ಫೆಬ್ರವರಿ- 25 ರ ಮಂಗಳೂರು ಬಂದ್ ಗೆ ಕ.ಕೋ.ಸೌ.ವೇದಿಕೆ ಯ ವಿರೋಧ ‘ಹಿಂದೂತ್ವ ಸಂಘಟನೆಗಳ ಈ ಹರತಾಳ ರಾಜಕೀಯ ಪ್ ರೇರಿತ’

ಫೆಬ್ರವರಿ- 25 ರ ಮಂಗಳೂರು ಬಂದ್ ಗೆ ಕ.ಕೋ.ಸೌ.ವೇದಿಕೆಯ ವಿರೋಧ

‘ಹಿಂದೂತ್ವ ಸಂಘಟನೆಗಳ ಈ ಹರತಾಳ ರಾಜಕೀಯ ಪ್ರೇರಿತ’

ಉಡುಪಿ : ಇದೇ ಬರುವ ಫೆಬ್ರವರಿ-25 ರ ಶನಿವಾರ ಮಂಗಳೂರಿನಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿದ್ದು, ಅದರ ವಿರುದ್ಧ ಹಿಂದೂತ್ವ ಸಂಘಟನೆಗಳು ಜಿಲ್ಲೆಯಾದ್ಯಂತ ಹರತಾಳಕ್ಕೆ ಕರೆ ನೀಡಿರುವುದನ್ನು ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಉಡುಪಿ ಜಿಲ್ಲಾ ಘಟಕವು ತೀವ್ರವಾಗಿ ಖಂಡಿಸುತ್ತದೆ ಮತ್ತು ಇದೊಂದು ರಾಜಕೀಯ ಪ್ರೇರಿತ ಕಾನೂನು ವಿರೋಧಿ ನಡವಳಿಕೆ ಎಂದು ಅಭಿಪ್ರಾಯಿಸುತ್ತದೆ ಹಾಗೂ ಪಿಣರಾಯ್ ವಿಜಯನ್ ಅವರು ಭಾಗವಹಿಸುವ ಸೌಹಾರ್ದತೆಯ ಕಾರ್ಯಕ್ರಮಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ.

ಹಿಂದೂತ್ವವಾದಿಗಳ ಈ ಹರತಾಳದ ಕರೆಯು ಅವರ ಅಸಹನೆ, ಬಲತ್ಕಾರ ಮತ್ತು ದಬ್ಬಾಳಿಕೆಗಳ
ಫ್ಯಾಸಿಸ್ಟ್ ಮನೋಧರ್ಮದ ಪ್ರತೀಕ ಎಂದು ವೇದಿಕೆ ತಿಳಿಸಬಯಸುತ್ತಿದೆ.

ಪಿಣರಾಯ್ ವಿಜಯನ್ ಅವರು ಕೇರಳ ರಾಜ್ಯದ ಜನತೆಯಿಂದ ಚುನಾಯಿತರಾಗಿ ಸಂವಿಧಾನಾತ್ಮಕವಾಗಿ ಮುಖ್ಯಮಂತ್ರಿಯಾದವರು. ಅವರು ಜಿಲ್ಲಾಡಳಿತ ಸೂಕ್ತ ಅನುಮತಿಯೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂವಿಧಾನಾತ್ಮಕ ಹಕ್ಕನ್ನು ಹೊಂದಿದ್ದು, ಅದನ್ನು ತಡೆಯುವುದು ಸಂವಿಧಾನದ ಆಡಳಿತವನ್ನು ವಿರೋಧಿಸಿದಂತೆ ಎಂದು ವೇದಿಕೆ ಭಾವಿಸಿದೆ.

ರಾಜ್ಯ ಸರಕಾರವು ಈ ರೀತಿ ಬಲವಂತದ ಬಂದ್ ಗೆ ಕರೆ ನೀಡಿ ಅದನ್ನು ಪ್ರಚುರಪಡಿಸುತ್ತಿರುವ ಸಂಘಟನೆಗಳ ಮೇಲೆ ಮತ್ತು ಅದರ ನಾಯಕರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ವೇದಿಕೆ ಒತ್ತಾಯಿಸುತ್ತದೆ. ಒಂದು ವೇಳೆ ಇದರ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿ, ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದೆ ಜಿಲ್ಲೆಯಲ್ಲಿ ಇಂತಹ ಹೀನ ಚಾಳಿ ಮುಂದುವರೆದು ಅದರಿಂದ ಸಮಾಜದ ಸೌಹಾರ್ದತೆ ಮತ್ತು ಶಾಂತಿ ಪಾಲನಾ ವ್ಯವಸ್ಥೆಗಳಿಗೆ ಶಾಶ್ವತವಾದ ತೆರೆ ಬೀಳುವ ಸಾಧ್ಯತೆಗಳಿವೆ. ಆದುದರಿಂದ ರಾಜ್ಯದ ಮುಖ್ಯಮಂತ್ರಿಗಳು ತನ್ನ ನೆರೆ ರಾಜ್ಯದ ಮುಖ್ಯಮಂತ್ರಿಯವರು ರಾಜ್ಯದ ಅತಿಥಿಯಾಗಿ ಭಾಗವಹಿಸುವ ಈ ಕಾರ್ಯಕ್ರಮಕ್ಕೆ ಸಂಪೂರ್ಣ ರಕ್ಷಣೆಯನ್ನು ಒದಗಿಸಬೇಕೆಂದು ಒತ್ತಾಯಿಸುತ್ತದೆ.

ಜಿ.ರಾಜಶೇಖರ್, (ಅಧ್ಯಕ್ಷರು)

Advertisements

*ಧರ್ಮ ದ್ವೇಷ ಮತ್ತು ಜಾತಿ ದ್ವೇಷ ಖಂಡಿಸೋಣ, ತುಮಕ ೂರಿನ ಮಾನವತಾ ನಡಿಗೆಯನ್ನು ಬೆಂಬಲಿಸೋಣ*

*ಧರ್ಮ ದ್ವೇಷ ಮತ್ತು ಜಾತಿ ದ್ವೇಷ ಖಂಡಿಸೋಣ,

ತುಮಕೂರಿನ ಮಾನವತಾ ನಡಿಗೆಯನ್ನು ಬೆಂಬಲಿಸೋಣ*

ಜಾತಿ ವ್ಯವಸ್ಥೆಯ ಬರ್ಬರ ದಾಳಿಗಳು ಮತ್ತು ಪ್ರಭುತ್ವ ಹಿಂಸೆಯ ವಿರುದ್ಧ ಹೊಸ ತಲೆಮಾರಿನ ತರುಣ ತರುಣಿಯರು ಭಾರತದಾದ್ಯಂತ ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿರುವ ವಿದ್ಯಮಾನವನ್ನು ನಾವು ನೀವುಗಳು ಗಮನಿಸುತ್ತಿದ್ದೇವೆ. ಜೆಎನ್ ಯು ಹೋರಾಟ, ಊನಾ ಮಾದರಿಗಳಿಂದ ಪ್ರೇರಿಪಿತಗೊಂಡು ಹಲವು ಚಳವಳಿಗಳು ಚಿಗುರೊಡೆಯುತ್ತಿವೆ. ಕರ್ನಾಟಕದಲ್ಲೂ *ಉಡುಪಿ ಚಲೋ* ಎನ್ನುವಂತಹ ಈ ದಶಕದ ವಿನೂತನ ಚಳವಳಿಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಈ ಉಡುಪಿ ಚಲೋ ಚಳವಳಿಯು ಕರ್ನಾಟಕದ ಪ್ರಗತಿಪರ ವಲಯದಲ್ಲಿ ಭರವಸೆ ಮತ್ತು ಹುಮ್ಮಸ್ಸು ಮೂಡಿಸಿತು.

ಇದಾದ ಒಂದೆರಡು ತಿಂಗಳಿನಲ್ಲಿಯೇ ಸಮಾಜದ ಅಂಚಿಗೆ ಸರಿಯಲ್ಪಟ್ಟ ಆದಿವಾಸಿ ಬುಡಕಟ್ಟುಗಳು ನಿವೇಶನಕ್ಕೋಸ್ಕರ ಹೋರಾಟ ನಡೆಸಿ ಅದು ‘ಮಡಿಕೇರಿ ಚಲೋ’ ರೂಪ ಪಡೆಯಿತು. ಈ ಆದಿವಾಸಿ ಹೋರಾಟ ಕರ್ನಾಟಕದ ವಿವಿಧ ಕಡೆಗೆ ವಿವಿಧ ನಿವೇಶನ ವಂಚಿತರ ಚಳವಳಿಯಾಗಿ ರೂಪಾಂತರಗೊಳ್ಳುತ್ತಿದೆ.

ಇಷ್ಟೆಲ್ಲಾ ಪ್ರತಿರೋಧ, ಪ್ರತಿಭಟನೆಗಳ ನಡುವೆಯೂ ದಲಿತ ದೌರ್ಜನ್ಯದ ಪ್ರಕರಣಗಳೇನೂ ಕಡಿಮೆಯಾಗಲಿಲ್ಲ. ಬಡವರಿಗೆ ನಿವೇಶನ ಸಿಗಲಿಲ್ಲ. ನ್ಯಾಯ ಎನ್ನುವುದು ದಮನಿತ ಜನರಿಗೆ ಮರೀಚಿಕೆಯೇ ಆಗಿದೆ. ಇತ್ತೀಚಿಗೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜಾತಿಗ್ರಸ್ಥ ಮನಸ್ಸುಗಳು ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಅಭಿಷೇಕ್ ಮೇಲೆ ಪೈಶಾಚಿಕ ದಾಳಿ ನಡೆಸಿದೆ.

ಅಭಿಷೇಕ್ ಮೇಲಿನ ಈ ದಾಳಿ ಮತ್ತು ಕರ್ನಾಟಕ ಮತ್ತು ಭಾರತದಾದ್ಯಂತ ತೀವ್ರಗೊಳ್ಳುತ್ತಿರುವ ದಲಿತ ಸಮುದಾಯಗಳ ಮೇಲಿನ ದಾಳಿಗಳ ವಿರುದ್ದ ಫೆಬ್ರವರಿ ೧೬, ೨೦೧೭ ರಂದು ಮತ್ತೊಂದು ಸಂಘಟಿತ ‘ತುಮಕೂರು ಚಲೋ’ ನಡೆಯುತ್ತಿದೆ.

ಈ ‘ತುಮಕೂರು ಚಲೋ’ ವನ್ನು *ಕರ್ನಾಟಕ ಕೋಮು ಸೌಹಾರ್ದ ವೇದಿಕೆ*ಯ ಎಲ್ಲಾ ಸಹಭಾಗಿ ಸಂಘಟನೆಗಳೂ, ವ್ಯಕ್ತಿಗಳೂ, ಹಿತೈಷಿಗಳು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲಿಸಿ ಯಶಸ್ವಿಗೊಳಿಸಬೇಕೆಂದು ಕೇಳಿಕೊಳ್ಳುತ್ತೇವೆ. ತೀವ್ರ ಹಲ್ಲೆಗೊಳಗಾದ ಅಭಿಷೇಕ್ ಗೆ ನ್ಯಾಯ ಕೊಡಿಸುವ ಮೂಲಕ ಮುಂದೆಂದೂ ಅಭಿಷೇಕ್ ನಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುವುದು ಈ ಸಮಾಜದ ಮತ್ತು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಮಾತ್ರವಲ್ಲದೇ ತಮಗೆ ಸೂಕ್ತವೆನಿಸುವ ರೀತಿಯಲ್ಲಿ ಈ ಕೆಳಗಿನ ಸ್ಥಳೀಯ ಚಟುವಟಿಗಳನ್ನು ನಡೆಸಬೇಕೆಂದು ಕೇಳಿಕೊಳ್ಳುತ್ತೇವೆ.

* ಫೆಬ್ರವರಿ 16 ರ *ಮಾನವತಾ ಸಮಾವೇಶ*ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು.

* ತಮ್ಮ ತಮ್ಮ ಜಿಲ್ಲೆಗಳಿಂದ 2-3 ದಿನ ಮುಂಚಿತವಾಗಿ ಸಾಧ್ಯವಾದಷ್ಟು ಕಾರ್ಯಕರ್ತರನ್ನು ಕಳುಹಿಸಿಕೊಡುವುದು.

* ಅಭಿಷೇಕ್ ಪ್ರಕರಣವನ್ನು ಖಂಡಿಸಿ ಸ್ಥಳೀಯ ಸಭೆಗಳನ್ನು ನಡೆಸುವುದು.

* ತುಮಕೂರು ಚಲೋ ಬೆಂಬಲಿಸಿ ಪತ್ರಿಕಾಗೋಷ್ಠಿ ನಡೆಸುವುದು.

* ಅಭಿಷೇಕ್ ಗೆ ನ್ಯಾಯ ಸಿಗುವಂತೆ ಒತ್ತಾಯಿಸಿ ಸಹಿ ಸಂಗ್ರಹ ನಡೆಸುವುದು.

* ತುಮಕೂರು ಚಲೋ ಯಶಸ್ವಿಗಾಗಿ ದೇಣಿಗೆ ನೀಡುವುದು.

ಇನ್ನೂ ಸ್ಥಳೀಯ ಅನುಕೂಲಕ್ಕೆ ತಕ್ಕಂತೆ ಪೂರಕ ಚಟುವಟಿಕೆಗಳನ್ನು ನಡೆಸಬೇಕಾಗಿ ವಿನಂತಿ.

ಇಂತಿ,
ಕೆ.ಎಲ್.ಅಶೋಕ್,
ತ್ರಿಮೂರ್ತಿ ಡಿ..ಎಂ.


K L Ashok
State Gen.Secretary
Karnataka Komu Souhardha Vedike