ಅಸ್ಪೃಶ್ಯರಿಗಾದ ‘ಪೂನಾ ಒಪ್ಪಂದ’ ಎಂಬ ಚಾರಿತ್ರಿ ಕ ವಂಚನೆಯ ಸುತ್ತಾ…

ಅಸ್ಪೃಶ್ಯರಿಗಾದ ‘ಪೂನಾ ಒಪ್ಪಂದ’ ಎಂಬ ಚಾರಿತ್ರಿಕ ವಂಚನೆಯ ಸುತ್ತಾ…

ಪೂನಾ ಒಪ್ಪಂದ: ಬಹುಶಃ ಈ ಒಂದು ಒಪ್ಪಂದ ಭಾರತದ ಇತಿಹಾಸದಲ್ಲಿ ಕಂಡೂ ಕೇಳರಿಯದ ಒಂದು ವಿಚಿತ್ರ ಒಪ್ಪಂದ. ವಿಚಿತ್ರ, ಯಾಕೆಂದರೆ ಇದು ಎರಡು ಬೇರೆ ಬೇರೆ ದೇಶಗಳ ಬದಲು ಎರಡು ಬೇರೆ ಬೇರೆ ಜನಾಂಗಗಳ ನಡುವೆ ನಡೆದಿದೆ. ಹಿಂದೂಗಳು ಮತ್ತು ಪರಿಶಿಷ್ಟರೇ ಹಾಗೆ ಒಪ್ಪಂದ ಏರ್ಪಡಿಸಿಕೊಂಡ ಜನಾಂಗಗಳು. ನಡೆದ ದಿನಾಂಕ 1932 ಸೆಪ್ಟಂಬರ್ 24.

ಯಾಕೆ ಈ ಒಪ್ಪಂದ ನಡೆಯಿತು? ಬಾಬಾಸಾಹೇಬ್ ಅಂಬೇಡ್ಕರ್‍ರವರು ತಮ್ಮ ಜನರಿಗಾಗಿ ಅಂದರೆ ಎಸ್‍ಸಿಗಳು ಮತ್ತು ಎಸ್‍ಟಿಗಳಿಗಾಗಿ ಆಗ ಮುಸ್ಲೀಮರು ಮತ್ತು ಸಿಖ್ಖರಿಗೆ ಜಾರಿಯಲ್ಲಿದ್ದ ‘ಪ್ರತ್ಯೇಕ ಮತದಾನ’ ಎಂಬ ವಿಶಿಷ್ಟ ಮತದಾನ ಪದ್ಧತಿಯನ್ನು ಲಂಡನ್ನಿನಲ್ಲಿ ಒಂದನೇ ದುಂಡುಮೇಜಿನ ಸಭೆಯಲ್ಲಿ (1931) ಬ್ರಿಟಿಷರ ಜೊತೆ ಸಮರ್ಥ ವಾದ ಮಂಡಿಸಿ ಪಡೆದರು. ಕಥೆ ಇಲ್ಲಿಗೇ ಮುಗಿದಿದ್ದರೆ ಸರಿ ಹೋಗುತ್ತಿತ್ತು. ಆದರೆ ಪರಿಶಿಷ್ಟರಿಗೆ ದೊರೆತ ಇಂತಹ ಅರ್ಥಪೂರ್ಣ ಅನುಕೂಲದಿಂದ ಅಂದಿನ ಸ್ವಾತಂತ್ರ್ಯ(ಯಾರಿಗೆ ಎಂಬುದನ್ನು ಸ್ವತಃ ಗಾಂಧಿಯವರೇ ಹೇಳಬೇಕಿತ್ತು!) ಹೋರಾಟದ ನೇತೃತ್ವ ವಹಿಸಿದ್ದ ಗಾಂಧಿಯವರು ಕುದ್ದುಹೋದರು. ಖಂಡಿತ, ಗಾಂಧಿಯವರು ಬೇಸರ ಪಟ್ಟುಕೊಳ್ಳುವ ಘಟನೆ ಏನು ಮೊದಲನೇ ದುಂಡು ಮೇಜಿನ ಸಭೆಯಲ್ಲಿ ನಡೆದಿರಲಿಲ್ಲ. ಹಾಗೆಯೇ ಬ್ರಿಟಿಷರೇನು ಪ್ರತ್ಯೇಕ ಮತದಾನದಂತಹ ಅಂತಹ ವಿಶಿಷ್ಟ ಅನುಕೂಲವನ್ನು ಭಾರತದ ನೆಲದಲ್ಲಿ ಪಕ್ಕದ ಚೀನಾ ದೇಶದ ಪ್ರಜೆಗಳಿಗೋ ಅಥವಾ ಇರಾನ್, ಇರಾಕ್, ಅಪ್ಘನಿಸ್ತಾನದ ಪ್ರಜೆಗಳಿಗೋ ನೀಡಿರಲಿಲ್ಲ! ಬ್ರಿಟಿಷರು ಇಂತಹ ಅನುಕೂಲ ನೀಡಿದ್ದದ್ದು ಭಾರತದ ಒಳಗೇ ಇದ್ದ ಭಾರತದ ಪ್ರಜೆಗಳೇ ಆಗಿದ್ದ ಆದರೆ ತೊಂದರೆಯಲ್ಲಿ ಸಿಲುಕಿದ್ದ ಶೋಷಿತ ಸಮುದಾಯಗಳಿಗೆ. ಖಂಡಿತ, ಪರಿಶಿಷ್ಟರಿಗೆ ಇಂತಹದ್ದೊಂದು ಅನುಕೂಲ ಕೊಟ್ಟಾಗ ಮೊದಲು ಖುಷಿಪಡಬೇಕಾದ ವ್ಯಕ್ತಿ ಸ್ವತಃ ಗಾಂಧಿಯ ವರೇ ಆಗಬೇಕಿತ್ತು. ಯಾಕೆಂದರೆ ಅದಾಗಲೇ ಗಾಂಧಿಯವರು ದಕ್ಷಿಣಆಫ್ರಿಕಾದ ಹೋರಾಟದ ಶ್ರೇಯವನ್ನು ಹೊಂದಿದ್ದರು. ಹಾಗೆಯೇ ಭಾರತದ ಶೋಷಿತರ ಪರವೂ ಅವರು ಇದ್ದಾರೆಂದು ಸಾರ್ವಜನಿಕವಾಗಿ ಬಿಂಬಿತವಾಗಿತ್ತು. ಆದರೆ ದುರಂತವೆಂದರೆ ಗಾಂಧಿಯವರು ಖುಷಿ ಪಡುವುದಿರಲಿ ಬ್ರಿಟಿಷರು ಪರಿಶಿಷ್ಟರಿಗೆ ನೀಡಿದ ಇಂತಹ ಅತ್ಯಪರೂಪದ ಅನುಕೂಲದ ವಿರುದ್ಧ ವ್ಯಗ್ರಗೊಂಡ ಮೊದಲ ವ್ಯಕ್ತಿ ಅವರೇ ಆಗಿದ್ದರು! ಯಾವ ಪರಿ ಎಂದರೆ ಅಂದಿನ ಅವರಂತಹ ಶೋಷಿತ ವಿರೋಧಿ ಮನಸ್ಸುಗಳ ಎಲ್ಲರ ನೇತೃತ್ವ ವಹಿಸಿದ ಗಾಂಧಿಯವರು ಯಾವ ಬ್ರಿಟಿಷರ ವಿರುದ್ಧ ಹೋರಾಟ ಎಂದು ಯುದ್ಧ ಸಾರಿದ್ದರೋ ಅಂತಹ ಉಪವಾಸದ ಯುದ್ಧವನ್ನು ಪರಿಶಿಷ್ಟರ ವಿರುದ್ಧವೇ ಸಾರಿದರು ಮತ್ತು ಹಾಗೆ ಪರಿಶಿಷ್ಟರ ವಿರುದ್ಧ ನಡೆಸಿದರೂ ತಾನು ಉಪವಾಸ ಮಾಡುತ್ತಿರುವುದು ಪರಿಶಿಷ್ಟರ ಪರವೇ ಎಂದು ಅಂದಿನ ಮಾಧ್ಯಮಗಳಲ್ಲಿ ಬಿಂಬಿಸುವಲ್ಲಿ ಕೂಡ ಅವರು ಯಶಸ್ವಿ ಆದರು! ಪರಿಣಾಮ ಎಂತಹ ವಾತಾವರಣ ಸೃಷ್ಟಿಯಾಯಿತೆಂದರೆ, ಸ್ವತಃ ಅಂಬೇಡ್ಕರ್‍ರನ್ನು ‘ಪರಿಶಿಷ್ಟರ ವಿಲನ್’ ಎಂದು ಬಿಂಬಿಸುವ ಮಟ್ಟಿಗೆ!! (ಅಂದಹಾಗೆ ಗಾಂಧೀಜಿಯವರನ್ನು ಇಷ್ಟಪಡುವ ಕೆಲ ದಲಿತ ಸಾಹಿತಿಗಳು ‘ತಾನು ದಲಿತ ಪರ’’ಎಂದು ಗಾಂಧಿ ಅಂದು ಸೃಷ್ಟಿಸಿದ ಇಂತಹ ಸಮೂಹಸನ್ನಿಯಿಂದ ಈಗಲೂ ಹೊರಬಂದಿಲ್ಲವೆಂದರೆ ಅಂದು ನಡೆದಿರುವ ಘೋರ ಅಪಪ್ರಚಾರದ ಪರಿಯನ್ನು ಎಂತಹವರಾದರೂ ಊಹಿಸಬಹುದು!)

ಖಂಡಿತ, ಅಂಬೇಡ್ಕರರೇನಾದರೂ ಇಂತಹ ಷಡ್ಯಂತ್ರದ ವಿರುದ್ಧ ‘ವಾಟ್ ಕಾಂಗ್ರೆಸ್ ಅಂಡ್ ಗಾಂಧಿ ಹ್ಯಾವ್ ಡನ್ ಟು ಅನ್‍ಟಚಬಲ್ಸ್ (ಗಾಂಧಿ ಮತ್ತು ಕಾಂಗ್ರೆಸ್ಸು ಅಸ್ಪøಶ್ಯರಿಗೆ ಮಾಡಿದ್ದೇನು?)’ ಎಂಬ ಕೃತಿ ಬರೆಯದಿದ್ದರೆ ಬಹುಶಃ ಇಂದಿಗೂ ಕೂಡ ಸ್ವತಃ ದಲಿತರಲ್ಲೇ ಅಂಬೇಡ್ಕರರು ಪರಿಶಿಷ್ಟರ ವಿರೋಧಿಗಳಾಗಿದ್ದರು ಎಂಬ ಭಾವನೆ ಉಳಿದುಕೊಂಡುಬಿಡುತ್ತಿತ್ತೇನೋ! ಆದರೆ ತಮ್ಮ ಆ ಕೃತಿಯಿಂದ ಅಂಬೇಡ್ಕರರು ಗಾಂಧೀಜಿಯವರ ಅಂತಹ ಹೇಯ ನಡೆಯನ್ನು ಇಂಚಿಂಚೂ ದಾಖಲಿಸಿ ಜಗತ್ತಿಗೆ ಸಾಕ್ಷಿ ಇಟ್ಟು ಹೋದರು. ಸತ್ಯ ತನ್ನ ಅಸ್ತಿತ್ವವನ್ನು ಸದ್ದಿಲ್ಲದೇ ಉಳಿಸಿಹೋಗಿತ್ತು.

ಅಂತಹ ಸತ್ಯದ ಆಧಾರದ ಮೇಲೆಯೇ ಹೇಳುವುದಾದರೆ ಗಾಂಧಿಯವರ ಉಪವಾಸದ ಬ್ಲ್ಯಾಕ್‍ಮೇಲ್ ತಂತ್ರಕ್ಕೆ ಮತ್ತು ಅಂತಹ ತಂತ್ರವನ್ನು ಅರ್ಥಮಾಡಿಕೊಳ್ಳವಲ್ಲಿ ಸೋತ ತನ್ನ ಜನರ ಅಜ್ಞಾನಕ್ಕೆ, ಹಾಗೆಯೇ ತನ್ನ ವಿರುದ್ಧದ ಮಾಧ್ಯಮಗಳ ವ್ಯವಸ್ಥಿತ ಅಪಪ್ರಚಾರಕ್ಕೆ ಮತ್ತು ಅದಾಗಲೇ ಮಹಾತ್ಮ ಎಂದು ಬಿಂಬಿತಗೊಂಡಿದ್ದ ಗಾಂಧಿಯವರ ಪ್ರಾಣವನ್ನು ಉಳಿಸುವ ಮಹತ್ತರ ಜವಾಬ್ದಾರಿಗೆ ಮಣಿದು ಬಾಬಾಸಾಹೇಬ್ ಅಂಬೇಡ್ಕರ್‍ರವರು ತಮಗೆ ಲಭಿಸಿದ್ದ ಪ್ರತ್ಯೇಕ ಮತದಾನ ಎಂಬ ಆ ವಿಶಿಷ್ಟ ಹಕ್ಕನ್ನು ಬಿಟ್ಟುಕೊಟ್ಟು ಗಾಂಧಿಯವರೊಡನೆ ಇಂದಿನ ಮಹಾರಾಷ್ಟ್ರದ ಪೂನಾನಗರದ ಯರವಾಡ ಜೈಲಿನಲ್ಲಿ ‘ಪೂನಾ ಒಪ್ಪಂದ’ ಎಂಬ ಒಪ್ಪಂದಕ್ಕೆ ಬಂದರು. ಈ ದಿಸೆಯಲ್ಲಿ ಬ್ರಿಟಿಷರು ಪರಿಶಿಷ್ಟರಿಗೆ ನೀಡಿದ್ದ ಪ್ರತ್ಯೇಕ ಮತದಾನ ಎಂಬ ಆ ಅಪರೂಪದ ಹಕ್ಕನ್ನು ಹಿಂತೆಗೆಸುವಲ್ಲಿ, ಆ ಮೂಲಕ ಶೋಷಿತ ಸಮುದಾಯಗಳ ವಿರುದ್ಧದ ಯುದ್ಧದಲ್ಲಿ ಗಾಂಧೀಜಿ ಅಪೂರ್ವ ಯಶಸ್ಸು ಕಂಡಿದ್ದರು.

ಒಪ್ಪಂದದ ಪ್ರಕಾರ ಪರಿಶಿಷ್ಟರಿಗೆ ಹಿಂದೆ ಪ್ರತ್ಯೇಕ ಮತದಾನದಲ್ಲಿ ನೀಡಿದ್ದ ಬರೀ 78 ಸ್ಥಾನಗಳಿಗೆ ಬದಲಾಗಿ 151 ಮೀಸಲು ಕ್ಷೇತ್ರಗಳನ್ನು ನೀಡಲಾಯಿತು. ಖುಷಿ ಬೇಡ. ಯಾಕೆಂದರೆ ಸಂಖ್ಯೆ ಜಾಸ್ತಿಯಾಯಿತಾದರೂ ಶಕ್ತಿ ಕುಂದಿತು! ಅರ್ಥಾತ್ ಪರಿಶಿಷ್ಟರು ಹಿಂದೂಗಳ ಕೃಪೆಯಲ್ಲಿ ಬದುಕುವುದು ಹೋಗಲಿಲ್ಲ. ಯಾಕೆಂದರೆ ಇಂದಿಗೂ ಮೀಸಲು ಕ್ಷೇತ್ರಗಳಲ್ಲಿ ಗೆಲ್ಲುವ ದಲಿತರು ಮೇಲ್ಜಾತಿ ಹಿಂದೂಗಳ ವಿರೋಧವನ್ನು ಯಾವುದೇ ಕಾರಣಕ್ಕೂ ಕಟ್ಟಿಕೊಳ್ಳುವಂತಿಲ್ಲ, ಸ್ವಾಭಿಮಾನದ ಬದುಕು ಬದುಕುವಂತಿಲ್ಲ ಮತ್ತು ತನ್ನ ಸಮುದಾಯದ ಹಿತ ಕಾಯುವಂತಿಲ್ಲ. ಮತ್ತು ಹಾಗೇನಾದರೂ ಅಂತಹ ಅಭ್ಯರ್ಥಿ ಪರಿಶಿಷ್ಟರ ಹಿತವನ್ನು ಕಾಯುವಂತಹವನು ಎಂದು ಮೇಲ್ಜಾತಿಗಳಿಗೆ ಗೊತ್ತಾಗಿದ್ದೇ ಆದರೆ ಯಾವುದೇ ಕಾರಣಕ್ಕೂ ಮೀಸಲು ಕ್ಷೇತ್ರÀದಲ್ಲಿ ಅಂತಹವರÀನ್ನು ಗೆಲ್ಲಲು ಬಿಡುವುದಿಲ್ಲ. ಖಂಡಿತ, ಸ್ವಾತಂತ್ರ್ಯ ಬಂದ ನಂತರ ನಡೆದ ಎರಡು ಲೋಕಸಭಾ ಚುನಾವಣೆಗಳಲ್ಲಿ ಅಂದರೆ ಒಂದು ಸಾರ್ವತ್ರಿಕ ಚುನಾವಣೆ ಮತ್ತೊಂದು ಉಪಚುನಾವಣೆ ಎರಡರಲ್ಲಿಯೂ ಸ್ವತಃ ಅಂಬೇಡ್ಕರರು ಸೋತಿದ್ದೂ ಕೂಡ ಈ ಕಾರಣಕ್ಕೇನೆ. ಹಾಗೆಯೇ ದಲಿತ ಪರ ಕೆಲಸ ಮಾಡಿ ಒಂಚೂರು ಹೆಸರು ಮಾಡಿ ಇದೇ ಮಾದರಿಯಲ್ಲಿ ಮೂಲೆಗುಂಪಾದ ಒಂದಿಬ್ಬರು ಈಗಿನ ತಲೆಮಾರಿನ ರಾಜಕಾರಣಿಗಳನ್ನು ಹೆಸರಿಸಬಹುದು. ಉದಾ, ಬಿ.ಬಸವಲಿಂಗಪ್ಪ ಮತ್ತು ಬಿ.ಸೋಮಶೇಖರ್. ಮತ್ತು ಹಾಗೆಯೇ ಅಂಬೇಡ್ಕರರಿಗೆ ಅಂದು ಉಂಟಾದ ಸೋಲಿನ ಮಾದರಿ ಈಗಲೂ ಕೂಡ ಕೆಲ ಹೋರಾಟಗಾರ ಪರಿಶಿಷ್ಟ ರಾಜಕಾರಣಿಗಳಿಗೆ ಆಗಾಗ ಉಂಟಾಗುವುದನ್ನು ನಾವು ಗಮನಿಸಬಹದು.

ಮತ್ತೊಂದು ದುರಂತ: ಅದೆಂದರೆ ಪರಿಶಿಷ್ಟರ ಪಟ್ಟಿಯಲ್ಲಿ ಈಗೀಗ ಅಸ್ಪøಶ್ಯರಲ್ಲದ ಜನಾಂಗಗಳನ್ನು ಸೇರಿಸಿ ಅಸ್ಪøಶ್ಯರ ಮೀಸಲು ಕ್ಷೇತ್ರಗಳನ್ನು ಈಗೀಗ ಕದಿಯಲಾಗುತ್ತಿದೆ. ರಾಜ್ಯದಲ್ಲೇ ಹೇಳುವುದಾದರೆ ಅಸ್ಪøಶ್ಯ ಮಾದಿಗ, ಹೊಲೆಯ, ಜಾಡಮಾಲಿ ಇತ್ಯಾದಿ ಜನಾಂಗಗಳಿಗೆ 35 ಸ್ಥಾನಗಳನ್ನು ಮೀಸಲಿರಿಸಿದ್ದರೂ ಅಲ್ಲಿ ಗೆಲ್ಲುತ್ತಿರುವವರು ಭೋವಿ, ಲಂಬಾಣಿ, ಕೊರಮ, ಕೊರಚ ಹೀಗೆ ಸ್ಪøಶ್ಯ ಸಮುದಾಯಗಳಿಗೆ ಸೇರಿದ ಪರಿಶಿಷ್ಟರು. ಅಂದಹಾಗೆ ಇಂತಹ ಮಾದರಿಯ ಮೀಸಲು ಕ್ಷೇತ್ರದ ಷಡ್ಯಂತ್ರಕ್ಕೆ ಕಳೆದ ವಿಧಾನಸಭೆಯಲ್ಲಿ ತಮ್ಮ ಪಕ್ಷ ಗೆದ್ದರೂ ಅದರ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸೋಲಬೇಕಾಯಿತು ಎಂಬುದು ದುರಂತವೆಂದರೂ ಕಣ್ಣೆದುರೇ ನಡೆದ್ದಿದ್ದಂತೂ ನಗ್ನ ಸತ್ಯ.

ಒಟ್ಟಾರೆ ಮೇಲ್ಜಾತಿ ಹಿಂದೂಗಳು, ಮೀಸಲು ಕ್ಷೇತ್ರಗಳಲ್ಲಿ ಚಮಚಾ ಪರಿಶಿಷ್ಟ ರಾಜಕಾರಣಿಗಳಿಗಿರಲಿ ಒಟ್ಟಾರೆ ಅಸ್ಪøಶ್ಯರು ಆಯ್ಕೆಯಾಗದ ರೀತಿ ಮೀಸಲು ಕ್ಷೇತ್ರ ವ್ಯವಸ್ಥೆ ಅಸ್ಪøಶ್ಯರಿಗೆ ಧಕ್ಕದ ರೀತಿ, ಅನುಕೂಲ ಮಾಡಿಕೊಡದ ರೀತಿ ನೋಡಿಕೊಳ್ಳುತ್ತಿದ್ದಾರೆ. ಮತ್ತೂ ಮುಂದುವರೆದು ಹೇಳುವುದಾದರೆ ಕೆಲ ಮೇಲ್ಜಾತಿ ಹಿಂದೂಗಳೇ ಎಸ್‍ಸಿ/ಎಸ್‍ಟಿ ಸುಳ್ಳು ಪ್ರಮಾಣಪತ್ರ ಪಡೆದು, ಉದಾಹರಣೆಗೆ ಜಾತಿ ಲಿಂಗಾಯತ ಜಂಗಮ ಎಂದಿದ್ದರೆ ಅದಕ್ಕೆ ‘ಬುಡ್ಗ ಜಂಗಮ’ ಎಂದು ಎಸ್‍ಸಿ ಪ್ರಮಾಣ ಪತ್ರ ಪಡೆದು ಎಸ್‍ಸಿ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಹಾಗೆಯೇ 2ಎ ಕುರುಬ ಜಾತಿಗೆ ಸೇರಿದ್ದರೆ ‘ಕಾಡುಕುರುಬ’ ಎಂದು ಎಸ್‍ಟಿ ಪ್ರಮಾಣಪತ್ರ ಪಡೆದು ಸ್ಪರ್ಧಿಸುವುದು ಹೀಗೆ!

ಒಟ್ಟಾರೆ 1932 ಸೆಪ್ಟಂಬರ್ 24ರಂದು ಜಾರಿಯಾದ ಪೂನಾ ಒಪ್ಪಂದದಿಂದ ಅಥವಾ ಗಾಂಧಿಯವರ ಐತಿಹಾಸಿಕ ಷಡ್ಯಂತ್ರದಿಂದ ಜಾರಿಯಾದ ಕರಾಳ ಒಪ್ಪಂದದಿಂದ ತನ್ಮೂಲಕ ಅಸ್ತಿತ್ವಕ್ಕೆ ಬಂದ ಮೀಸಲು ಕ್ಷೇತ್ರಗಳಿಂದ ಇಂದು ಪರಿಶಿಷ್ಟರ ಶಾಸನಸಭೆಗಳ ಪ್ರಾತಿನಿಧ್ಯ ಡೋಲಾಯಮಾನ ಸ್ಥಿತಿಯಲ್ಲಿದೆ. ಖಂಡಿತ, ಇಂತಹ ಸ್ಥಿತಿ ಬರುತ್ತದೆ, ಸ್ವತಃ ತಾನೇ ಗೆಲ್ಲುವುದು ಕಷ್ಟ ಎಂದು ಅಂಬೇಡ್ಕರರಿಗೆ ಗೊತ್ತಿತ್ತು. ಅದಕ್ಕೇ ಅವರು ದುಂಡುಮೇಜಿನ ಸಭೆಯಲ್ಲಿ ‘ಪ್ರತ್ಯೇಕ ಮತದಾನ ಪದ್ಧತಿ’ ಬೇಕು ಬೇಕು ಎಂದÀು ಸಾರಿ ಸಾರಿ ಹೇಳಿದ್ದು. ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಬರುವ ಸಂದರ್ಭದಲ್ಲಿಯೂ ಅಂದರೆ 1946 ಏಪ್ರಿಲ್ 5ರಂದು ಅಂದಿನ ಕ್ಯಾಬಿನೆಟ್ ಮಿಷನ್ ಆಯೋಗಕ್ಕೆ ಸಲ್ಲಿಸಿದ ಮನವಿಯಲ್ಲಿ (ಅಂಬೇಡ್ಕರ್ ಬರಹಗಳು. ಇಂಗ್ಲೀಷ್ ಸಂ.17, ಭಾಗ2, ಪು.136) ಕೂಡ ಅವರು ಅದನ್ನು ಅಂದರೆ ಪರಿಶಿಷ್ಟರಿಗೆ ಪ್ರತ್ಯೇಕ ಮತದಾನ ಪದ್ಧತಿಯನ್ನು ಸ್ವತಂತ್ರ ಭಾರತದಲ್ಲಾದರೂ ಜಾರಿಗೊಳಿಸಬೇಕು ಎಂದು ಕೋರಿಕೊಂಡದ್ದು. ದುರಂತವೆಂದರೆ ಅಂಬೇಡ್ಕರರು ಬಯಸಿದ್ದ ಪ್ರತ್ಯೇಕ ಮತದಾನದ ಆ ಅಪರೂಪದ ಮತದಾನದ ಹಕ್ಕು ಪರಿಶಿಷ್ಟರಿಗೆ ಸಿಗಲೇ ಇಲ್ಲ. ಈ ನಿಟ್ಟಿನಲ್ಲಿ ಅಂತಹ ಹಕ್ಕು ಸಿಗದ ಕಾರಣಗಳು, ಪರಿಶಿಷ್ಟರ ಅಳಲುಗಳು ಎಲ್ಲವೂ ಅದರ ವಿರುದ್ಧ ಉಪವಾಸ ಕುಳಿತು ಅದು ಸಿಗದ ಹಾಗೆ ನೋಡಿಕೊಂಡ ಮಹಾತ್ಮ ಗಾಂಧಿಯವರತ್ತಲೇ ಬೊಟ್ಟು ಮಾಡುತ್ತವೆ ಎಂದರೆ ಅಚ್ಚರಿಯೇನಿಲ್ಲ.
-ರಘೋತ್ತಮ ಹೊ.ಬ

Raghotham Hoba's photo.
Raghotham Hoba's photo.

  • Write a comment…
Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s