ಬಾಬರಿ ಮಸೀದಿ ಧ್ವಂಸ – ನಾವು ಕೇಳಲೇಬೇಕಾದ ಪ್ರಶ್ ನೆಗಳು

ಬಾಬರಿ ಮಸೀದಿ ಧ್ವಂಸ – ನಾವು ಕೇಳಲೇಬೇಕಾದ ಪ್ರಶ್ನೆಗಳು
Dec 6 2014 8:28AM

EmailPrintFontSizeFontSize

ಜಿ. ರಾಜಶೇಖರ

ಕೃಪೆ : karavalikarnataka.com
2014_12$advtcontent106_Dec_2014_082113013.jpg
1992 ಡಿಸೆಂಬರ್ 6 ರಂದು ಉತ್ತರಪ್ರದೇಶದ ಫೈಜಾಬಾದ್ ಸಮೀಪದ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಅನಿರೀಕ್ಷಿತವಾಗಿ ಬಂದೆರಗಿದ ಅಘಾತವಾಗಿರಲಿಲ್ಲ; ಅದು ಹಠಾತ್ತನೆ ಸ್ಪೋಟಿಸಿದ ಜನರ ಆಕ್ರೋಶದಿಂದ ಧ್ವಂಸಗೊಂಡದ್ದೂ ಅಲ್ಲ. ಆ ದುರ್ಘಟನೆ ಸಂಭವಿಸುವುದಕ್ಕೆ ಹಲವು ವರ್ಷಗಳ ಮೊದಲೇ ಶುರುವಾಗಿದ್ದ ರಾಮಜನ್ಮಭೂಮಿ ಚಳುವಳಿ ಮಸೀದಿ ಧ್ವಂಸಕ್ಕೆಂದೇ ಜನರನ್ನು ಕಲೆ ಹಾಕುವ ಕಾರ್ಯಕ್ರಮವಾಗಿತ್ತು. ಬಿ.ಜೆ.ಪಿ. ನಾಯಕ ಎಲ್. ಕೆ. ಅದ್ವಾನಿಯವರ ಟೊಯೊಟಾ ರಥಯಾತ್ರೆ ದೇಶಕ್ಕೆ ಕಾದಿರುವ ಹಿಂಸಾಕಾಂಡದ ಮೊದಲ ಅಧ್ಯಾಯದಂತಿತ್ತು. ಆ ರಥಯಾತ್ರೆಯುದ್ದಕ್ಕೂ ದೇಶಾದ್ಯಂತ ಬಿದ್ದ ಹೆಣಗಳ ಸಂಖ್ಯೆಯನ್ನು ಯಾರೂ ಇಟ್ಟವರಿಲ್ಲ. ಒಂದು ಅಂದಾಜಿನ ಪ್ರಕಾರ ಅದು ಸುಮಾರು 1000. ಈ ಹೆಣಗಳಲ್ಲಿ ಪ್ರತಿಶತ 99 ರಷ್ಟು ಮುಸ್ಲಿಮರವು ಎಂದು ಅಲಾಯದ ಹೇಳಬೇಕಾಗಿಲ್ಲ. ಈ ಮುಸ್ಲಿಮರ ಜೀವಹತ್ಯೆಗೆ, ಕಾನೂನು ರೀತ್ಯ ಎಂದೂ ಅದ್ವಾನಿಯವರಾಗಲೀ, ಅವರ ಹಿಂಬಾಲಕರಾಗಲೀ ಉತ್ತರದಾಯಿಗಳಾಗಲಿಲ್ಲ; ಅಮಾಯಕರ ಕಗ್ಗೊಲೆಗಳಿಗೆ ನೈತಿಕ ಹೊಣೆಗಾರಿಕೆಯ ವಿಚಾರವಂತೂ ದೇಶದಲ್ಲಿ ಬಹುಷಃ ಗಾಂಧೀಜಿಯವರ ಜೊತೆಗೆ ಅವಸಾನಗೊಂಡಿದೆ. ಹಾಗಾಗಿ ರಾಮಜನ್ಮಭೂಮಿ ಚಳುವಳಿ, ಅದ್ವಾನಿಯವರ ರಥಯಾತ್ರೆ, ಬಾಬರಿ ಮಸೀದಿ ಧ್ವಂಸ ಅದರ ಬೆನ್ನಿಗೆ ಮುಂಬಯಿ ಶಹರದಲ್ಲಿ ಎರಡು ತಿಂಗಳ ಕಾಲ 1000 ದಷ್ಟು ಜನರನ್ನೂ ಬಲಿತೆಗೆದುಕೊಂಡ ಹತ್ಯಾಕಾಂಡ, ರಾಮಜನ್ಮಭೂಮಿ ಚಳುವಳಿಯ ಮುಂದುವರಿಕೆಯಾಗಿಯೇ ನಡೆದ ಗುಜರಾತ್ 2002 – ಈ ಯಾವ ವಿದ್ಯಮಾನವೂ ಅನಿರೀಕ್ಷಿತವಲ್ಲ.
2014_12$advtcontent106_Dec_2014_082256900.jpg
ಅವೆಲ್ಲವನ್ನು ಕೊಲೆಗಳ ಸಮೇತ ಲಾಭ ನಷ್ಟದ ಕರಾರುವಕ್ಕಾದ ಲೆಕ್ಕಚಾರದ ಪ್ರಕಾರವೇ ಮಾಡಲಾಗಿದೆ. ಆ ಕೊಲೆಗಳನ್ನು ಮಾಡಿದವರು ಅನಾಮಧೇಯ ಮತ್ತು ಮುಖಹೀನ ಭಯೋತ್ಪಾದಕರೂ ಅಲ್ಲ. ರಾಮಜನ್ಮಭೂಮಿ ಚಳುವಳಿಯಲ್ಲಿ ಕೋಟ್ಯಾಂತರ ಜನ ಭಾಗವಹಿಸಿದ್ದಾರೆ. ಮುಂಬಯಿ ಮತ್ತು ಗುಜರಾತ್ ಹತ್ಯಾಕಾಂಡಗಳು ಸಾವಿರಾರು ಜನರ ಸಮ್ಮುಖದಲ್ಲಿ ಹಾಡೇ ಹಗಲು ಸಂಭವಿಸಿವೆ. ಆ ಜನರೆಲ್ಲರೂ ಥೇಟು ನಮ್ಮ ನಿಮ್ಮ ಹಾಗೇ ಇರುವವರು. ಹಾಗಾಗಿ ಡಿಸೆಂಬರ್ 6 ಹತ್ತಿರ ಬರುತ್ತಿದ್ದಂತೆ, 1992ರ ಅದೇ ತಿಂಗಳಿನ ಅದೇ ದಿನ ನಡೆದ ದುರ್ಘಟನೆಯನ್ನು ಅದೊಂದು ವಿಶೇಷವೆಂಬಂತೆ ನೆನಪು ಮಾಡಿಕೊಳ್ಳುವುದರಲ್ಲಿ ನೈತಿಕ ಹೆಚ್ಚುಗಾರಿಕೆ ಏನೂ ಇಲ್ಲ. ಕೆಲವು ಸಂಘಟನೆಗಳು ಡಿಸೆಂಬರ್ ಅನ್ನು ಕರಾಳ ದಿನವೆಂದು ಆಚರಿಸುತ್ತವೆ. ಹಾಗೆ ನೋಡಿದರೆ ವರ್ಷದ ಎಲ್ಲ ದಿನಗಳೂ ಕರಾಳ ದಿನಗಳೇ ಅಲ್ಲವೇ? ದಿನಾ ಸಾಯುವವರಿಗೆ ಯಾರಾದರೂ ಅಳುತ್ತಾರೆಯೆ?
2014_12$advtcontent106_Dec_2014_082331717.jpg
ಆಧುನಿಕ ಭಾರತದ ಇತಿಹಾಸದಲ್ಲಿ ಬಾಬರಿ ಮಸೀದಿ ದ್ವಂಸ, ಒಂದು ಮಹತ್ವದ ತಿರುವು ಎಂದು ನೆನಪಿಸಿಕೊಳ್ಳುವುದು ಅರ್ಥಹೀನ. ಆದರೆ, ಆ ಘಟನೆಗೆ ನಡೆದ ತಯಾರಿ ಮತ್ತು ಅನಂತರ ನಡೆದ ವಿದ್ಯಮಾನಗಳಲ್ಲಿ ಅಪರಾಧ ಮತ್ತು ಹೊಣೆಗಾರಿಕೆಯ ನೈತಿಕ ಪ್ರಶ್ನೆಗಳ ಬಗ್ಗೆ ನಾವು ಆತ್ಮಶೋಧನೆ ಮಾಡಿಕೊಳ್ಳಬೇಕು. 1947ರ ದೇಶ ವಿಭಜನೆ ದಿನಗಳಲ್ಲಿ ಸಂಭವಿಸಿದ ಘೋರ ನರಹತ್ಯೆಯ ಬಳಿಕ ಹಲವು ಹತ್ಯಾಕಾಂಡಗಳು ಸಂಭವಿಸಿವೆ. ಅವುಗಳಲ್ಲಿ ಕೆಲವನ್ನು ಉದಾಹರಿಸುವುದಾದರೆ:
2014_12$advtcontent106_Dec_2014_082412810.jpg
1984ರಲ್ಲಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆಯ ನಂತರ ದೇಶದ ರಾಜಧಾನಿಯಲ್ಲಿ ಮತ್ತು ಉತ್ತರಭಾರತದ ಹಲವು ನಗರಗಳಲ್ಲಿ ನಡೆದ ಸಿಖ್ ಹತ್ಯಾಕಾಂಡದಲ್ಲಿ 3000ಕ್ಕೂ ಹೆಚ್ಚು ಜನ ಸಾವಿಗೇಡಾದರು. ಸಾವಿರಾರು ಸಿಖ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಯಿತು. ಪೋಲಿಸರ ಸಮ್ಮುಖದಲ್ಲೇ ಕೆಲವೆಡೆ ಅವರ ಸಹಕಾರದಿಂದಲೇ ಅವು ಸಂಭವಿಸಿದವು. ಆಳುವ ಕಾಂಗ್ರೆಸ್ ಪಕ್ಕದ ಪುಢಾರಿಗಳೇ ಮುಂದೆ ನಿಂತು ಅವನ್ನು ನಡೆಸಿದರು. ಈ ಹತ್ಯಾಕಾಂಡದ ಬೆನ್ನಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವವಾದ ಬಹುಮತವನ್ನು ಪಡೆಯಿತು! 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ನರಮೇಧದ ರೂವಾರಿ ಭಾರೀ ಬಹುಮತವನ್ನು ಪಡೆದದ್ದರಲ್ಲಿ ಹೊಸತೇನಿದೆ?

1984ರ ಸಿಖ್ ಹತ್ಯಾಕಾಂಡಕ್ಕಿಂತ ಕೆಲವು ತಿಂಗಳ ಮೊದಲು, ಅಸ್ಸಾಂನ ನೆಲ್ಲಿ ಎಂಬಲ್ಲಿ 2000ಕ್ಕೂ ಹೆಚ್ಚು ಬಾಂಗ್ಲಾ ಭಾಷಿಕ ಮುಸ್ಲಿಮರನ್ನೂ ಅಕ್ರಮ ವಾಸಿಗಳು ಎಂದು ಸಂದೇಹಿಸಿ ಕೊಚ್ಚಿ ಕೊಚ್ಚಿ ಕೊಲ್ಲಲಾಯಿತು. ಅಸ್ಸಾಂನಲ್ಲಿ ನೆರೆಯ ರಾಜ್ಯವಾದ ಪಶ್ವಿಮಬಂಗಾಳದಿಂದ ವಲಸೆ ಹೋದ ಕಾರ್ಮಿಕರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹಾಗೆಯೇ ಗಡಿಯಲ್ಲಿ ಅಕ್ಷರಶಃ ಒಂದು ಹೆಜ್ಜೆ ಆಚೆ ಇರುವ ಬಾಂಗ್ಲಾದೇಶದಿಂದ ವಲಸೆ ಬಂದವರಿದ್ದಾರೆ; ಎರಡೂ ಕಡೆಗಳಿಂದ ಹೀಗೆ ಬಂದವರಲ್ಲಿ ಹಿಂದುಗಳೂ ಇದ್ದಾರೆ; ಮುಸ್ಲಿಮರು ಇದ್ದಾರೆ. ಆದರೆ, ಬಿ.ಜೆ.ಪಿ ಮತ್ತು ಅದರ ಪರಿವಾರದವರು ಬಾಂಗ್ಲಾಭಾಷಿಕ ಮುಸ್ಲಿಮರನ್ನು ಮತ್ತು ಅವರನ್ನು ಮಾತ್ರ ಅಕ್ರಮವಾಸಿಗಳು ಎಂದು ಪರಿಗಣಿಸುತ್ತಾರೆ! ಮತೀಯ ದ್ವೇಷ ಮತ್ತು ಹಿಂಸೆಯ ಈ ರಾಜಕೀಯ ಅಸ್ಸಾಂನಲ್ಲಿ ಇಂದಿಗೂ ಅಬಾಧಿತವಾಗಿ ಮುಂದುವರಿದಿದೆ. ಬಾಬರಿ ಮಸೀದಿ ದ್ವಂಸವನ್ನು ಭಾರತದ ಚರಿತ್ರೆಗೆ ಮಹತ್ವದ ತಿರುವು ನೀಡಿದ ವಿದ್ಯಮಾನವೆಂದು ನೆನಪಿಸಿಕೊಳ್ಳುವುದು ಅರ್ಥಹೀನ ಆದರೂ ಆ ಘಟನೆಗೆ ನಡೆದ ತಯಾರಿ ಮತ್ತು ಅನಂತರ ಸಂಭವಿಸಿದ ಘಟನಾವಳಿಗಳಲ್ಲಿ ಅಪರಾಧ ಮತ್ತು ಹೊಣೆಗಾರಿಕೆಯ ನೈತಿಕ ಪ್ರಶ್ನೆಗಳ ಬಗ್ಗೆ ನಾವು ಆತ್ಮಶೋಧನೆ ಮಾಡಲೇಬೇಕು.

1984ರ ಸಿಖ್ ನರಹತ್ಯೆ ನಡೆದ ಕೆಲವೇ ದಿನಗಳಲ್ಲಿ ನಂತರ ಡಿಸೆಂಬರ್ 3ರಂದು ಭೋಪಾಲ್ ಯೂನಿಯನ್ ಕಾರ್ಬೈಡ್ ಸ್ಥಾವರದಲ್ಲಿ ರಾಸಾಯನಿಕ ಸೋರಿಕೆಯಿಂದಾಗಿ 30000ದಷ್ಟು ಜನ ತಕ್ಷಣ ಸಾವಿಗೀಡಾದರು. ಸ್ಥಾವರದ ಆಸುಪಾಸಿನಲ್ಲಿ ದಾಸ್ತಾನು ಮಾಡಲಾಗಿರುವ ರಾಸಾಯನಿಕ ತ್ಯಾಜ್ಯ ವಸ್ತುಗಳ ಕಾರಣದಿಂದಾಗಿ ಬದುಕುಳಿದ ಜನ ನಾನಾ ವಿಧದ ದಾರುಣ ರೋಗಗಳಿಂದ ಈಗಲೂ ನರಳುತ್ತಿದ್ದಾರೆ. ಭೋಪಾಲ್ ವಿಷಾನಿಲ ಸೋರಿಕೆಯ ದುರಂತದ ಸುಮಾರು 5 ಲಕ್ಷ ಸಂತ್ರಸ್ತರಿಗೆ ಇದುವರೆಗೆ ನ್ಯಾಯವೂ ಸಿಕ್ಕಿಲ್ಲ; ಯೋಗ್ಯ ಪರಿಹಾರವನ್ನು ಆ ಸ್ಥಾವರದ ಮಾಲಿಕರು ಕೊಟ್ಟಿಲ್ಲ. ಯೂನಿಯನ್ ಕಾರ್ಬೈಡ್ ಮತ್ತು ಸ್ಥಾವರದ ಈಗಿನ ಧನಿಗಳಾದ ಡೋ ಕೆಮಿಕಲ್ಸ್ ಅಮೇರಿಕದ ಬಹುರಾಷ್ಟ್ರೀಯ ಕಂಪೆನಿಗಳಾಗಿದ್ದು ಅಂದಿನಿಂದ ಇಂದಿನವರೆಗೆ ಬಿ.ಜೆ.ಪಿ ನೇತೃತ್ವದ ಎನ್.ಡಿ.ಎ ಸರಕಾರಗಳೂ ಭೋಪಾಲ್ ಸಂತ್ರಸ್ತರಿಗೆ ನ್ಯಾಯ ಮತ್ತು ಪರಿಹಾರಗಳನ್ನು ವಂಚಿಸುವುದರಲ್ಲಿ ಆ ಕಂಪೆನಿಗಳ ಜೊತೆ ಶಾಮಿಲಾಗಿವೆ. ಹಾಗಾದರೆ ಭೋಪಾಲ್ನಲ್ಲಿ ಅಮಾಯಕರ ಸಾವುನೋವುಗಳಿಗೆ ಯಾರು ಉತ್ತರದಾಯಿ?
2014_12$advtcontent106_Dec_2014_082502790.jpg
ಕಾಶ್ಮೀರದಲ್ಲಿ ಒಂದು ಅಂದಾಜಿನ ಪ್ರಕಾರ 1989ರಿಂದ ಇದುವರೆಗೆ 8000 ಜನ ನಾಪತ್ತೆಯಾಗಿದ್ದಾರೆ. ಸ್ವತಂತ್ರ ಭಾರತದ ಪ್ರಜೆಗಳು ಎನ್ನಿಸಿಕೊಂಡಿರುವ ನರ ಮನುಷ್ಯರಲ್ಲಿ ನಿರಾಶ್ರಿತರು, ಅಭಿವೃದ್ಧಿ ನಿರಾಶ್ರಿತರು, ಅಕ್ರಮ ನಿವಾಸಿಗಳು, ನಿರ್ಗತಿಕರು ಮುಂತಾದ ಜನವರ್ಗಗಳ ಜೊತೆ ಈ ನಾಪತ್ತೆಯಾದವರದ್ದೂ ಒಂದು ಪ್ರಭೇದ. ಅವರೆಲ್ಲ ಬದುಕಿದ್ದಾರೋ ಸತ್ತಿದ್ದಾರೋ? ಕಾಶ್ಮೀರದಲ್ಲಿ ಸಾವಿರಾರು ಅನಾಮಧೇಯ ಶವಗಳನ್ನು ಹೂಳಲಾಗಿರುವ ಘೋರಿಗಳೂ ಪತ್ತೆಯಾಗಿವೆ. ನಾಪತ್ತೆಯಾಗಿರುವ ಪ್ರಜೆಗಳು ಎಲ್ಲಿದ್ದಾರೆ? ಈ ಘೋರಿಗಳಲ್ಲಿರುವ ಶವಗಳು ಯಾರದ್ದು?

1989ರಲ್ಲಿ ಅಂದರೆ ರಾಮ ಜನ್ಮಭೂಮಿ ಚಳುವಳಿಯ ದಿನಗಳಲ್ಲೇ ಬಿಹಾರದ ಭಾಗಲ್ಪುರದಲ್ಲಿ ಸಂಭವಿಸಿದ ಕೋಮು ಹಿಂಸೆಯಲ್ಲಿ ಸುಮಾರು 3000 ಜನ ಅವರಲ್ಲಿ ಹೆಚ್ಚಿನವರು ಮುಸ್ಲಿಮರು ಬಲಿಯಾದರು. ಆಗ ಬಿಹಾರದ ಜಗನ್ನಾಥ ಮಿಶ್ರ ನೇತೃತ್ವದ ಕಾಂಗ್ರೆಸ್ ಸರಕಾರವಿತ್ತು. ಆ ನಂತರ ಲಾಲೂ ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿದೇವಿಯವರ ಸರಕಾರವಾಗಲೀ, ಆ ಬಳಿಕ ಅಧಿಕಾರಕ್ಕೆ ಬಂದ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ರಂಗ ಸರಕಾರವಾಗಲೀ, ಭಾಗಲ್ಪುರ ಈ ಹಿಂಸಾಕಾಂಡದ ಸಂತ್ರಸ್ತರಿಗೆ ಪರಿಹಾರವನ್ನು ಕೊಡಲಿಲ್ಲ; ಅಪರಾಧಿಗಳಿಗೆ ಶಿಕ್ಷೆಯನ್ನು ವಿಧಿಸಲಿಲ್ಲ.
2014_12$advtcontent106_Dec_2014_082654950.jpg
ಈ ಎಲ್ಲ ಉದಾಹರಣೆಗಳಿಂದ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಆಸ್ತಿ, ಹೆಣ್ಣು, ವೈಯಕ್ತಿಕ ದ್ವೇಷ ಅಥವಾ ಇನ್ನು ಯಾವುದೇ ಕಾರಣಕ್ಕೆ ನೀವು ಒಂದು ಕೊಲೆ ಮಾಡಿದರೆ ಕಾನೂನು ನಿಮ್ಮ ಬೆನ್ನು ಹತ್ತುವುದು ಖಂಡಿತ. ಆದರೆ, ಸಾಮೂಹಿಕ ಹತ್ಯೆಗೆ ಮಾತ್ರ ಯಾರೂ ಉತ್ತರದಾಯಿಗಳಲ್ಲ! ಭೋಪಾಲ್ ದುರಂತದಂತಹ ಔದ್ಯಮಿಕ ಅಪಘಾತಗಳಿಗೆ ಯಾರೂ ಹೊಣೆಗಾರರಲ್ಲ! ವರ್ಷಗಟ್ಟಲೆ ಪೂರ್ವ ಸಿದ್ಧತೆ ನಡೆಸಿ, ಸಾವಿರಾರು ಜನರ ಕಣ್ಣೆದುರೇ ಬಾಬರಿ ಮಸೀದಿ ದ್ವಂಸಗೊಂಡರೆ ಅದನ್ನು ತನಿಖೆ ಮಾಡಲೆಂದೇ ನೇಮಕವಾದ ನ್ಯಾಯಮೂರ್ತಿ ಲಿಬರ್ ಹಾನ್ಸ್ ವಿಚಾರಣಾ ಆಯೋಗ 20 ವರ್ಷಗಳ ನಂತರವೂ ಅಪರಾಧಿಗಳನ್ನು ಹೆಸರಿಸುವುದಿಲ್ಲ! ಆ ಘಟನೆ ಸಂಭವಿಸಿದಾಗ ಉತ್ತರಪ್ರದೇಶದಲ್ಲಿ ಬಿ.ಜೆ.ಪಿ ನೇತೃತ್ವದ ರಾಜ್ಯ ಸರಕಾರವಿತ್ತು. ಕೇಂದ್ರದಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರಕಾರವಿತ್ತು. 1992 ಡಿಸೆಂಬರ್ 6ರ ಹಗಲು, ಬಾಬರಿ ಮಸೀದಿಯ ಗುಮ್ಮಟಗಳು ಒಂದೊಂದಾಗಿ ಉರುಳಿ ಇಮಾರತು ಕುಸಿಯುತ್ತಿದ್ದಾಗ ಪ್ರಧಾನಿ ನರಸಿಂಹ ರಾವ್ ಮಧ್ಯಾಹ್ನದ ಊಟ ಮುಗಿಸಿ ನಿದ್ರೆ ಮಾಡುತ್ತಿದ್ದರಂತೆ! ಪಾಪ ಅವರು ಹೇಗೆ ಆ ದುರ್ಘಟನೆಗೆ ಉತ್ತರದಾಯಿಗಳಾಗುತ್ತಾರೆ! ಆ ಮಸೀದಿ ಅಲ್ಲಿದೆ ಎಂಬ ಕಾರಣಕ್ಕೇನೆ ರಥಯಾತ್ರೆ ಮಾಡಿದ ಎಲ್. ಕೆ. ಅಡ್ವಾನಿ ಡಿಸೆಂಬರ್ 6 ರಂದು ಸ್ಥಳದಲ್ಲಿ ಹಾಜರಿದ್ದರೂ ಅದು ತನ್ನ ಬದುಕಿನ ಕರಾಳ ದಿನ ಎಂದು ಉದ್ಗರಿಸಿದ ಅಡ್ವಾನಿಯವರ ವಿಷಾದ ನಿಜವೆಂದೆ ಭಾವಿಸಿದರೂ ಬಾಬರಿ ಮಸೀದಿ ದ್ವಂಸಕ್ಕೆ ಯಾರು ಉತ್ತರದಾಯಿ ಎಂಬ ಪ್ರಶ್ನೆ ಉಳಿದೇ ಬಿಡುತ್ತದೆ. ಬಹುಶಃ ಭಾರತದ ರಾಜಕೀಯದ ಬಗ್ಗೆ ನಾವು ಕೇಳಲೇ ಬೇಕಾದ ಬಹುದೊಡ್ಡ ಪ್ರಶ್ನೆಯಲ್ಲಿ ಅದು ಒಂದು ಉಪಪ್ರಶ್ನೆ ಮಾತ್ರ. ಇಲ್ಲಿ ಮನುಷ್ಯ ಜೀವಗಳಿಗೆ ಏನೂ ಬೆಲೆಯಿಲ್ಲವೆ? ಎಂಬ ಆ ಪ್ರಶ್ನೆಯನ್ನು ನಾವು ಪ್ರಭುತ್ವಕ್ಕೂ ವಿವಿಧ ರಾಜಕೀಯ ಪಕ್ಷಗಳಿಗೂ ಅಗತ್ಯವಾಗಿ ಕೇಳಲೇಬೇಕು. ಆದರೆ, ಅದಕ್ಕಿಂತ ಮೊದಲು ಸ್ವತಃ ನಮಗೆ ನಾವು ಆ ಪ್ರಶ್ನೆಯನ್ನು ಕೇಳಿಕೊಳ್ಳಬೇಕು.

Related Tags: G Rajshekhar, Article by G. Rajashekhar, Article on Babri Masjid Demolition

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s