ಪತ್ರಿಕಾ ಹೇಳಿಕೆ/Press Releases

ಪತ್ರಿಕಾ ಹೇಳಿಕೆ

ಜಾನುವಾರು ಸಾಗಾಟಗಾರನ ಮೇಲೆ ಎಎನ್ಎಫ್ ಗುಂಡು ದಾಳಿ ಪ್ರಕರಣ ಖಂಡನೀಯ ,
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ, ಮೃತದೇಹ ತರಲು ಹೋದವರ ಮೇಲೆ ಹಲ್ಲೆ ನಡೆಸಿದ ಭಜರಂಗಿಗಳ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು : ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹ

ಬೆಂಗಳೂರು, ಎ.20 : ಶೃಂಗೇರಿ ತಪಾಸಣಾ ಕೇಂದ್ರದಲ್ಲಿ ಜಾನುವಾರು ಸಾಗಾಟಗಾರರ ಮೇಲೆ ಎಎನ್ಎಫ್ ಪೊಲೀಸರ ಗುಂಡು ಹಾರಾಟ ಪ್ರಕರಣ ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಎಎನ್ಎಫ್ ಸಿಬ್ಬಂದಿಯ ಅವಾಂತರದಿಂದ ಒಬ್ಬ ಅಮಾಯಕ ಯುವಕನ ಜೀವ ಬಲಿಯಾಗಿದೆ. ಈ ಪ್ರಕರಣ ನಡೆದ ನಂತರದಲ್ಲಿ ಭಜರಂಗಿಗಳು ಮೃತದೇಹ ತರಲು ಹೋದವರ ಮೇಲೆ ನಡೆಸಿದ ಹಲ್ಲೆ ಮತ್ತು ಪೊಲೀಸರ ವರ್ತನೆಯನ್ನು ಗಮನಿಸಿದಾಗ ಇದೊಂದು ವ್ಯವಸ್ಥಿತವಾಗಿ ನಡೆದ ಹತ್ಯೆ ಎಂಬ ಗುಮಾನಿ ಹುಟ್ಟಿದೆ. ಸರಕಾರ ಬದಲಾದರೂ ಪೊಲೀಸ್ ಇಲಾಖೆಗೆ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಮೇಲೆ ಪೂರ್ವಾಗ್ರಹ ಇರುವುದು ಬದಲಾಗಿಲ್ಲ ಎನ್ನುವುದನ್ನು ಇದು ಎತ್ತಿ ತೋರಿಸುತ್ತಿದೆ. ಇಲ್ಲಿನ ಪೊಲೀಸರು ಖಾಕಿಯ ಒಳಗೆ ಕೇಸರಿ ಮನಸ್ಸನ್ನು ಹೊಂದಿದಂತೆ ಕಾಣುತ್ತಿದೆ. ಈ ಕಾರಣದಿಂದಾಗಿ ಶೃಂಗೇರಿ ಶೂಟೌಟ್ ಪ್ರಕರಣದ ಬಗ್ಗೆ ಶೀಘ್ರದಲ್ಲಿ ಉನ್ನತ ಮಟ್ಟದ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ಅಶೋಕ್ ಎಎನ್ಎಫ್ ಪೊಲೀಸರು ಇಂತಹ ಕೃತ್ಯವನ್ನು ಎಸಗಿ ರುವುದು ಇದೇ ಮೊದಲಲ್ಲ. ನಕ್ಸಲ್ ಎಂಬ ಸಂಶಯ ವನ್ನು ಮುಂದಿಟ್ಟು ಅಮಾಯಕರ ಪ್ರಾಣ ತೆಗೆದ ಅನೇಕ ಉದಾಹರಣೆಗಳಿವೆ. ಅನೇಕ ಜನರನ್ನು ನಕ್ಸಲ್ ಎಂದು ಬಂಧಿಸಿ, ಸುಳ್ಳು ಪ್ರಕರಣ ದಾಖಲಿಸಿ ಅವರ ಭವಿಷ್ಯದೊಂದಿಗೆ ಚೆಲ್ಲಾಟ ನಡೆಸಲಾಗುತ್ತಿದೆ. ಇಂತಹ ಅನೇಕ ಪ್ರಕರಣಗಳಲ್ಲಿ ಎಎನ್ಎಫ್ ವಿರುದ್ಧ ಯಾವುದೇ ತನಿಖೆ ನಡೆದಿಲ್ಲ. ಇದೀಗ ಇಂತದ್ದೇ ಸಂಶಯ ಮುಂದಿಟ್ಟು ಮತ್ತೊಬ್ಬ ಅಮಾ ಯಕನ ಹತ್ಯೆಯನ್ನು ಎಎನ್ಎಫ್ ಸಿಬ್ಬಂದಿ ನಡೆಸಿದೆ.ರಾಷ್ಟ್ರೀಯ ಮಾನವ ಹಕ್ಕು ಆಯೋಗದ ನಿರ್ದೇಶನದ ಪ್ರಕಾರ ಇಂತಹ ‘ನಕಲಿ ಎನ್ ಕೌಂಟರ್ ’ ಪ್ರಕರಣಗಳು ನಡೆದಾಗ ಅಂತಹ ಸಿಬಂದಿಯನ್ನು ಕೂಡಲೇ ಅಮಾನತುಗೊಳಿಸಿ, ತನಿಖೆ ನಡೆಸಬೇಕಿದೆ. ಇಲ್ಲಿ ಆ ನಿರ್ದೇಶನವನ್ನೂ ಪಾಲಿಸಲಾಗುತ್ತಿಲ್ಲ. ಕೂಡಲೇ ಗುಂಡು ಹಾರಿಸಿದ ತಂಡದ ಎಲ್ಲರನ್ನೂ ಅಮಾನತುಗೊಳಿಸಿ ತನಿಖೆ ನಡೆಸಬೇಕಿದೆ.
ಘಟನಾ ಸ್ಥಳದಲ್ಲಿದ್ದ ಕಬೀರ್ ಸಹವರ್ತಿ ರಫೀಕ್ ಹೇಳಿಕೆಯ ಪ್ರಕಾರ ತಪಾಸಣಾ ಕೇಂದ್ರದಲ್ಲಿ ವಾಹನವನ್ನು ತಡೆದು ನಿಲ್ಲಿಸಿ ತಪಾಸಣೆ ಮಾಡುವ ಸಂದರ್ಭ ಎದೆಗೆ ಗುಂಡಿಕ್ಕಿ ಕೊಲೆಗೈಯಲಾಗಿದೆ. ಇದನ್ನು ಗಮನಿಸಿದಾಗ ಇದು ವ್ಯವಸ್ಥಿತ ಕೊಲೆ ಎಂಬ ಗುಮಾನಿಗೆ ಎಡೆ ಮಾಡಿದೆ. ಈ ವರೆಗೂ ಗುಂಡಿಕ್ಕಿದ ಸಿಬ್ಬಂದಿಯ ಮತ್ತು ಹಲ್ಲೆ ನಡೆಸಿದ ಭಜರಂಗಿಗಳ ಬಂಧನ ಆಗದೇ ಇರುವುದು ವಿಷಾದನೀಯ. ಒಟ್ಟು ಘಟನೆ ರಾಜ್ಯ ಸರಕಾರದ ವೈಫಲ್ಯಕ್ಕೆ ಸಾಕ್ಷಿಯಾ ಗಿದೆ. ಇಂತಹ ರಾಜ್ಯ ಸರಕಾರ ನಡೆಸುವ ತನಿಖೆಯಲ್ಲಿ ನ್ಯಾಯದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ ಅರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮೃತದೇಹ ತರಲು ಹೋದವರ ಮೇಲೆ ಹಲ್ಲೆ ನಡೆಸಿದ ಭಜರಂಗಿಗಳ ಮೇಲೆ ಗೂಂಡಾ ಕಾಯಿದೆ ದಾಖಲಿಸಿ, ಬಂಧನಕ್ಕೆ ಒಳಪಡಿಸಬೇಕು. ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟವನ್ನು ಮಾಡಲಾಗುವುದು ಎಂದು ಈ ಮೂಲಕ ವೇದಿಕೆ ಎಚ್ಚರಿಸುತ್ತಿದೆ. ಮಾತ್ರವಲ್ಲದೆ ಹತ್ಯೆ ಗೊಳಗಾದ ಕಬೀರ್ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರ ಸರಕಾರ ಒದಗಿಸಬೇಕು, ಮಾನವ ಹಕ್ಕು ನಿರ್ದೇಶನದ ಪ್ರಕಾರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನಿನ ಶಿಕ್ಷೆ ವಿಧಿಸಬೇಕು ಎಂದು ವೇದಿಕೆ ಆಗ್ರಹಿಸುತ್ತದೆ.
ಕರ್ನಾಟಕದಲ್ಲಿ ಈ ವರೆಗೆ ಜಾನುವಾರು ಸಾಗಾಟಕ್ಕೆ ಯಾವುದೇ ರೀತಿಯ ನಿರ್ಬಂಧಗಳಿಲ್ಲ. ಅಲ್ಲದೇ ನಕ್ಸಲೈಟುಗಳು ಈ ರೀತಿ ಜಾನುವಾರು ಸಾಗಾಟದಲ್ಲಿ ನಿರತರಾದ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ನಕ್ಸಲ್ ನಿಗ್ರಹದಳ ಜಾನುವಾರು ಸಾಗಾಟದ ವಾಹನದಲ್ಲಿದ್ದವರ ಮೇಲೆ ಗುಂಡು ಹಾರಿಸಿದ್ದಾರೆ. ಇದರ ಹಿಂದೆ ಒಂದು ಷಡ್ಯಂತ್ರವಿದೆ. ಅಲ್ಲದೇ ಮೃತ ಯುವಕನ ಶವ ತರಲು ಹೋದವರ ಮೇಲೆ ಭಜರಂಗಿಗಳು ಪೊಲೀಸರ ಎದುರೇ ಹಲ್ಲೆ ನಡೆಸುತ್ತಾರೆಂದಾದರೇ, ರಾಜ್ಯದಲ್ಲಿ ಸರಕಾರ ಬದಲಾದರೂ, ಅಲ್ಪಸಂಖ್ಯಾತ ವರ್ಗದವರಿಗೆ ನ್ಯಾಯ ಎನ್ನುವುದು ದೊರೆಯಲಾರದು ಎನ್ನುವುದನ್ನು ಇದು ಸಾಬೀತು ಮಾಡಿದೆ. ಈ ಬಗ್ಗೆ ವೇದಿಕೆಯ ನೇತೃತ್ವದಲ್ಲಿ ಮಾನವ ಹಕ್ಕು ಸಂಘಟನೆಗಳನ್ನು ಸೇರಿಸಿಕೊಂಡು ಸತ್ಯಶೋಧನಾ ಸಮಿತಿ ರಚಿಸಿ, ಪ್ರಕರಣದ ಹಿಂದೆ ಅಡಗಿರುವ ಸತ್ಯವನ್ನು ಹೊರತರಲಾಗುವುದು ಎಂದು ಅವರು ಹೇಳಿದ್ದಾರೆ.

ಕ.ಕೋ.ಸೌ.ವೇದಿಕೆ

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s