹಿತ ಕೂಡ Exam ಮುಗಿಸಿ ಆರಾಮಾಗಿ ಮನೆಯಲ್ಲಿ ಇದ್ದ. ಆತನಿಗೆ ಅಪ್ಪ ಅಮ್ಮ ಇರಲಿಲ್ಲ. ಅಣ್ಣ ಅತ್ತಿಗೆ ಇದ್ದರು. ನಾಚಿಕೆ ಸ್ವಭಾವದ ಆತ ಅಣ್ಣ ಅತ್ತಿಗೆಯ ಜೊತೆ ಅಷ್ಟು ಮುಕ್ತವಾಗಿ ಮಾತನಾಡುತ್ತಿರಲಿಲ್ಲ. ಹೀಗಿರುವಾಗ ಪರೀಕ್ಷೆ ಮುಗಿದ ಆ ದಿನ ರಾತ್ರಿ ಅವನಿಗೆ ಊಟವಾದ ನಂತರ ಯಾಕೋ ಹೊಟ್ಟೆ ತೊಳೆಸಿದಂತಾಗಿ ಭೇದಿ ಪ್ರಾರಂಭವಾಯಿತು. ರಾತ್ರಿ ಪೂರಾ ಐದಾರು ಸಾರಿ ವಾಂತಿಭೇದಿಯಾಯಿತು. ಮೊದಲೇ ಹೇಳಿದ ಹಾಗೆ ನಾಚಿಕೆ ಸ್ವಭಾವದ ಆತ ಅದನ್ನು ತನ್ನ ಅಣ್ಣ ಅತ್ತಿಗೆಗೆ ಹೇಳಲಿಲ್ಲ. ಬೆಳಿಗ್ಗೆ ಆದ ನಂತರ ತಾನೇ ವೈದ್ಯರ ಬಳಿ ಹೋಗಿ ತೋರಿಸಿಕೊಳ್ಳೋಣವೆಂದು ಸುಮ್ಮನಾದ. ಆದರೆ? ಬೆಳಿಗ್ಗೆ ಆಗೋ ಹೊತ್ತಿಗೆ ಆತನಿಗೆ ಭೇದಿ ಜಾಸ್ತಿಯಾಗಿ ಅರೆಜೀವವಾಗಿ ಮಲಗಿದ್ದ. ಬೆಳಿಗ್ಗೆ ಅಣ್ಣನಿಗೆ ತಿಳಿಸಿದನಾದರೂ ಅಷ್ಟೊತ್ತಿಗಾಲೇ ಅವನ ಕಥೆ ಮುಗಿದುಹೋಗಿತ್ತು. ಸ್ನೇಹಿತ ತನ್ನ ಸಮಸ್ಯೆಯನ್ನು ಯಾರಿಗೂ ಹೇಳದೆ ಮುಚ್ಚಿಟ್ಟುಕೊಂಡು ಸಾವಿನ ಮನೆ ಸೇರಿದ್ದ!

ಈಗ ಹೇಳಿ ಸ್ನೇಹಿತ ತನಗೆ ವಾಂತಿ ಭೇಧಿ ಆಗಿದೆ ಎಂದು ತನ್ನ ಮನೆಯವರಿಗೆ ಹೇಳಿದ್ದರೆ ಆತ ಬದುಕುತ್ತಿದ್ದ ತಾನೆ? ತನ್ನ ರೋಗದ ಬಗ್ಗೆ ಹೇಳಿದ್ದರೆ ಆ ರೋಗಕ್ಕೆ ಆತ ಪರಿಹಾರ ಕಂಡುಕೊಳ್ಳುತ್ತಿದ್ದ ತಾನೆ? ಆತ ಹಾಗೆ ಮಾಡಲಿಲ್ಲ. ತನ್ಮೂಲಕ ತನ್ನ ಗುಂಡಿಯನ್ನು ಆತ ತಾನೇ ತೋಡಿಕೊಂಡ. ಅಂದಹಾಗೆ ಇಂತಹ ‘ರೋಗದ ಕಥೆ’ಯನ್ನು ನಾನು ನಿಮಗೆ ಯಾಕೆ ಯಹೇಳಬೇಕಾಯಿತು ಎಂಬ ಹಿನ್ನೆಲೆಯನ್ನು ಹೇಳಿಲಿಲ್ಲ. ಮೊನ್ನೆ ಸ್ನೇಹಿತರ ಒಂದು ಗುಂಪು ನನ್ನನ್ನು “ ಸಾರ್, ನೀವ್ಯಾಕೆ ಪದೇ ಪದೇ ದಲಿತರು, ದಲಿತರು ಎಂದು ಜಾತಿಯ ಹೆಸರನ್ನು ಹೇಳುತ್ತೀರಿ? ಹೀಗಾದರೆ ಜಾತಿ ನಿರ್ಮೂಲನೆ ಹೇಗೆ ಸಾಧ್ಯ? ಒಟ್ಟಾರೆ ಹಿಂದೂಗಳು ಎನ್ನಿ. ಆಗ ನಾವೆಲ್ಲಾ ಒಂದಾಗುತ್ತೇವೆ” ಎಂದು ಆಕ್ಷೇಪಿಸಿತು. ಅಂದಹಾಗೆ ಸಂಘಪರಿವಾರದ ಹಿನ್ನೆಲೆಯ ಸ್ನೇಹಿತರ ಆ ಗುಂಪು ನನ್ನ ನೂತನ ಕೃತಿ “ಗಾಂಧಿ ಹೋರಾಟ ಯಾರ ವಿರುದ್ಧ?”ವನ್ನು ಓದಿ ಅದರಲ್ಲಿ ನಾನು ಪ್ರಸ್ತಾಪಿಸಿದ್ದ ವಿಷಯಗಳನ್ನು ಓದಿಕೊಂಡು ಕುಪಿತಗೊಂಡು ನನ್ನ ಜೊತೆ ಹಾಗೆ ವಾಗ್ವಾದಕ್ಕಿಳಿಯಿತು. ಆಗ ನಾನು ಅವರಿಗೆ ತನ್ನ ರೋಗದ ಬಗ್ಗೆ ಬೇರೆಯವರಿಗೆ ಹೇಳದೆ ಸತ್ತ ಸ್ನೇಹಿತನ ಈ ಪ್ರಸಂಗ ಹೇಳ ಬೇಕಾಯಿತಷ್ಟೆ.

ನಿಜ, ಅಸ್ಪøಶ್ಯತೆ, ಜಾತೀಯತೆ ಈ ದೇಶಕ್ಕೆ ವಿಶೇಷವಾಗಿ ಹಿಂದೂ ಧರ್ಮಕ್ಕಂಟಿದ ರೋಗ. ವಯಕ್ತಿಕ ಅಭಿಪ್ರಾಯವಲ್ಲ. ಸ್ವತಃ ಡಾ.ಅಂಬೇಡ್ಕರರೇ “ಹಿಂದೂಗಳು ಈ ದೇಶದ ರೋಗಿಗಳು. ಅವರ ರೋಗದಿಂದ ಇತರರಿಗೆ ತೊಂದರೆಯಾಗುತ್ತಿದೆ ಎಂದು ಹಿಂದೂಗಳಿಗೆ ಅರಿವು ಮೂಡಿಸುವುದೇ ತನ್ನ ಕರ್ತವ್ಯ”ವೆಂದು ತಮ್ಮ “ಜಾತಿ ನಿಮೂಲನೆ” ಎಂಬ ಕೃತಿಯಲ್ಲಿ ಹೇಳುತ್ತಾರೆ. ವಿಚಿತ್ರವೆಂದರೆ ಜಾತೀಯತೆ, ಅಸ್ಪøಶ್ಯತೆ ಎಂಬೀ ರೋಗಗಳು ಅಂಟಿರುವುದು ಮೇಲ್ಜಾತಿಯವರಿಗಾದರೂ ಅದರಿಂದ ಬಳಲುತ್ತಿರುವವರು ಮಾತ್ರ ಕೆಳ ಜಾತಿಯವರು. ವಿಶೇಷವಾಗಿ ದಲಿತರು. ಬಹುಶಃ ಇಂತಹ ಪರಿಸ್ಥಿತಿ ಅಂದರೆ ರೋಗ ಬಂದಿರುವವರೊಬ್ಬರು, ಅದರಿಂದ ನರಳುತ್ತಿರುವವರು ಮತ್ತೊಬ್ಬರು ಎಂಬ ಪರಿಸ್ಥಿತಿ ಪ್ರಪಂಚದಲ್ಲಿ ಇನ್ನೆಲ್ಲಿಯೂ ಇಲ್ಲವೇನೊ! ಆದರೆ ಭಾರತದಲ್ಲಿ ಅದು ಇದೆ. ಅಂತಹ ರೋಗ, ಅದರ ಲಕ್ಷಣ, ಅದರಿಂದ ನರಳುವಿಕೆಯನ್ನು ಧರ್ಮ ಎನ್ನಲಾಗುತ್ತಿದೆ!

ಇರಲಿ, ರೋಗ ಎಂದ ತಕ್ಷಣ treatment ಬೇಡವೆ? ಅಂತಹ treatment ಬೇಕು ಎಂದಾಕ್ಷಣ ಮೊದಲಿಗೆ ನಿನಗ್ಯಾವ ರೋಗ ಎಂದು ತಿಳಿಸುವುದು ಬೇಡವೆ? ಹಾಗೆ ಹೇಳಿದರೆ ತಾನೆ ವೈದ್ಯರಿಂದ ಪರಿಹಾರ ಸಿಗುವುದು? ಆದರೆ ಸಂಘಪರಿವಾರದ ಮಿತ್ರರು ಹೇಳುತ್ತಿದ್ದದ್ದೆ ಬೇರೆ! “ನಮಗ್ಯಾವ ಜಾತಿಯೂ ಬೇಡ, ಜಾತಿಯ ಹೆಸರನ್ನು ಹೇಳುವುದೂ ಬೇಡ. ಜಾತಿ ಪ್ರಮಾಣಪತ್ರವನ್ನು ನೀಡುವುದನ್ನು ನಿಷೇಧೀಸಬೇಕು!” ಹೀಗೆ ಸಾಗಿತ್ತು ಅವರ ವಾದ. ಅಂದಹಾಗೆ ಜಾತಿ ಪ್ರಮಾಣ ಪತ್ರ ನೀಡುವುದನ್ನು ನಿಷೇಧಿಸಿ ಎಂದರೆ ಏನರ್ಥ? ಮೀಸಲಾತಿ ನಿಷೇಧಿಸಿ ಎಂದರ್ಥ! ಆದರೆ ಆ ಮಿತ್ರರು ಹಾಗಂತ ಹೇಳಲೆ ಇಲ್ಲ! “ಜಾತಿ ಏಕೆ ಬೇಕು ಸಾರ್” ಎಂದು ಕುಯುಕ್ತಿಯ, ಕುತಂತ್ರದ ವಾದವನ್ನು ಪದೇ ಪದೇ ಮುಂದುವರಿಸಿದರು!

ಮನುವಾದವೇ ಹೀಗೆ, ಅದು ತಾನು ನೇರವಾಗಿ ಏನನ್ನು ಹೇಳಬೇಕೋ ಅದನ್ನು ಹೇಳುವುದಿಲ್ಲ. ಬದಲಿಗೆ ಇನ್ನೇನನ್ನೋ ಹೇಳಿ ಎಲ್ಲರನ್ನೂ ಯಾಮಾರಿಸುತ್ತಿರುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವೆನ್ನುತ್ತದೆ. ಅಂಬೇಡ್ಕರ್, ಮಹಾತ್ಮ ಫುಲೆ, ವಿವೇಕಾನಂದ, ನಾರಾಯಣ ಗುರು ಇತ್ಯಾದಿ ಹಿಂದೂ ಧರ್ಮದ ವಿರುದ್ಧ ಬಂಡೆದ್ದವರನ್ನು ಹಿಂದೂ ಧರ್ಮಧ ಸುಧಾರಕರೆನ್ನುತ್ತದೆ! ಮಸೀದಿ ಕೆಳಗೆ ಮಂದಿರವಿದೆ ಎನ್ನುತ್ತದೆ. ಮಂದಿರದ ಕೆಳಗೆ ಮತ್ತೇನೋ ಇದೆ ಎನ್ನುತ್ತದೆ! ಒಟ್ಟಿನಲಿ ‘ರೋಗ’ ಮಾತ್ರ ಹಾಗೇ ಇರಬೇಕು! ಯಾಕೆಂದರೆ ರೋಗದ ಪರಿಣಾಮವನ್ನು ಅನುಭವಿಸುವವರು ಅವರಲ್ಲವಲ್ಲ!

ಹಾಗಿದ್ದರೆ ರೋಗ ವಾಸಿಯಾಗುವುದು ಬೇಡವೆ? ಬೇರಾವುದಕ್ಕಾದರೂ ಇರಲಿ ಮೀಸಲಾತಿಗೋಸ್ಕರವಾದರೂ ‘ರೋಗ’ಇರಬೇಕೆಂದರ್ಥವೆ? ಊಹ್ಞೂಂ, ಜಾತೀಯತೆ ಮತ್ತು ಅಸ್ಪøಶ್ಯತೆ ಎಂಬ ರೋಗ ನಾಶವಾಬೇಕು. ಆದರೆ ಅದು ಹೇಗೆ? ಇಂತಹ ರೋಗ ಎಂದು ವೈದ್ಯರ(ಸರ್ಕಾರ) ಮುಂದೆ ಹೇಳದೆ ಇರುವುದರಿಂದ ಅದರ ನಾಶ ಸಾಧ್ಯವೆ? ಖಂಡಿತ ಇಲ್ಲ. ಬಾಬಾಸಾಹೇಬ್ ಅಂಬೇಡ್ಕರರ ಮಾತನ್ನು ಹೇಳುವುದಾದರೆ “ಜಾತಿವ್ಯವಸ್ಥೆಗೆ ನೆಲೆಗಟ್ಟಾಗಿರುವ ಧಾರ್ಮಿಕ ಕಲ್ಪನೆ ಪರಿಕಲ್ಪನೆ ಗಳನ್ನು ಒಡೆದು ಪುಡಿಗಟ್ಟಿ ನಿರ್ನಾಮ ಮಾಡಬೇಕು. ಆಗ ಮಾತ್ರ ಜಾತಿ ವಿನಾಶ ಸಾಧ್ಯ”. ಎಂತಹ great ಮಾತುಗಳು!

ಜಾತಿ ವ್ಯವಸ್ಥೆ ಎಂಬ ರೋಗ ನಾಶವಾಗಬೇಕಾದರೆ ಒಟ್ಟಾರೆ ಜಾತಿ ವಿನಾಶವಾಗಬೇಕಾದರೆ ಅದರ ಹಿಂದಿರುವ ಧಾರ್ಮಿಕ ಪರಿಕಲ್ಪನೆಗಳು, ಕಟ್ಟುಪಾಡುಗಳು, ನೀತಿ ನಿಬಂಧನೆಗಳು ನಾಶವಾಗಬೇಕು! ಸೆರೆಮನೆಯಿಂದ ಹೊರಬರಬೇಕಾದರೆ ಸೆರೆಮನೆಯ ಬೀಗ ತೆಗೆಯಬೇಕು ತಾನೆ? ಅಂಬೇಡ್ಕರರು ಹೇಳುವುದು ಅದನ್ನೆ. ಹಿಂದೂ ಧರ್ಮದಲ್ಲಿರುವ ಮೇಲು- ಕೀಳು, ಸ್ಪಶ್ಯ-ಅಸ್ಪøಶ್ಯ , ಹೊರಗೆ-ಒಳಗೆ, ದೂರ-ಹತ್ತಿರ , ಮುಟ್ಟಿಸಿಕೊಳ್ಳದವರು-ಮುಟ್ಟಿಸಿಕೊಳ್ಳುವವರು ಇತ್ಯಾದಿ ಭೇದಗಳು ನಾಶವಾಗಬೇಕು. ಹಾಗೆ ಅದು ನಾಶವಾಬೇಕು ಎಂದಾಕ್ಷಣ ಅದು ಸುಮ್ಮನೆ ನಾಶವಾಗುತ್ತದೆಯೇ? ಊಹ್ಞೂಂ, ಹೊರಗೆ ಇರುವವರು ಒಳಗೆ ಬರಲು ಪ್ರಯತ್ನಿಸಬೇಕು. ಮುಟ್ಟಿಸಿಕೊಳ್ಳದವರನ್ನು ಮುಟ್ಟಲು ಯತ್ನಿಸಬೇಕು. ದೂರಿಇರುವವರು ಹತ್ತಿರ ಬರಬೇಕು. ಕೆಳಗೆ ಇರುವವರು ಮೇಲೆ ಬರಬೇಕು! ಅಂದಹಾಗೆ ಇಂತಹ ಪ್ರಕ್ರಿಯೆಗಳನ್ನೇ ‘ಪರಿವರ್ತನೆ’ ಎಂದು ಕರೆಯುವುದು! ಅಂತಹ ಪರಿವರ್ತನೆ ನಡೆಯುವಾಗ ಕೆಳಗೆ ಇರುವವರಿಗೆ ಮೇಲೆ ಬರಲು ಮೀಸಲಾತಿ ಎಂಬ ಹಗ್ಗ ಬೇಕಾಗುತ್ತದೆ! ದೂರ ಇರುವವರನ್ನು ಹತ್ತಿರ ತರಲು ‘ವಿಶೇಷ ಸವಲತ್ತುಗಳ’ ವಾಹನ ಕಳುಹಿಸಲಾಗುತ್ತದೆ! ಹೊರಗೆ ಇರುವವರನ್ನು ಒಳಗೆ ಕರೆತರಲು ಸಂವಿಧಾನದಲ್ಲಿ ವಿಶೇಷ ವಿಧಿ ನಿಯಮಗಳನ್ನು ಅಳವಡಿಸಲಾಗುತ್ತದೆ. ತನ್ಮೂಲಕ ಜಾತೀಯತೆ ಎಂಬ ರೋಗವನ್ನು ನಾಶಪಡಿಸಲಾಗುತ್ತದೆ.

ಹೀಗಿರುವಾಗ ಮೀಸಲಾತಿ ನೀಡುವುದರಿಂದ ಜಾತೀಯತೆ ಹೆಚ್ಚಾಗುತ್ತದೆ ಎಂದರೆ, ವಿಶೇಷ ಸವಲತ್ತುಗಳನ್ನು ನೀಡುವುದರಿಂದ ತಾರತಮ್ಯ ಮಾಡಲಾಗುತ್ತದೆ ಎಂದರೆ, ಸಂವಿಧಾನದಲ್ಲಿ ವಿಶೇಷ ನಿಯಮಗಳ ಮೂಲಕ ಅಸಮಾನತೆ ಮಾಡಲಾಗುತ್ತದೆ ಎಂದರೆ, ಜಾತಿ ಎಂಬ ರೋಗ ಆ ಮೂಲಕ ಅಸ್ಪøಶ್ಯತೆ ಎಂಬ ಮಹಾರೋಗದ ಮೂಲೋತ್ಪಾಟನೆ ಸಾಧ್ಯವೆ? 1902 ಜುಲೈ, 26 (ಕೊಲ್ಲಾಪುರದ ಛತ್ರಪತಿ ಶಾಹುಮಹಾರಾಜರು ತಮ್ಮ ಸಂಸ್ಥಾನದಲ್ಲಿ ಶೂದ್ರಾತಿಶೂದ್ರರಿಗೆ ಶೇ.50 ಮೀಸಲಾತಿ ಜಾರಿ ಮಾಡಿದ ದಿನ) ರ ತನಕ ಈ ದೇಶದಲ್ಲಿ ಮೀಸಲಾತಿಯೂ ಇರಲಿಲ್ಲ, caste certificate, ವಿಶೇಷ ವಿಧಿನಿಯಮ ಇತ್ಯಾದಿಗಳಾವವೂ ಇರಲಿಲ್ಲ. ಹಾಗಿದ್ದರೆ ಅಲ್ಲಿಯವರೆಗೆ ಈ ದೇಶ ಸರಿಯಾಗಿತ್ತು ಅಲ್ಲಿಂದಾಚೆಗೆ ಅಂದರೆ ಮೀಸಲಾತಿ ಜಾರಿಗೆ ಬಂದ ಸಮಯದಿಂದಾಚೆಗೆ ಜಾತೀಯತೆ ಎಂಬ ರೋಗ ಉಲ್ಬಣಿಸಿತೆಂದರ್ಥವೆ? ಖಂಡಿತ ಹಾಗೆಂದರೆ ಅದು ಹಾಸ್ಯಾಸ್ಪದವಾಗುತ್ತದೆ. ಹಾಗೆ ಹೇಳುವುದಾದರೆ 1902 ಜುಲೈ 26 ಅದು ರೋಗಕ್ಕೆ ಔಷದಿ ಕೊಡಲು ಪ್ರಾರಂಭವಾದ ದಿನ.

ಮೀಸಲಾತಿ ಜಾರಿಗೆ ಬರುವ ಮೊದಲು ಮೇಲ್ಜಾತಿಗಳಿಗೆ ಅಂಟಿದ್ದ ಜಾತಿ ಎಂಬ ರೋಗದಿಂದ ಬಳಲುತ್ತಿದ್ದ ಕೆಳಜಾತಿಗಳು ಮೀಸಲಾತಿ ಜಾರಿಗೆ ಬಂದ ನಂತರ ತುಸು ಬಲಿತುಕೊಳ್ಳಲು ಆರಂಭಿಸಿವೆ. ಹಾಗೆಯೇ ಮೀಸಲಾತಿ ಮೂಲಕ ಜಾತೀಯತೆ ಎಂಬ ರೋಗದ ಪರಿಣಾಮದ ಅರಿವು ಅಥವಾ ನೋವು ಮೇಲ್ಜಾತಿಗಳಿಗೂ ಕೂಡ ತಾಕಲಾರಂಭಿಸಿದೆ! ಅಂದಹಾಗೆ ಅಂತಹ ನೋವು ಜಾಸ್ತಿ ಆದ ಹಾಗೆ ಮೇಲ್ಜಾತಿಗಳು ಏನು ಮಾಡುತ್ತಾರೆ? ತಮಗಂಟಿರುವ ಜಾತೀಯತೆ ಎಂಬ ಆ ಜಾಢ್ಯವನ್ನು ಕಿತ್ತು ಬೀಸಾಡುತ್ತಾರೆ ತಾನೆ? ಖಂಡಿತ, ಅಂತಹ ಬೀಸಾಡುವ ಕಾಲ ಬರಬೇಕು. ಜಾತೀಯತೆ ಎಂಬ ರೋಗ ವಿನಾಶಗೊಂಡು ಮೇಲ್ಜಾತಿ, ಕೆಳಜಾತಿ ಒಟ್ಟಾರೆ ಎಲ್ಲಾ ಜಾತಿಗಳೂ ಮುಕ್ತವಾಗಿ ಪರಸ್ಪರ ಅರ್ಥಮಾಡಿಕೊಂಡು ಸಹಯೋಗದಿಂದ ಜೀವಿಸುವಂತಾಗಬೇಕು. ಪರಿಪೂರ್ಣ ಸಾಮಾಜಿಕ ಆರೋಗ್ಯವುಳ್ಳ ದೇಶ ನಮ್ಮದಾಗಬೇಕು ಎ0ಬುದಷ್ಟೆ ಸಧ್ಯದ ಕಳಕಳಿ.

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s