ಸನ್ನತಿ: ಬುದ್ಧನ ಕಂಡು, ಅಶೋಕನ ಮುಟ್ಟಿ..

Bhoomibalaga

FRIDAY, 13 MAY 2016

ಸನ್ನತಿ: ಬುದ್ಧನ ಕಂಡು, ಅಶೋಕನ ಮುಟ್ಟಿ..

Buddhism.Siddhartha.Head.png

ಬುದ್ಧನೆಡೆಗೆ ರಾಜಮಾರ್ಗದಲ್ಲಿ ಸಾಗುವುದು ಸಾಧ್ಯವಿಲ್ಲ. ಕಲ್ಲುಮುಳ್ಳುಧೂಳಿನ ಅನುಭವದ ಹಾದಿಯಷ್ಟೇ ಇರುವುದು..

ಏಪ್ರಿಲ್ ತಿಂಗಳ ಕೊನೆಭಾಗದಲ್ಲಿ ಕಲಬುರಗಿ ಬಿಸಿಲಿನೊಡನೆ ಸಖ್ಯ ಬೆಳೆಸಿ ಒಂದಾನೊಂದು ಕಾಲದ ಅಶೋಕನ ನಾಡಾಗಿದ್ದ ಭೀಮಾ ನದಿ ತೀರಕ್ಕೆ ಹೊರಟಿದ್ದೆವು. ಬುದ್ಧನನ್ನು, ಅಶೋಕನನ್ನು ನೋಡಲು ದಾರಿ ಹೇಗಿದ್ದರೂ ನಡೆದುಬಿಡಲು ಸಿದ್ಧವಿದ್ದ ಸಂತೋಷ, ಪ್ರವೀಣ, ಗೀತ, ಸಂದೀಪ ಮೊದಲಾದ ಎಳೆಯ ಜೀವಗಳು ಜೊತೆಯಾಗಿದ್ದವು. ಮೌರ್ಯ ಸಾಮ್ರಾಟ ಅಶೋಕನ ಶಿಲಾಶಾಸನ ಕಲಬುರಗಿ ಜಿಲ್ಲೆಯ ಸನ್ನತಿಯ ಬಳಿ ದೊರೆತಿತ್ತು. ಅಶೋಕನ ಶಿಲ್ಪ, ಸ್ತೂಪದ ಉತ್ಖನನ ನಡೆದಿದೆಯೆಂಬ ವಿಷಯ ಕುತೂಹಲ ಕೆರಳಿಸಿತ್ತು. ೧೯೧೫ರಲ್ಲಿ ರಾಯಚೂರು ಬಳಿ ಚಿನ್ನದ ಅದಿರು ಅಗೆಯುವಾಗ ಬ್ರಿಟಿಷ್ ಇಂಜಿನಿಯರ್ ಬೀಡನ್‌ಗೆ ಸಿಕ್ಕ ಮಸ್ಕಿ ಬಂಡೆಶಾಸನದ ನಂತರ ಆಕಸ್ಮಿಕವಾಗಿ ಸಿಕ್ಕ ಮತ್ತೊಂದು ಶಿಲಾಶಾಸನ ಅಲ್ಲಿತ್ತು.

ಕಾರೆಮುಳ್ಳು, ನೆಗ್ಗಿಲುಮುಳ್ಳು, ಪಾಪಾಸುಕಳ್ಳಿ, ಹಸಿರು ಜಾಲಿ ಜೊತೆಗೆ ಹೆಸರು ಗೊತ್ತಿರದ ಅನೇಕ ಮುಳ್ಳುಗಿಡಗಳು ರಸ್ತೆಮೇಲೇ ಚಾಚಿಕೊಂಡು ಆ ದಾರಿಯಲ್ಲಿ ಇತ್ತೀಚೆಗೆ ಯಾರೂ ಸುಳಿದಿಲ್ಲವೆಂದು ಸಾಕ್ಷಿ ಹೇಳಿದವು. ಆಚೀಚೆ ಹರಡಿಕೊಂಡ ಕಟಾವಾಗಿ ನಿಂತ ಕಪ್ಪುಮಣ್ಣಿನ ಹೊಲಗಳು. ಕಲ್ಲುಪೆಂಟಿ, ಜಲ್ಲಿ, ಹೊಂಡ ಗುಂಡಿಗಳು ಇದು ರಸ್ತೆ ಹೌದೋ ಅಲ್ಲವೋ ಎಂದು ಅನುಮಾನಪಡುವಂತೆ ಮಾಡಿದ್ದವು.

ಇದ್ದಕ್ಕಿದ್ದಂತೆ ಹರಿವಿನ ಸಪ್ಪಳವೇ ಇಲ್ಲದ ಭೀಮಾ ನದಿ ಪ್ರತ್ಯಕ್ಷವಾಯಿತು. ಅರೆಅರೆ, ಸ್ತೂಪದ ಬಿಳಿಯ ಗುಮ್ಮಟವೂ, ಒಂದು ಸ್ತಂಭವೂ ಹತ್ತಿರದಲ್ಲೆ ಕಾಣಿಸುತ್ತಿದೆ! ಬಿಸಿಲಿನಲ್ಲಿ ಬಂದದ್ದಕ್ಕೂ ಸಾರ್ಥಕವಾಯಿತೆಂದು ಗುಮ್ಮಟದ ದಿಕ್ಕಿನತ್ತ ಹೊರಟೆವು. ಜಾಲಿಗಿಡ ಸರಿಸುತ್ತ, ಕಾಲುಸುಡುವ ಕಲ್ಲುಬಂಡೆಗಳ ದಾಟುತ್ತ ಮುಂದೆ ಹೋದರೆ ಬಿಕೋ ಎನುವ ಬಯಲಿನಲ್ಲಿ ಕಿರೀಟ ಕಳಚಿ ಪಕ್ಕಕ್ಕಿಟ್ಟುಕೊಂಡಿದ್ದ ಅಶೋಕ ಶಾಂತ ನಗೆ ಸೂಸುತ್ತ ಎದುರಾದ!

ನಂಬಿ, ನಮಗೆ ಸಿಕ್ಕಿದ್ದು ಮೌರ್ಯ ಸಾಮ್ರಾಟ ಅಶೋಕ! ರಣಬಿಸಿಲಿನಲ್ಲಿಯೂ ಅವನ ಮುಖದ ಮೇಲೆ ಸ್ನಿಗ್ಧ ನಗೆ..

WP_20160424_039.jpg

WP_20160424_040.jpg

sannati%2B21.jpg

ಮುಟ್ಟಿದರೆ ಕೆಂಡದಂತೆ ಸುಡುತ್ತಲಿದ್ದ ಲೋಹದ ಮೂರ್ತಿ. ಆದರೂ ಸೆಳೆವ ಮಾಯಕದ ನಗೆ. ಅಲ್ಲೇ ಆಚೆ ಆಶೋಕ ಸ್ತಂಭವೂ, ಅದರ ಹಿಂದೆ ಬಿಳಿಬಣ್ಣ ಮಾಸಲಾದ ಪಾಳುಬಿದ್ದ ಸ್ತೂಪವೂ ಕಂಡವು. ಸ್ತೂಪದ ಬಾಗಿಲು, ಬೀಗ ತೆರೆದು ಯಾವುದೋ ಕಾಲವಾಗಿದೆಯೆಂದು ಧೂಳು, ಬಲೆಗಳೇ ಹೇಳಿದವು. ಕಿಟಕಿಯಿಂದ ಇಣುಕಿದರೆ ಒಳಗೆ ಖಾಲಿ ಹಜಾರ. ಒಂದು ಕೋಣೆಯ ಗೋಡೆ ಮತ್ತು ಬಾಗಿಲುಗಳೆರಡೂ ಮುರಿದು ಬೀಳುವ ಸ್ಥಿತಿಯಲ್ಲಿದ್ದವು. ಅರ್ಧಮರ್ಧ ಕಟ್ಟಿಬಿಟ್ಟ ಜಗಲಿಯಲ್ಲಿ ಎಕ್ಕದ ವನ ಬೆಳೆಯತೊಡಗಿತ್ತು. ಕಂಭದ ಬುಡದಲ್ಲಿ ಗೆದ್ದಲು ಹುತ್ತ ಎಬ್ಬಿಸಿತ್ತು. ಇದಕ್ಕಿಂತ ಸುಸ್ಥಿತಿಯಲ್ಲಿದ್ದ ಕಟ್ಟಡ ಆಚೆ ಕಂಡರೂ ಮನುಷ್ಯರಾರೂ ಸುಳಿದ ಕುರುಹುಗಳಿರಲಿಲ್ಲ. ನದಿತೀರದಲ್ಲಿ ಮೂರು ಬೃಹತ್ ಶಿಲಾಫಲಕ ಕಂಡು ಅತ್ತ ಹೋದರೆ ಆ ಜಾಗವನ್ನು ‘ಅಭಿವೃದ್ಧಿ’ಪಡಿಸಿದ ಕಲಿಯುಗದ ಮಹನೀಯರು ತಮ್ಮ ಹೆಸರು, ಕೆಲಸದ ಮುಹೂರ್ತಗಳ ದಾಖಲಿಸಿ ಕಲ್ಲು ಹುಗಿಸಿದ್ದರು.

ಹಿಂದಿನ ದಿನವಷ್ಟೆ ಕಲಬುರಗಿಯ ಖರ್ಗೆ ವಿಹಾರದಲ್ಲಿ ಪ್ರಶಾಂತತೆ ಎದೆಯೊಳಗೆ ಇಳಿದಂತೆನಿಸಿದ್ದರೆ, ಸನ್ನತಿಯ ೨,೩೦೦ ವರ್ಷಗಳ ಹಿಂದಿನ ಸ್ತೂಪದ ಬಗೆಗಿನ ನಿರ್ಲಕ್ಷ್ಯ ಎದೆ ಒಡೆಯುವಂತಿತ್ತು. ಉತ್ಖನನಗೊಂಡ ಅಶೋಕನ ಕಾಲದ ಬೌದ್ಧ ಸ್ತೂಪಕ್ಕಾಗಿ ನಮ್ಮ ಕಣ್ಣು ಹುಡುಕಾಡಿದವು. ಏನೂ ಕಾಣುತ್ತಿಲ್ಲ. ರಣಬಿಸಿಲು, ಬಯಲು. ಸಿಕ್ಕಿದ್ದೆಲ್ಲವನ್ನು ಗುಲ್ಬರ್ಗ ವಸ್ತುಸಂಗ್ರಹಾಲಯಕ್ಕೆ ಸಾಗಿಸಿಬಿಟ್ಟರೆ ಎಂಬ ಅನುಮಾನವೂ ಆಯಿತು.

ಎದೆ ಭಾರ ಮಾಡಿಕೊಂಡು ಹೊರಟವರಿಗೆ ಬಟ್ಟೆಪಾತ್ರೆ ತೊಳೆಯಲು ಹೊಳೆಗುಂಡಿಯತ್ತ ಹೊರಟಿದ್ದ ಹಳ್ಳಿಬಾಲೆ ಎದುರಾದಳು. ಸುಜಾತಾ. ‘ಇಲ್ಲಿ ಬುದ್ಧನ ವಿಗ್ರಹ ಸಿಕ್ಕೇತಂತಲ ಎಲ್ಲಬೆ?’ ಎಂದೆವು. ತಲೆ ಮೇಲಿನ ಕುಕ್ಕೆ ಕೆಳಗಿಳಿಸಿ ತನ್ನ ಸಪೂರ ಕೈಗಳ ಅಕಾ ಆ ದಿಕ್ಕಿನತ್ತ ಚಾಚಿ, ‘ಅಲ್ಲೈತ್ ನೋಡ್ರಿ. ಹಿಂಗಾಸಿ ಜರಾ ದೂರ್ ಹೋಗಾನ ಸಿಗತತಿ. ಬಿಸಲು ಬಾಳ ಅದಾವು, ಗಡಾನ ಹೋಗ್ರಿ’ ಎಂದು ನಾಚುತ್ತ ಹೇಳಿದಳು.

ಗಡಾನ ಮುಂದೆ ಹೋದದ್ದೇ ತಂತಿಬೇಲಿಯಿಂದ ಆವೃತವಾದ ವಿಶಾಲ ಆವರಣವೊಂದು ಕಾಣಿಸಿತು. ನಮ್ಮವರೆಲ್ಲ ಆ ಬಯಲು ವಸ್ತುಸಂಗ್ರಹಾಲಯದಲ್ಲಿ ಬಿಸಿಲ ಝಳ ಕುಡಿಯುತ್ತಲಿದ್ದರು. ನಮ್ಮ ಕಂಡದ್ದೇ ಇಬ್ಬರು ಕಾವಲುಗಾರರು ಎದ್ದು ಬಂದು ‘ಇಲ್ಲೆ ಪೋಟಗೀಟ ಹೊಡೆಂಗಿಲ್ರಿ’ ಎಂದರು. ಒಪ್ಪಿ, ನಮ್ಮ ಕುಲಗೋತ್ರಗಳನ್ನೆಲ್ಲ ಅವರ ದಫ್ತರದಲ್ಲಿ ಕಾಣಿಸಿ ಒಳಗಡಿಯಿಟ್ಟೆವು.

sannati%2B12.jpg

sannati%2B18.jpg

ದೂರದಲ್ಲಿ ಹರಡಿ ಬಿದ್ದ ಕಲ್ಲುಮಣ್ಣಿನ ರಾಶಿ. ಕಲ್ಲುಬೆಂಚಿನ ಮೇಲೆ ಕೂತಿದ್ದ ತರುಣ ‘ಪೋಟ ತಗಿಬ್ಯಾಡ್ರಿ’ ಎಂದ. ಪುಕ್ಕಟೆ ಒಳಬಿಟ್ಟುಕೊಂಡಿದ್ದರೂ ಇದೊಳ್ಳೆ ಕಾಟವಾಯಿತಲ್ಲ ಎಂದು ಮುಂದೆ ಹೋದೆವು. ಢಿಕ್ಕಿ ಹೊಡೆವಂತೆ ಆಳೆತ್ತರದ ಕಲ್ಲು ಎದುರೆ ಹಾಯಿತು. ಅರೆ, ಇದೇ ಅದು. ಅಶೋಕನ ಕಾಲದ ಬ್ರಾಹ್ಮಿಲಿಪಿಯ ಪ್ರಾಕೃತ ಶಿಲಾಶಾಸನ! ಆ ಶಾಸನ ಸಿಕ್ಕಿ ನಂತರ ಈ ಉತ್ಖನನ ನಡೆದದ್ದೇ ಚರಿತ್ರೆಯ ಒಂದು ಕುತೂಹಲಕರ ಅಧ್ಯಾಯ.

ತೀರ ಇತ್ತೀಚಿನವರೆಗೂ ಆ ಕಲ್ಲು ಭೀಮಾತೀರದ ಚಂದ್ರಲಾಂಬಾ ಗುಡಿ ಆವರಣದ ಕಾಳಿಕಾ ದೇವಿಯ ಪೀಠದ ಕಲ್ಲಾಗಿತ್ತು. ದೇವಿಯ ಪೀಠದ ಕಲ್ಲಿನ ಬೆಣೆಯನ್ನು ಈ ಕಲ್ಲಿನಲ್ಲಿ ಕಡೆದ ರಂಧ್ರದೊಳಗೆ ತೂರಿಸಿ ಲಾಕ್ ಮಾಡಿದ್ದರು. ಚಾವಣಿ ಕುಸಿದು ಕಾಳಿಶಿಲ್ಪ ಭಗ್ನಗೊಂಡಾಗ ಹೊಸ ಮೂರ್ತಿ ಸ್ಥಾಪಿಸಲು ಹಳೆಯ ಪೀಠ ಎಬ್ಬಿಸಲಾಯಿತು. ಸೂಕ್ಷ್ಮವಾಗಿ ನೋಡಿದಾಗ ಪೀಠದ ಕಲ್ಲುಚಪ್ಪಡಿ ಮೈಮೇಲೆ ಅಕ್ಷರಗಳಿದ್ದದ್ದು ಕಂಡುಬಂತು. ಯಾವುದೋ ಶಾಸನವೆಂದು ಇಲಾಖೆಗೆ ತಿಳಿಸಿ ಪೂರ್ತಿ ಚಪ್ಪಡಿ ಎಬ್ಬಿಸಿ ಬೆನ್ನು ತಿರುಗಿಸಿದರೆ ಅಲ್ಲೂ ಓದಲಾಗದ ಅಕ್ಷರಗಳು ತುಂಬಿದ್ದವು.

ಕೂಡಲೇ ಪುರಾತತ್ವ ಇಲಾಖೆಯವರು ಬಂದರು, ಅದು ಶಿಲಾಶಾಸನ ಎಂದರು. ಹೈದರಾಬಾದಿನ ತಜ್ಞರು ಬಂದರು, ಅದು ಬ್ರಾಹ್ಮಿಲಿಪಿ ಎಂದರು. ಅದರ ಒಂದು ಮುಖದಲ್ಲಿ ನಾಲ್ಕು ಸಾಲುಗಳಿದ್ದವು, ಮತ್ತೊಂದು ಮುಖದಲ್ಲಿ ೧೨ ಸಾಲುಗಳಿದ್ದವು. ಸಿಂಧೂ ನಾಗರಿಕತೆಯ ಲಿಪಿ ಓದುವ ವಿಶೇಷ ತಜ್ಞರು ಬಂದರು, ಅದು ಅಶೋಕನ ಕಾಲದ ಶಿಲಾಶಾಸನವೆಂದೂ, ಬರಹ ಪ್ರಾಕೃತದಲ್ಲಿದೆಯೆಂದೂ ತಿಳಿಸಿದರು. ಅಶೋಕನ ಕಾಲದ ಇಂತಹ ಶಾಸನಗಳು ಇದುವರೆಗೆ ಸಿಕ್ಕಿದ್ದು ಎರಡೇ ಎರಡು, ಅದೂ ಒರಿಸ್ಸಾದ ಕಳಿಂಗದಲ್ಲಿ. ಅಶೋಕನ ಇನ್ನೂ ೧೨೧ ಶಿಲಾಶಾಸನಗಳು ಪಾಕಿಸ್ತಾನ, ಆಫ್ಘನಿಸ್ತಾನ ಮತ್ತು ವಾಯವ್ಯ ಭಾರತದಲ್ಲಿವೆಯೆಂದು ಅಮೆರಿಕದ ವಿಶ್ವವಿದ್ಯಾಲಯ ಹೇಳುತ್ತಿರುವಾಗ ಸನ್ನತಿಯಲ್ಲೊಂದು ಆಕಸ್ಮಿಕವಾಗಿ ಸಿಕ್ಕಿದ್ದೇ ತಡ, ಪುರಾತತ್ವ ಹಾಗೂ ಬೌದ್ಧ ಜಗತ್ತು ಸನ್ನತಿಯೆಡೆಗೆ ನೋಡತೊಡಗಿತು. ದಕ್ಷಿಣಭಾರತದಲ್ಲಿ ಬೌದ್ಧಧರ್ಮದ ಇರುವಿಕೆಯ ಅನೇಕ ಕುರುಹುಗಳು ದೊರಕಿದ್ದರೂ ಇದು ಮೊದಲ ಶಿಲಾಶಾಸನವಾಗಿ ಗಮನ ಸೆಳೆಯಿತು.

ಸನ್ನತಿಯಲ್ಲಿ ಒಂದು ಸೇತುರಾಜನ ಕಟ್ಟೆ ಇದೆ. ೧೯೫೦-೫೫ರ ಸುಮಾರಿಗೆ ಅದು ಕಟ್ಟೆಯಲ್ಲ, ‘ಶಾತವಾಹನರ ಕೋಟೆ’ ಎಂತಲೂ; ಕಟ್ಟಿಸಿದ ರಾಜನ ಹೆಸರು ಬೇತುರಾಜನೆಂತಲೂ ಮೊದಲು ಗುರುತಿಸಿದ್ದವರು ಕಪಟ್ರಾವ್ ಕೃಷ್ಣರಾವ್. ಹಾಗೆಂದು ‘ಕನ್ನಡ ಸಂಸ್ಕೃತಿ ಸಂಶೋಧನ’ದಲ್ಲಿ ಲೇಖನ ಪ್ರಕಟಿಸಿಯೂ ಇದ್ದರು. ೧೯೬೬ರ ಸುಮಾರಿಗೆ ಉತ್ಖನನದ ಬಳಿಕ ಶಾತವಾಹನ ಪೂರ್ವ ಕಾಲದ ಕುಡಿಕೆಗಳು, ಮಣಿಗಳು, ಆಭರಣ, ಕೆರೆಕಟ್ಟೆ, ಒಂದು ಸಾಲಿನ ಶಾಸನವಿರುವ ಮೂರ್ತಿಗಳು ಸಿಕ್ಕಿದ ನಂತರ ಪುರಾತತ್ವ ತಜ್ಞ ಪಿ. ವಿ. ದೇಸಾಯಿ ಸನ್ನತಿಯ ಸುತ್ತಮುತ್ತಲ ಸ್ಥಳಗಳು ಬೌದ್ಧಕೇಂದ್ರಗಳಾಗಿದ್ದುವೆಂದು ಹೇಳಿದ್ದರು. ಆದರೆ ಅದನ್ನು ಸಾಕ್ಷ್ಯಾಧಾರಗಳೊಂದಿಗೆ ಸಾಧಿಸಿ ತೋರಿಸುವ ಕೆಲಸ ಆಗಿರಲಿಲ್ಲ. ಈಗ ಈ ಶಾಸನ ಸಿಕ್ಕ ನಂತರ ಅಂದಿನ ಅಭಿಪ್ರಾಯಗಳು ಗಟ್ಟಿಯಾದವು.

sannati%2B11.jpg

sannati%2B7.jpg

ಆ ಶಾಸನದಲ್ಲಿ ದೇವನಾಂಪ್ರಿಯ ಪ್ರಿಯದರ್ಶಿ ಧಾರ್ಮಿಕ ಸಹಿಷ್ಣುತೆ, ಮಾನವ ಕಳಕಳಿ, ಜನಸಾಮಾನ್ಯರನ್ನೂ ಧರ್ಮ ಹೇಗೆ ತಲುಪಬೇಕು ಎನ್ನುವುದರ ಬಗೆಗೆ ವಿವರವಾಗಿ ತಿಳಿಸಿದ್ದ.

ಒಂದು ಮುಖದ ನಾಲ್ಕು ಸಾಲುಗಳ, ಆರು ವಾಕ್ಯಗಳ ಅರ್ಥ:

‘ದಮ್ಮ ಕುರಿತ ಈ ದಾಖಲೆಯು ರಾಜ ದೇವನಾಂಪ್ರಿಯನಿಂದ ರೂಪಿಸಲ್ಪಟ್ಟಿದ್ದು
ಸ್ವಲ್ಪ, ಭಾಗಶಃ ಅಥವಾ ಪೂರ್ಣ
ಪೂರ್ಣ ಎಲ್ಲ ಕಡೆಗೂ ಸೂಕ್ತವಲ್ಲ
(ನನ್ನ) ರಾಜ್ಯ ವಿಸ್ತಾರ ಹಿರಿದು, ಬಹಳ ಬರೆಸಿ ಆಗಿದೆ, ಬರೆಸಬೇಕಾದದ್ದು ಇನ್ನೂ (ಬಹಳ) ಇದೆ
(ಕೆಲ) ವಿಷಯಗಳನ್ನು ಅವುಗಳ ಹೊಸತನಕ್ಕಾಗಿ ಮತ್ತೆಮತ್ತೆ ಹೇಳಿದ್ದೇನೆ, ಜನ ಹಾಗೆಯೇ ನಡೆಯಲಿ ಎಂದು
ಆದರೂ ಕೆಲವು (ವಿಷಯ) ಅರ್ಧಮರ್ಧವಾಗಿರಬಹುದು – ಸ್ಥಳದ ಕಾರಣದಿಂದ ಅಥವಾ (ನನ್ನ) ಆಶಯ ಬರೆದವನಿಗೆ ಇಷ್ಟವಾಗದೆ, ಅರ್ಥವಾಗದೆ ಹೋಗಿರುವುದರಿಂದ..’

ಮತ್ತೊಂದು ಮುಖದ ೧೨ ಸಾಲುಗಳು ಹೀಗಿವೆ:

‘ರಾಜ ಪ್ರಿಯದರ್ಶಿ, ದೇವನಾಂಪ್ರಿಯ, ಸರ್ವಧರ್ಮಿಗಳ ಗೌರವಿಸುವವ
(ಗೃಹಸ್ಥ, ಸಾಧುಸಂತರೆನದೆ) ಎಲ್ಲರ ಗೌರವಿಸಿ, ಮನ್ನಣೆ ಕೊಡುವವ
ತನಗೆ ಗೌರವ, ಮನ್ನಣೆ ಸಿಗುವುದಕ್ಕಿಂತ ಸರ್ವ ಮತಾನುಯಾಯಿಗಳಲ್ಲಿ ಧರ್ಮ ನೆಲೆಯಾಗಬೇಕೆಂದು ಬಯಸುತ್ತಾನೆ
ಧರ್ಮಪಾಲನೆ ಸಾಧ್ಯವಾಗುವುದು (ತಮ್ಮ) ಮಾತಿನ ಮೇಲೆ ನಿಯಂತ್ರಣವಿಟ್ಟುಕೊಂಡು ತನ್ನ ಮತವನ್ನು ಹೊಗಳಿಕೊಳ್ಳದೆ ಇತರ ಮತಗಳನ್ನು ದ್ವೇಷಿಸದೆ ಇರುವುದರಿಂದ..
ಪ್ರತಿ ಸಂದರ್ಭದಲ್ಲೂ ಅತಿಗೆ ಹೋಗದ ಮಧ್ಯಮ ಮಾರ್ಗಗಾಮಿಯಾಗಿರಬೇಕು
ಹೀಗೆ ನಡೆದುಕೊಳ್ಳುವವ ತನ್ನ ಮತಕ್ಕೂ ಪ್ರಯೋಜನಕಾರಿ, ಅನ್ಯಮತಗಳಿಗೂ ಹಿತಕಾರಿ
ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುವವ ತನ್ನ ಮತಕ್ಕೆ ಅತ್ಯಂತ ಅಪಾಯಕಾರಿ ಅಷ್ಟೇ ಅಲ್ಲ, ಅನ್ಯಮತಗಳಿಗೂ ಹಾನಿಕಾರಕನಾಗುತ್ತಾನೆ
ಅಂತಹ ನಡವಳಿಕೆಯನ್ನು ಸ್ವಮತ ಪ್ರೇಮದ ಭಕ್ತಿಯಿಂದ ಅಥವಾ ಸ್ವಮತದ ವೈಭವೀಕರಣದಿಂದ ಪ್ರದರ್ಶಿಸಿದರೆ ಅದರಿಂದ ತನ್ನ ಮತವನ್ನೇ ಆಳವಾಗಿ ಘಾಸಿಗೊಳಿಸುತ್ತಾನೆ
ಆದ್ದರಿಂದ ಮೈತ್ರಿಯೊಂದೇ ಉನ್ನತ ಮೌಲ್ಯ. ಎಂದರೆ ಎಲ್ಲರೂ ಪರಸ್ಪರರ ನೀತಿಯನ್ನು ಆಲಿಸಬೇಕು, ಪಾಲಿಸಬೇಕು. ಇದು ದೇವನಾಂಪ್ರಿಯನ ಬಯಕೆ
.. ..’

ಎಂತಹ ಮಾತುಗಳ ಹೇಳಿರುವ ರಾಜ! ದೇವನಾಂಪ್ರಿಯನೇ ಸೈ.

ಬರೀ ಶಾಸನವೊಂದೇ ಇರಲು ಸಾಧ್ಯವಿಲ್ಲ, ಸುತ್ತಮುತ್ತ ಸ್ತೂಪವೋ, ವಿಹಾರವೋ, ಚೈತ್ಯವೋ ಇದ್ದಿರಲೇಬೇಕೆಂದು ಸಪಾಟು ಹೊಲ, ಬಯಲುಗಳ ನಡುವೆ ಇರುವ ದಿಬ್ಬಗಳ ಶೋಧನೆ ಶುರುವಾಯಿತು. ಹಲವೆಡೆ ಬಗೆದರೂ ಏನೂ ಸಿಗಲಿಲ್ಲ. ಕೊನೆಗೆ ಆಗಷ್ಟೆ ಹತ್ತಿ, ತೊಗರಿ ಕಟಾವು ಮಾಡಿಕೊಂಡು ನಿಂತ ಕನಗನಹಳ್ಳಿಯ ಹೊಲದಲ್ಲಿ ಅಷ್ಟೇನೂ ಎತ್ತರವಿಲ್ಲದ ದಿಬ್ಬವೊಂದನ್ನು ಗುರುತಿಸಿ ಅಗೆಯತೊಡಗಿದರು. ಯಾವ ಭರವಸೆಯೂ ಇರದೆ ಉತ್ಖನನ ಶುರುವಾಯಿತು.

ಅಗೆಯುತ್ತ ಹೋದಂತೆ ಇತಿಹಾಸದ ನಿಧಿಯೇ ಅನಾವರಣಗೊಂಡಿತು. ಸಿಕ್ಕೀತೋ ಇಲ್ಲವೋ ಎಂದು ಅನುಮಾನಿಸಿದವರು ಬೆಚ್ಚಿಬೀಳುವಂತೆ ಅದ್ಭುತ ಉಬ್ಬುಶಿಲ್ಪ ಕಲಾಕೃತಿಗಳ ಸುಣ್ಣಕಲ್ಲು (ಲೈಮ್‌ಸ್ಟೋನ್) ಚಪ್ಪಡಿಗಳು ದೊರೆತವು. ನೆಲದಾಳದಿಂದ ಒಂದೊಂದೇ ತುಂಡುಗಳು ಹೊರಬಂದು, ಅವನ್ನು ಜೋಡಿಸುತ್ತ ಹೋದಂತೆ ‘ಅಧೋಲೋಕ ಮಹಾಚೈತ್ಯ ಸ್ತೂಪ’ ಕಣ್ಣೆದುರು ಸಾಕಾರಗೊಳ್ಳತೊಡಗಿತು.

sannati%2B17.jpg

sannati%2B19.jpg

ಪ್ರಬಲ ಭೂಕಂಪದಲ್ಲಿ ನೆಲಕಚ್ಚಿದ ಅವಶೇಷಗಳು ಒಂದು ಸಮುಚ್ಚಯಕ್ಕೆ ಸೇರಿದವಾಗಿದ್ದವು. ಅಧೋಲೋಕ ಮಹಾಚೈತ್ಯ, ಹರಕೆಯ ಸ್ತೂಪ, ಚೈತ್ಯಗೃಹ, ವಿಹಾರ ಸಮುಚ್ಚಯ, ಬುದ್ಧಪಾದ ಮತ್ತು ಶಿಲ್ಪಗಳ ಡೇರೆಗಳಿರುವ ಇಟ್ಟಿಗೆ ರಚನೆಗಳು ಅಲ್ಲಿದ್ದವು. ಸ್ತೂಪದ ವ್ಯಾಸ ೨೨ ಮೀಟರ್, ಎತ್ತರ ಐದು ಮಹಡಿ ಕಟ್ಟಡದಷ್ಟು ಅಂದರೆ ೧೭ ಮೀಟರ್. ವರ್ತುಲಾಕಾರದ ರಚನೆ, ಮೇಲೆ ಗುಮ್ಮಟ. ನಾಲ್ಕು ಬಾಗಿಲು, ಅದರ ಪ್ರವೇಶದ ಬಳಿ ಧಾರ್ಮಿಕ ವಿಧಿಗಳಿಗೆ ಪುಟ್ಟ ವೇದಿಕೆ. ಹೊರಭಾಗದ ಗೋಡೆಗೆ ಉಬ್ಬುಶಿಲ್ಪಗಳ ಚಪ್ಪಡಿ ಕೂಡಿಸಲಾಗಿತ್ತು. ಬುದ್ಧನ ಜೀವನದ ಘಟನಾವಳಿಗಳು, ಶಾತವಾಹನ ಅರಸರು ಮತ್ತು ಜನಸಾಮಾನ್ಯರು, ಚ್ಛದ್ದಂತ ಜಾತಕ, ಹಂಸಜಾತಕವೇ ಮೊದಲಾದ ಜಾತಕ ಕತೆಗಳನ್ನು ತೋರಿಸುವ ಶಿಲ್ಪಗಳು ಅಲ್ಲಿದ್ದವು. ಗುಮ್ಮಟದ ೬೦ ಶಿಲ್ಪಫಲಕಗಳೂ, ವರ್ತುಲಾಕಾರದ ಕೆಳಭಾಗದ ೭೨ ಫಲಕಗಳೂ ಸಿಕ್ಕವು. ಕಂಭಗಳ ತುಣುಕುಗಳು, ಗತಜನ್ಮ ವೃತ್ತಾಂತಗಳು, ಯಕ್ಷ-ಸಿಂಹ ಶಿಲ್ಪಗಳು, ಕಂಬಿಗಳ ಕೆತ್ತನೆಯ ಭಾಗಗಳು, ಸ್ತೂಪದ ಇತರ ಭಾಗಗಳು, ಬುದ್ಧನ ೧೦ ಶಾಸನಯುಕ್ತ ಪ್ರತಿಮೆಗಳು, ಸ್ತೂಪಕ್ಕೆ ನೀಡಿದ ದೇಣಿಗೆಯನ್ನೂ ಸೇರಿಸಿ ೨೫೦ ಬ್ರಾಹ್ಮಿ ಶಾಸನಗಳು ದೊರೆತವು. ಬುದ್ಧ ಸಂಕೇತ-ಮೂರ್ತಿಗಳ ಜೊತೆಗೆ ಆನೆ, ಸಿಂಹ, ಕಮಲಗಳು, ಬಿರುಗಾಳಿಯಿಂದ ಬುದ್ಧನನ್ನು ರಕ್ಷಿಸಿತೆನ್ನಲಾಗುವ ಏಳು ಹೆಡೆಯ ಸರ್ಪ ಮುಚುಲಿಂದ, ಭಗ್ನಗೊಂಡ ಏಳು ವಿಶ್ವಭೂ ಬುದ್ಧ ಮೂರ್ತಿಗಳು, ಶಾಸನ-ನಾಣ್ಯ-ಪಿಂಗಾಣಿ ಮೊದಲಾದ ಪುರಾತನ ವಸ್ತುಗಳು ಸಿಕ್ಕವು. ಸಿದ್ಧಾರ್ಥ ಹುಟ್ಟಿದ ಕೂಡಲೇ ತಾಯಿ ಮಾಯಾಳ ಬಟ್ಟೆಯ ಮೇಲೆ ಮೂಡಿರುವ ಏಳು ಪಾದಗಳ ಗುರುತು, ಗೌತಮನ ತಪಸ್ಸು, ಸಾಕ್ಷಾತ್ಕಾರ, ಬುದ್ಧನ ಮರಣಾನಂತರ ಚಿತಾಭಸ್ಮವನ್ನು ಕರಂಡಕಗಳಲ್ಲಿಟ್ಟು ಏಳು ಆನೆಗಳ ಮೇಲೆ ಸಾಗಿಸುತ್ತಿರುವುದು, ಶಾತವಾಹನ ರಾಜ ಪುಲುಮಾವಿಯು ಉಜ್ಜಯಿನಿಯನ್ನು ದಾನ ನೀಡುತ್ತಿರುವುದು, ಬೌದ್ಧಮಠ, ಅಶೋಕನು ಬೇರೆಡೆಗೆ ಕಳಿಸಿದ ಧರ್ಮ ಪ್ರಚಾರಕರು – ಹೀಗೆ ಅಪೂರ್ವ ಮಾಹಿತಿ ನೀಡಬಲ್ಲ ಶಿಲ್ಪಗಳ ಗಣಿಯೇ ಸಿಕ್ಕಿತು.

ಈ ಸ್ತೂಪವು ಕ್ರಿ. ಪೂ. ೩ನೇ ಶತಮಾದ ವೇಳೆಗೆ ನಿರ್ಮಾಣಗೊಂಡದ್ದು. ಶಾತವಾಹನರ ಕಾಲದವರೆಗು ಅಂದರೆ ಕ್ರಿ. ಶ. ೩ನೇ ಶತಮಾನದವರೆಗೂ ನಿರ್ಮಾಣ ಕಾರ್ಯ ಮುಂದುವರೆಯಿತು. ಆರಂಭದ ಬೌದ್ಧ ಕಲೆ ಮತ್ತು ಧರ್ಮ (ಹೀನಾಯಾನ) ಬುದ್ಧನನ್ನು ಸಂಕೇತಗಳಲ್ಲಿ ಚಿತ್ರಿಸಿತು. ಸ್ತೂಪ, ಮೊದಲ ಉಪದೇಶದ ನಂತರ ತಿರುಗತೊಡಗಿದ ದಮ್ಮಚಕ್ರ, ಅರಳಿಮರ, ಖಾಲಿ ಸಿಂಹಾಸನ, ಪಾದುಕೆ ಇವೆಲ್ಲ ಬುದ್ಧನ ಸಂಕೇತಗಳೇ ಆಗಿದ್ದವು. ಕ್ರಿ. ಶ. ೨, ೩ನೇ ಶತಮಾನದ ಹೊತ್ತಿಗೆ ಬುದ್ಧನನ್ನು ಮನುಷ್ಯನಾಗಿ ಚಿತ್ರಿಸುವ ಪರಿಪಾಠ ಬಂತು. ಇಲ್ಲಿನ ಕೆತ್ತನೆಗಳಲ್ಲಿ ಎರಡೂ ಶೈಲಿಗಳು ಕಂಡುಬರುತ್ತವೆ. ಈ ಶಿಲ್ಪಗಳ ಒಂದು ವಿಶೇಷವೆಂದರೆ ಇಲ್ಲಿ ಎಲ್ಲರೂ ಆಭರಣಗಳನ್ನು ಬಿಟ್ಟರೆ ಅಂಗಾಂಗಗಳ ತೋರಿಸುತ್ತ ಬೆತ್ತಲೆಯೇ ಇದ್ದಾರೆ! ಆನೆ, ಕುದುರೆಗಳಿಗೂ ಲೈಂಗಿಕ ಅಂಗಾಂಗಗಳನ್ನು ಸ್ಪಷ್ಟವಾಗಿ ಕೆತ್ತಲಾಗಿದೆ. ಜನರ ಮುಖಚಹರೆ ಸ್ಥಳೀಯರಿಗಿಂತ ಕೊಂಚ ಭಿನ್ನವಾಗಿದೆ.

ಎಲ್ಲಕ್ಕಿಂತ ಮುಖ್ಯ ಶೋಧ ದೇವನಾಂಪ್ರಿಯ ಪ್ರಿಯದರ್ಶಿ ‘ರಾಣ್ಯೊ ಅಶೋಕ’ (ರಾಜ ಅಶೋಕ) ಎಂಬ ಶೀರ್ಷಿಕೆ ಹೊತ್ತ ಅಶೋಕನ ಮೂರ್ತಿ. ಪಟ್ಟದ ರಾಣಿಯೊಡನೆ, ಛತ್ರ ಚಾಮರ ಹಿಡಿದ ದಾಸಿಯರೊಡನೆ ಅಶೋಕ ಇದ್ದ. ಇದುವರೆಗೆ ಸಿಕ್ಕ ಅಶೋಕನ ಮೊತ್ತಮೊದಲ ಶಿಲ್ಪ ಅದು. ಈ ಶಾಸನ, ಶಿಲ್ಪಗಳಿಂದ ಮೌರ್ಯ, ಶಾತವಾಹನ ಕಾಲ ಕುರಿತ ಇತಿಹಾಸಕಾರರ ತಿಳಿವೂ ವಿಸ್ತಾರವಾಯಿತು. ಆ ಕಾಲದ ಆಭರಣ, ಪೂಜಾ ಸಂಸ್ಕೃತಿ, ಕಲೆ, ಕಟ್ಟಡ ನಿರ್ಮಾಣ ಹಾಗೂ ಶಿಲ್ಪಕಲೆಯ ವಿಕಾಸ ಮುಂತಾದ ವಿಷಯಗಳ ಮೇಲೆ ಹೊಸಬೆಳಕು ಚೆಲ್ಲಿತು.

sannati%2B1%2B-.jpg

(ಶಾತವಾಹನ ರಾಜ ಪುಲುಮಾವಿ ಉಜ್ಜಯಿನಿಯನ್ನು ದಾನ(?) ಕೊಡುತ್ತಿರುವುದು)

sannati%2B2.jpg

(ಮುಚುಲಿಂದ)

sannati%2B3.jpg

(ಮಾಯಾ ಹೆತ್ತ ಬಟ್ಟೆ)

sannati%2B4.jpg

(ಚೆನ್ನ, ಕುದುರೆ ಕಂಥಕ)

sannati%2B6.jpg

sannati%2B10.jpg

sannati%2B13.jpg

(ರಾಣ್ಯೋ ಅಶೋಕ: ರಾಜ ಅಶೋಕ)

sannati%2B14.jpg

(ಬುದ್ಧ: ಸಂಕೇತ ರೂಪದಲ್ಲಿ)

sannati%2B15.jpg

(ಬುದ್ಧ – ಸಂಕೇತ ರೂಪಗಳಲ್ಲಿ)

sannati%2B16.jpg

ಹೊಸಹೊಸದು ಇನ್ನೂ ಸಿಗುತ್ತಲೇ ಇವೆ. ಜಪಾನ್, ಕೊರಿಯಾ ಸೇರಿದಂತೆ ವಿದೇಶಗಳ ಬೌದ್ಧಶಾಸ್ತ್ರಜ್ಞರು, ಪುರಾತತ್ವಶಾಸ್ತ್ರಜ್ಞರು ಭೇಟಿ ನೀಡುತ್ತಿದ್ದಾರೆ. ಇದುವರೆಗೆ ಸಿಕ್ಕ ವಸ್ತು, ಶಿಲ್ಪಗಳನ್ನು ನಾಲ್ಕು ಕೋಣೆ ಕಂ ಶೆಡ್ಡುಗಳಲ್ಲಿ ಸಂರಕ್ಷಿಸಿಡಲಾಗಿದೆ. ಕೆಲವು ಬೇವು, ಬನ್ನಿ ಮರಗಳ ಕೆಳಗೆ ಪಂಚಧಾತುಗಳಿಗೆ ಒಡ್ಡಿಕೊಂಡು ವಿರಮಿಸಿವೆ. ಅಶೋಕನೂ ಅಷ್ಟೆ, ಅಲ್ಲೇ ಆಚೆ ಬನ್ನಿ ಮರದ ಕೆಳಗೆ ಗಾಳಿಗೆ ಮೈಯೊಡ್ಡಿ ಆರಾಮ ನಿಂತಿದ್ದಾನೆ!

‘ಇದರಲ್ಲಿ ದೇವರಲ್ಲದೆ ಇನ್ನಾರೂ ಇರುವುದು ಸಾಧ್ಯವಿಲ್ಲ..’

ಈ ಉತ್ಖನನ ಕೆಲಸದಲ್ಲಿ ಹೆಚ್ಚುಕಡಿಮೆ ೩೦ ವಸಂತಗಳನ್ನು ಕಳೆದಿರುವ ವ್ಯಕ್ತಿ ಅಲ್ಲಿದ್ದಾರೆ. ಸಣ್ಣವರಿರುವಾಗಿನಿಂದ ಕಲ್ಲು ಕೆಲಸ ಮಾಡುತ್ತಿರುವ ಅವರು ಶಾಲೆಗಿಂತ ಹೆಚ್ಚು ಕನಗನಹಳ್ಳಿಯ ಈ ಬಯಲ ವಿಶ್ವವಿದ್ಯಾಲಯದಲ್ಲೇ ಕಲಿತಿದ್ದಾರೆ. ಬುದ್ಧನ ಜೀವನ ವೃತ್ತಾಂತಗಳನ್ನು ನಾವು ಚರ್ಚಿಸತೊಡಗಿದಾಗ ಆಸಕ್ತಗೊಂಡು ಹತ್ತಿರ ಬಂದರು. ಅವರಿಗೆ ಒಂದು ಸಂಖ್ಯೆ ಬಹುವಾಗಿ ಕಾಡುತ್ತಿತ್ತು: ಬುದ್ಧನ ಮರಣಾನಂತರ ಅಸ್ಥಿ ಅವಶೇಷವನ್ನು ಎಂಟು ಭಾಗ ಮಾಡಿದರೆನ್ನುತ್ತಾರೆ. ಆದರೆ ಇಲ್ಲಿನ ಶಿಲ್ಪಗಳಲ್ಲಿ ಏಳು ಆನೆಗಳ ಮೇಲೆ ಅಸ್ಥಿಅವಶೇಷ ಕರಂಡಕಗಳನ್ನು ಒಯ್ಯುವಂತೆ ಕೆತ್ತಲಾಗಿದೆ. ನಿಜ ಸಂಖ್ಯೆ ಏಳೋ, ಎಂಟೋ?

ನಿಜ ಸಂಖ್ಯೆ ಎಂಟು. ಆದರೆ ಕರಂಡಕ ಒಯ್ಯುವ ಆನೆಗಳು ಏಳು.

ಬುದ್ಧ ಮಲ್ಲರ ರಾಜ್ಯ ಕುಶಿನಾರದಲ್ಲಿ ತೀರಿಕೊಂಡ. ದೇಹವನ್ನು ಬಟ್ಟೆ, ಹತ್ತಿನೂಲುಗಳಿಂದ ಐನೂರು ಪದರ ಸುತ್ತಿ ಕಬ್ಬಿಣದ ಕಡಾಯಿಯ ಎಣ್ಣೆಯಲ್ಲಿ ಮುಳುಗಿಸಲಾಯಿತು. ಎಲ್ಲ ಮಲ್ಲ ಕುಟುಂಬಗಳೂ ದರ್ಶನ ಪಡೆದು, ಮಹಾಕಶ್ಶಪ ಸಂಘದೊಡನೆ ಕುಶಿನಾರ ತಲುಪಿ, ಬುದ್ಧ ಕೊನೆಯುಸಿರೆಳೆದ ಏಳು ದಿನಗಳ ಬಳಿಕ ಬುದ್ಧದೇಹವನ್ನು ಬೆಂಕಿಗೊಪ್ಪಿಸಲಾಯಿತು. ಎಲ್ಲ ಬದಲಾಗಬೇಕೆಂದ ಬುದ್ಧ ದೇಹ ಭಸ್ಮವಾಗಿ ಬದಲಾಯಿತು. ಲಿಚ್ಛವಿ, ಶಾಕ್ಯ, ಕೋಲ್ಯ, ಕೋಸಲ, ಬುಲಿ, ಪಾವದ ಮಲ್ಲರು, ಕುಶಿನಾರದ ಮಲ್ಲರು, ವೇತ್ತಾಧಿಪದ ಬ್ರಾಹ್ಮಣ.. ಈ ಎಲ್ಲರಿಗು ಬುದ್ಧ ಗುರುವಿನ ಚಿತಾಭಸ್ಮ ಬೇಕು. ಆದರೆ ಚಿತಾಭಸ್ಮವನ್ನು ಮಡಕೆಯಲಿ ತುಂಬಿಟ್ಟುಕೊಂಡ ಮಲ್ಲರು ಹಂಚಿಕೊಳ್ಳಲು ನಿರಾಕರಿಸಿದರು. ಯುದ್ಧ ಕಾರ್ಮೋಡ ಕವಿಯಿತು. ಕೊನೆಗೊಂದು ದಿನ ದ್ರೋಣನೆಂಬ ಪಂಡಿತ ಸ್ನೇಹಭಾವದಲ್ಲಿ ಸಮಸ್ಯೆ ಬಗೆಹರಿಸಿದ. ‘ತನ್ನದೆನುವ ಏನೂ ಇರದ ಮಹಾಭಿಕ್ಕು ಬುದ್ಧ ಯುದ್ಧ ತಪ್ಪಿಸಹೊರಟು ಬುದ್ಧನಾದವ, ಅವನ ಚಿತಾಭಸ್ಮಕೆ ಇನ್ನೊಂದು ಯುದ್ಧ ನಡೆಯಬೇಕೆ? ಮಲ್ಲರ ರಾಜ್ಯ ರಕ್ತ ಹರಿವ ರಣರಂಗವಾಗಬೇಕೆ? ಇದು ದುಃಖನಿವಾರಕನಿಗೆ ತೋರಿಸುವ ಅಗೌರವವಲ್ಲವೆ?’ ಎಂದು ಕೇಳಿದ.

ದ್ರೋಣನ ಮಾತಿಗೆ ಮಲ್ಲರ ಕಣ್ಣು ತೆರೆಯಿತು. ಕೊನೆಗೆ ಚಿತಾಭಸ್ಮವನ್ನು ಎಂಟು ಸಮಪಾಲು ಮಾಡಲು ಸಮ್ಮತಿಸಿದರು. ಹಂಚಿದ ನಂತರ ಖಾಲಿಯಾಗುವ ಕರಂಡಕವನ್ನು ತನಗೆ ಕೊಡಬೇಕೆಂಬ ಷರತ್ತಿನೊಂದಿಗೆ ದ್ರೋಣ ಎಂಟು ಪಾಲು ಮಾಡಿಕೊಟ್ಟ. ಏಳನ್ನು ರಾಜಪರಿವಾರಗಳು ಆನೆಯ ಮೇಲೆ ಒಯ್ದವು. ವೇತ್ತಾಧಿಪದ ಬ್ರಾಹ್ಮಣ ಹಾಗೇ ಒಯ್ದ. ದ್ರೋಣ ಖಾಲಿಯಾದ ಕರಂಡಕ ಇಟ್ಟುಕೊಂಡು ಅದರ ಮೇಲೇ ಸ್ತೂಪ ಕಟ್ಟಿದ..

ಈ ವಿವರಣೆ ಕೇಳಿ ಅವರಿಗೆಷ್ಟು ಸಮಾಧಾನವಾಯಿತು ಎಂದರೆ ಅರಳಿದ ಮುಖವೇ ಎಲ್ಲ ಹೇಳಿತು. ಜ್ಞಾನದಾಹವೇ ಅಂಥದು. ಮುಂದೆ ನಾವಿರುವಷ್ಟು ಹೊತ್ತು ನಮ್ಮ ಜೊತೆಯೆ ಬಂದು ಎಲ್ಲ ವಿವರಿಸಿದರು. ಚೂರುಗಳ ತೋರಿಸಿದರು, ವಿಶೇಷಗಳ ಗಮನಿಸಲು ಹೇಳಿದರು.

ತಮ್ಮ ಮೂರು ದಶಕಗಳ ಅನುಭವವನ್ನು ಕಥೆಯಂತೆ ಬಿಚ್ಚಿಟ್ಟರು. ಅವರು ಒಂದು ದಿನವೂ ರಜೆ ಮಾಡಬಯಸುವುದಿಲ್ಲ; ಪಜಲ್ ಆಟದಲ್ಲಿ ತೊಡಗಿರುವ ಮಕ್ಕಳಿಗೆ ಆಗುವ ಹಾಗೆ, ದಿನವೂ ಸಿಗುವ ಚೂರುಗಳು ಯಾವುದರ ಜೊತೆ ಎಲ್ಲಿ ಹೊಂದಿಕೊಂಡಾವು ಎನ್ನುವುದು ಅವರ ತಲೆಯಲ್ಲಿ ಗುಂಯ್ಞ್‌ಗುಡುತ್ತಿರುತ್ತದೆ. ಅದನ್ನಿಟ್ಟು, ಇದನ್ನಿಟ್ಟು, ಬದಲಿಸಿ, ಕೂಡಿಸಿ, ತೆಗೆದು ಸರಿಯಾದ ಮೇಲೆ ಜೋಡಿಸಿಡುತ್ತಾರೆ. ಅವು ‘ದೊಡ್ಡ ಸಾರ್’ ಬಂದು ಅವರಿಂದ ಓಕೆ ಆದಾಗ ಶಿಲ್ಪವಾಗಿ ಒಂದೆಡೆ ಸೇರಿ, ಚಿತ್ರೀಕರಣಗೊಳ್ಳುತ್ತವೆ.

ಒಳಾವರಣದ ಬೇವಿನ ಮರದ ಕೆಳಗೆ ಉತ್ಖನನಗೊಂಡ ನೆಲದಾಳದ ಶಿಲ್ಪಗಳ ನಡುವೆ ಚಾಮುಂಡೇಶ್ವರಿಯೂ ಅವತರಿಸಿಬಿಟ್ಟಿದ್ದಳು. ಕನಗನಹಳ್ಳಿಯಲ್ಲಿ ಸನಾತನ ಧರ್ಮದವರ ಗಲಾಟೆಗೆ ಕಾರಣವಾದ ಆ ಮೂರ್ತಿ ಕುಂಕುಮ ಪೂಸಿಕೊಂಡು ನಿಂತಿತ್ತು. ಅದನ್ನು ತೋರಿಸುವಾಗಲೂ ಇನ್ನಿಲ್ಲದ ಧಾರ್ಮಿಕ ಮಾಗುವಿಕೆ ಅವರ ಮಾತುಗಳಲ್ಲಿ ವ್ಯಕ್ತವಾಯಿತು. ‘ನೋಡ್ರಿ ಮೇಡಂ, ಎಲ್ಲಾದೂ ಕಲ್ಲೇ. ಕಲ್ನ್ಯಾಗ ಯಾವ ಮೂರ್ತಿನರೆ ಅಳ್ಳಸಬೋದು. ಎಲ್ಲಾವೂ ದೇವ್ರೆ. ನಾವು ಸುಮ್ನ ಅವ್ಕೆ ಬೇರೆ ಹೆಸರಿಟಗೊಂದು ಬಡಿದಾಡ್ಲಿಕ್ ಹತ್ತೇವಿ ಅಷ್ಟ’ ಎಂದರು. ಆ ಮನುಷ್ಯ ನಂಬುವ ಧರ್ಮವು ವಿಗ್ರಹಾರಾಧನೆ ಪಾಪ ಎನ್ನುತ್ತದೆ, ವಿಗ್ರಹಾರಾಧಕ ಕಾಫಿರ ಎನ್ನುತ್ತದೆ. ಆದರೆ ಸಾವಿರಾರು ವರ್ಷ ಕೆಳಗೆ ತನ್ನಂತಹ ಕಲ್ಲುಕುಟಿಗನೊಬ್ಬ ರೂಪಿಸಿರಬಹುದಾದ ಈ ಶಿಲ್ಪಗಳ ಒಳಗೆ ದೇವರಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ ಎನ್ನುವುದು ಅವರ ಧೃಢನಂಬಿಕೆ. ಆತನ ಧರ್ಮಕ್ಕೆ ಭಾರತದ ಸಮಾಜವು ವಿರೂಪಗೊಳಿಸಲ್ಪಟ್ಟ ಎಲ್ಲ ವಿಗ್ರಹಗಳ ದುರ್ಗತಿಯನ್ನು ತಳುಕು ಹಾಕುತ್ತಿದ್ದರೆ, ಆತ ಮಾತ್ರ ಅಶೋಕನ ಶಿಲಾಶಾಸನ ದೇವತೆಯ ಪೀಠವಾಗುವುದರ ಹಿಂದೆ ಧರ್ಮಕಾರಣ ಇಲ್ಲವೆನ್ನುತ್ತಿದ್ದರು. ‘ಈ ಸ್ತೂಪ ಒಡದು ಕಾಳಿ ಗುಡಿ ಕಟ್ಟಿಲ್ರಿ. ಸುಮ್ ಅನಬಾಡ್ದು. ಹಂಗಾಗಿದ್ರ ಅವ್ರು ಈ ಅಕ್ಷರ ಎಲ್ಲ ಅಳಸಿಹಾಕ್ತಿದ್ರು. ಹಿಂತ ಗಟ್ಟಿ ಕಲ್ಲು ಸಿಕ್ಕೇತಂದು ಅದ್ರಮ್ಯಾಗೆ ದೇವ್ರ ಕುಂಡುರ‍್ಸ್ಯಾರ ಅಷ್ಟ’ ಎಂದರು!

ಹೆಚ್ಚು ಕಡಿಮೆ ೨೦ ವರ್ಷಗಳಿಂದ ಪುರಾತತ್ವ ಇಲಾಖೆಯ ಉತ್ಖನನ ನಡೆಯುತ್ತಿದೆ. ವಿದೇಶಗಳ ತಜ್ಞರೂ ಬಂದುಹೋಗಿದ್ದಾರೆ. ಆದಷ್ಟು ಬೇಗ ಸ್ತೂಪ ನಿರ್ಮಾಣ ಕಾರ್ಯ ನಡೆಯಬೇಕೆನ್ನುವುದು ಅವರ ಅಭಿಪ್ರಾಯ. ‘ಈ ಕಲ್ಲುಮೂರ್ತಿ ನೆಲದೊಳಗ ಇದ್ರ ಇನ್ನಾ ನೂರಲ್ಲ ಐನೂರು ವರ್ಷ ಇರವಲ್ಯಾಕ, ಸರಿ ಇರತಿದ್ದುವ್ರಿ. ಈಗಿಲ್ಲಿ ಬಿಸಿಲಿಗ್ ಬಂದು ಬಿದ್ದು ಮಳಿ, ಧೂಳು, ಧಗಿಗೆ ಹಾಳಾಗತಾವ್ರಿ. ಶೆಡ್‌ನ್ಯಾಗಿಟ್ಟವಿ ಖರೆ. ಆದ್ರ ಸೆಕ್ಯುರಿಟಿಗಂತ ಇನ್ನು ಬ್ಯಾರೆ ಎಲ್ಲೊ ಸಾಗ್ಸಿ ಇಡತಾರಂತ. ಎತ್ತಿಟ್ಟೇ ಒಡದು ಹೋಕಾವವು. ಬೇಗ ಸ್ತೂಪಾ ಕಟ್ಟಬೇಕ್ರಿ. ಸಿಕ್ಕಿರೋ ಪೀಸದಾಗ ಪೂರಾ ಕಟ್ಟೂಕಾಗುದಿಲ್ಲ ಖರೆ, ಆದ್ರ ಭಾಳಷ್ಟು ಪೀಸ್ ಸಿಕ್ಕಾವ, ಹಂಗ ಜೋಡ್ಸಿ ಮುಗಿಸ್ಬೇಕಾಗೇತಿ. ನಾ ಸಾಯೂದರೊಳಗ ಇದನೇನು ಕಟ್ಟಿ ಮುಗಸ್ತರಿಲ್ಲೊ ಅನಿಸೇತಿ. ಜರಾ ಈ ಕುರಿತಂಗ ಹೋದೋದಲ್ಲೆ ಸ್ವಲ್ಪು ಬರ‍್ದು, ತಿಳದೋರಿಗೆ ಹೇಳ್ರಿ. ನಿಮ್ಮ ದೋಸ್ತರಿಗೆಲ್ಲ ಇಲ್ಲಿಗೆ ಬಂದ್ ನೋಡ್ ಹೋಗ್ರಿ ಅಂತನ್ನರಿ’ ಎಂದು ಅಲವತ್ತುಕೊಂಡರು.

WP_20160424_048.jpg

(ಬುದ್ಧ ಮಲಗಿದ ಬೆಟ್ಟ, ಶಹಾಪುರ)

ಅಶೋಕ, ಕಳಿಂಗ ಯುದ್ಧ, ಅವನ ಕಿರಿಯ ಹೆಂಡತಿ, ಕುರುಡುಗೊಳಿಸಲ್ಪಟ್ಟ ಮಗ, ಭಿಕ್ಕುಗಳಾದ ಮಕ್ಕಳು, ರಾಜನೊಬ್ಬ ಬೌದ್ಧಧರ್ಮವನ್ನು ಒಳಗೊಳ್ಳಲು ಮಾಡಿದ ಪ್ರಯತ್ನ – ಎಲ್ಲವೂ ತಲೆಯೊಳಗೆ ಸುಳಿಯುತ್ತಿದ್ದವು. ಬಾಟಲಿಗಟ್ಟಲೆ ನೀರು ಕುಡಿದರು ಧಗೆಗೆ ಬಾಯಿ ಒಣಗಿಕೊಂಡೇ ಇತ್ತು. ಇಲ್ಲಿದ್ದ ಬುದ್ಧ ಎಲ್ಲರ ನೆನಪುಗಳಿಂದ ಹೀಗೆ ಮರೆಯಾಗಿಬಿಟ್ಟದ್ದು ಹೇಗೆ? ಆರಿಹೋಗುತ್ತಿರುವ ಬಾಯ ನೀರಪಸೆಯಂತೆಯೇ? ಹರಿವು ನಿಲಿಸಿ ಗುಂಡಿಯಾಗಿರುವ ಬೇಸಿಗೆಯ ಭೀಮೆಯಂತೆಯೆ? ಇಲ್ಲಿರುವ ಎಷ್ಟು ದಿಬ್ಬಗಳು ಇನ್ನೂ ಎಷ್ಟೆಷ್ಟು ರಹಸ್ಯಗಳ ಅಡಗಿಸಿಟ್ಟುಕೊಂಡಿವೆಯೋ ಏನೋ? ಎಂದೆಲ್ಲ ಅಂದುಕೊಳ್ಳುತ್ತ ಶಹಾಪುರದಲ್ಲಿ ಊಟಕ್ಕೆ ನಿಂತೆವು.

ಖಾನಾವಳಿಯ ರೊಟ್ಟಿ ಗಂಡಸರು ಬಡಿದದ್ದು ಎಂದು ಅದರ ಆಕಾರ, ದಪ್ಪಗಳೇ ಹೇಳಿದವು. ಊಟದ ಖಾರಕ್ಕೆ ಕಣ್ಣುಮೂಗುಗಳಿನ್ನೂ ನೀರು ಸುರಿಸುತ್ತಿರುವಾಗಲೇ ಅದರ ಮಾಲೀಕನ ಬಳಿ ತಮಾಷೆಯಾಗಿ ‘ರೊಟ್ಟಿ ಬಡ್ಯಾದ್ನು ಕಲ್ಕೊಬಿಟ್ಟಿರೇನು?’ ಎಂದು ಕೇಳಿದೆ. ‘ಕಾಲಕ್ಕ ತಕ್ಕಂಗ ಎಲ್ಲಾದೂ ಬದಲಾಗ್ಲೆ ಬೇಕಲ್ಲರಿ ಮೇಡಂ’ ಎಂದರು.

ಎಲ್ಲಾದೂ ಬದಲಾಗ್ಲೇ ಬೇಕು! ಅರೆ, ಬುದ್ಧ ಹೇಳಿದ್ದು ಇದನ್ನೇ ಅಲ್ಲವೆ?!

ಶಹಾಪುರದಿಂದ ಕಲಬುರಗಿಗೆ ಹೋಗುತ್ತ ಸನ್ನತಿ ಹತ್ತಿರದ ಹಳ್ಳಿಯವರಾದ ಸಂತೋಷ್ ತಮ್ಮ ಹಳ್ಳಿಗಳ ಜನ ದೂರದಿಂದ ಮನುಷ್ಯ ಮಲಗಿದಂತಿರುವ ಬೆಟ್ಟವೊಂದನ್ನು ‘ಬುದ್ದ ಮಲಗಿದ ಬೆಟ್ಟ’ ಎನ್ನುತ್ತಾರೆ ಎಂದು ವಾಹನ ನಿಲಿಸಿ ತೋರಿಸಿದರು. ಅರೆರೆ, ಹೌದಲ್ಲ, ಎಲ್ಲಕ್ಕು ಸಾಕ್ಷಿಯೆಂಬಂತೆ ಸಮಚಿತ್ತನಾಗಿ ಮಲಗಿಬಿಟ್ಟಿದ್ದ ಬುದ್ಧ ಬೆಟ್ಟವಾಗಿ!

ಅವನು ಮಲಗಿದ್ದ ಅಷ್ಟೆ, ಆದರೆ ಉಸಿರಾಡುತ್ತಿದ್ದ.
ಅವನು ವಿರಮಿಸಿದ್ದ ಅಷ್ಟೆ, ಆದರೆ ಎಚ್ಚರಿದ್ದ..

(ವಿ. ಸೂ.: ಇಲ್ಲಿನ ಕೆಲವು ಚಿತ್ರಗಳು ನನ್ನವು. ಉಳಿದ ಚಿತ್ರಗಳನ್ನು ಜರ್ನಿ ಅಕ್ರಾಸ್ ಕರ್ನಾಟಕ; ಬುದ್ಧಿಸ್ಟ್ ಡೋರ್.ನೆಟ್; ಫೋರಂ.ಸಂತಬಂತ.ಕಾಮ್ ಮೊದಲಾದ ಅಂತರ್ಜಾಲ ತಾಣಗಳಿಂದ ಪಡೆಯಲಾಗಿದೆ. ಅವರಿಗೆ ಧನ್ಯವಾದಗಳು. ಸನ್ನತಿಯಲ್ಲಿ ಛಾಯಾಚಿತ್ರ ತೆಗೆಯಬಯಸುವವರು ಮೊದಲೇ ಧಾರವಾಡದ ಪುರಾತತ್ವ ಕಚೇರಿಯಿಂದ ಅನುಮತಿ ಪತ್ರ ಒಯ್ಯಬೇಕಾಗುತ್ತದೆ.)

Posted by H S Anupama at 09:56 Email ThisBlogThis!Share to TwitterShare to FacebookShare to Pinterest

7 comments:

 1. photo.jpg
  ashok kr13 May 2016 at 18:00
  ನಾನಲ್ಲಿಗೆ 2009ರಲ್ಲಿ ಕಲಬುರ್ಗಿಯಲ್ಲಿದ್ದಾಗ ಭೇಟಿಕೊಟ್ಟಿದ್ದೆ. ಉತ್ಖನನ ನಡೆಯುತ್ತಿತ್ತು. ನಿಮ್ಮ ಚಿತ್ರಗಳನ್ನು ನೋಡಿದರೆ ಉತ್ಖನನ ಹೆಚ್ಚಿನ ಪ್ರಮಾಣದಲ್ಲಿ ನಡೆದಿರುವ ಹಾಗೆ ತೋರುತ್ತಿದೆ. ಭಾರತದಲ್ಲಿದ್ದದ್ದು ಭೌದ್ಧ ಧರ್ಮ ಎನ್ನುವ ವಾದಕ್ಕೆ ಪೂರಕವಾಗಿದೆಯೇ ಇದು ಎನ್ನಿಸುತ್ತದೆ.

  Reply

 2. b16-rounded.gif
  nagraj.harapanahalli14 May 2016 at 02:49
  ಮುನ್ನೆಲೆಗೆ ಬರಬೇಕಾದ ಸಂಗತಿ ಇದು. ಪತ್ರಿಕೆಯಲ್ಲಿ ಪ್ರಕಟವಾದರೆ ಇನ್ನಷ್ಟು ಜನರನ್ನು ತಲುಪುತ್ತದೆ. ಇತಿಹಾಸಕಾರರು ಸಹ ಈ ಬಗ್ಗೆ ಮಾತಾಡಿದ್ದು ನಾನು ಕೇಳಿಲ್ಲ. ಇತಿಹಾಸವನ್ನು ಯುವಜನರಿಗೆ ಮುಟ್ಟಿಸುವ ನಿಟ್ಟಿನಲ್ಲಿ ಏನಾದ್ರೂ ಮಾಡಬೇಕು.

  Reply

 3. b16-rounded.gif
  Unknown14 May 2016 at 21:45
  Wonderful information….planning to go…but after it cools down

  Reply

 4. b16-rounded.gif
  Prof.B.Gangadhara Murthy15 May 2016 at 22:32
  ANUPAMA U HAVE DONE AN EXCELLENT JOB. SANNATI WAS NOT FULLY EXPLORED WHEN I VISITED IT IN 19910S
  GANGADHARAMURTHY

  Reply

 5. photo.jpg
  Ashoka Vardhana16 May 2016 at 09:59
  ಇತಿಹಾಸವನ್ನು ವರ್ತಮಾನವನ್ನು ಕಟ್ಟಲಿಕ್ಕಾಗಿ ರಕ್ಷಿಸಬೇಕು. ಆದರೆ ನಮ್ಮಲ್ಲಿ ಆಗುತ್ತಿರುವುದು ಇತಿಹಾಸದ ಮರುಕಳಿಕೆಗೂ ವರ್ತಮಾನವನ್ನು ಶೀಥಲೀಕರಿಸಲೂ ಪ್ರಯತ್ನಗಳು 😦 ಬುದ್ಧನ ಬೂದಿಯನ್ನು ಪಾಲು ಮಾಡಬೇಕಾದ ಕತೆ ಇಂದಿಗೂ ಪ್ರಸ್ತುತ. ಒಳ್ಳೆಯ ಕಥನಕ್ಕಾಗಿ ಕೃತಜ್ಞ.

  Reply

 6. photo.jpg
  Anupamaprasad Prasad17 May 2016 at 19:36
  ಬುದ್ಧನನ್ನು ಕಂಡು ಅಶೋಕನನ್ನು ಮುಟ್ಟಿದ ಬಗೆಯನ್ನು ಇಲ್ಲಿ ದಾಖಲಿಸಿ ಕಾಣಲಾಗದವರಿಗೆ ಕಾಣಿಸಲು ಪ್ರಯತ್ನಿಸಿದ್ದೀರಿ. ಕೃತಜ್ಞತೆಗಳು.
  ಅನುಪಮಾ ಪ್ರಸಾದ್.

  Reply

 7. Anupama%25252Bin%25252Bshimoga.JPG
  H S Anupama19 May 2016 at 10:07
  ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ದಯವಿಟ್ಟು ಸನ್ನತಿಗೊಮ್ಮೆ ಹೋಗಿಬನ್ನಿ, ನಿಮ್ಮ ಬಳಗಕ್ಕೆ ನೋಡಲು ಹೇಳಿ..
  -ಅನುಪಮಾ

  Reply

http://bhoomibalaga.blogspot.in/2016/05/blog-post.html

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s