ಭಾರತದ ಮುಸಲೋನಿ ಮೋದಿ

ಭಾರತದ ಮುಸಲೋನಿ ಮೋದಿ

( ಕೃಪೆ : ವಾರ್ತಾ ಭಾರತಿ – ಕನ್ನಡ ದೈನಿಕ)

ಸೋಮವಾರ – ನವೆಂಬರ್ -11-2013

ಭಾರತದ ಮುಸಲೋನಿ ಮೋದಿ

ಶೋಷಕ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕ ಬಿಕ್ಕಟ್ಟು ಉಲ್ಬಣಗೊಂಡಾಗ ನರೇಂದ್ರ ಮೋದಿಯಂಥ ನಾಯಕರು ಹುಟ್ಟಿ ಕೊಳ್ಳುತ್ತಾರೆ. ಕಾರ್ಪೊರೇಟ್ ಖದೀಮರು ತಮ್ಮ ಹಿತಾಸಕ್ತಿಯನ್ನು ರಕ್ಷಿಸಲೆಂದೇ ಮೋದಿಯಂಥ ಹೂಂಕರಿಸುವ ಮುಖಂಡ ರನ್ನು ಸೃಷ್ಟಿಸುತ್ತಾರೆ. ತಮ್ಮ ಮೇಲೆ ಯಾವ ಕಡಿವಾಣವನ್ನು ಹಾಕದೇ ತಮ್ಮ ತಿಜೋರಿ ತುಂಬಲು ನೆರವಾಗುವ ನರಹಂತಕ ಮೋದಿ ಪ್ರಧಾನಿಯಾಗುವುದು ಈ ಶೋಷಕ ವರ್ಗ ಗಳಿಗೆ ಬೇಕಾಗಿದೆ. ತಮ್ಮ ಗುರಿಸಾಧನೆಗಾಗಿ ಸಂಸದೀಯ ಜನತಂತ್ರ ವ್ಯವಸ್ಥೆಯನ್ನು ನಾಶ ಮಾಡಲು ಈ ಸುಲಿಗೆಕೋರ ವರ್ಗಗಳು ಹಿಂಜರಿಯುವುದಿಲ್ಲ. ಆದರೆ ಒಮ್ಮೆ ಪ್ರಜಾಪ್ರಭುತ್ವ ಪತನಗೊಂಡಾಗ ಫ್ಯಾಸಿಸಂ ವಿಜ್ರಂಭಿಸುತ್ತದೆ. ಭಾರತ ಇಂದು ಇಂಥ ಅಪಾಯದ ಅಂಚಿನಲ್ಲಿದೆ.
ಜಗತ್ತಿನ ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಫ್ಯಾಸಿಸಂನ ಕರಾಳ ಕತೆ ಗೊತ್ತಾಗುತ್ತದೆ. ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್ ನಾಜಿ ಸರ್ವಾಧಿಕಾರಿಯಾಗಿ ಮರೆಯಲು ಇದೇ ಲೂಟಿಕೋರ ವರ್ಗಗಳೇ ಕಾರಣ. ಇಟಲಿಯಲ್ಲಿಕಳೆದ ಶತಮಾನದ ಮೊದಲ ಎರಡು ದಶಕದಲ್ಲಿ ಬೆನೆಟೊ ಮುಸಲೋನಿ ಎಂಬ ಫ್ಯಾಸಿಸ್ಟ್ ಪಾತಕಿ ಹೂಂಕರಿಸಲು ಇದೇ ಶೋಷಕರೇ ಕಾರಣ. ಮೊದಲ ಮಹಾಯುದ್ಧದ ಪರಿಣಾಮವಾಗಿ ಇಟಲಿಯ ಆರ್ಥಿಕ ವ್ಯವಸ್ಥೆ ದಿವಾಳಿಯ ಅಂಚಿಗೆ ಬಂದಿತ್ತು. ನಿರುದ್ಯೋಗ, ಬಡತನಗಳಿಂದ ಜನ ರೋಸಿ ಹೋಗಿದ್ದರು. ಕಮ್ಯುನಿಸ್ಟರು ಈ ಜನರ ನೋವಿಗೆ ದನಿಯಾಗಿ ಇನ್ನೇನು ಸಮಾಜವಾದಿ ಕ್ರಾಂತಿ ನಡೆದೇ ಹೋಗುತ್ತದೆ ಎಂಬ ಸ್ಥಿತಿ ನಿರ್ಮಾಣ ವಾಗಿತ್ತು. ಅದನ್ನು ತಪ್ಪಿಸಲೆಂದೇ ಮುಸಲೋನಿಯನ್ನು ಶೋಷಕ ವರ್ಗಗಳು ಸೃಷ್ಟಿಸಿದವು.
ಜನರ ಅಸಮಾಧಾನದ ಬೆಂಕಿ ತಮ್ಮ ಬುಡಕ್ಕೆ ಬರುತ್ತದೆ ಎಂದು ದಿಗಿಲು ಗೊಂಡ ಬಂಡವಾಳಿಗರು ಸೇನಾ ದಂಡನಾಯಕನಾಗಿದ್ದ ಮುಸಲೋನಿ ಯನ್ನು ಮುಂದೆ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಮುಂದಾದರು. ಮುಸಲೋನಿ ಭಾಷೆ ಬದಲಾಯಿತು. ಕಮ್ಯುನಿಸ್ಟರನ್ನು, ಸೋಷಲಿಸ್ಟರು ಹತ್ತಿಕ್ಕಿ ರೋಮನ್ ಸಾಮ್ರಾಜ್ಯದ ಸುವರ್ಣಯುಗವನ್ನು ಮರು ಸ್ಥಾಪಿಸುವುದೇ ತನ್ನ ಗುರಿ ಎಂದು ಬಹಿರಂಗವಾಗಿ ಹೇಳಿದ. ಫ್ಯಾಸಿಸಂಗೆ ರಾಜಕೀಯ ಸಿದ್ಧಾಂತದ ಸ್ವರೂಪ ನೀಡಿ ಫ್ಯಾಸಿಸ್ಟ್ ಪಾರ್ಟಿ ಕಟ್ಟಿದ. ಮಿಲಿಟರಿ ಮಾದರಿಯಲ್ಲಿ ಬ್ಲಾಕ್ ಶರ್ಟ್ಸ್ (ಕಪ್ಪು ಅಂಗಿ) ಎಂಬ ಗೂಂಡಾ ಗ್ಯಾಂಗನ್ನು ಕಟ್ಟಿದ. ಸೋಷಲಿಸ್ಟ್ ನಾಯಕ ಮೆಟ್ಟಿಯೊಟ್ಟಿಯನ್ನು ಕೊಲೆ ಮಾಡಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ.
ಇಟಲಿಯಲ್ಲಿ ಚುನಾವಣೆ ಮೂಲಕ ಅಧಿಕಾರಕ್ಕೆ ಬಂದ ಮುಸಲೋನಿ 1928ರಲ್ಲಿ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರದ್ದುಪಡಿಸಿ ಫ್ಯಾಸಿಸ್ಟ್ ಪ್ರಭುತ್ವ ಸ್ಥಾಪಿಸಿದ. ಸಂಸದೀಯ ಪ್ರಜಾಪ್ರಭುತ್ವ ಹೆಸರಿಗಾದರೂ ಎಲ್ಲರಿಗೂ ಸಮಾನ ಅವಕಾಶ ನೀಡಿತ್ತು. ಈ ಅವಕಾಶ ಬಳಸಿಕೊಂಡು ಯುರೋಪಿನ ದಮನಿತ ದುಡಿಯುವ ವರ್ಗದ ಜನತೆ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು. ಇದನ್ನು ಶೋಷಕ ವರ್ಗಗಳಿಗೆ ಸಹಿಸಲಾಗಲಿಲ್ಲ. ಮಧ್ಯಮವರ್ಗ, ಕೆಳಗಿನ ವರ್ಗಗಳ ದನಿಯನ್ನು ಸಹಿಸಲಿಲ್ಲ. ಇದೆಲ್ಲದರ ಪರಿಣಾಮವಾಗಿ ಫ್ಯಾಸಿಸಂ ಜನ್ಮ ತಾಳಿತು. ಜನತಂತ್ರ ನಾಶವಾಯಿತು.
ಇಂಥ ಮುಸಲೋನಿಯಿಂದ ಪ್ರೇರಣೆ ಪಡೆ ಮಹಾರಾಷ್ಟ್ರದ ಚಿತ್ತಾವನ ಬ್ರಾಹ್ಮಣರ ಒಂದು ಗುಂಪು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಎಂಬ ಸಂಸ್ಥೆಯನ್ನು ಹುಟ್ಟು ಹಾಕಿತು. ಮುಸಲೋನಿಯ ಕಪ್ಪು ಅಂಗಿಯಂತೆ ಕಪ್ಪು ಟೋಪಿಯನ್ನು ಯೂನಿಫಾರ್ಮ್ ಮಾಡಿಕೊಂಡ ಆರೆಸ್ಸೆಸ್ ಸ್ಥಾಪಕರಲ್ಲೊಬ್ಬರಾದ ಮೂಂಜೆ ಇಟಲಿಗೆ ಹೋಗಿ ಮುಸಲೋನಿ ಯನ್ನು ಭೇಟಿ ಮಾಡಿ ಆತನಿಂದ ಕೆಲ ಸಲಹೆ ಸೂಚನೆ ಗಳನ್ನು ಪಡೆದು ಫ್ಯಾಸಿಸ್ಟ್‌ವಾದಕ್ಕೆ ಮನುವಾದವನ್ನು ಬೆರೆಸಿ ತಮ್ಮ ಆರೆಸ್ಸೆಸ್‌ನ ಹಿಂದೂರಾಷ್ಟ್ರ ಸಿದ್ಧಾಂತ ರೂಪಿಸಿದರು. ಮುಸಲೋನಿ ಮಾತ್ರವಲ್ಲ ಹಿಟ್ಲರ್ ನಮಗೆ ಸ್ಫೂರ್ತಿ ಸೆಲೆ ಎಂದು ಗೋಳ್ವಾಲ್ಕರ್ ಹೇಳಿದರು. ಈಗ ಭಾರತವೂ ಅಂಥ ಅಪಾಯದ ಅಂಚಿಗೆ ಬಂದು ನಿಂತಿದೆ. ದೇಶಕ್ಕೆ ಸ್ವಾತಂತ್ರ ಬಂದಾಗಲೇ ಹಿಟ್ಲರ್-ಮುಸಲೋನಿ ಮಾದರಿಯಲ್ಲಿ ಫ್ಯಾಸಿಸ್ಟ್ ಹಿಂದೂರಾಷ್ಟ್ರ ಸ್ಥಾಪಿಸಲು ಆರೆಸ್ಸೆಸ್ ಹುನ್ನಾರ ನಡೆಸಿತು.

ಆದರೆ ಭಾರತ ಆಧುನಿಕ ಪ್ರಜಾಪ್ರಭುತ್ವ ಗಣರಾಜ್ಯವಾಗಿ ಹೊರಹೊಮ್ಮಿತು. ಆದರೆ ತಮ್ಮ ಕಲ್ಪನೆಯ ‘ಹಿಂದೂರಾಷ್ಟ್ರ ನಿರ್ಮಾಣದ ಯತ್ನವನ್ನು ಆರೆಸ್ಸೆಸ್ ಕೈಬಿಡಲಿಲ್ಲ’’ ಭಾರತದಲ್ಲಿ ಇರುವ ಹಿಂದೂಗಳಲ್ಲದವರು ಹಿಂದೂಧರ್ಮವನ್ನು ಗೌರವಿಸಿ ಹಿಂದೂ ರಾಷ್ಟ್ರಕ್ಕೆ ಅಡಿಯಾಳಾಗಿ ಯಾವ ಸವಲತ್ತನ್ನೂ ಕೇಳದೆ ಎರಡನೆ ದರ್ಜೆ ನಾಗರಿಕರಾಗಿ ಬದುಕ ಬೇಕೆಂಬುದು’’ ಗೋಳ್ವಲ್ಕರ್ ಬಹಿರಂಗ ವಾಗಿ ಹೇಳಿದರು. ನರೇಂದ್ರ ಮೋದಿ ಪ್ರಧಾನಿಯಾದರೆ ಅಲ್ಪಸಂಖ್ಯಾತರಿಗೆ ಮಾತ್ರ ಗಂಡಾಂತರ ವಲ್ಲ. ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸರ್ವನಾಶವಾಗುವ ಅಪಾಯ ಎದುರಾ ಗಿದೆ. ಭಾರತದ ಕಾರ್ಪೊರೇಟ್ ಬಂಡವಾಳಶಾಹಿಗಳಿಗೂ ಅಮೆರಿಕ ಮೂಲಕ ಜಾಗತಿಕ ಬಂಡವಾಳಿಗರಿಗೂ ಸರ್ವರಿಗೂ ಸಮಾನ ಅವಕಾಶ ನೀಡುವ ಈ ಸಂಸದೀಯ ಜನತಂತ್ರ ವ್ಯವಸ್ಥೆ ಹಾಗೂ ಸಂವಿಧಾನ ಬೇಕಾಗಿಲ್ಲ.

ಅಂತಲೆ ಮುಸಲೋನಿ ಮಾದರಿಯಲ್ಲಿ ಮೋದಿ ಯನ್ನು ಚುನಾವಣೆ ಮೂಲಕ ಅಧಿಕಾರಕ್ಕೆ ತಂದು ನಂತರ ಜನತಂತ್ರದ ಚಟ್ಟ ಕಟ್ಟುವುದು ಕಾರ್ಪೊರೇಟ್ ಬಂಡವಾಳಿಗರ ಸಂಘ ಪರಿವಾರದ ಜಂಟಿ ಹುನ್ನಾರವಾಗಿದೆ. ಮೋದಿಯನ್ನು ಪ್ರಧಾನಿಯನ್ನಾಗಿ ಮಾಡಲು ಪೂರಕವಾದ ವಾತಾವರಣವನ್ನು ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಲಾಗುತ್ತಿದೆ. ಮೋದಿ ಟಿ.ಶರ್ಟ್, ಮೋದಿ ಜುಬ್ಬಾ, ಮೋದಿ ಟೀ ಸ್ಟಾಲ್, ಮೋದಿ ಹೇರ್ ಕಟಿಂಗ್ ಸಲೂನ್ ಹೀಗೆ ಬಿರುಗಾಳಿ ಎಬ್ಬಿಸಲಾಗಿದೆ. ದೇವರು ಮತ್ತು ಧರ್ಮವನ್ನು ವ್ಯಾಪಾರ ಮಾಡಿ ಮಜಾ ಮಾಡುತ್ತಿರುವ ಆಸಾರಾಮ್ ಬಾಪು ಹಾಗೂ ರಾಮದೇವರಂಥ ನಕಲಿ ದೇವಮಾನವರಿಗೂ ತಮ್ಮ ರಕ್ಷಣೆಗಾಗಿ ಮೋದಿ ಬರಬೇಕಾಗಿದೆ. ಸಾಮಾಜಿಕ ಜವಾಬ್ದಾರಿಯನ್ನು ಕಳೆದುಕೊಂಡು ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ನಗರದ ಮಧ್ಯಮ ವರ್ಗಗಳಿಗೂ ಮೋದಿ ಪವಾಡ ಪುರುಷನಾಗಿದ್ದಾನೆ.
ಆದರೆ ಮೋದಿ ಅಧಿಕಾರಕ್ಕೆ ಬಂದರೆ ಅಂಬೇಡ್ಕರ್ ರೂಪಿಸಿದ ಸಂವಿಧಾನ ಇರುವು ದಿಲ್ಲ. ಅದರ ಜಾಗದಲ್ಲಿ ಪಂಚಾಂಗ ಬರುತ್ತದೆ. ಮೋದಿ ಅಧಿಕಾರಕ್ಕೆ ಬಂದರೆ ಸಂಸತ್ತು ಇರುವುದಿಲ್ಲ. ವಿಶ್ವಹಿಂದೂ ಪರಿಷತ್ತಿನ ಮಾರ್ಗ ದರ್ಶಕ ಮಂಡಳಿಯ ಮೇಲ್ಜಾತಿ ಮಠಾಧೀಶರೇ ಸಂಸದರ ಸ್ಥಾನದಲ್ಲಿರುತ್ತಾರೆ. ಮೋದಿ ಅಧಿಕಾರಕ್ಕೆ ಬಂದರೆ ದಲಿತ ಹಿಂದುಳಿದ ವರ್ಗಗಳಿಗೆ ಈಗಿರುವ ಮೀಸಲಾತಿ ಇರುವುದಿಲ್ಲ. ಆದರೆ ಐದು ಸಾವಿರ ವರ್ಷದಿಂದ ಸಂವಿಧಾನ ಬಾಹಿರವಾದ ಮೀಸಲಾತಿ ಪಡೆದ ಶೇ.3ರಷ್ಟು ಜನರೇ ಮತ್ತೆ ಮೀಸಲಾತಿ ಪಡೆಯುತ್ತಾರೆ. ಮೋದಿ ಅಧಿಕಾರಕ್ಕೆ ಬಂದರೆ ರೈತರ ಕೃಷಿಯೋಗ್ಯ ಭೂಮಿ ಅಂಬಾನಿ, ಟಾಟಾ, ಮಿತ್ತಲ್‌ಗಳ ಪಾಲಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದರೆ ಮಹಿಳೆ ಯರಿಗೆ ಈಗಿರುವ ಮೀಸಲಾತಿಯೂ ಉಳಿಯು ವುದಿಲ್ಲ. ರಾಷ್ಟ್ರೀಕೃತ ಬ್ಯಾಂಕುಗಳ ಜಾಗದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ದಾಲ್ಮಿಯ, ಗೊಯೆಂಕಾ, ಮಿತ್ತಲ್, ಜಿಂದಾಲ್ ಕಂಪೆನಿಗಳ ಖಾಸಗಿ ಬ್ಯಾಂಕು ಗಳು ತಲೆ ಎತ್ತುತ್ತವೆ. ಇವೆಲ್ಲಕ್ಕಿಂತ ಮುಖ್ಯವಾಗಿ ಮನುವಾದಿ ‘ಹಿಂದೂ ರಾಷ್ಟ್ರ’ ನಿರ್ಮಾಣಕ್ಕೆ ಅಡ್ಡಿಯಾಗಿರುವ ಸಂವಿಧಾನಕ್ಕೆ ಹಿಂದೆಂದೂ ಕಂಡರಿಯದ ಗಂಡಾಂತರ ಎದುರಾಗಲಿದೆ. ಈ ಗಂಡಾಂತರದ ಫಲ ಉಣಿಸಲು ಈಗ ಮೋದಿ ಭಾಷಣಕ್ಕೆ ಟಿಕೇಟ್ ಮಾರಾಟ ನಡೆದಿದೆ.

ಫ್ಯಾಸಿಸಂನ ಮೊದಲ ಗುರಿ ಚಿಂತನಶೀಲತೆ. ಚಿಂತನಶೀಲತೆಯನ್ನು ನಾಶ ಮಾಡಿದಾಗ ಮಾತ್ರ ಫ್ಯಾಸಿಸ್ಟ್ ಸರ್ವಾಧಿಕಾರ ಸ್ಥಾಪನೆ ಸಾಧ್ಯವಾಗುತ್ತದೆ. ಮೋದಿ ಅಧಿಕಾರಕ್ಕೆ ಬಂದರೆ ಅಲ್ಲಿ ವಿಚಾರವಾದಕ್ಕೆ, ವೈಜ್ಞಾನಿಕ ಮನೋಭಾವಕ್ಕೆ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅವಕಾಶವಿರುವುದಿಲ್ಲ. ಇಡೀ ದೇಶ ಹಿಟ್ಲರ್ ನಿರ್ಮಿಸಿದ ಗ್ಯಾಸ್ ಚೇಂಬರ್‌ನಂತಾಗುತ್ತದೆ. ಅಂಬೇಡ್ಕರ್, ಗಾಂಧಿ, ಸುಭಾಷ್, ನೆಹರೂ, ಭಗತ್‌ಸಿಂಗ್, ಜ್ಯೋತಿಬಾ ಫುಲೆ, ಬಸವಣ್ಣ ಇವರ ಬದಲಾಗಿ ಮನುಮಹರ್ಷಿ, ಸಾವರ್ಕರ, ಗೋಳ್ವಾಲ್ಕರ್, ಗೋಡ್ಸೆಯ ವಿಜ್ರಂಭಣೆಯ ನಡೆಯುತ್ತದೆ. ಇಂದು ದೇಶದ ಮುಂದೆ ಎರಡು ದಾರಿಗಳಿವೆ. ಒಂದು ಮೋದಿ ನೇತೃತ್ವದ ರಾಷ್ಟ್ರ ವಿನಾಶಕ ಫ್ಯಾಸಿಸ್ಟ್ ದಾರಿ. ಇನ್ನೊಂದು ಸಕಲರಿಗೂ ಸಮಾನ ಅವಕಾಶ ನೀಡುವ ಸಮಾನತೆಯ ದಾರಿ. ಸುಲಿಗೆ ರಹಿತ ಸಮಾಜ ಸ್ಥಾಪನೆಯ ದಿಕ್ಕಿನಲ್ಲಿ ಸಾಗಲು ಮೋದಿಯನ್ನು ಮರಳಿ ಆತನ ಗುಜರಾತ್ ಮನೆಗೆ ಕಳಿಸುವುದು ಚಾರಿತ್ರಿಕ ಅನಿವಾರ್ಯವಾಗಿದೆ. *

ಮೋದಿಯ ರಾಜಕೀಯ ಮತ್ತು ಹಿಟ್ಲರ್ ಮಾದರಿ

ಮೋದಿಯ ರಾಜಕೀಯ ಮತ್ತು ಹಿಟ್ಲರ್ ಮಾದರಿ

 

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ಪ್ರಧಾನಿ ಕನಸನ್ನು ನನಸು ಮಾಡುವ ಉದ್ದೇಶದಿಂದ ಯಾವ ರೀತಿಯಲ್ಲಿ ಎಲ್ಲೆಲ್ಲಿ ಯಾವ ತಂತ್ರಗಳನ್ನು ಬಳಸಬೇಕೋ ಅದನ್ನು ಬಳಸುವಲ್ಲಿ ನಿರತರಾಗಿದ್ದಾರೆ . ಸದ್ಯದ ಮಟ್ಟಿಗೆ ನರೇಂದ್ರ ಮೋದಿ ಬಿಜೆಪಿಯ ಸರ್ವಾಧಿಕಾರಿಯಂತೆ ಬಿಂಬಿತವಾಗುತ್ತಿದ್ದು  ಇಡೀ ಪಕ್ಷ ಈಗ ನರೇಂದ್ರ ಮೋದಿಯ ನಿಯಂತ್ರಣಕ್ಕೆ ಒಳಪಟ್ಟಂತೆ ಭಾಸವಾಗ ತೊಡಗಿದೆ. ಬಿಜೆಪಿಯ ಆಯಕಟ್ಟಿನ ಜಾಗಗಳಲ್ಲಿ ಮೋದಿ ತನ್ನ ಬೆಂಬಲಿಗರನ್ನು ನೇಮಿಸುವಲ್ಲಿ ಯಶಸ್ವಿಯಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನಗೆ ಪಕ್ಷದೊಳಗೆ ಯಾವುದೇ ಪ್ರತಿಸ್ಪರ್ಧಿ ಇಲ್ಲದಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನು ಯಶಸ್ವಿಯಾಗಿ ಮಾಡಲಾಗುತಿದ್ದು ಇದರ ಭಾಗವಾಗಿ ಪಕ್ಷದ ಹಿರಿಯ ನಾಯಕ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡುವಲ್ಲಿ ಮೋದಿ ಟೀಮ್ ನಿರತವಾಗಿದೆ ಮತ್ತು ಈ ಕೆಲಸದಲ್ಲಿ ಭಾಗಶಃ ಯಶಸ್ಸನ್ನೂ ಸಾಧಿಸಿದೆ .

ಇನ್ನು ಮೋದಿಯ ಮುಂದಿರುವುದು ಓಲೈಕೆಯ ದಾರಿ . ಮೋದಿಗೆ ತನ್ನ ಪ್ರಧಾನಿ ಪಟ್ಟದ ಆಸೆಯನ್ನು ಈಡೇರಿಸಿಕೊಳ್ಳಲು ದೇಶದ ಇತರ ಜಾತ್ಯಾತೀತ ಪಕ್ಷಗಳ ಮತ್ತು ಪ್ರಾದೇಶಿಕ ಪಕ್ಷಗಳ ಒಲವು ಪಡೆದುಕೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಮೋದಿ ಓಲೈಕೆಯ ರಾಜಕಾರಣವನ್ನೂ ನಡೆಸುತ್ತಿದ್ದಾರೆ. ಮೋದಿಗೆ ಅಂಟಿಕೊಂಡಿರುವ ಮುಸ್ಲಿಂ ವಿರೋಧಿ ಲೇಬಲ್ ಅನ್ನು ತೊಡೆದು ಹಾಕಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮೋದಿ ಮಾಡುತ್ತಿದ್ದು ಇದರ ಭಾಗವಾಗಿ ಮುಸ್ಲಿಂ ಧಾರ್ಮಿಕ ನಾಯಕರು ಮತ್ತು ಸಾಮಾಜಿಕ ನಾಯಕರನ್ನು ತನ್ನತ್ತ ಸೆಳೆಯುವ ಕಾರ್ಯ ಆರಂಭಿಸಿದ್ದಾರೆ . ಇದರ ಪರಿಣಾಮವಾಗಿ ಈಗ ದೇಶದ ವಿವಿಧ ಭಾಗಗಳಲ್ಲಿ ಕೆಲ ಮುಸ್ಲಿಂ ಮುಲ್ಲಾಗಳು ಮೋದಿ ಅಭಿವೃದ್ಧಿಯ ಮಂತ್ರ ಪಠಿಸತೊಡಗಿರುವುದನ್ನೂ ಗಮನಿಸಬಹುದು . ಮುಸ್ಲಿಂ ಮತಗಳು ಹಲವು ಕಡೆ ನಿರ್ಣಾಯಕ ಪಾತ್ರ ವಹಿಸಲಿರುವ ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಮತಗಳನ್ನು ಪಡೆಯಲು ಮೋದಿ ಜಮೀಯತ್ ಉಲಮಾ ಮುಖ್ಯಸ್ಥ ಮಹಮೂದ್ ಮದನಿ ಹಾಗೂ ಕೆಲ ದೇವ್ ಬಂದ್ ಮುಲ್ಲಾಗಳ ಮೂಲಕ ತನ್ನ ಪರ ಹೇಳಿಕೆ ನೀಡಿಸುತ್ತಿದ್ದರೆ ಇನ್ನೊಂದು ಕಡೆ ಮುಸ್ಲಿಂ ಮತಗಳು ನಿರ್ಣಾಯಕವಾಗಿರುವ ಕೇರಳದಲ್ಲಿ ಎ.ಪಿ. ಅಬೂಬಕರ್ ಎನ್ನುವ ಪಂಡಿತನ ಮೂಲಕ ಮೋದಿ ಪರ ಅನುಕಂಪ ಮೂಡಿಸುವ ಕೆಲಸ ಮುಂದುವರೆದಿದೆ.

ಇವೆಲ್ಲಾ ನೋಡಿದರೆ ಮೋದಿ ಮುಂದಿನ ಪ್ರಧಾನಿಯಾಗಲು ಬೇಕಾದ ಎಲ್ಲಾ ರೀತಿಯ ತಂತ್ರಗಳನ್ನು ಅನುಸರಿಸಲು ಮುಂದಾಗಿರುವುದನ್ನು ಗಮನಿಸಬಹುದಾಗಿದ್ದು ಕಾರ್ಪೊರೇಟ್ ಉದ್ಯಮಿಗಳ ಹಣದ ನೆರವು ಸಹ ಮೋದಿಯ ತಂತ್ರದಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ . ಮೋದಿ ಪಕ್ಷದಲ್ಲಿ ಈಗ ಹಿಟ್ಲರ್ ಮಾದರಿಯಲ್ಲಿ ಸರ್ವಾಧಿಕಾರಿಯಾಗಿ ಬೆಳೆದಿದ್ದು ಮೋದಿ ಏನು ಹೇಳಿದರೂ ಅದು ಸರಿ ಎನ್ನುವ ಹಿಂಬಾಲಕರ ದಂಡು ಪಕ್ಷದಲ್ಲಿ ಬೇರೂರಿದೆ . ಇದಕ್ಕೆ ಇತ್ತೀಚೆಗೆ ಮೋದಿ ನೀಡಿದ ಮೊದಲು ಶೌಚಾಲಯ  ಆಮೇಲೆ ದೇವಾಲಯ ವಿವಾದವೇ ಸಾಕ್ಷಿ . ಈ ಹಿಂದೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಇದೇ ರೀತಿಯ ಹೇಳಿಕೆ ನೀಡಿದ್ದಾಗ ಇಡೀ ಬಿಜೆಪಿ ಪ್ರತಿಭಟನೆ ನಡೆಸಿತ್ತು . ಪಕ್ಷದ ಕಾರ್ಯಕರ್ತರು ಜೈರಾಮ್ ರಮೇಶ್ ಮನೆಯ ಮುಂದೆ ಮೂತ್ರ ಮಾಡುವ ಮೂಲಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು . ಆದರೆ ಮೋದಿ ಇದೇ ಮಾತನ್ನು ಹೇಳಿದಾಗ ಅದನ್ನು ಪಕ್ಷದ ನಾಯಕರು ಸಮರ್ಥಿಸತೊಡಗಿದರು . ಇದು ಪಕ್ಷದಲ್ಲಿ ಮೋದಿ ಯಾವ ರೀತಿ ಪ್ರಭಾವಶಾಲಿಯಾಗಿದ್ದಾರೆ ಎನ್ನುವುದಕ್ಕೆ ನಿದರ್ಶನ . ಮೋದಿಗೂ ಹಿಟ್ಲರ್‌ಗೂ ಇರುವ ಇನ್ನೊಂದು ಸಾಮ್ಯತೆ ಎಂದರೆ ಹಿಟ್ಲರ್ ಭಾಷಣ ಕೇಳಲು ಸಹ ಹಣ ಕೊಟ್ಟು ಟಿಕಟ್ ಪಡೆಯಬೇಕಾಗುತ್ತಿತ್ತಂತೆ . ಮೋದಿ ಭಾಷಣ ಕೇಳಲು ಸಹ ಐದು , ಹತ್ತು ರೂಪಾಯಿಗಳ ಟಿಕೆಟ್ ನಿಗದಿ ಪಡಿಸಲಾಗುತ್ತಿದೆ . ಇನ್ನು ಯಾರು ದೇಶ ನಡೆಸಲು ಅರ್ಹರು ಅನ್ನುವುದನ್ನು ಆಯ್ಕೆ ಮಾಡಬೇಕಿರುವುದು ಮಾತ್ರ ನಾವು ಹಾಗೂ ನೀವು ..